ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾಜಾರೋಷವಾಗಿ ಫ್ಲೈಓವರ್ ದಾಟಿದ ಚಿರತೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಚಿರತೆ ಪತ್ತೆಯಾದ ಎರಡು ವಾರಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿಯೂ ಚಿರತೆ ಫ್ಲೈಓವರ್ ದಾಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.
ಕಾಡುಪ್ರಾಣಿಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿರುವುದು ಸಾಮಾನ್ಯವಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ನಗರ ಕೂಡಾ ಇದಕ್ಕೆ ಹೊರತಾಗಿಲ್ಲ. ಸೆಪ್ಟೆಂಬರ್ 17ರ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಟೋಲ್ ಪ್ಲಾಜಾ ಬಳಿ ಚಿರತೆಯೊಂದು ಫ್ಲೈಓವರ್ ದಾಟುವುದು ಕಾಣಿಸಿಕೊಂಡಿದೆ. ಮಹಾನಗರದಲ್ಲಿ ಚಿರತೆ ಓಡಾಡಿದ ದೃಶ್ಯವು ಪ್ರಮುಖ ಟೆಕ್ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜನರ ನಿದ್ದೆಗೆಡಿಸಿದೆ. ಹೀಗಾಗಿ ಜನರು ಹಾಗೂ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿದ್ದಾರೆ.
ಸುದ್ದಿಸಂಸ್ಥೆ ಎನ್‌ಡಿಟಿವಿ ವರದಿ ಪ್ರಕಾರ, ಹಂತ 1 ಟೋಲ್ ಪ್ಲಾಜಾದಲ್ಲಿನ ಸಿಸಿಟಿವಿಯಲ್ಲಿ ಚಿರತೆಯ ಚಲನವಲನಗಳು ಸೆರೆಯಾಗಿವೆ. ಪಣಕ್ ಇಂಡಿಯಾ ಕಂಪನಿ ಪ್ರದೇಶದಿಂದ ನೆಟ್ಟೂರು ತಾಂತ್ರಿಕ ತರಬೇತಿ ಪ್ರತಿಷ್ಠಾನ (NTTF) ಮೈದಾನದ ಕಡೆಗೆ ಚಿರತೆ ಚಲಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿ ಹೇಳಿದೆ. ಚಿರತೆ ಓಡಾಟದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಹೆಚ್ಚು ಆತಂಕ ಮೂಡಿಸಿದೆ.
ಘಟನೆ ಬಳಿಕ ಎನ್‌ಟಿಟಿಎಫ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಕುರಿತು ಮಾಧ್ಯಮಕ್ಕೆ ತಿಳಿಸಿದೆ. ವರದಿಯ ಪ್ರಕಾರ, ಎನ್‌ಟಿಟಿಎಫ್ ಪ್ರಾಂಶುಪಾಲರಾದ ಸುನಿಲ್ ಜೋಶಿ ಅವರು, ಕ್ಯಾಂಪಸ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಇರುವಿಕೆಯನ್ನು ಪರಿಶೀಲಿಸಿದ್ದಾರೆ. ಆದರೆ ಎಲ್ಲೂ ಚಿರತೆ ಇರುವುದು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರಿಗೆ ಸೂಚನೆ
ಸದ್ಯ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸಾರ್ವಜನಿಕರಿಗೆ ಜಾಗರೂಕರಾಗಿರುವಂತೆ ಸೂಚನೆ ನೀಡಿದ್ದಾರೆ. ಎಲ್ಲಾದರೂ ಚಿರತೆ ಓಡಾಟ ಕಂಡುಬಂದರೆ ತಕ್ಷಣ ಗಮನಕ್ಕೆ ತರುವಂತೆ ಸಲಹೆ ನೀಡಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ.
ಅತ್ತ ಬೆಂಗಳೂರಿನ ಜಿಗಣಿ ಪ್ರದೇಶದ ಬಿಆರ್‌ಎಸ್ ಲೇಔಟ್‌ನಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು, ಇದು ಅದೇ ಚಿರತೆಯಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿದ್ದಾರೆ. ಜಿಗಣಿ ಪ್ರದೇಶವು ಬನ್ನೇರುಘಟ್ಟ ಅರಣ್ಯದ ಬಳಿ ಇರುವುದರಿಂದ, ಚಿರತೆ ಕಾಡಿನಿಂದ ಹೊರಗೆ ಅಲೆದಾಡುವ ಸಾಧ್ಯತೆಯಿದೆ. ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬಂದಿರುವ ಶಂಕೆಯೂ ಇದೆ.
ಚಿಕ್ಕ ತೋಗೂರು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ
ಕೆಲವು ತಿಂಗಳ ಹಿಂದಷ್ಟೇ ನೈಸ್ ರಸ್ತೆಯಿಂದ ಸುತ್ತುವರೆದಿರುವ ಚಿಕ್ಕ ತೋಗೂರು ಪ್ರದೇಶದ ಮನೆಯೊಂದರ ಬಳಿ ಚಿರತೆ ಕಾಣಿಸಿಕೊಂಡಿತ್ತು. ಬಲೆ ಹಾಕಿ ಅದನ್ನು ಸೆರೆಹಿಡಿಯಲಾಯಿತು. ಕಳೆದ ವರ್ಷ ನವೆಂಬರ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೂಡ್ಲು ಗೇಟ್‌ಲ್ಲಿ ಚಿರತೆಯನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದರು. ಪಂಜರವನ್ನು ಇಟ್ಟಿದ್ದರೂ ಚಿರಂತೆ ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಅವರು ಚಿರತೆಯನ್ನು ಗುಂಡಿಕ್ಕಿ ಕೊಲ್ಲಬೇಕಾಯಿತು.