ಚನ್ನಪಟ್ಟಣ ಉಪಸಮರ; ಸೈನಿಕ vs ಅಭಿಮನ್ಯು ಸೆಣಸಾಟ; ಯೋಗೇಶ್ವರ್-ನಿಖಿಲ್ ಇಬ್ಬರಲ್ಲಿ ಯಾರು ಶತ ಕೋಟ್ಯಾಧಿಪತಿ?
Channapatna ByElection: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಸೈನಿಕ vs ಅಭಿಮನ್ಯು ಸೆಣಸಾಟ ನಡೆಸಲಿದ್ದು, ಸಿಪಿ ಯೋಗೇಶ್ವರ್-ನಿಖಿಲ್ ಕುಮಾರಸ್ವಾಮಿ ಇಬ್ಬರಲ್ಲಿ ಯಾರು ಶತ ಕೋಟ್ಯಾಧಿಪತಿಯಾಗಿದ್ದಾರೆ? (ವರದಿ-ಎಚ್. ಮಾರುತಿ)
ಬೆಂಗಳೂರು: ಉಪಚುನಾವಣೆ ನಡೆಯುತ್ತಿರುವ ರಾಜ್ಯದ 3 ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರ ಚನ್ನಪಟ್ಟಣ. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಮತ್ತು ಎನ್ಡಿಎ ಮೈತ್ರಿ ಕೂಟದ ಉಮೇದುವಾರರಾಗಿ ನಿಖಿಲ್ ಕುಮಾರಸ್ವಾಮಿ ಅಖಾಡ ಪ್ರವೇಶಿಸಿದ್ದಾರೆ. ಚನ್ನಪಟ್ಟಣಕ್ಕೆ ಅಧಿಪತಿ ಸೈನಿಕನೋ ಅಥವಾ ಅಭಿಮನ್ಯುವೋ ಎಂದು ಕಾದು ನೋಡಬೇಕಿದೆ. ಯೋಗೇಶ್ವರ್ ನಿನ್ನೆ ನಾಮಪತ್ರ ಸಲ್ಲಿಸಿದ್ಧರೆ, ನಿಖಿಲ್ ಇಂದು ಸಲ್ಲಿಸಿದ್ದಾರೆ. ಇವರಿಬ್ಬರೂ ಶ್ರೀಮಂತ ಅಭ್ಯರ್ಥಿಗಳು.
ನಿಖಿಲ್ ಆಸ್ತಿ 78.15 ಕೋಟಿ ರೂ. ಮೌಲ್ಯದ ಚರಾಸ್ತಿ, 29.34 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ 113 ಕೋಟಿ ರೂ. ಆಸ್ತಿ ಇದೆ. ಇವರ ಪತ್ನಿ ರೇವತಿ ಹೆಸರಲ್ಲಿ 5.49 ಕೋಟಿ ಮೌಲ್ಯದ ಚರಾಸ್ತಿ, 43 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಇವರ ಪುಟ್ಟ ಕಂದ ವ್ಯಾನ್ ದೇವ್ ಹೆಸರಿನಲ್ಲಿ 11 ಲಕ್ಷ ರೂ. ಹಣ ಇದೆ. ನಿಖಿಲ್ ಹೆಸರಲ್ಲಿ 1.488 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಹಾಗೂ ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್ ಇದೆ. 1 ಇನ್ನೋವಾ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ 2 ಕ್ಯಾರಾವ್ಯಾನ್, 1 ಇನ್ನೋವಾ ಕಾರುಗಳ ಒಡೆಯರಾಗಿದ್ದಾರೆ. ನಿಖಿಲ್ ಹೆಸರಲ್ಲಿ ಒಟ್ಟು 70.44 ಕೋಟಿ ಸಾಲ ಇದೆ. ತಮ್ಮ ಪತ್ನಿ ಹೆಸರಲ್ಲಿ 4.96 ಕೋಟಿ ರೂ. ಸಾಲ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ನಿಖಿಲ್ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆಗ ಇವರು ಘೋಷಿಕೊಂಡ ಆಸ್ತಿ ಮೌಲ್ಯ 77 ಕೋಟಿ ರೂಪಾಯಿ. ಒಂದೇ ವರ್ಷದಲ್ಲಿ 36 ಕೋಟಿ ರೂ. ಆಸ್ತಿ ಹೆಚ್ಚಳವಾಗಿದೆ. ಜೊತೆಗೆ ನಿಖಿಲ್ ಸಾಲವೂ ಏರಿಕೆಯಾಗಿದೆ. 2023 ರಲ್ಲಿ ನಿಖಿಲ್ 38.94 ಕೋಟಿ ರೂಪಾಯಿ ಸಾಲ ಹೊಂದಿದ್ದರೆ, ಈಗ ಸಾಲ 70.44 ಕೋಟಿ ರೂ.ಗೆ ಏರಿಕೆಯಾಗಿದೆ.
ಯೋಗೇಶ್ವರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ 30.69 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು. ಈಗ ಅವರ ಆಸ್ತಿ ಒಂದೇ ವರ್ಷದಲ್ಲಿ 4.41 ಕೋಟಿ ಹೆಚ್ಚಳವಾಗಿದೆ. ಯೋಗೇಶ್ವರ್ 7.15 ಕೋಟಿ ರೂ. ಮೌಲ್ಯದ ಚರಾಸ್ತಿ, 27.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರೂ ಸಹ 25.46 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ. ಇವರ ಪತ್ನಿ ಶೀಲಾ ಅವರು 32.46 ಕೋಟಿ ರೂಪಾಯಿ ಆಸ್ತಿಯ ಒಡತಿ. ಯೋಗೇಶ್ವರ್ ವಿರುದ್ಧ 9 ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಇವೆಲ್ಲವೂ ಕಾರ್ಪೊರೇಟ್ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತವೆ. ನಿವೇಶನ ಕೊಡುವುದಾಗಿ 3 ಸಾವಿರ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನಿವೇಶನ ಹಂಚಿಕೆ ಮಾಡರುವ ಪ್ರಕರಣಗಳು. ಕೆಲವರಿಗೆ ಹಣ ಮರಳಿಸಿದ್ದರೆ ಇನ್ನೂ ಕೆಲವರು ಕೇಸ್ ದಾಖಲಿಸಿದ್ದಾರೆ.
ಇಬ್ಬರೂ ಸಿನಿಮಾ ಕ್ಷೇತ್ರದಿಂದ ರಾಜಕಾರಣ ಆರಂಭಿಸಿದ್ದಾರೆ. ಯೋಗೇಶ್ವರ್ ಎಂಬತ್ತರ ದಶಕದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರವಿಚಂದ್ರನ್ ಅಭಿನಯದ ರಣಧೀರ ಚಿತ್ರದಲ್ಲಿ ಜಗ್ಗೇಶ್ ಜತೆ ಸಹ ನಟರಾಗಿ ಸಿನಿಮಾ ರಂಗ ಪ್ರವೇಶಿಸಿದ್ದರು. 2000 ದಲ್ಲಿ ತೆರೆಕಂಡ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಮತ್ತು 2002 ರಲ್ಲಿ ತೆರೆಕಂಡ ಸೈನಿಕ ಇವರಿಗೆ ಹೆಸರು ಗಳಿಸಿಕೊಟ್ಟ ಚಿತ್ರಗಳು. ಸಿನಿಮಾದಲ್ಲಿ ನಡೆಯುವಂತೆ ಇವರ ರಾಜಕೀಯ ಜೀವನವೂ ಸಿನೀಮಯ ತಿರುವುಗಳಿಂದ ಮೂಡಿದೆ. ಒಂದೊಂದು ಚುನಾವಣೆ, ಒಂದೊಂದು ಪಕ್ಷ, ಒಂದೊಂದು ಚಿಹ್ನೆ.
ಯೋಗೇಶ್ವರ್ ವಿಶೇಷ ಎಂದರೆ ಕುಮಾರಸ್ವಾಮಿ ಕುಟುಂಬದ ಮೂವರ ವಿರುದ್ಧವೂ ಸೆಣಸಿದ್ದಾರೆ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಇದೀಗ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2006 ವರೆಗೆ ನಿಖಿಲ್ ಹೆಸರು ಕೇಳಿದವರು ಕಡಿಮೆ. 2006 ರಲ್ಲಿ ಚರ್ಚ್ ಸ್ಟ್ರೀಟ್ ನ ಹೋಟೆಲ್ ವೊಂದರಲ್ಲಿ ಗದ್ದಲ ಎಬ್ಬಿಸಿದಾಗ ಮೊದಲ ಬಾರಿ ಇವರ ಪರಿಚಯವಾಗಿತ್ತು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿ.
2016 ರಲ್ಲಿ ಜಾಗ್ವಾರ್ ಸಿನಿಮಾ ತೆರೆ ಕಾಣುವವರೆಗೂ ಅವರು ತೆರೆಮರೆಯಲ್ಲೇ ಉಳಿದಿದ್ದರು. ನಂತರ 2019 ರಲ್ಲಿ ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ನಿರ್ವಹಿಸಿದ್ದರು. ಮುಡಾ ಹಗರಣ ಬೆಳಕಿಗೆ ಬಂದ ನಂತರ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದರು. ಆಗ ವಿಜಯೇಂದ್ರ ಮತ್ತು ನಿಖಿಲ್ ಅಭಿಮಾನಿಗಳ ಕೇಂದ್ರಬಿಂದುವಾಗಿದ್ದರು.