Winter Health: ಚಳಿಗಾಲದಲ್ಲಿ ಕಾಡುವ ಗಂಟಲು ಕೆರೆತ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಆಯುರ್ವೇದ ಪರಿಹಾರ
ಚಳಿಗಾಲದಲ್ಲಿ ಗಂಟಲು ಕೆರೆತ ಸಾಮಾನ್ಯ. ಶೀತ ವಾತಾವರಣವು ಚಳಿಗಾಲದಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ವೈದ್ಯರ ಬಳಿಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಆಯುರ್ವೇದ ಪರಿಹಾರಗಳಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.
ಚಳಿಗಾಲದಲ್ಲಿ ಗಂಟಲು ಕೆರೆತ, ನೆಗಡಿ, ಶೀತದಂತಹ ಸಮಸ್ಯೆ ಕಾಡುವುದು ಸಹಜ. ಇದಕ್ಕೆ ಆಯುರ್ವೇದದ ಮೂಲಕ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. ದೇಹದಲ್ಲಿನ ಅಸಮತೋಲನದಿಂದ ಗಂಟಲು ಕೆರೆತ ಉಂಟಾಗುವುದು ಸಹಜ. ಗಂಟಲು ಕೆರೆತ ನಿವಾರಣೆಗೆ ಆಯುರ್ವೇದ ಪರಿಹಾರಗಳು ಇಲ್ಲಿದೆ.
ಆಯುರ್ವೇದದಲ್ಲಿ ಕಫ, ವಾತ ತೊಂದರೆಗಳನ್ನು ಪ್ರತಿನಿಧಿಸುತ್ತವೆ. ಕಫವು ಶೀತಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ ವಾತವು ಉಷ್ಣಕ್ಕೆ ಸಂಬಂಧಿಸಿದ ತೊಂದರೆಯಾಗಿದೆ. ಈ ದೋಷವನ್ನು ಆಹಾರಕ್ರಮ, ಜೀವನಶೈಲಿಯ ಬದಲಾವಣೆ ಹಾಗೂ ನೈಸರ್ಗಿಕ ಔಷಧಿಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಬೆಚ್ಚಗಿನ ಆಹಾರ: ಬಿಸಿ ಹಾಗೂ ಬೇಯಿಸಿದ ಆಹಾರ ಸೇವನೆ ಅಭ್ಯಾಸ ಮಾಡಿ. ಸೂಪ್‌ನಂತಹ ಆಹಾರ ಚಳಿಗಾಲಕ್ಕೆ ಬೆಸ್ಟ್. ಶುಂಠಿ, ಅರಿಸಿನ, ಕಾಳುಮೆಣಸು ಹಾಗೂ ಚಕ್ಕೆ ಇವುಗಳನ್ನು ಸೇರಿಸಿ ತಯಾರಿಸಿದ ಆಹಾರಗಳು ಹಾಗೂ ಪಾನೀಯಗಳು ಉರಿಯೂತ ನಿವಾರಣೆಯ ಗುಣವನ್ನು ಹೊಂದಿರುತ್ತವೆ.
ಗಿಡಮೂಲಿಕೆ ಚಹಾಗಳು: ಶುಂಠಿ, ತುಳಸಿ, ಬಜೆಯಂತಹ ಗಿಡಮೂಲಕೆಗಳಿಂದ ತಯಾರಿಸಿದ ಚಹಾ ಅಥವಾ ಕಷಾಯ ಕುಡಿಯುವುದು ಉತ್ತಮ. ಇದು ಗಂಟಲು ಕೆರೆತವನ್ನು ನಿವಾರಿಸುವ ಜೊತೆಗೆ ಉರಿಯೂತ ನಿವಾರಣೆಗೂ ಸಹಾಯ ಮಾಡುತ್ತದೆ.
ಕೋಲ್ಡ್ ಹಾಗೂ ಡೇರಿ ಉತ್ಪನ್ನಗಳನ್ನು ತಪ್ಪಿಸಿ: ತಂಪು ಪಾನೀಯಗಳು, ಡೇರಿ ಉತ್ಪನ್ನಗಳು ಕಫ ಲಕ್ಷಣ ಹೆಚ್ಚುವಂತೆ ಮಾಡುತ್ತವೆ. ಆ ಕಾರಣಕ್ಕೆ ಇದನ್ನು ತಪ್ಪಿಸುವುದು ಉತ್ತಮ.
ಜೀವನಶೈಲಿಯ ಬದಲಾವಣೆ
ಬೆಚ್ಚಗಿರಿ: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಉಡುಪು ಧರಿಸುವುದು ಬಹಳ ಮುಖ್ಯವಾಗುತ್ತದೆ. ಕುತ್ತಿಗೆಯ ಸುತ್ತಲೂ ಮಫ್ಲರ್‌ನಂತಹ ಬೆಚ್ಚಗಿನ ಉಡುಪು ಧರಿಸಿ.
ನೀವು ವಾಸಿಸುವ ಜಾಗ ಆರ್ದ್ರವಾಗಿರಲಿ: ಹ್ಯೂಮಿಡಿಫೈಯರ್ ಬಳಕೆಯಿಂದ ವಾತಾವರಣವನ್ನು ಬೆಚ್ಚಗಿರಿಸಬಹುದು, ಜೊತೆಗೆ ಇದು ಗಂಟಲು ಕೆರೆತ ನಿವಾರಣೆಗೂ ಸಹಕಾರಿ.
ಆಯುರ್ವೇದ ರೆಮಿಡಿಗಳು
ಉಪ್ಪು ನೀರಿನಿಂದ ಬಾಯಿಮುಕ್ಕಳಿಸುವುದು: ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಗಂಟಲು ಹಾಗೂ ಬಾಯಿ ಮುಕ್ಕಳಿಸುವುದರಿಂದ ಗಂಟಲು ಕೆರೆತಕ್ಕೆ ಪರಿಹಾರ ದೊರೆಯುತ್ತದೆ.
ಅರಿಸಿನದ ಹಾಲು: ಒಂದು ಲೋಟ ಹಾಲಿಗೆ ಚಿಟಿಕೆ ಅರಿಸಿನ ಬೆರೆಸಿ ಕುಡಿಯುವುದು ಗಂಟಲು ನೋವಿಗೆ ಪರಿಹಾರ ಒದಗಿಸುತ್ತದೆ.
ನಿಂಬೆರಸ ಹಾಗೂ ಜೇನುತುಪ್ಪ: ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿದ ನೀರು ಕುಡಿಯುವುದರಿಂದಲೂ ಗಂಟಲು ಕೆರೆತದ ಸಮಸ್ಯೆ ನಿವಾರಣೆಯಾಗುತ್ತದೆ.
ಆಯುರ್ವೇದ ಥೆರಪಿ
ನಾಸ್ಯ: ಉಗುರು ಬೆಚ್ಚಗಿನ ಎಳ್ಳೆಣ್ಣೆ ಅಥವಾ ತುಪ್ಪದ ಹನಿಯನ್ನು ಮೂಗಿಗೆ ಬಿಡುವುದರಿಂದ ಗಂಟಲು ಕೆರೆತದ ಸಮಸ್ಯೆ ನಿವಾರಣೆಯಾಗುತ್ತದೆ.
ಸ್ಟೀಮ್: ಸ್ಟೀಮ್ ತೆಗೆದುಕೊಳ್ಳುವುದು ಕೂಡ ಗಂಟಲು ನೋವಿನ ಸಮಸ್ಯೆಗೆ ಪರಿಹಾರ.