ಯಲಹಂಕ - ಏರ್‌ಫೋರ್ಸ್ ರಸ್ತೆಯಲ್ಲಿ ಪುಂಡರ ಅಪಾಯಕಾರಿ ವೀಲಿಂಗ್ ಕಾಟ; ಪ್ರಾಣಭೀತಿಯಲ್ಲಿ ವಾಹನ ಚಲಾಯಿಸುತ್ತಿರುವ ಸವಾರರು- ವೈರಲ್ ವಿಡಿಯೋ
ಯಲಹಂಕ - ಏರ್‌ಫೋರ್ಸ್ ರಸ್ತೆಯಲ್ಲಿ ಪುಂಡರ ಅಪಾಯಕಾರಿ ವೀಲಿಂಗ್ ಕಾಟ ಹೆಚ್ಚಳವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋ, ಫೋಟೋಗಳು ಗಮನಸೆಳೆದಿವೆ. ಪ್ರಾಣಭೀತಿಯಲ್ಲಿ ವಾಹನ ಚಲಾಯಿಸುತ್ತಿರುವ ಸವಾರರು, ಈ ಬಗ್ಗೆ ಟ್ವೀಟ್ ಮಾಡುತ್ತಿದ್ದು, ಬೆಂಗಳೂರು ಸಂಚಾರ ಪೊಲೀಸರ ಗಮನಸೆಳೆದಿದ್ದಾರೆ. ವೈರಲ್ ವಿಡಿಯೋ ಮತ್ತು ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸ್ಟಂಟ್ ನಡೆಸುವ ಪುಂಡರ ಕಾಟ ಹೆಚ್ಚಳವಾಗಿದೆ. ಈ ಕುರಿತು ಪದೇಪದೆ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ದೂರುಗಳು ವ್ಯಕ್ತವಾಗುತ್ತಿದೆ. ಸಂಚಾರ ಪೊಲೀಸರು ಕ್ರಮವನ್ನೂ ತೆಗೆದುಕೊಳ್ಳುತ್ತಿದ್ದಾರೆ. ಯಲಹಂಕ - ಏರ್‌ಫೋರ್ಸ್ ಹೆದ್ದಾರಿಯಲ್ಲಿ ಪುಂಡರು ವೀಲಿಂಗ್ ನಡೆಸುತ್ತಿರುವ ಬಗ್ಗೆ ಇತ್ತೀಚೆಗೆ ದೂರು ಕಂಡುಬಂದಿದೆ. ಕರ್ನಾಟಕ ಪೋರ್ಟ್‌ಫೋಲಿಯೋ ಎಂಬ ಎಕ್ಸ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ನಿನ್ನೆ (ನವೆಂಬರ್ 2) ರಾತ್ರಿ 7.30ಕ್ಕೆ ಶೇರ್ ಆಗಿದೆ.
ಯಲಹಂಕ - ಏರ್‌ಫೋರ್ಸ್ ಹೆದ್ದಾರಿಯಲ್ಲಿ ಪುಂಡರ ವೀಲಿಂಗ್ ಕಾಟ
ಯಲಹಂಕ - ಏರ್‌ಫೋರ್ಸ್ ಹೆದ್ದಾರಿಯಲ್ಲಿ ಪುಂಡರ ವೀಲಿಂಗ್ ಕಾಟ ಹೆಚ್ಚಳವಾಗಿದೆ. ಕರ್ನಾಟಕ ಪೋರ್ಟ್‌ಫೋಲಿಯೋ ಎಂಬ ಎಕ್ಸ್ ಖಾತೆಯಲ್ಲಿ ಶೇರ್ ಆದ ವಿಡಿಯೋದಲ್ಲಿ ಇಬ್ಬರು ಸ್ಕೂಟರ್ ವೀಲಿಂಗ್ ನಡೆಸುತ್ತಿರುವ ದೃಶ್ಯವಿದೆ. ವಿಡಿಯೋ ಜತೆಗಿರುವ ವಿವರಣೆ ಪ್ರಕಾರ, "ನಿನ್ನೆ ಮಧ್ಯಾಹ್ನ 12:10 ರ ಸುಮಾರಿಗೆ ಯುವಕರ ಗುಂಪು ಯಲಹಂಕದಿಂದ ಏರ್‌ಫೋರ್ಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಸೇರಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಈ ಅಜಾಗರೂಕ ಸ್ಟಂಟ್ ರೈಡಿಂಗ್ ತಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುವಂಥದ್ದು. ಅದೂ ಅಲ್ಲದೆ, ಈ ಜನನಿಬಿಡ ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುವಂಥದ್ದಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಕ್ರಮಗಳು ತೀವ್ರ ಅಪಘಾತಗಳಿಗೆ ಕಾರಣವಾಗಬಹುದು, ಸವಾರರು ಮತ್ತು ಇತರ ವಾಹನ ಚಾಲಕರು ಗಂಭೀರ ಅಪಾಯಕ್ಕೆ ಸಿಲುಕುತ್ತಾರೆ. ಬೆಂಗಳೂರು ನಗರ ಪೊಲೀಸರು ಮತ್ತು ನಗರ ಸಂಚಾರ ಪೊಲೀಸರು ಸೇರಿ ಅಧಿಕಾರಿಗಳು ಈ ಸ್ಟಂಟ್ ರೈಡರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಪಾಯಕಾರಿ ನಡವಳಿಕೆಯನ್ನು ತಡೆಗಟ್ಟಲು ಮತ್ತು ಎಲ್ಲರಿಗೂ ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸಲಾಗಿದೆ. ವಾಹನ ಸಂಖ್ಯೆ KA03JH7805 ಎಂದು ಉಲ್ಲೇಖಿಸಲಾಗಿದೆ.
ಜನರ ಕಾಮೆಂಟ್ ಹೀಗಿದೆ ನೋಡಿ
ಈ ಪೋಸ್ಟ್‌ಗ ಬಹಳ ಜನ ಕಾಮೆಂಟ್ ಮಾಡಿದ್ದು, ಕೆಲವರು ಸ್ಟಂಟ್ ರೈಡಿಂಗ್ ಮಾಡುತ್ತಿದ್ದವರನ್ನು ಬಂಧಿಸುವಂತೆ ಆಗ್ರಹಸಿದ್ದಾರೆ. ಕೆಲವರು ಈ ವಿಡಿಯೋ ಮಾಡಿದವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಟೋನಿ ಎಂಬುವವರು ಕಾಮೆಂಟ್ ಮಾಡುತ್ತ, "ಇಷ್ಟೆಲ್ಲ ಕಷ್ಟ ಪಡಬೇಕಾಗಿರಲಿಲ್ಲ. ಕ್ಯಾಮೆರಾ ಹಿಡಿದ ವ್ಯಕ್ತಿಗೆ ಸುವರ್ಣಾವಕಾಶ ಇತ್ತು. ಒಮ್ಮೆ ಡಿಕ್ಕಿ ಹೊಡೆದಿದ್ದರೆ ಸಾಕಿತ್ತು. ಎಲ್ಲ ಸಮಸ್ಯೆಗೂ ಪರಿಹಾರ ಸಿಕ್ತಿತ್ತು. ಸಾರ್ವಜನಿಕ ಹಣ ದುರುಪಯೋಗ ಮಾಡುವವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರ ಸ್ಕೂಟರ್ ನಂಬರ್ ತಗೊಂಡು ಪರಿಶೀಲಿಸಿದ ಬಳಕೆದಾರರೊಬ್ಬರು, “ಈಗಾಗಲೇ ಅವರ ಮೇಲೆ 6700 ರೂಪಾಯಿ ದಂಡ ಇದೆ” ಎಂದು ತಿಳಿಸಿದ್ದಾರೆ.
ಪ್ರಧಾನ್ ಹರಿದಾಸನ್ ಕಾಮೆಂಟ್ ಮಾಡುತ್ತ, ನಾನು ವೀಲಿಂಗ್ ಮಾಡುವವರ ಪರವಹಿಸಿ ಮಾತನಾಡುತ್ತಿಲ್ಲ. ಆದರೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಈ ವಿಡಿಯೋ ಮಾಡುವುದಕ್ಕೆ ಫೋನ್ ಬಳಸುವುದು ಕೂಡ ಅಪರಾಧ. ನೀವು ಕೂಡ ಇತರರ ಪ್ರಾಣಕ್ಕೆ ಅಪಾಯ ಉಂಟುಮಾಡುವ ಕೃತ್ಯವನ್ನೇ ಮಾಡಿದ್ದೀರಿ ಎಂದು ಹೇಳಿದ್ದಾರೆ.
ಎನ್ ಜಗದೀಶ್ ಎಂಬುವವರು ಕಾಮೆಂಟ್ ಮಾಡ್ತಾ ಇನ್ನೊಂದು ವೀಲಿಂಗ್ ಪ್ರಕರಣದ ಕಡೆಗೆ ಗಮನಸೆಳೆದಿದ್ದಾರೆ. ಅದರಲ್ಲಿ ಅವರು ನಾಲ್ಕು ಫೋಟೋಗಳನ್ನು ಶೇರ್ ಮಾಡಿದ್ದು, ದ್ವಿಚಕ್ರ ವಾಹನ ಸಂಖ್ಯೆ KA09 EL 9396 ವೀಲಿಂಗ್ ಸರಾಗ ನಡೆಯುತ್ತಿದೆ. ಈ ವೀಲಿಂಗ್ ದೃಶ್ಯಗಳ ವಿಡಿಯೋ ಇನ್‌ಸ್ಟಾಗ್ರಾಂ ರೀಲ್‌ಗಳಾಗುತ್ತಿವೆ. ಪೊಲೀಸರು ಇನ್ನೂ ಕ್ರಮ ತೆಗೆದುಕೊಡಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರನ್ನು ಎಚ್ಚರಿಸಿದ್ದಾರೆ.