ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ; ವಿಡಿಯೋ ವೈರಲ್‌
ಕನ್ನಡ ಸುದ್ದಿ  /  ಕರ್ನಾಟಕ  /  ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ; ವಿಡಿಯೋ ವೈರಲ್‌

ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ; ವಿಡಿಯೋ ವೈರಲ್‌

ಬೆಂಗಳೂರಲ್ಲಿ ಸರಗಳ್ಳತನ ಹೊಸದಲ್ಲ. ಆದರೆ ಇತ್ತೀಚಿನ ವೈರಲ್ ವಿಡಿಯೋ ಎಂಥವರಲ್ಲೂ ನಡುಕ ಹುಟ್ಟಿಸುವಂಥದ್ದು. ದೇವಸ್ಥಾನದಲ್ಲಿ ದೇವಿಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ ಆತಂಕ ಮೂಡಿಸಿದ್ದಾನೆ. ವಿಡಿಯೋ ವೈರಲ್‌ ಆಗಿದ್ದು, ಅದರ ವಿವರ ಇಲ್ಲಿದೆ.

ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿ ಕಳ್ಳ, ಕಳವಳ ಮೂಡಿಸಿದ್ದಾನೆ. ಇದರ ವಿಡಿಯೋ ವೈರಲ್‌ ಆಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿ ಕಳ್ಳ, ಕಳವಳ ಮೂಡಿಸಿದ್ದಾನೆ. ಇದರ ವಿಡಿಯೋ ವೈರಲ್‌ ಆಗಿದೆ. (ಸಾಂಕೇತಿಕ ಚಿತ್ರ) (Pexels)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿದ್ದು, ಸರಗಳ್ಳತನ ಮತ್ತೆ ಮಹಿಳೆಯರ ನಿದ್ದೆಗೆಡಿಸಿದೆ. ನವರಾತ್ರಿ ಸಂದರ್ಭದಲ್ಲಿ ಬೆಂಗಳೂರಿನ ದೇವಸ್ಥಾನ ಒಂದರಲ್ಲಿ ಸರಗಳ್ಳನೊಬ್ಬ ದೇವಿ ಸ್ತೋತ್ರ ಪಠಿಸುತ್ತ ಕುಳಿಸಿದ್ದ ಮಹಿಳೆಯ ಕತ್ತಿನಿಂದ ಸರ ಕಿತ್ತೆಳೆದು ಓಡಿದ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಜನಮನ ಸಳೆದಿದೆ. ಮಹಿಳೆ ದೇವಸ್ಥಾನದ ಒಳಗೆ ಕಿಟಕಿಯ ಬದಿಗೆ ಕುಳಿತು ಸ್ತೋತ್ರ ಪಠಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸರಗಳ್ಳ ಕಿಟಕಿಯಿಂದ ಕೈ ಹಾಕಿ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಎಳೆದೊಯ್ದಿರುವುದು ಕಂಡುಬಂದಿದೆ. ಮಹಿಳೆಯ ಕತ್ತಿಗೂ ಗಾಯವಾಗಿದ್ದು, ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ. ಅರೆಕ್ಷಣ ಭಯ ಹುಟ್ಟಿಸುವ ವಿಡಿಯೋವನ್ನು ಎಕ್ಸ್‌ನ ಯಾರಿವನು ಅನ್ನೋನು ಖಾತೆಯಲ್ಲಿ ಶೇರ್ ಮಾಡಲಾಗಿದೆ.

ವಿಡಿಯೋದಲ್ಲಿ ಏನಿದೆ; ಎಲ್ಲಿ ನಡೆದ ಘಟನೆ

ಯಾರಿವನು ಅನ್ನೋನು (@memesmaadonu) ಖಾತೆಯಲ್ಲಿ ನಿನ್ನೆ (ಅಕ್ಟೋಬರ್‌ 14) ಶೇರ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ದೇವಿ ಸ್ತೋತ್ರ ಪಠಿಸುತ್ತಿರುವ ದೃಶ್ಯ ಇದೆ. 23 ಸೆಕೆಂಡ್‌ ವಿಡಿಯೋ ಶುರುವಾಗಿ ಕೆಲವು ಸೆಕೆಂಡ್‌ಗಳಾಗುತ್ತಿದ್ದಂತೆ ಕಿಟಕಿ ಬದಿಗೆ ಕುಳಿತ ಮಹಿಳೆ ಜೋರಾಗಿ ಕಿರುಚುವುದು ಕೇಳಿದೆ. ಕೂಡಲೇ ಕ್ಯಾಮೆರಾ ಅತ್ತ ತಿರುಗಿದಾಗ ಆ ಮಹಿಳೆ ತನ್ನ ಕತ್ತು ಹಿಡಿದುಕೊಂಡು, ಅಯ್ಯೋ ಮಾಲೆ ಹೋಯ್ತು, ಕಳ್ಳ ಎಗರಿಸಿಕೊಂಡು ಹೋದ ಎಂದು ಗೋಳಾಡುತ್ತಿರುವ ದೃಶ್ಯ ಕಂಡುಬಂದಿದೆ. ಕೂಡಲೆ ಅಲ್ಲಿದ್ದ ಮಹಿಳೆಯರೆಲ್ಲ ಎದ್ದು ನಿಂತು ಕಳ್ಳನನ್ನು ಹಿಡೀರಿ ಎಂದು ಕೂಗುವುದು ಕೇಳಿಬಂದಿದೆ.

ಈ ವಿಡಿಯೋವನ್ನು ಶೇರ್ ಮಾಡಿ. ಸರಗಳ್ಳರ ಬಗ್ಗೆ ಎಚ್ಚರದಿಂದ ಇರುವಂತೆ ನಿಮ್ಮ ಮನೆಯ ಸದಸ್ಯರಲ್ಲಿ ಜಾಗೃತಿ ಮೂಡಿಸಿ ಎಂಬ ಸಾಲನ್ನು ಸೇರಿಸಲಾಗಿದೆ. ಈ ವಿಡಿಯೋವನ್ನು ಈಗಾಗಲೆ 2 ಲಕ್ಷದಷ್ಟು ಜನ ನೋಡಿದ್ದಾರೆ. ಅನೇಕರು ಕಾಮೆಂಟ್ ಮಾಡಿದ್ದಾರೆ. ಇಂಡಿಯಾ ಟುಡೇ ವರದಿ ಪ್ರಕಾರ ಈ ಘಟನೆ ಮಹಾಲಕ್ಷ್ಮೀ ಲೇಔಟ್‌, ನಂದಿನಿ ಬಡಾವಣೆ ಸಮೀಪದ ಶಂಕರನಗರದಲ್ಲಿ ನಡೆದಿದೆ. ಪೊಲೀಸರು ಕೇಸ್ ದಾಖಲಿಸಿದ್ದು ತನಿಖೆ ನಡೆಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಜನಸ್ಪಂದನೆ ಹೀಗಿದೆ

ಬೆಂಗಳೂರಿನಲ್ಲಿ ಸರಗಳ್ಳತನ ದೊಡ್ಡ ಸಮಸ್ಯೆಯಾಗಿದ್ದು, ಮಹಿಳೆಯರು ನಿರ್ಭೀತರಾಗಿ ನಡೆದಾಡುವುದು, ಒಂದೆಡೆ ಕೂರುವುದು ಕೂಡ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್‌ ವಿಡಿಯೋ ನೋಡಿದ ಬಳಕೆದಾರರೊಬ್ಬರು, “ಸರಗಳ್ಳ ಆ ಮಹಿಳೆ ಮತ್ತು ಅವರ ಒಂದು ಕುಟುಂಬಕ್ಕೆ ಭಾರಿ ಆಘಾತ ನೀಡಿದ್ದಾನೆ. ಆತನಿಗೆ 20 ಸಾವಿರ ರೂಪಾಯಿ ತತ್‌ಕ್ಷಣಕ್ಕೆ ಸಿಕ್ಕಿರಬಹುದು. ಅದು ಆತನಿಗೆ ಒಂದೆರಡು ವಾರದ ಖರ್ಚಿಗಾಗಬಹುದು ಅಷ್ಟೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ”ಈ ಕಳ್ಳರು ಎಂದಿಗೂ ಬದಲಾಗರು. ಅವರ ಕೈ ಮುರಿಯಬೇಕು. ಮತ್ತೆಂದೂ ಅವರು ಕಳವು ಮಾಡಬಾರದು. ಹಾಗೆ ಮಾಡಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ.

ಮಧ್ಯದಲ್ಲಿ ಜಮಖಾನ ಹಾಸಿರುವಾಗ ಎಲ್ಲರೂ ಅಲ್ಲೇ ಕುಳಿತು ಪಠಿಸಿದರೆ ಉತ್ತಮ ಅಲ್ವ. ಇನ್ಮೇಲಾದರೂ ಕಿಟಕಿ ಪಕ್ಕ ಕುಳಿತುಕೊಳ್ಳುವುದನ್ನು ಮಹಿಳೆಯರು ಬಿಟ್ಟರೆ ಒಳ್ಳೆಯದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗುವಾಗ ಮೈ ತುಂಬಾ ಚಿನ್ನಾಭರಣ ಧರಿಸಿಕೊಂಡು ಬರಬಾರದು ಎಂದು ಮತ್ತೊಬ್ಬರು ಟ್ವೀಟ್‌ ಮೂಲಕ ಸಲಹೆ ನೀಡಿದ್ದಾರೆ.

ಇನ್ನೊಂದು ಘಟನೆಯಲ್ಲಿ, ಉತ್ತರ ಬೆಂಗಳೂರಿನ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ 70 ವರ್ಷದ ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದಾನೆ. ಸಿದ್ದೇನಹಳ್ಳಿ ಬೈರವೇಶ್ವರ ವೃತ್ತದ ಸಮೀಪದ ಬಹುಮಹಡಿ ಕಟ್ಟಡದ ಸಮೀಪ ಕಳೆದ ಶುಕ್ರವಾರ ಈ ಘಟನೆ ನಡೆದಿದೆ.

Whats_app_banner