Donkey Milk: ಬೆಂಗಳೂರು ಸುತ್ತಮುತ್ತ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್; ಇದರ ಸೇವನೆಯಿಂದ ಆರೋಗ್ಯಕ್ಕಾಗುವ ಹಲವು ಪ್ರಯೋಜನಗಳಿವು
ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದೆ. ಇದಕ್ಕೆ ಕಾರಣವೂ ಉಂಟು. ಕತ್ತೆ ಹಾಲು ಕುಡಿಯುವುದರಿಂದ ಮಕ್ಕಳ ಆರೋಗ್ಯ ಸೇರಿದಂತೆ ದೊಡ್ಡವರಿಗೂ ಹಲವು ರೀತಿಯ ಪ್ರಯೋಜನಗಳಿವೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ. (ಲೇಖನ: ಅಕ್ಷರ ಕಿರಣ್)
ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ, ಕಾಲ ಬಂದಾಗ ಕತ್ತೆ ಕಾಲನ್ನೂ ಹಿಡೀಬೇಕು ಹೀಗೆ ಕತ್ತೆಯ ಬಗೆಗಿನ ಗಾದೆ ಮಾತುಗಳನ್ನು ಕೇಳುತ್ತಿರುತ್ತೇವೆ. ಸೋಂಬೇರಿಗಳನ್ನು ಕತ್ತೆಗೆ ಹೋಲಿಸುತ್ತಾರೆ. ಕತ್ತೆ ಎಂದರೆ ನಿರುಪಯೋಗಿ, ದಡ್ಡ ಪ್ರಾಣಿ ಎಂಬಂತಿದ್ದ ಕಾಲವೊಂದಿತ್ತು. ಆದರೆ ಈಗ ಕತ್ತೆಗಳಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಅದಕ್ಕೆ ಕಾರಣ ಕತ್ತೆಯ ಹಾಲು.
ವಿದೇಶದಲ್ಲೂ ಫೇಮಸ್
ಹೌದು, ಕತ್ತೆ ಹಾಲು ಈಗ ತುಂಬಾನೇ ಫೇಮಸ್. ಭಾರತದ ಮಾತ್ರವಲ್ಲ ವಿದೇಶಗಳಲ್ಲೂ ಕತ್ತೆಯ ಹಾಲಿಗೆ ಬೇಡಿಕೆ ಹೆಚ್ಚಿದೆ. ಇದನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರೆಗೂ ಬಳಸುತ್ತಾರೆ. ಇದು ತುಂಬಾ ಪೌಷ್ಟಿಕ ಆಹಾರ ಎಂಬ ಮಾತು ವಿದೇಶಗಳಲ್ಲಿ ಚಾಲ್ತಿಯಲ್ಲಿದೆ.
ಹಸುವಿನ ಹಾಲಿನಂತೆ ಕತ್ತೆಗಳ ಹಾಲಿಗೂ ಬೇಡಿಕೆಯಿದೆ. ಆಕಳ, ಎಮ್ಮೆ ಹಾಲಿಗಿಂತಲೂ ಕತ್ತೆಯ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ ಎನ್ನಲಾಗುತ್ತಿದೆ. ಹೀಗಾಗಿ ವಿದೇಶದಲ್ಲಿ ಕತ್ತೆಯ ಹಾಲು ಹೆಚ್ಚು ಬಳಕೆಯಲ್ಲಿದೆ.
ದುಬಾರಿ ಬೆಲೆ
ಇದು ವಿದೇಶದ ಕತೆಯಾದರೆ, ಇನ್ನು ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕದ ಹಲವು ಭಾಗಗಳಲ್ಲಿ ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಹೊಟ್ಟೆ ನೋವು, ಶೀತ, ಕೆಮ್ಮು ಕಾಣಿಸುವುದಿಲ್ಲ, ಜೊತೆಗೆ ಇದು ಹಸಿವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ವಾರಕ್ಕೊಮ್ಮೆ ಬೀದಿಗಳಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಬಂದು ಅದರ ಹಾಲನ್ನು ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ. ಅಂದಹಾಗೆ, ಕಾಲು ಲೀಟರ್ ಕತ್ತೆ ಹಾಲಿನ ಬೆಲೆ 150. 1 ಲೀಟರ್ ಕತ್ತೆ ಹಾಲಿಗೆ 600 ರೂ. ಇದೆ.
ಕತ್ತೆ ಹಾಲು ಸೇವನೆಯ ಆರೋಗ್ಯ ಪ್ರಯೋಜನಗಳು
ಕತ್ತೆ ಹಾಲು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ. ಸಂಧಿವಾತ, ಮಂಡಿನೋವು, ಒಣಕೆಮ್ಮಿನ ಸಮಸ್ಯೆ ನಿವಾರಣೆಗೂ ಇದು ಔಷಧಿಯಂತೆ. ಬೆಳೆಯುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಕತ್ತೆ ಹಾಲು ಸಹಕಾರಿ. ಮಹಿಳೆಯರೂ ಕೂಡ ಈ ಹಾಲನ್ನು ಖರೀದಿಸಲು ಮುಗಿಬೀಳುತ್ತಾರೆ. ಈ ಹಾಲಿನಲ್ಲಿ ಆಂಟಿ ಏಜಿಂಗ್, ಆಂಟಿಆಕ್ಸಿಡೆಂಟ್, ಆಂಟಿ ಮೈಕ್ರೋಬಿಯಲ್ ಎನ್ನುವ ಸೌಂದರ್ಯವರ್ಧಕ ಅಂಶಗಳು ಹೆಚ್ಚಾಗಿ ಕಂಡುಬರುವುದರಿಂದ, ಚರ್ಮದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಕತ್ತೆಯ ಹಾಲಿನಲ್ಲಿ ಹಸುವಿನ ಹಾಲಿನಲ್ಲಿರುವಂತೆಯೇ ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಸಿ, ವಿಟಮಿನ್ ಬಿ2, ವಿಟಮಿನ್ ಬಿ6, ವಿಟಮಿನ್ ಡಿ ಮತ್ತು ವಿಟಮಿನ್ ಇ ಅಂಶಗಳು, ಯಥೇಚ್ಛವಾಗಿದೆ. ಹೀಗಾಗಿ ಚರ್ಮದ ವ್ಯಾಧಿಗಳು ಹಾಗೂ ಅಲರ್ಜಿ ಸಮಸ್ಯೆಯನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ. ಇಸುಬಿನ ಸಮಸ್ಯೆಗೂ ಈ ಹಾಲಿನಲ್ಲಿ ಪರಿಹಾರವಿದೆ ಎನ್ನಲಾಗಿದೆ.
ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಗಳನ್ನು ನಿವಾರಿಸಿ, ಆರೋಗ್ಯ ವೃದ್ಧಿಸಲೂ ಕತ್ತೆ ಹಾಲು ಸಹಕಾರಿ. ಖನಿಜಾಂಶಗಳು ಮತ್ತು ಪ್ರೊಟೀನ್ ಅಂಶ ಹೆಚ್ಚಾಗಿರುವುದರಿಂದ, ತಾಯಿಯ ಎದೆ ಹಾಲಿನಷ್ಟೇ ಇದು ಆರೋಗ್ಯಕಾರಿ.
ತಜ್ಞರಾದ ಡಾ. ಭಾಸ್ಕರ್ ರೆಡ್ಡಿ ಅವರ ಪ್ರಕಾರ, ಕತ್ತೆ ಹಾಲು ಶಿಶು ಪೋಷಣೆಗೆ ಉತ್ತಮ ಆಯ್ಕೆ. ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಈ ಹಾಲು ಹೊಂದಿದೆ. ಹಸುವಿನ ಹಾಲಿಗಿಂತ ಒಂಬತ್ತು ಪಟ್ಟು ಹೆಚ್ಚು ಟೌರಿನ್ ಹೊಂದಿರುತ್ತದೆ. ಇದು ಮಾನವ ಹಾಲಿಗೆ ಸೂಕ್ತವಾದ ಪರ್ಯಾಯ ಹಾಲು ಎನ್ನುವುದು ಅವರ ಅಭಿಪ್ರಾಯ.
ʼವೈಜ್ಞಾನಿಕವಾಗಿ ಸರ್ಕಾರ ಅಧ್ಯಯನ ನಡೆಸುತ್ತಿದೆ. ಕತ್ತೆ ಹಾಲನ್ನು ಉಪಯೋಗಿಸಬಹುದು. ಆದರೆ, ಎಲ್ಲೂ ಕಡ್ಡಾಯ ಮಾಡಿಲ್ಲ. ಗ್ರಾಮೀಣ ಭಾಗದಲ್ಲಿ ಹಿರಿಯರು ಇದರ ಪ್ರಾಮುಖ್ಯತೆಯನ್ನು ಹೇಳುವ ಮೂಲಕ ಮಕ್ಕಳಿಗೆ ಕುಡಿಸಲು ಉತ್ತೇಜಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟವಾದ ಅಧ್ಯಯನ ನಡೆದಿಲ್ಲʼ ಎನ್ನುತ್ತಾರೆ ವೈದ್ಯ ಡಾ. ಕಿರಣ್ ಕುಮಾರ್.
ವಿಭಾಗ