Mangaluru News: ಮಂಗಳೂರಲ್ಲಿ ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆ; ಪರಿಹಾರಧನ 3.75 ಲಕ್ಷ ರೂ ಹಿಂಪಡೆದ ನ್ಯಾಯಾಲಯ
Court News: ಯುವಕನೊಬ್ಬನ ವಿರುದ್ಧ ಪೋಕ್ಸೊ, ದಲಿತ ದೌರ್ಜನ್ಯ ಕಾಯ್ದೆ ಪ್ರಕಾರ ದೂರು ದಾಖಲಿಸಿ ಸರಕಾರದಿಂದ ಪರಿಹಾರಧನ ಪಡೆದ ಯುವತಿಯೊಬ್ಬಳು, ಬಳಿಕ ಪ್ರತಿಕೂಲ ಸಾಕ್ಷಿ ನುಡಿದಿದ್ದಳು. ಆದ್ದರಿಂದ ಪರಿಹಾರಧನ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಪೋಕ್ಸೊ, ದಲಿತ ದೌರ್ಜನ್ಯ ಕಾಯ್ದೆಯಡಿ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿ, ಸರಕಾರದಿಂದ ಪರಿಹಾರಧನ ಪಡೆದ ಯುವತಿ, ಬಳಿಕ ಪ್ರತಿಕೂಲ ಸಾಕ್ಷಿ ನುಡಿದ ಕಾರಣ ಮಂಗಳೂರಿನ ಒಂದನೇ ಹೆಚ್ಚುವರಿ ಹಾಗೂ ಜಿಲ್ಲಾ ತ್ವರಿತಗತಿಯ ನ್ಯಾಯಾಲಯ ಪರಿಹಾರ ಮೊತ್ತ ವಾಪಸ್ ಪಡೆಯುವ ಮೂಲಕ ತೀರ್ಪು ನೀಡಿದೆ.
ಸಂತ್ರಸ್ತೆಗೆ ಆದ ಅನ್ಯಾಯಕ್ಕೆ ಸಂಬಂಧಿಸಿ ಎಫ್.ಐ.ಆರ್. ದಾಖಲಾದ ಸಂದರ್ಭ 1.25 ಲಕ್ಷ ರೂ ಹಾಗೂ ದೋಷಾರೋಪಣಾ ಪತ್ರ ಸಲ್ಲಿಸಿದ ಸಂದರ್ಭ 2.5 ಲಕ್ಷ ರೂ ಪರಿಹಾರಧನವನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಂಜೂರು ಮಾಡಿ, ಸಂತ್ರಸ್ತೆಯು ಅಪ್ರಾಪ್ತಳಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಚಿಕ್ಕಮ್ಮನ ಖಾತೆಗೆ ಜಮಾ ಮಾಡಿದ್ದರು.
ಆದರೆ ಸಂತ್ರಸ್ತೆ ಪ್ರತಿಕೂಲ ಸಾಕ್ಷಿ ಹೇಳಿದ ಕಾರಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಂತ್ರಸ್ತೆಗೆ ನೀಡಿದ 3.75 ಲಕ್ಷ ರೂ ಪರಿಹಾರದ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ವಿಚಾರಣೆ ಮಾಡಿದ ತನಿಖಾಧಿಕಾರಿ ಸಾಕ್ಷ್ಯ ಆಧರಿಸಿ, ಪರಿಹಾರ ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಬೇಕು ಎಂದು ಮನವಿ ಮಾಡಿದ್ದರು.
ಈ ಕುರಿತು ನ್ಯಾಯಾಲಯ ಪ್ರಕರಣದ ವಿಚಾರವನ್ನು ಪರಿಗಣಿಸಿ, 2023ರ ಡಿ.26ರಂದು ಸಂತ್ರಸ್ತ ಯುವತಿಗೆ ವಿತರಿಸಲಾಗಿದ್ದ ಪರಿಹಾರದ ಮೊತ್ತವನ್ನು ಉಪನಿರ್ದೇಶಕರು ವಸೂಲಿ ಮಾಡಿ ಈ ಕುರಿತು ನ್ಯಾಯಾಲಯಕ್ಕೆ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಜನವರಿ 4ರಂದು ಇಲಾಖಾ ಉಪನಿರ್ದೇಶಕರು 3.75 ಲಕ್ಷ ರೂಪಾಯಿಯನ್ನು ಸಂತ್ರಸ್ತೆಯ ಚಿಕ್ಕಮ್ಮನಿಂದ ವಸೂಲಾತಿ ಮಾಡಿ, ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರ ಜಂಟಿ ಖಾತೆಗೆ ಮರುಜಮೆ ಮಾಡಿದ್ದಾರೆ.
ವಿಷಯವೇನು: ಕಳೆದ ವರ್ಷ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಣಂಬೂರು ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ನಾಯಕ್ ಅವರು ಆರೋಪಿ ಮಂಜಪ್ಪ (23) ವಿರುದ್ಧ ಪೋಕ್ಸೊ ಕಾಯ್ದೆ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, 39 ಸಾಕ್ಷಿದಾರರ ವಿಚಾರಣೆಯನ್ನೂ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಧೀಶೆ ಮಂಜುಳಾ ಅವರು ವಿಚಾರಣೆ ನಡೆಸಿದ್ದು, ಈ ವೇಳೆ ಸಂತ್ರಸ್ತೆ ಮತ್ತು ಆಕೆಯ ಕಡೆಯವರು ಪ್ರತಿಕೂಲ ಸಾಕ್ಷಿ ಹೇಳಿದ್ದರು. ಇದರಿಂದ ಆರೋಪಿ ದೋಷಮುಕ್ತಗೊಂಡಿದ್ದ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು. ಆದರೆ ಇದಕ್ಕೂ ಮುನ್ನ ಸಂತ್ರಸ್ತೆಗೆ ಪರಿಹಾರದ ಮೊತ್ತ ಜಮೆ ಆಗಿತ್ತು. ಹೀಗಾಗಿ ಆರೋಪಿ ದೋಷಮುಕ್ತಗೊಂಡ ಬಳಿಕ ಇಲಾಖೆ ಪರಿಹಾರ ನೀಡಿದ ಮೊತ್ತವನ್ನು ಮರುಪಾವತಿಗೆ ಮನವಿ ಮಾಡಿತ್ತು. ಇದಾದ ಬಳಿಕ ನಡೆದ ಪ್ರಕ್ರಿಯೆಯಲ್ಲಿ ಹಣ ಮರುಪಾವತಿಯಾಗಿದೆ.
ಯುವತಿ ಕೊಲೆಯತ್ನ ಪ್ರಕರಣದಲ್ಲಿ ಯುವಕನಿಗೆ 18 ವರ್ಷ, 1 ತಿಂಗಳು ಸಜೆ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ಯುವತಿಯೊಬ್ಬಳಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಆರೋಪಿ, ಸುಶಾಂತ್ (31) ಎಂಬಾತನಿಗೆ ನ್ಯಾಯಾಲಯ 18 ವರ್ಷ 1 ತಿಂಗಳು ಸಜೆ ವಿಧಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ: 2019ರ ಜೂನ್ 28ರಂದು ಸಂಜೆ ಬಗಂಬಿಲ ರಸ್ತೆಯ ಶಾಂತಿಧಾನದ ಬಳಿ ಸಂತ್ರಸ್ತ ಯುವತಿಯು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ, ಸುಶಾಂತ್ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಬಳಿಕ ಆಕೆಯನ್ನು ತಡೆದ, ದೌರ್ಜನ್ಯ ಎಸಗಿ, ಎದೆ, ಹೊಟ್ಟೆ ಹಾಗೂ ದೇಹದ ವಿವಿಧ ಭಾಗಗಳಿಗೆ ತಿವಿದು ಕೊಲೆ ಮಾಡಲು ಯತ್ನಿಸಿದ್ದ. ಆಕೆ ಪ್ರಜ್ಞಾಹೀನಳಾಗಿ ಬಿದ್ದದ್ದನ್ನು ಕಂಡು ಅದೇ ಚೂರಿಯಿಂದ ತನ್ನ ಕುತ್ತಿಗೆ, ಕೈ ನಾಡಿಗೆ ಇರಿದು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದ. ಸ್ಥಳೀಯರು ಇಬ್ಬರನ್ನೂ ಪಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.
ನೃತ್ಯತರಬೇತುದಾರನಾಗಿದ್ದ ಸುಶಾಂತ್, ಯುವತಿ ಕಲಿಯುತ್ತಿದ್ದ ಕಾಏಜಿನಲ್ಲಿ ನೃತ್ಯ ಕಲಿಸುತ್ತಿದ್ದ ಸಂದರ್ಭ ತನ್ನನ್ನು ಮದುವೆಯಾಗುವಂತೆ ಯುವತಿಯನ್ನು ಒತ್ತಾಯಿಸುತ್ತಿದ್ದ. ಈ ಸಂದರ್ಭ ಯುವತಿ ಈ ಮೊದಲೇ ಆತನ ವ ವಿರುದ್ಧ ದೂರು ನೀಡಿದ್ದಳು. ಆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಯುವಕ ಬಳಿಕ ಈ ಕೃತ್ಯವನ್ನು ದ್ವೇಷದಲ್ಲಿ ಎಸಗಿದ್ದ. ಅಂದಿನ ಉಳ್ಳಾಲ ಠಾಣೆ ಎಸ್ ಐ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸಿಸಿ ಕ್ಯಾಮರಾದಲ್ಲಿ ಕೃತ್ಯ ನಡೆದದ್ದು ಸೆರೆಯಾಗಿತ್ತು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)