ಪ್ರಮಾಣಪತ್ರ ಗೊಂದಲ, ಸಂಕಷ್ಟದಲ್ಲಿ ಬಿಜೆಪಿ ಶಾಸಕಿ ಮಂಜುಳಾ ಲಿಂಬಾವಳಿ; ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲು
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮಂಜುಳಾ ಎಸ್. ಲಿಂಬಾವಳಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಚುನಾವಣಾ ಅಫಿಡವಿಟ್‌ನಲ್ಲಿ ಆಗಿರುವ ಲೋಪಗಳನ್ನು ಪ್ರಶ್ನಿಸಿ, ಅವರ ವಿರುದ್ಧ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಸಚಿವ ಕಾಂಗ್ರೆಸ್‌ನ ನಾಗೇಶ್ ಟಿ. ಕೇಸ್ ದಾಖಲಿಸಿದ್ದಾರೆ.(ವರದಿ-ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಚುನಾವಣಾ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪುತ್ರನ ಆಸ್ತಿ ವಿವರಗಳನ್ನು ಒದಗಿಸದೇ ಅಕ್ರಮ ಎಸಗಿರುವ ಆರೋಪದಡಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮಂಜುಳಾ ಎಸ್. ಲಿಂಬಾವಳಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಈ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿರುವ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ, ಸಮನ್ಸ್ ಜಾರಿಗೆ ಆದೇಶ ಹೊರಡಿಸಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಮಾಜಿ ಸಚಿವ ನಾಗೇಶ್ ಟಿ. ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ವಿಚಾರಣೆಗೆ ದೂರನ್ನು ಅಂಗೀಕರಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ. ಪ್ರೀತ್ ಅವರು, ಪೊಲೀಸರ ಮೂಲಕ ಮಂಜುಳಾ ಅವರಿಗೆ ಸಮನ್ಸ್ ಜಾರಿಗೊಳಿಸುವಂತೆ ಮಂಗಳವಾರ (ಮಾ.5)ವೇ ಆದೇಶ ಹೊರಡಿಸಿದ್ದಾರೆ.
ಚುನಾವಣಾ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ; ಏನಿದು ಪ್ರಕರಣ
ಕಳೆದ ವಿಧಾನಸಭಾ ಚುನಾವಣೆಗೆ ಮಂಜುಳಾ ಅವರು 2023ರ ಏಪ್ರಿಲ್ 18ರಂದು ನಾಮಪತ್ರ ಸಲ್ಲಿಸಿದ್ದರು. ತಮ್ಮ ಪುತ್ರ ಮಯೂರ್ ಲಿಂಬಾವಳಿ ಅವರ ಹೆಸರನ್ನು ಅವಲಂಬಿತರ ಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ. ಮಗನ ಹೆಸರಿನ ಆಸ್ತಿ ಮತ್ತು ಹೊಣೆಗಾರಿಕೆಯ ವಿವರಗಳನ್ನೂ ಮುಚ್ಚಿಟ್ಟಿದ್ದರು ಎಂದು ನಾಗೇಶ್ ಖಾಸಗಿ ದೂರಿನಲ್ಲಿ ಆರೋಪಿಸಿದ್ದರು.
ಪ್ಲೂಟಸ್ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಗೆ ಮಯೂರ್ ಲಿಂಬಾವಳಿ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಮಂಜುಳಾ ಮತ್ತು ಅವರ ಪತಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಮ್ಮ ಮಗ ಮಯೂರ್ ಹೆಸರಿನಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತ ಹಲವು ಸ್ಥಿರಾಸ್ತಿಗಳನ್ನು ಖರೀದಿಸಿದ್ದಾರೆ. ಕುಟುಂಬದ ಒಟ್ಟು ಆಸ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಚ್ಚಿಡುವುದಕ್ಕಾಗಿ ಮಂಜುಳಾ ಅವರು, ತಮ್ಮ ಮಗನನ್ನು ಎರಡನೇ ಅವಲಂಬಿತ ಎಂದು ಅವಲಂಬಿತರ ಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ ಎಂದು ದೂರುದಾರ ನಾಗೇಶ್ ಆರೋಪಿಸಿದ್ದರು. ಜೊತೆಗೆ ಆಸ್ತಿ ಖರೀದಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಮಾಣೀಕೃತ ಹೇಳಿಕೆ ಬಳಿಕ ದಾವೆ ಸ್ವೀಕರಿಸಿದ ನ್ಯಾಯಾಲಯ
ದೂರುದಾರರ ಪ್ರಮಾಣೀಕೃತ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ನ್ಯಾಯಾಲಯವು, ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ. ಇದೇ ಕಾರಣಕ್ಕೆ ಇಬ್ಬರು ಸಾಕ್ಷಿಗಳನ್ನೂ ನ್ಯಾಯಾಲಯ ವಿಚಾರಣೆ ನಡೆಸಿತ್ತು.
ದೂರುದಾರರು ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದರೆ ಆರೋಪಗಳಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎಂದು ಕಾಣಿಸುತ್ತದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 125–ಎ ಅಡಿಯಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.
ಇದರಿಂದ ಮಂಜುಳಾ ಲಿಂಬಾವಳಿ ಅವರು ಕಾನೂನು ಹೋರಾಟಕ್ಕೆ ಸಜ್ಜಾಗಬೇಕಾಗಿದ್ದು, ಮತ್ತಷ್ಟು ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿವೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಇದೇ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ನಂತರ ಒತ್ತಡಕ್ಕೆ ಮಣಿದ ಹೈ ಕಮಾಂಡ್ ಅವರ ಪತ್ನಿ ಮಂಜುಳಾ ಅವರಿಗೆ ಟಿಕೆಟ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)