ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಜಾಮೀನು ಅಬಾಧಿತ, ಎಸ್‌ಐಟಿ ಮನವಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌-bengaluru news hd revanna s bail remains intact as karnataka high court rejects cancellation in kidnaping case mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಜಾಮೀನು ಅಬಾಧಿತ, ಎಸ್‌ಐಟಿ ಮನವಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಜಾಮೀನು ಅಬಾಧಿತ, ಎಸ್‌ಐಟಿ ಮನವಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

Court News; ಹಾಸನದ ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅಬಾಧಿತವಾಗಿ ಉಳಿದಿದೆ. ಎಸ್‌ಐಟಿ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದ್ದು, ಪ್ರಕರಣದ ಉಳಿದ ಆರೋಪಿಗಳಿಗೂ ಜಾಮೀನು ನೀಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಎಚ್‌ ಡಿ ರೇವಣ್ಣ ( ಕಡತ ಚಿತ್ರ)
ಎಚ್‌ ಡಿ ರೇವಣ್ಣ ( ಕಡತ ಚಿತ್ರ)

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪದಲ್ಲಿ ಮೊದಲನೇ ಆರೋಪಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ ರೇವಣ್ಣ ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಎಸ್‌ಐಟಿ ಅರ್ಜಿ ಸಲ್ಲಿಸಿತ್ತು. ಈ ಹಿಂದೆ ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶವನ್ನು ಕಾಯ್ದಿರಿಸಿತ್ತು. ಬುಧವಾರ ಆದೇಶವನ್ನು ಪ್ರಕಟಿಸಿದ ನ್ಯಾಯಮೂರ್ತಿಗಳು ಎಸ್‌ಐಟಿ ಅರ್ಜಿಯನ್ನು ವಜಾ ಮಾಡಿದ್ದಾರೆ. ವಿಸ್ಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ.

ಎಸ್‌ಐಟಿ ಪರ ವಾದ ಮಂಡನೆ ಹೀಗಿತ್ತು

ಎಸ್‌ಐಟಿ ಪರ ವಾದ ಮಂಡಿಸಿದ್ದ ವಿಶೇಷ ಪ್ರಾಸಿಕ್ಯೂಟರ್, ಹಿರಿಯ ವಕೀಲ ರವಿವರ್ಮ ಕುಮಾರ್, ಅಪಹರಣ ಪ್ರಕರಣದಲ್ಲಿ ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗೆ ಜಾಮೀನು ನೀಡುವಾಗ ವಿಚಾರಣಾ ನ್ಯಾಯಾಲಯ ಸೂಕ್ತ ಕ್ರಮ ಅನುಸರಿಸಿಲ್ಲ. ಸಂತ್ರಸ್ತೆ ಮಹಿಳೆಯರನ್ನು ಅಪಹರಿಸಿ ಏಳನೇ ಆರೋಪಿಯ ಮನೆಯಲ್ಲಿಡಲಾಗಿತ್ತು. ಆತನಿಗೂ ಆಕೆಗೂ ಯಾವುದೇ ಸಂಬಂಧ ಇರಲಿಲ್ಲ. ಆ ಆರೋಪಿಯ ಮನೆಯಲ್ಲಿ ಮಹಜರು ನಡೆಸಿದಾಗ, ಆಕೆಯ ಕೂದಲು ದೊರೆತಿದೆ ಎನ್ನುವುದನ್ನು ನ್ಯಾಯಲಯದ ಗಮನಕ್ಕೆ ತಂದಿದ್ದರು.

ತನ್ನ ಮೇಲೆ ಅತ್ಯಾಚಾರ ನಡೆಸದಂತೆ ಸಂತ್ರಸ್ತೆಯು ಕೈಮುಗಿದು ಪ್ರಜ್ವಲ್‌ ರನ್ನು ಬೇಡಿಕೊಂಡಿದ್ದರು. ಇಂತಹ ಆರೋಪಿಯನ್ನು ರಕ್ಷಿಸಲು ರೇವಣ್ಣ ಸಂತ್ರಸ್ತೆಯ ಅಪಹರಣ ಮಾಡಿಸಿದ್ದಾರೆ. ಇದು ಅತ್ಯಂತ ಹೀನ ವರ್ತನೆಯಾಗಿದೆ. ಸಂತ್ರಸ್ತ ಮಹಿಳೆಯನ್ನು ಒತ್ತೆ ಇಟ್ಟುಕೊಂಡಿದ್ದ ಏಳನೇ ಆರೋಪಿ ಈ ಹಿಂದೆ ರೇವಣ್ಣ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದರು ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಆದ್ದರಿಂದ ಅವರ ಜಾಮೀನು ರದ್ದುಪಡಿಸಬೇಕು ಎಂದು ಕೋರಿದ್ದರು.

ರೇವಣ್ಣ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ಇಡೀ ಘಟನೆಗೆ ಐ ಪಿಸಿ ಸೆ.364 ಎ ಅನ್ವಯವಾಗುವುದಿಲ್ಲ. ಇಡೀ ಪ್ರಕರಣದಲ್ಲಿ ಯಾವುದೇ ಆರೋಪಿಯು ಸಂತ್ರಸ್ತೆಗೆ ಯಾವುದೇ ರೀತಿಯ ಹಾನಿ ಉಂಟು ಮಾಡಿಲ್ಲ, ಬೆದರಿಕೆ ಹಾಕಿಲ್ಲ ಎಂಬುದನ್ನು ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ದಾಖಲಿಸಿದೆ ಎಂದು ವಾದ ಮಂಡಿಸಿದ್ದರು.

ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಯಾರಿಗೆಲ್ಲ ಜಾಮೀನು

ಸಂತ್ರಸ್ತೆ ಅಪಹರಣದ ಪ್ರಕರಣದಲ್ಲಿ ಹಾಸನದ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣ, ಎಚ್.ಕೆ.ಸುಜಯ್, ಎಚ್.ಎನ್.ಮಧು, ಎಸ್.ಟಿ.ಕೀರ್ತಿ, ಎಚ್.ಡಿ.ಮಾಯು ಗೌಡ, ಕೆ.ಎ.ರಾಜಗೋಪಾಲ್ ಅವರ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಒಪ್ಪಿಕೊಂಡಿದೆ.

ಆರೋಪಿಗಳೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ರಕ್ತ ಸಂಬಂಧಿಗಳು ಮತ್ತು ಒಂದೇ ಸಮುದಾಯಕ್ಕೆ ಸೇರಿದವರು ಎನ್ನುವುದು ಮುಖ್ಯ. ಅವರೆಲ್ಲರೂ ರಾಜಕೀಯವಾಗಿ ಒಂದಲ್ಲಾ ಒಂದು ಸ್ಥಾನಮಾನ ಹೊಂದಿದವರು ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

ಇತರೆ ಆರೋಪಿಗಳ ಜಾಮೀನು ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳು 2ರಿಂದ 7ನೇ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಎಲ್ಲಾ ಆರೋಪಿಗಳು ತಲಾ 14 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇತರೆ ಸಾಮಾನ್ಯ ಷರತ್ತುಗಳನ್ನು ಪೂರೈಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ಮೂಲಕ ಅಪಹರಣ ಪ್ರಕರಣದಲ್ಲಿನ ಒಂಬತ್ತು ಆರೋಪಿಗಳ ಪೈಕಿ ಎಂಟು ಮಂದಿ ಆರೋಪಿಗಳಿಗೆ ಜಾಮೀನು ಸಿಕ್ಕಂತಾಗಿದೆ. ಭವಾನಿ ರೇವಣ್ಣ ಅವರ ಕಾರು ಚಾಲಕ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಯಾಗಿಲ್ಲ.

(ವರದಿ- ಎಚ್. ಮಾರುತಿ, ಬೆಂಗಳೂರು)