ಫೆ.25ಕ್ಕೆ ಸಂವಿಧಾನ ಜಾಗೃತಿ ಸಮಾವೇಶ, 1 ಲಕ್ಷ ಜನ ಭಾಗಿ; ಈ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಬಳಸಲು ಸೂಚನೆ
Bengaluru News: ಫೆ 25ಕ್ಕೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ನಗರದ ಕೆಲವೊಂದು ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಲಿದ್ದು ಸಾರ್ವಜನಿಕರು ಬದಲಿ ರಸ್ತೆಗಳನ್ನು ಬಳಸಬೇಕೆಂದು ಮನವಿ ಮಾಡಲಾಗಿದೆ. ( ವರದಿ: ಎಸ್ ಮಾರುತಿ, ಬೆಂಗಳೂರು)
Bengaluru News: ಭಾರತದ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದಿದ್ದು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರು ನಗರದ ಅರಮನೆ ಮೈದಾನದ ಕೃಷ್ಣ ವಿಹಾರ್‌ನಲ್ಲಿ ಫೆ.25ರಂದು ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಸಮಾವೇಶ ಹಮ್ಮಿಕೊಂಡಿದೆ.
ಅಂದು ಮೈದಾನದ ಸುತ್ತಮುತ್ತ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಹಾಗೂ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಸಮಾವೇಶಕ್ಕೆ ರಾಜ್ಯಾದ ವಿವಿಧೆಡೆಗಳಿಂದ ಅಂದಾಜು 1 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆ ಸುಗಮ ಸಂಚಾರಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಈ ರಸ್ತೆಗಳನ್ನು ಬಳಸಿ, ನಿಮ್ಮ ಸ್ಥಳ ತಲುಪಿ
ಬಳ್ಳಾರಿ ರಸ್ತೆಯ ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ, ಮೇಖ್ರಿ ವೃತ್ತದಿಂದ ಜಯಮಹಲ್ ರಸ್ತೆ ಹಾಗೂ ಕಂಟೋನ್ಮೆಂಟ್ ರಸ್ತೆವರೆಗೆ, ಯಶವಂತಪುರ–ಟಾಟಾ ವಿಜ್ಞಾನ ಸಂಸ್ಥೆ–ಮೇಖ್ರಿ ವೃತ್ತದವರೆಗೆ ಅರಮನೆ ಮೈದಾನದ ಕಾರ್ಯಕ್ರಮಕ್ಕೆ ತೆರಳುವ ವಾಹನಗಳನ್ನು ಹೊರತುಪಡಿಸಿ ಬೇರೆ ಕಡೆಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಕೋರಿದ್ದಾರೆ. ಜಯಮಹಲ್ ರಸ್ತೆ, ತರಳಬಾಳು ರಸ್ತೆ, ನಂದಿದುರ್ಗ ರಸ್ತೆ, ಬಳ್ಳಾರಿ ರಸ್ತೆ, ಮೇಖ್ರಿ ವೃತ್ತದಿಂದ ಯಶವಂತಪುರದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೆ, ಹೆಬ್ಬಾಳ ಜಂಕ್ಷನ್, ಯಶವಂತಪುರದ ಗೋವರ್ಧನ್ ಬಳಿ, ಸಿಎಂಟಿಐ ಜಂಕ್ಷನ್, ನೈಸ್ ರಸ್ತೆ ಜಂಕ್ಷನ್ ಬಳಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಏಕತಾ ಸಮಾವೇಶ ಏಕೆ?
ಭಾರತದ ಸಂವಿಧಾನ ಜಾರಿಗೆ ಬಂದು 75 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ. ಈ ಏಕತಾ ಸಮಾವೇಶದಲ್ಲಿ ಹೆಸರಾಂತ ಚಿಂತಕರಾದ ಪ್ರೊ ಅಶುತೋಷ್ ವರ್ಶನಿ, ಡಾ ಗಣೇಶ್ ದೇವಿ, ಪ್ರೊ. ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ, ಕಾಂಚಾ, ಪ್ರಶಾಂತ್ ಭೂಷಣ್, ಬಿಜುವಾಡ ವಿಲ್ಸನ್, ಮೇಧಾ ಪಾಟ್ಕರ್ ಮೊದಲಾದ ಮೇಧಾವಿಗಳು ಭಾಗವಹಿಸಲಿದ್ದಾರೆ.
ಈಗಾಗಲೇ ಜ. 26 ರಿಂದ ಜಾಥಾ ನಡೆಯುತ್ತಿದೆ. ಅಂತಿಮವಾಗಿ ಫೆ. 24 ಮತ್ತು 25ರಂದು ಅರಮನೆ ಮೈದಾನದಲ್ಲಿ ಕಾರ್ಯಾಗಾರ ಮತ್ತು ಎಕ್ಸ್ ಪೋ ನಡೆಯಲಿದೆ. ಸಂವಿಧಾನ ತಜ್ಞರು ಮಾರ್ಗದರ್ಶನ ಮಾಡಲಿದ್ದಾರೆ. ಸಮಾನತೆ, ಸ್ವಾತಂತ್ರ್ಯ, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಿವೆ. ರಾಷ್ಟ್ರೀಯ ಕಾನೂನು ಶಾಲೆ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ, ಕರ್ನಾಟಕ ಕಾನೂನು ವಿವಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
-ವರದಿ: ಎಸ್ ಮಾರುತಿ, ಬೆಂಗಳೂರು