ಕನ್ನಡ ಸುದ್ದಿ  /  ಕರ್ನಾಟಕ  /  ಅಪಹರಣ ಕೇಸ್‌; ಎಸ್‌ಐಟಿ ವಿಚಾರಣೆಗೆ ಕೊನೆಗೂ ಹಾಜರಾದ ಭವಾನಿ ರೇವಣ್ಣ, 4 ಗಂಟೆ ವಿಚಾರಣೆ, ರೇವಣ್ಣ ಅರ್ಜಿ ಹಿನ್ನೆಲೆ ದೂರುದಾರರಿಗೆ ನೋಟಿಸ್

ಅಪಹರಣ ಕೇಸ್‌; ಎಸ್‌ಐಟಿ ವಿಚಾರಣೆಗೆ ಕೊನೆಗೂ ಹಾಜರಾದ ಭವಾನಿ ರೇವಣ್ಣ, 4 ಗಂಟೆ ವಿಚಾರಣೆ, ರೇವಣ್ಣ ಅರ್ಜಿ ಹಿನ್ನೆಲೆ ದೂರುದಾರರಿಗೆ ನೋಟಿಸ್

ಸಂತ್ರಸ್ತೆಯ ಅಪಹರಣ ಕೇಸ್‌; ಷರತ್ತುಬದ್ಧ ನಿರೀಕ್ಷಣಾ ಜಾಮೀನು ಸಿಕ್ಕಿದ ಬಳಿಕ ಕೊನೆಗೂ ಭವಾನಿ ರೇವಣ್ಣ ಎಸ್‌ಐಟಿಯ ವಿಚಾರಣೆಗೆ ನಿನ್ನೆ ಮಧ್ಯಾಹ್ನ ಹಾಜರಾದರು. ಸತತ 4 ಗಂಟೆ ಕಾಲ ವಿಚಾರಣೆ ಎದುರಿಸಿದರು. ಇನ್ನೊಂದೆಡೆ, ಎಚ್.ಡಿ.ರೇವಣ್ಣ ಅರ್ಜಿ ಹಿನ್ನೆಲೆಯಲ್ಲಿ ದೂರುದಾರರಿಗೆ ತುರ್ತು ನೋಟಿಸ್ ಅನ್ನು ಕೋರ್ಟ್ ಜಾರಿಗೊಳಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಸಂತ್ರಸ್ತೆಯ ಅಪಹರಣ ಕೇಸ್‌; ಎಸ್‌ಐಟಿ ವಿಚಾರಣೆಗೆ ಕೊನೆಗೂ ಹಾಜರಾದ ಭವಾನಿ ರೇವಣ್ಣ 4 ಗಂಟೆ ದೀರ್ಘ ವಿಚಾರಣೆ ಎದುರಿಸಿದರು. ಇನ್ನೊಂದೆಡೆ ರೇವಣ್ಣ ಅರ್ಜಿ ಹಿನ್ನೆಲೆ ದೂರುದಾರರಿಗೆ ನೋಟಿಸ್ ಜಾರಿಯಾಗಿದೆ.
ಸಂತ್ರಸ್ತೆಯ ಅಪಹರಣ ಕೇಸ್‌; ಎಸ್‌ಐಟಿ ವಿಚಾರಣೆಗೆ ಕೊನೆಗೂ ಹಾಜರಾದ ಭವಾನಿ ರೇವಣ್ಣ 4 ಗಂಟೆ ದೀರ್ಘ ವಿಚಾರಣೆ ಎದುರಿಸಿದರು. ಇನ್ನೊಂದೆಡೆ ರೇವಣ್ಣ ಅರ್ಜಿ ಹಿನ್ನೆಲೆ ದೂರುದಾರರಿಗೆ ನೋಟಿಸ್ ಜಾರಿಯಾಗಿದೆ.

ಬೆಂಗಳೂರು: ಪುತ್ರ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪೋಷಕರಾದ ಎಚ್. ಡಿ.ರೇವಣ್ಣ ಮತ್ತು ಭವಾನಿ ದಂಪತಿಗಳು ವಿಚಾರಣೆ ಎದುರಿಸಿದ್ದಾರೆ. ರೇವಣ್ಣ ಅವರ ಮೇಲೆ ದಾಖಲಾಗಿರುವ ಪ್ರಕರಣ ಕುರಿತು ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆದರೆ ಭವಾನಿ ರೇವಣ್ಣ ಅವರು ಇದೇ ಮೊದಲ ಬಾರಿಗೆ ಎಸ್ ಐ ಟಿ ವಿಚಾರಣೆ ಎದುರಿಸಿದರು.

ಟ್ರೆಂಡಿಂಗ್​ ಸುದ್ದಿ

ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ತಾಯಿ, ಶಾಸಕ ಎಚ್ . ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಬೆಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಶುಕ್ರವಾರ ಹಾಜರಾಗಿ ವಿಚಾರಣೆಯನ್ನು ಎದುರಿಸಿದರು.

ಅತ್ಯಾಚಾರವೆಸಗಿದ ಪುತ್ರನನ್ನು ರಕ್ಷಿಸಲು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಮಹಿಳೆಯೊಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರನ್ನು ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಈ ಆದೇಶ ಹೊರಬಿದ್ದ ಬಳಿಕ ಭವಾನಿ ಅವರು ಎಸ್‌ಐಟಿ ವಿಚಾರಣೆಗೆ ಹಾಜರಾದರು. ವಕೀಲರ ಜೊತೆಗೆ ಹಾಜರಾದ ಭವಾನಿ ಅವರನ್ನು ಎಸ್‌ಐಟಿ ತನಿಖಾಧಿಕಾರಿಗಳು 4 ಗಂಟೆಗಳ ಕಾಲ ವಿಚಾರಣೆ ನಡೆಸಿದರು ಎಂದು ತಿಳಿದು ಬಂದಿದೆ.

ಎಸ್‌ಐಟಿ ಅಧಿಕಾರಿಗಳಿಂದ ಸರಣಿ ಪ್ರಶ್ನೆಗಳಿಗೆ ಚುಟುಕು ಉತ್ತರ ನೀಡಿದ ಭವಾನಿ

ಮಹಿಳೆಯೊಬ್ಬರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸರಣಿ ಪ್ರಶ್ನೆಗಳನ್ನು ಕೇಳಲಾಗಿದೆ. ಇವರ ಪ್ರಶ್ನೆಗಳಿಗೆ ಭವಾನಿ ಅವರು ಉತ್ತರಿಸಿ ನಾವು ಯಾರನ್ನೂ ಅಪಹರಿಸಿಲ್ಲ. ನಮ್ಮ ಕುಟುಂಬದ ವಿರುದ್ಧ ವಿನಾಕಾರಣ ಷಡ್ಯಂತ್ರ ನಡೆಸಲಾಗಿದೆ ಎಂದಷ್ಟೇ ಉತ್ತರಿಸಿದರು ಎಂದು ತಿಳಿದು ಬಂದಿದೆ. ಭವಾನಿ ಅವರ ಹೇಳಿಕೆಯನ್ನು ಎಸ್ ಐ ಟಿ ದಾಖಲಿಸಿಕೊಂಡಿದೆ. ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದ್ದು ಭವಾನಿಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ.

ಭವಾನಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಅವರು ಬಂಧನ ಭೀತಿಯಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಒಂದು ತಿಂಗಳಿಂದ ಅವರು ತಲೆಮರೆಸಿಕೊಂಡಿದ್ದರು. ಮೊಬೈಲ್ ಲೊಕೇಶನ್ ಆಧರಿಸಿ ಭವಾನಿ ಅವರಿಗಾಗಿ ಎಸ್‌ಐಟಿ ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ.

ಪ್ರಜ್ವಲ್ ಅವರೂ ಎಸ್‌ಐಟಿ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಎಸ್‌ಐಟಿ ಕಚೇರಿಯ ಸೆಲ್‌ನಲ್ಲಿಯೇ ಇದ್ದರೂ ಭವಾನಿ ಅವರು ಪುತ್ರನನ್ನು ಮಾತನಾಡಿಸಲು ಸಾಧ್ಯವಾಗಲಿಲ್ಲ. ಬರಿಗೈನಲ್ಲಿ ಭವಾನಿ ಹಿಂತಿರುಗಿದರು ಎಂದು ಮೂಲಗಳು ತಿಳಿಸಿವೆ.

ಹೈಕೋರ್ಟ್‌ ಕೆ ಆರ್ ನಗರ ತಾಲ್ಲೂಕು ಮತ್ತು ಹಾಸನ ಜಿಲ್ಲೆಯನ್ನು ಪ್ರವೇಶಿಸದಂತೆ ಭವಾನಿ ರೇವಣ್ಣ ಅವರಿಗೆ ನಿರ್ಬಂಧ ವಿಧಿಸಿದೆ.

ಎಚ್.ಡಿ.ರೇವಣ್ಣ ಅರ್ಜಿ: ದೂರುದಾರರಿಗೆ ತುರ್ತು ನೋಟಿಸ್

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರದ್ದುಪಡಿಸುವಂತೆ ಕೋರಿ ಜೆಡಿಎಸ್ ವರಿಷ್ಠ, ಶಾಸಕ ಎಚ್.ಡಿ. ರೇವಣ್ಣ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣದ ದೂರುದಾರರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ.

ಈ ಸಂಬಂಧ ಎಚ್.ಡಿ. ರೇವಣ್ಣ ಅವರು ಸಲ್ಲಿಸಿರುವ ಅರ್ಜಿಯನ್ನು, ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಶುಕ್ರವಾರ ವಿಚಾರಣೆ ನಡೆಸಿದರು. ನಂತರ ವಿಚಾರಣೆಯನ್ನು ಇದೇ ತಿಂಗಳ 21 ಕ್ಕೆ ಮುಂದೂಡಿದರು.

ಮತ್ತೊಂದು ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದ ಮಹಿಳೆಯೊಬ್ಬರನ್ನು ಅಪಹರಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲೂ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ವಿಶೇಷ ತನಿಖಾ ದಳ (ಎಸ್‌ಐಟಿ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಇದೇ ನ್ಯಾಯಪೀಠ ಜೂನ್ 14ಕ್ಕೆ ಮುಂದೂಡಿದೆ.

ಈ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಎಚ್.ಡಿ. ರೇವಣ್ಣ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದನ್ನು ಮನ್ನಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ ತಿಂಗಳ 14ಕ್ಕೆ ಮುಂದೂಡಿತು.

(ವರದಿ- ಎಚ್. ಮಾರುತಿ, ಬೆಂಗಳೂರು)

ಟಿ20 ವರ್ಲ್ಡ್‌ಕಪ್ 2024