Bengaluru News: ಇದೇನ್ರೀ ಸಿದ್ದರಾಮಯ್ಯ: ಮನೆ ಮುಂದೆ ನಿಲ್ಲುವ ಅಡ್ಡಾದಿಡ್ಡಿ ಕಾರುಗಳು, ಕಟ್ಟೆ ಒಡೆಯಿತು ಹಿರಿಯ ನಾಗರಿಕನ ಆಕ್ರೋಶ VIDEO
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿನ ಸಿಎಂ ನಿವಾಸದ ಮುಂದೆ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದ, ಇದರಿಂದ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿರುವ ಎದುರು ಮನೆಯ ನಿವಾಸಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು: ʼಇದೇನ್ರಿ, ಸಿಎಂ ಸಾಹೇಬ್ರೇ, ನಿಮ್ಮ ಮನೆ ಮುಂದೆ ಅಡ್ಡಾದಿಡ್ಡಿ ನಿಲ್ಲೋ ಕಾರುಗಳಿಂದ ನಾವು ಕಾರು ಹೊರಗಡೆ ತೆಗೆಯೋಕೆ ಆಗ್ತಿಲ್ಲ, ಹೀಗೆಲ್ಲಾ ಅಡ್ಡಾದಿಡ್ಡಿ ಪಾರ್ಕ್ ಮಾಡಿದ್ರೆ ಹೇಗೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವ್ಯಕ್ತಿಯೊಬ್ಬರು ತರಾಟೆಗೆ ತೆಗೆದುಕೊಂಡ ವಿಡಿಯೊವೊಂದು ಈಗ ಸಾಕಷ್ಟು ವೈರಲ್ ಆಗಿದೆ.
ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿಯನ್ನು ನರೋತ್ತಮ್ ಎಂದು ಗುರುತಿಸಲಾಗಿದ್ದು, ಈ ವ್ಯಕ್ತಿ ಕುಮಾರ ಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಹಿರಿಯ ನಾಗರಿಕರಾದ ನರೋತ್ತಮ್ ಅವರ ಪ್ರಕಾರ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವ ಜನರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡುತ್ತಾರೆ. ನರೋತ್ತಮ್ ಅವರ ಗೇಟಿ ಮುಂಭಾಗದಲ್ಲೂ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಅವರ ಕುಟುಂಬ ಸದಸ್ಯರು ತಮ್ಮ ವಾಹನವನ್ನು ಹೊರ ತೆಗೆಯಲು ಹರ ಸಾಹಸ ಪಡಬೇಕಾಗಿದೆ.
ಬಹಳು ದಿನಗಳಿಂದ ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದು, ನಿರಂತರ ವಾಹನ ನಿಲುಗಡೆಯಿಂದ ಹತಾಶರಾಗಿದ್ದರು. ಇದರೊಂದಿಗೆ ಕೋಪಗೊಂಡಿದ್ದ ನರೋತ್ತಮ್ ಶುಕ್ರವಾರ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು, ಮಾತ್ರವಲ್ಲ ಸಿದ್ದರಾಮಯ್ಯ ಅವರ ವಾಹನವನ್ನು ತಡೆದು ನಿಲ್ಲಿಸಿದ್ದರು.
ವೈರಲ್ ಆದ ವಿಡಿಯೊದಲ್ಲಿ ಸಿದ್ದರಾಮಯ್ಯ ಅವರ ನಿವಾಸದ ಹೊರಗೆ ಭದ್ರತಾ ಸಿಬ್ಬಂದಿಯೊಂದಿಗೆ ನರೋತ್ತಮ್ ಅವರು ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ʼಅವರನ್ನು ಕರೆ ನಾನು ಮಾತನಾಡುತ್ತೇನೆʼ ಎಂದು ಅವರು ಸಿಬ್ಬಂದಿಗೆ ಗದರುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.
ಇದೇ ವೇಳೆ ಅಲ್ಲಿಗೆ ಬಂದಿದ್ದ ಸಿದ್ದರಾಮಯ್ಯ, ಕಾರು ನಿಲ್ಲಿಸಿ, ನರೋತ್ತಮ್ ಅವರ ಅಹವಾಲುಗಳನ್ನು ಆಲಿಸಿದರು.
ʼನಿಮ್ಮ ಮನೆಗೆ ಬರುವವರು ಎಲ್ಲೆಂದರಲ್ಲಿ ಗಾಡಿ ನಿಲ್ಲಿಸುವ ಕಾರಣ ನಾವು ಮನೆಯಿಂದ ಹೊರಗಡೆ ಗಾಡಿ ತೆಗೆಯಲು ಆಗುತ್ತಿಲ್ಲ, ಮನೆಯೊಳಗೆ ಯಾರೂ ಬರುವಂತೆಯೂ ಇಲ್ಲ. ನಮ್ಮ ಮನೆಯ ಗೇಟಿನ ಮುಂಭಾಗದಲ್ಲೇ ಗಾಡಿಗಳನ್ನು ನಿಲ್ಲಿಸಿರುತ್ತಾರೆ. ಇದೇನು ಅಸಂಬದ್ಧ. ಇಲ್ಲಿ ಟ್ರಾಫಿಕ್ ವಿಷಯದಲ್ಲಿ ಶಿಸ್ತೆಂಬದೇ ಇಲ್ಲ. ಕಳೆದ ಐದು ವರ್ಷಗಳಿಂದ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆʼ ಎಂದು ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ʼನಾನು ಪ್ರತಿದಿನ ಬೆಳಿಗ್ಗೆ ಸಿದ್ದರಾಮಯ್ಯ ಅವರ ಮನೆ ಬಳಿ ಬಂದು ಗೇಟ್ ಮುಂದೆ ನಿಲ್ಲಿಸಿದ ವಾಹನದ ಮಾಲೀಕರನ್ನು ಹುಡುಕಬೇಕು. ಕಳೆದ ಐದು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಅವರನ್ನು ನೋಡಲು ಬರುವವರ ಸಂಖ್ಯೆ, ವಾಹನಗಳ ಸಂಖ್ಯೆ ಹೆಚ್ಚಿದೆʼ ಎಂದು ನರೋತ್ತಮ್ ಮಾಧ್ಯಮಗಳು ಹಾಗೂ ಪೊಲೀಸರ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವಂತೆ ಭದ್ರತಾ ಸಿಬ್ಬಂದಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ.