Court News: ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಕೇಸಲ್ಲಿ ಶಾಸಕ ಯತ್ನಾಳ್‌ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
Court News: ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. (ವರದಿ -ಎಚ್. ಮಾರುತಿ, ಬೆಂಗಳೂರು).
ಬೆಂಗಳೂರು: ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಪ್ರಕರಣ ಸಂಬಂಧ ಯತ್ನಾಳ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಶುಕ್ರವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀನಾಥ್ ಕುಲಕರ್ಣಿ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಈ ದೂರು ದಾಖಲಿಸಲಾಗಿದೆ. ಆದ್ದರಿಂದ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದರು.
ಅರ್ಜಿದಾರರ ಪರ ವಕೀಲರ ವಾದವನ್ನು ಪರಿಗಣಿಸಿದ ನ್ಯಾಯಪೀಠ, ಗದಗ ಒಂದನೇ ಹೆಚ್ಚುವರಿ ನ್ಯಾಯಾಲದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿತು. ಮೂಲ ದೂರುದಾರ ಮಂಜುನಾಥ್ ಕಲಬುರಗಿ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನೂ ಮುಂದೂಡಿತು.
ಏನಿದು ಪ್ರಕರಣ ? : ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ವೇಳೆ 2023 ಮೇ 2ರಂದು ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ಹಮ್ಮಿ ಕೊಳ್ಳಲಾಗಿತ್ತು. ಈ ರೋಡ್ ಶೋದಲ್ಲಿ ಪಾಲ್ಗೊಂಡಿದ್ದ ಯತ್ನಾಳ್ ಅವರಿಗೆ ಭಜರಂಗ ದಳವನ್ನು ಕಾಂಗ್ರೆಸ್ ಪಕ್ಷ ನಿಷೇಧ ಮಾಡಲಿದೆ ಎಂಬ ಪ್ರಶ್ನೆಯನ್ನು ಮಾಧ್ಯಮ ಪ್ರತಿನಿಧಿಗಳು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸುತ್ತಾ, ಯತ್ನಾಳ್ ಹಾಗೆ ಮಾಡಿದರೆ ಎಲ್ಲಾ ಹಿಂದೂಗಳು ಕಾಂಗ್ರೆಸ್ ಪಕ್ಷಕ್ಕೆ ಬಹಿಷ್ಕಾರ ಹಾಕುತ್ತಾರೆ ಎಂದು ಉತ್ತರಿಸಿದ್ದರು.
ಈ ಉತ್ತರದ ಮೂಲಕ ಯತ್ನಾಳ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ವಿಚಕ್ಷಣಾ ದಳದ ಮಂಜುನಾಥ ಕಲಬುರಗಿ ದೂರು ನೀಡಿದ್ದರು. ದೂರು ಆಧರಿಸಿ ಗದಗ ಜಿಲ್ಲಾ ನ್ಯಾಯಾಲಯ ಇದೇ 20ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಯತ್ನಾಳ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಶಾಸಕ ಯತ್ನಾಳ್ ಏಕ ಕಾಲಕ್ಕೆ ಸ್ವಪಕ್ಷೀಯರು ಮತ್ತು ಆಡಳಿತಾರೂಢ ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ಮಾಡುತ್ತಲೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬದ ಕಡು ವೈರಿಯೂ ಹೌದು. ಇದುವರೆಗೂ ಬಿ. ವೈ. ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಎಂದು ಒಪ್ಪಿಕೊಂಡಿಲ್ಲ.
ಈ ಮಧ್ಯೆ ಇವರನ್ನು ರಾಜ್ಯ ರಾಜಕಾರಣದಲ್ಲಿ ಮುಂದುವರಿಯಲು ಬಿಡುವುದಕ್ಕಿಂತ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿ ದೆಹಲಿಗೆ ಸಾಗಹಾಕಿದರೆ ಹೇಗೆ ಎಂದು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಯಡಿಯೂರಪ್ಪ ಅವರನ್ನು ಆಗಾಗ್ಗೆ ಕೆಣಕುವುದಕ್ಕಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಯತ್ನಾಳ್ ಅವರನ್ನು ಪ್ರಚೋದಿಸುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
(ವರದಿ -ಎಚ್. ಮಾರುತಿ, ಬೆಂಗಳೂರು)