ಕನ್ನಡ ಸುದ್ದಿ  /  Karnataka  /  Bengaluru News Kannada Pustaka Habba 2023 By Rashtrotthana Sahitya 33 Days Book Exhibition Will End On Dec 3 Uks

Kannada Pustaka Habba: ಪುಸ್ತಕ ಪ್ರಿಯರ ಮನ ಗೆದ್ದ ರಾಷ್ಟ್ರೋತ್ಥಾನ ಸಾಹಿತ್ಯದ 3ನೇ ಕನ್ನಡ ಪುಸ್ತಕ ಹಬ್ಬ, ಡಿ.3ಕ್ಕೆ ಸಮಾರೋಪ

ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿದ 33 ದಿನಗಳ 3ನೇ ಕನ್ನಡ ಪುಸ್ತಕ ಹಬ್ಬಕ್ಕೆ ಪುಸ್ತಕ ಪ್ರಿಯರಿಂದ ಭಾರಿ ಸ್ಪಂದನೆ ಸಿಕ್ಕಿದೆ. ನಿತ್ಯವೂ ಒಂದಿಲ್ಲೊಂದು ಕಾರ್ಯಕ್ರಮ, ಉಪನ್ಯಾಸಗಳ ಮೂಲಕ ಗಮನಸೆಳೆದಿರುವ ಹಬ್ಬದ ಪುಸ್ತಕ ಲೋಕ ವಿದ್ಯಾರ್ಥಿ ಯುವಜನರನ್ನು ಬೆರಗುಗೊಳಿಸಿದೆ. ಈ ಹಬ್ಬ ಡಿಸೆಂಬರ್ 3ರಂದು ಸಂಪನ್ನಗೊಳ್ಳಲಿದೆ.

ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ 2023ಕ್ಕೆ ಆಗಮಿಸಿದ್ಧ ಶಾಲಾ ವಿದ್ಯಾರ್ಥಿಗಳು
ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ 2023ಕ್ಕೆ ಆಗಮಿಸಿದ್ಧ ಶಾಲಾ ವಿದ್ಯಾರ್ಥಿಗಳು

ಕನ್ನಡ, ಕರ್ನಾಟಕ ಭಾವ ಜಾಗೃತವಾಗುವ ಸಮಯವೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭ. ಈ ಹಬ್ಬ ಒಂದು ತಿಂಗಳ ಕಾಲ ನಡೆಯುತ್ತಿರುತ್ತದೆ. ಹೀಗಾಗಿ ಅಲ್ಲಲ್ಲಿ ಸಾಹಿತ್ಯೋತ್ಸವ, ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಉಪನ್ಯಾಸಗಳು ಆಯೋಜನೆಯಾಗುತ್ತವೆ. ಇಂತಹ ಕಾರ್ಯಕ್ರಮಗಳ ನಡುವೆ ಗಮನಸೆಳೆಯುತ್ತಿರುವುದು ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ.

ಕೋವಿಡ್ ಸಂಕಷ್ಟದ ಅವಧಿಯಲ್ಲಿ ಶುರುವಾದದ್ದು ಈ ಪುಸ್ತಕ ಹಬ್ಬ. ಈ ವರ್ಷ ಮೂರನೇ ಆವೃತ್ತಿಯ ಕನ್ನಡ ಪುಸ್ತಕ ಹಬ್ಬ ನಡೆಯುತ್ತಿದೆ. ಬೆಂಗಳೂರು ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನದ ಕೇಶವ ಶಿಲ್ಪ ಸಭಾಂಗಣದಲ್ಲಿ ದೊಡ್ಡದೊಂದು ಪುಸ್ತಕ ಲೋಕ ತೆರೆದುಕೊಂಡಿದೆ. ನವೆಂಬರ್ 1ರಿಂದ ಶುರುವಾಗಿರುವ ಈ ಕನ್ನಡ ಪುಸ್ತಕ ಹಬ್ಬ ಈಗ ಕೊನೆಯ ವಾರಕ್ಕೆ ಕಾಲಿರಿಸಿದೆ. ಡಿಸೆಂಬರ್ 3ಕ್ಕೆ ಈ ಹಬ್ಬ ಸಂಪನ್ನಗೊಳ್ಳಲಿದೆ.

ಕನ್ನಡ ಪುಸ್ತಕ ಹಬ್ಬಕ್ಕೆ ಪುಸ್ತಕ ಪ್ರಿಯರಿಂದ ಉತ್ತಮ ಸ್ಪಂದನೆ

ಪುಸ್ತಕಗಳ ಮಾರಾಟದ ದೃಷ್ಟಿಯಿಂದಲೂ ಓದುಗರಿಂದ ಉತ್ತಮ ಸ್ಪಂದನೆ ದೊರೆತಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳಲ್ಲದೆ ಡಿವಿಜಿ, ಎಸ್. ಎಲ್. ಭೈರಪ್ಪ, ಶಿವರಾಮ ಕಾರಂತ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಅನಕೃ, ದೇವುಡು, ತರಾಸು, ಕೆ. ಎನ್. ಗಣೇಶಯ್ಯ, ಜೋಗಿ, ವಸುಧೇಂದ್ರ, ಕೆ. ಎಸ್. ನಾರಾಯಣಾಚಾರ್ಯ, ಸುಧಾ ಮೂರ್ತಿ ಸೇರಿದಂತೆ ಹಲವರು ಪ್ರಸಿದ್ಧ ಲೇಖಕರ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ - ಲೇಖಕರ ಪುಸ್ತಕಗಳಿಗೂ ವಿಶೇಷ ರಿಯಾಯಿತಿ ನೀಡುತ್ತಿರುವುದಕ್ಕೆ ಓದುಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ, 'ಮೂಲ ಪ್ರಕಾಶಕರೂ ನೀಡದ ರಿಯಾಯಿತಿ ನೀಡುತ್ತಿದ್ದೀರಿ' ಎಂದು ಹೇಳಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

ಪುಸ್ತಕ ಪ್ರಪಂಚಕ್ಕೆ ಭೇಟಿ ನೀಡಿದ 10,000ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು

ಈ ಸಲದ ಕನ್ನಡ ಪುಸ್ತಕ ಹಬ್ಬಕ್ಕೆ 10,000ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿರುವುದು ವಿಶೇಷ. ವಿಶಾಲ ಪುಸ್ತಕ ಪ್ರಪಂಚದೊಳಗೆ ಕಾಲಿಟ್ಟ ಅವರು ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಪುಸ್ತಕಗಳನ್ನು ಗಮನಿಸಿದರು. ಮಕ್ಕಳ ವಿಭಾಗದಲ್ಲಿದ್ದ ಪುಸ್ತಕಗಳನ್ನು ಕೈಗೆತ್ತಿಕೊಂಡು ತಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿ ಖರೀದಿಸಿದರಲ್ಲದೆ, ಅಲ್ಲೇ ಇದ್ದ ಸೆಲ್ಫಿ ಕಾರ್ನರ್‌ನಲ್ಲಿ ಸೆಲ್ಫಿ ತಗೊಂಡು ಸಂಭ್ರಮ ಪಟ್ಟರು.

ಪುಸ್ತಕ ಹಬ್ಬದ ಖುಷಿಯಲ್ಲಿ ಶಾಲಾ ವಿದ್ಯಾರ್ಥಿಗಳು
ಪುಸ್ತಕ ಹಬ್ಬದ ಖುಷಿಯಲ್ಲಿ ಶಾಲಾ ವಿದ್ಯಾರ್ಥಿಗಳು

ಕಾಮಿಕ್‌ ಸರಣಿ, ಚಿತ್ರಕಥೆ ಪುಸ್ತಕಗಳಿಂದ ಹಿಡಿದು ಎಲ್ಲ ರೀತಿಯ ಮಕ್ಕಳ ಪುಸ್ತಕಗಳು ಒಂದೇ ಕಡೆ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿರುವುದು ಖುಷಿಕೊಟ್ಟಿದೆ. ಎಲ್ಲದಕ್ಕೂ ಮಿಗಿಲಾಗಿ ಭಾರತದ ಪುರಾಣ ಪುರುಷರನ್ನು ಪರಿಚಯಿಸುವ ಭಾರತ-ಭಾರತಿ ಪುಸ್ತಕ ಸಂಪದ ಗಮನಸೆಳೆಯಿತು ಎಂದು 9ನೇ ತರಗತಿ ವಿದ್ಯಾರ್ಥಿ ಅಚಿಂತ್ಯ ಹೇಳಿದರು.

ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳಿವೆ. ‘ಭಾರತ-ಭಾರತಿ ಪುಸ್ತಕ ಸಂಪದ’ದ ಎಂಟುನೂರಕ್ಕೂ ಹೆಚ್ಚು ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ ನೂರಾರು ವೈವಿಧ್ಯಮಯ ಪುಸ್ತಕಗಳನ್ನು ಪ್ರದರ್ಶಿಸಲಾಗಿದೆ. ಅಲ್ಲಿಯ ವೈವಿಧ್ಯವನ್ನು ಕಂಡು ಮಕ್ಕಳೂ ಸಂಭ್ರಮಿಸುತ್ತಿದ್ದಾರೆ ಎಂದು ಪ್ರಕಾಶಕರು ತಿಳಿಸಿದರು.

ಕನ್ನಡ ಪುಸ್ತಕ ಹಬ್ಬ 2023ರ ಪ್ರಮುಖಾಂಶ

1. 33 ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಶೇ. 50ರವರೆಗೂ ವಿಶೇಷ ರಿಯಾಯಿತಿ.

2. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳಲ್ಲದೆ, ಕನ್ನಡದ ಬಹುತೇಕ ಎಲ್ಲ ಪ್ರಕಾಶಕರ ಸದಭಿರುಚಿಯ ಸಾಹಿತ್ಯಗಳ ಪ್ರದರ್ಶನ ಮತ್ತು ಮಾರಾಟ.

3. ಕನ್ನಡದ ಹಿಂದಿನ ತಲೆಮಾರಿನ, ಹಿರಿಯ ತಲೆಮಾರಿನ ಲೇಖಕರ ಪುಸ್ತಕಗಳ ಜತೆಗೆ ಹೊಸಬರ ಪುಸ್ತಕಗಳ ಪ್ರದರ್ಶನ

4. ಪುಸ್ತಕ ಹಬ್ಬದಲ್ಲಿ 2 ಪುಸ್ತಕ ಬಿಡುಗಡೆ, 5 ಸಂವಾದಗಳು, 12 ವಿಶೇಷ ಉಪನ್ಯಾಸ, 16 ಸಾಂಸ್ಕೃತಿಕ ಕಾರ್ಯಕ್ರಮ

5. ಪುಸ್ತಕ ಹಬ್ಬದ ನಿಮಿತ್ತ ಎರಡು ಸ್ಪರ್ಧೆ, ಪುಸ್ತಕ ಹಬ್ಬಕ್ಕೆ ಭೇಟಿ ನೀಡಿದವರಿಗಾಗಿ ‘ಲಕ್ಕಿ ಡ್ರಾ’ ಪುಸ್ತಕ ಬಹುಮಾನ, ಸಮಾರೋಪದಲ್ಲಿ ಆಯ್ದ ಶಾಲೆಗಳಿಗೆ ಪುಸ್ತಕ ವಿತರಣೆ.

ಕನ್ನಡ ಪುಸ್ತಕ ಹಬ್ಬದಲ್ಲಿ ಇದುವರೆಗೆ ಏನೇನಾಯಿತು

ಕಳೆದ ನಾಲ್ಕು ವಾರಗಳಲ್ಲಿ ಪುಸ್ತಕ ಹಬ್ಬದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆದಿವೆ. ನವೆಂಬರ್ 1ರಂದು ಪ್ರಸಿದ್ಧ ನಟ, ಕಲಾವಿದ ಸುಚೇಂದ್ರಪ್ರಸಾದ್ ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸಿದರು. ವಿಜಯ ಕರ್ನಾಟಕದ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಮತ್ತು ‘ಪ್ರಜ್ಞಾಪ್ರವಾಹ’ದ ರಾಷ್ಟ್ರೀಯ ಸಹ-ಸಂಯೋಜಕ ರಘುನಂದನ್ ಮುಖ್ಯ ಅತಿಥಿಗಳಾಗಿದ್ದರು. ಅಂದು ಸಂಜೆ ಪ್ರಸಿದ್ಧ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ‘ಸಂಸ್ಕೃತಿ’ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು; ‘ಕನ್ನಡಪ್ರಭ’ ಮತ್ತು ‘ಸುವರ್ಣ ಸುದ್ದಿವಾಹಿನಿ’ಯ ಪ್ರಧಾನ ಸಂಪಾದಕ ರವಿ ಹೆಗಡೆ ಮುಖ್ಯ ಅತಿಥಿಗಳಾಗಿದ್ದರು.

ಪುಸ್ತಕ ಹಬ್ಬದಲ್ಲಿ ಪುಸ್ತಕಗಳನ್ನು ವೀಕ್ಷಿಸಿದ ನಟ ಸುಚೇಂದ್ರ ಪ್ರಸಾದ್, ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚೆನ್ನಂಗಿಹಳ್ಳಿ, ಪ್ರಜ್ಞಾಪ್ರವಾಹದ ರಘುನಂದನ್ ಭಟ್, ರಾಷ್ಟ್ರೋತ್ಥಾನದ ದಿನೇಶ್ ಕಾಮತ್.
ಪುಸ್ತಕ ಹಬ್ಬದಲ್ಲಿ ಪುಸ್ತಕಗಳನ್ನು ವೀಕ್ಷಿಸಿದ ನಟ ಸುಚೇಂದ್ರ ಪ್ರಸಾದ್, ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚೆನ್ನಂಗಿಹಳ್ಳಿ, ಪ್ರಜ್ಞಾಪ್ರವಾಹದ ರಘುನಂದನ್ ಭಟ್, ರಾಷ್ಟ್ರೋತ್ಥಾನದ ದಿನೇಶ್ ಕಾಮತ್.

ಪ್ರತೀ ಶನಿವಾರ ಭಾನುವಾರಗಳಂದು ಸಾಹಿತ್ಯ-ಸಂಸ್ಕೃತಿ-ರಾಷ್ಟ್ರೀಯತೆ-ಮಾಧ್ಯಮ ಮೊದಲಾದ ವಿಷಯಗಳ ಕುರಿತು ಕಾರ್ಯಕ್ರಮಗಳು ನಡೆದಿದ್ದು, ನವೆಂಬರ್ 4 ರಂದು ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ವಿಷಯವಾಗಿ ಅಡ್ಡಂಡ ಕಾರ್ಯಪ್ಪ ‘ಭಾರತೀಯತೆಯ ಸತ್ತ್ವ’ ಕುರಿತು ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿದರು. ನವೆಂಬರ್ 5 ರಂದು ನಿವೃತ್ತ ಭೂವಿಜ್ಞಾನಿ, ಪ್ರಸಿದ್ಧ ವಿಜ್ಞಾನ ಲೇಖಕ ಡಾ. ಟಿ. ಆರ್. ಅನಂತರಾಮು ಜತೆಗೆ ಸಂಸ್ಕೃತಿ ಚಿಂತಕಿ, ಅಂಕಣಕಾರ್ತಿ ಡಾ. ಆರತಿ ವಿ. ಬಿ. ಸಂವಾದ ನಡೆಸಿದರು.

ನವೆಂಬರ್ 11ರಂದು ಅಜಿತ್ ಹನಮಕ್ಕನವರ್ ಅವರು ‘ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು’ ವಿಷಯವಾಗಿ ಮಾತನಾಡಿದರೆ, ಐವರು ಯುವ ಮಿತ್ರರು (ಪ್ರೊ. ಚೇತನ್, ಸುದೀಪ್, ಸ್ಫೂರ್ತಿ ಮುರಳೀಧರ್, ಚಂದನಾ ವೆಂಕಟೇಶ್, ಕಿರಣಕುಮಾರ್ ವಿವೇಕವಂಶಿ) ‘ನಾನೇಕೆ ಓದುತ್ತೇನೆ?’ ಎಂಬ ಕುರಿತು ಚರ್ಚೆಯನ್ನು ನಡೆಸಿಕೊಟ್ಟರು. ನವೆಂಬರ್ 12ರಂದು ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಪೂ. ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ‘ಸಾಹಿತ್ಯ ಸಾನ್ನಿಹಿತ್ಯ’ ಪುಸ್ತಕ ಲೋಕಾರ್ಪಣೆ ಮಾಡಿದರು. ದಿವಾಕರ ಹೆಗಡೆ ಪುಸ್ತಕವನ್ನು ಪರಿಚಯಿಸಿದರು. ಅದೇ ದಿನ ಸಂಜೆ 'ಕನ್ನಡ ಕವಿಗಳು ಕಂಡ ಭಾರತ' ವಿಷಯವಾಗಿ ಡಾ. ಬಿ. ವಿ. ವಸಂತಕುಮಾರ್ ವಿಶೇಷ ಉಪನ್ಯಾಸ ನೀಡಿದರು; ವಿಜಯವಾಣಿ ಪತ್ರಿಕೆಯ ಸಂಪಾದಕ ಕೆ. ಎನ್. ಚನ್ನೇಗೌಡ ಮುಖ್ಯ ಅತಿಥಿಯಾಗಿದ್ದರು.

ನವೆಂಬರ್ 18 ರಂದು ‘ಏಕರೂಪ ನಾಗರಿಕ ಸಂಹಿತೆ: ಸಾಧ್ಯತೆ-ಸವಾಲುಗಳು’ ವಿಷಯವಾಗಿ ಪ್ರೊ. ಎ. ಷಣ್ಮುಖ ವಿಶೇಷ ಉಪನ್ಯಾಸ ನೀಡಿದರು. ಬಹುಶ್ರುತ ವಿದ್ವಾಂಸ ಡಾ. ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ‘ವ್ಯಾಸಂಗದ ಹವ್ಯಾಸ’ ವಿಷಯವಾಗಿ ಸಂವಾದ ನಡೆಯಿತು. ನವೆಂಬರ್ 19ರಂದು ‘ಕನ್ನಡ ಚಳವಳಿ: ನಡೆದುಬಂದ ದಾರಿ’ ವಿಷಯವಾಗಿ ಚಲುವಾದಿ ಜಗನ್ನಾಥ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.

ನವೆಂಬರ್ 24, 25 - ಎರಡು ದಿಗಳ ಕಾಲ ನಾಲ್ಕು ವಿಶೇಷ ಉಪನ್ಯಾಸಗಳು ನಡೆದಿದ್ದು, ಪೂಜ್ಯ ಸಿದ್ಧೇಶ್ವರ ಸ್ವಾಮಿಗಳನ್ನು ಕುರಿತು ಸಂಗಮೇಶ್ ಪೂಜಾರ್, ಸ್ವ. ರಂಗಾ ಹರಿ ಅವರನ್ನು ಕುರಿತು ವಿ. ನಾಗರಾಜ್, ‘ಕನ್ನಡದ ವಿಶಿಷ್ಟ ಕೃತಿ - ಶಾಸನ ಪದ್ಯಮಂಜರಿ’ ಕುರಿತು ಡಾ. ಕೆ. ಆರ್. ಗಣೇಶ್, ‘ಕುವೆಂಪು ಕನ್ನಡಕ್ಕೆ ಒಲಿದು ಒಂದು ಶತಮಾನ’ ಕುರಿತು ಡಾ. ಜಿ. ಬಿ. ಹರೀಶ್ ಮಾತನಾಡಿದರು.

ವಾರದ ದಿನಗಳಲ್ಲಿ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದು, ಬೆಂಗಳೂರಿನಲ್ಲಿರುವ ಮೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಮತ್ತು ರಾಷ್ಟ್ರೋತ್ಥಾನ ಸಂಗೀತ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕೆಂಪೇಗೌಡ ನಗರದಲ್ಲಿರುವ ಸದ್ಗುರು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದಲೂ ‘ದಾಸರಪದ ಗಾಯನ’ ಕಾರ್ಯಕ್ರಮ ನಡೆದಿದೆ.

ಪ್ರತಿದಿನ ಪುಸ್ತಕ ಹಬ್ಬಕ್ಕೆ ಭೇಟಿ ನೀಡುವವರಿಗಾಗಿ ‘ಲಕ್ಕಿ ಡ್ರಾ’ದ ವ್ಯವಸ್ಥೆ ಮಾಡಿದ್ದು, ವಿಜೇತರಿಗೆ ‘ಪುಸ್ತಕ ಬಹುಮಾನ’ ನೀಡಲಾಗುತ್ತಿದೆ. ಪುಸ್ತಕ ಹಬ್ಬದ ಪ್ರಯುಕ್ತ ಮಕ್ಕಳಿಗೆ ಗಾಯನ ಸ್ಪರ್ಧೆಯನ್ನೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ನಡೆಸಲಾಗಿದೆ.

ಡಿ.2 ರಂದು ಹೊಸಕಾಲದ ಮಾಧ್ಯಮಗಳು : ಸಾಧ್ಯತೆ-ಸವಾಲು ಕುರಿತು ಡಿ. ಎಂ. ಘನಶ್ಯಾಮ ಮತ್ತು ರಮೇಶ ದೊಡ್ಡಪುರ ಸಂವಾದ

ಡಿಸೆಂಬರ್ 2 ರಂದು ‘ನವೋತ್ಥಾನದ ಅಧ್ವರ್ಯು: ಸ್ವಾಮಿ ದಯಾನಂದ ಸರಸ್ವತಿ’ ವಿಷಯವಾಗಿ ಡಾ. ರೋಹಿಣಾಕ್ಷ ಶಿರ್ಲಾಲು ಮಾತನಾಡಲಿದ್ದಾರೆ. ಅದೇ ದಿನ ‘ಹೊಸಕಾಲದ ಮಾಧ್ಯಮಗಳು : ಸಾಧ್ಯತೆ-ಸವಾಲುಗಳು’ ವಿಷಯವಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಂಪಾದಕ ಡಿ. ಎಂ. ಘನಶ್ಯಾಮ ಮತ್ತು ವಿಕ್ರಮ ವಾರಪತ್ರಿಕೆಯ ಸಂಪಾದಕ ರಮೇಶ ದೊಡ್ಡಪುರ ಸಂವಾದ ನಡೆಸಲಿದ್ದಾರೆ. ಡಿಸೆಂಬರ್ 3ರಂದು ಬೆಳಗ್ಗೆ, ‘ಸನಾತನ ಧರ್ಮ ಮತ್ತು ವಚನ ಸಾಹಿತ್ಯ’ ವಿಷಯವಾಗಿ ಡಾ. ಜ್ಯೋತಿ ಶಂಕರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇದೇ ಭಾನುವಾರ ಡಿಸೆಂಬರ್ 3ರಂದು ಸಮಾರೋಪ

ಮೂವತ್ತಮೂರು ದಿನಗಳ ಈ ಪುಸ್ತಕ ಹಬ್ಬದಲ್ಲಿ ಈಗಾಗಲೇ ಇಪ್ಪತ್ತೇಳು ದಿನಗಳು ಕಳೆದಿದ್ದು, ಡಿಸೆಂಬರ್ 3, ಭಾನುವಾರ ಸಾಯಂಕಾಲ ಕನ್ನಡ ಪುಸ್ತಕ ಹಬ್ಬ ಮುಕ್ತಾಯಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ವಿ. ಪರಶಿವಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂದು ಕಾರ್ಯಕ್ರಮದಲ್ಲಿ, ದಾವಣಗೆರೆಯ ಸಾಹಿತ್ಯ ಪರಿಚಾರಕ ಉಮೇಶ್ ಅವರನ್ನು ಗೌರವಿಸಲಾಗುವುದು; ಕನ್ನಡ ಪುಸ್ತಕ ಹಬ್ಬದ ನಿಮಿತ್ತ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು; ಆಯ್ದ ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.