Bridal makeup: ಮದುವೆ ಮುಗಿಯುವಷ್ಟರಲ್ಲಿ ಮುಖ ಹಾಳಾಗುತ್ತೆ ಎಂಬ ಚಿಂತೆ ಬೇಡ; ಮೇಕಪ್ ಮಾಡಿಕೊಳ್ಳುವ ಮುನ್ನ ಮದುಮಗಳಿಗೆ ಈ ಅಂಶಗಳು ನೆನಪಿರಲಿ
Beauty Tips: ಮದುವೆಯ ದಿನ ಅಂದ ಕಾಣಬೇಕು ಎಂಬ ಕನಸು ಯುವತಿಯರದ್ದು. ಆದರೆ ಕೆಲವೊಮ್ಮೆ ಮದುವೆ ಮುಗಿಯುವ ಮುನ್ನ ಚರ್ಮ ಬಹಳ ಹಾಳಾಗುತ್ತದೆ. ಮದುವೆಗೆ ತಯಾರಾಗುವ ಮುನ್ನ ಮಹಿಳೆಯರು ಗಮನದಲ್ಲಿಡಬೇಕಾದ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
Beauty Tips: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಬರುವ ಅಮೃತ ಘಳಿಗೆ. ಈ ದಿನಕ್ಕಾಗಿ ಮಾಡಿಕೊಳ್ಳುವ ತಯಾರಿಗಳು ಒಂದೆರಡಲ್ಲ. ತಮ್ಮ ಮದುವೆ ಎಂದಾಕ್ಷಣ ಪುರುಷರಿಗಿಂತ ಜಾಸ್ತಿ ಯುವತಿಯರು ವಿವಿಧ ಸಿದ್ಧತೆಗಳಲ್ಲೇ ಮುಳುಗಿ ಹೋಗುತ್ತಾರೆ.
ಈಗಿನ ಆಧುನಿಕ ಯುಗದಲ್ಲಿ ಮದುವೆ ಶಾಸ್ತ್ರಗಳಷ್ಟೇ ಫೋಟೋಶೂಟ್‌ಗೂ ಬೆಲೆ ಇರುವುದರಿಂದ ನೂತನ ವಧು ತನ್ನ ಸೀರೆ, ಆಭರಣ ಹಾಗೂ ಮೇಕಪ್ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾಳೆ. ಮದುವೆಯ ಸೀರೆಗೆ ಭರ್ಜರಿ ಶಾಪಿಂಗ್‌ನಿಂದ ಹಿಡಿದು ಮೇಕಪ್ ಆರ್ಟಿಸ್ಟ್‌ಗಳ ಹುಡುಕಾಟದವರೆಗೂ ಯುವತಿಯರ ತಯಾರಿ ಒಂದೆರಡಲ್ಲ..!
ಆದರೆ ಅನೇಕ ಬಾರಿ ವಧುವಿನ ಮುಖಕ್ಕೆ ಮೇಕಪ್ ಸರಿಯಾಗಿ ನಿಲ್ಲುವುದೇ ಇಲ್ಲ. ಮದುವೆಯ ದಿನ ಹೋಮದ ಎದುರು ಕುಳಿತುಕೊಳ್ಳಲೇಬೇಕಾದ ಹಿನ್ನೆಲೆಯಲ್ಲಿ ಮುಖದಲ್ಲಿ ಬೆವರು ಹನಿಯುವುದು ಸರ್ವೇ ಸಾಮಾನ್ಯ . ಹೀಗಾಗಿ ಮದುವೆಗೆ ಬ್ರೈಡಲ್ ಮೇಕಪ್ ಮಾಡಿಕೊಳ್ಳುವ ಮುನ್ನ ಯಾವೆಲ್ಲ ವಿಚಾರಗಳ ಬಗ್ಗೆ ಗಮನ ಹರಿಸಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಮದುವೆ ದಿನಕ್ಕೂ ಮುನ್ನ ಹೀಗಿರಲಿ ತಯಾರಿ: ಮುಖದಲ್ಲಿ ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್ ಹಾಗೂ ಕೂದಲು ಇದ್ದರೆ ಮೇಕಪ್ ಸರಿಯಾಗಿ ಕೂರುವುದಿಲ್ಲ. ಹೀಗಾಗಿ ಮಧು ಮಗಳು, ತನ್ನ ಮದುವೆಗೂ 2 ದಿನಕ್ಕೂ ಮುಂಚೆ ಮುಖಕ್ಕೆ ಫೇಷಿಯಲ್ ಮಾಡಿಸಬೇಕು. ಬಿಸಿಲಿನಿಂದ ಮುಖ ಸುಕ್ಕಾಗಿದ್ದರೆ ಅವುಗಳನ್ನು ರಿಪೇರಿ ಮಾಡಿಕೊಳ್ಳಬೇಕು. ತ್ವಚೆಯು ನಯವಾಗಿದ್ದಷ್ಟು ಮೇಕಪ್ ಸರಿಯಾಗಿ ಮುಖದ ಮೇಲೆ ಕೂರುತ್ತದೆ.
ಮೇಕಪ್‌ಗೆ ಮುನ್ನ ತ್ವಚೆಗೆ ತಯಾರಿ: ಮೇಕಪ್ ಹಚ್ಚುವ ಮುನ್ನ ಮುಖಕ್ಕೆ ಟೋನರ್‌ಗಳು, ಸೀರಂಗಳು, ಸನ್ ಸ್ಕ್ರೀನ್ ಹಾಗೂ ಮಾಯಿಶ್ಚರೈಸರ್‌ಗಳನ್ನು ಹಚ್ಚಲು ಮರೆಯಬಾರದು. ತ್ವಚೆಯನ್ನು ಸರಿಯಾಗಿ ತಯಾರಿಸಿದ ಬಳಿಕವೇ ಮೇಕಪ್ ಮಾಡಿಕೊಳ್ಳಬೇಕು.
ಉತ್ತಮ ಗುಣಮಟ್ಟದ ಮೇಕಪ್ ಉತ್ಪನ್ನಗಳು: ಈ ವಿಚಾರದ ಬಗ್ಗೆ ಯುವತಿಯರು ಹೆಚ್ಚಿನ ಗಮನ ನೀಡಬೇಕು. ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಮೇಕಪ್ ಉತ್ಪನ್ನಗಳು ಹೆಚ್ಚು ಕಾಲ ಮುಖದ ಮೇಲೆ ನಿಲ್ಲುವುದೇ ಇಲ್ಲ. ಹೀಗಾಗಿ ಒಳ್ಳೆಯ ಗುಣಮಟ್ಟದ ಮೇಕಪ್ ಉತ್ಪನ್ನಗಳನ್ನೇ ಬಳಕೆ ಮಾಡಬೇಕು.
ಸರಿಯಾದ ಬಣ್ಣದ ಫೌಂಡೇಶನ್: ಮೇಕಪ್ ಎಂದರೆ ತೀರಾ ಬೆಳ್ಳಗೆ ಕಾಣುವುದಲ್ಲ. ನಿಮ್ಮ ಚರ್ಮದ ಸೌಂದರ್ಯ ಅಂದವಾಗಿ ಕಾಣಿಸುವಂತೆ ಮಾಡುವುದಾಗಿದೆ. ಹೀಗಾಗಿ ನಿಮ್ಮ ಚರ್ಮದ ಬಣ್ಣಕ್ಕೆ ತಿಳಿಯಾದ ಫೌಂಡೇಶನ್ ಹಚ್ಚಲು ಹೋದರೆ ನಿಮ್ಮ ಕೈ , ಕುತ್ತಿಗೆ ಬಣ್ಣಕ್ಕೂ ಮುಖದ ಬಣ್ಣಕ್ಕೂ ಹೋಲಿಕೆ ಸಿಗದೇ ಏನೇನೋ ಆಗಿಬಿಡಬಹುದು. ಹೀಗಾಗಿ ನಿಮ್ಮ ಚರ್ಮದ ಬಣ್ಣಕ್ಕೆ ಸರಿಯಾಗಿ ಹೊಂದಿಕೆಯಾಗುವ ಫೌಂಡೇಶನ್‌ಗಳನ್ನೇ ಬಳಕೆ ಮಾಡಬೇಕು.
ಪದೇ ಪದೇ ಮುಖ, ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ: ಒಮ್ಮೆ ಪೂರ್ತಿ ಮೇಕಪ್ ಮುಗಿದ ಬಳಿಕ ಪದೇ ಪದೇ ನಿಮ್ಮ ಕೈಗಳನ್ನು ಮುಖಕ್ಕೆ ತಾಗಿಸಲು ಹೋಗಬೇಡಿ. ಏನಾದರೂ ಅಂತ ಅವಶ್ಯಕತೆ ಬಂದರೆ ಟಿಶ್ಯೂ ಪೇಪರ್‌ಗಳ ಬಳಕೆ ಮಾಡುವುದು ಒಳ್ಳೆಯದು.
ವಿಭಾಗ