Leaders on Laxman Savadi: 'ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಬೇಸರ ತರಿಸಿದೆ' ಎಂದ ಬೊಮ್ಮಾಯಿ.. 'ಇದೊಂದು ಐತಿಹಾಸಿಕ ದಿನ'ವೆಂದ ಡಿಕೆಶಿ
ಸವದಿ ಅವರಿಗೆ ಕಾಂಗ್ರೆಸ್ನಲ್ಲಿ ರಾಜಕೀಯ ಭವಿಷ್ಯ ಕಂಡಿದೆ. ಅವರಿಗೆ ಕಾಂಗ್ರೆಸ್ನಲ್ಲಿ ರಾಜಕೀಯ ಭವಿಷ್ಯ ಕಂಡಿದೆ. ಕಾಂಗ್ರೆಸ್ ಅಲ್ಲಿ 60 ಸೀಟಿಗೆ ನಿಲ್ಲುವವರು ಗತಿ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರ್ಪಡೆ ಬೇಸರ ತರಿಸಿದೆ. ಅವರಿಗೆ ಕಾಂಗ್ರೆಸ್ನಲ್ಲಿ ರಾಜಕೀಯ ಭವಿಷ್ಯ ಕಂಡಿದೆ. ಕಾಂಗ್ರೆಸ್ ಅಲ್ಲಿ 60 ಸೀಟಿಗೆ ನಿಲ್ಲುವವರು ಗತಿ ಇಲ್ಲ. ಅದಕ್ಕಾಗಿ ಕೆಲವರನ್ನು ಸೇರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಸಿಎಂ ಬೊಮ್ಮಾಯಿ, ಸಹಜವಾಗಿ ಆಡಳಿತ ಪಕ್ಷದಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಕಾರ್ಯಕರ್ತರು ನಮ್ಮ ಪರವಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಕೆಲವರು ಶಾಸಕರಾಗಬೇಕು ಅಂತ ಪಕ್ಷ ಬಿಡುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬದ್ಧರಾಗಿದ್ದಾರೆ ಎಂದರು.
ಈಗಾಗಲೇ ಪಕ್ಷದ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೂರನೇ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ನಾಳೆ ಶಿಗ್ಗಾಂವಿಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದರು.
ಇದೊಂದು ಐತಿಹಾಸಿಕ ದಿನವೆಂದ ಡಿಕೆಶಿ
ಬಿಜೆಪಿ ತೊರೆದು ಬಂದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದೊಂದು ಐತಿಹಾಸಿಕ ದಿನ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಈ ದಿನವನ್ನು ಬಹಳ ಸೂಕ್ಷ್ಮವಾಗಿ ನೋಡಲಾಗುತ್ತಿದೆ. ಇಡೀ ರಾಜ್ಯದಲ್ಲಿ 63 ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ವಲಸೆ ಹೋಗುತ್ತಿದ್ದಾರೆ. 90% ರಷ್ಟು ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಕೆಲವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು, ಮತ್ತೆ ಕೆಲವರು ಜೆಡಿಎಸ್ ಸೇರುತ್ತಿದ್ದಾರೆ ಎಂದರು.
ಇನ್ನು 5 ವರ್ಷಗಳ ಕಾಲ ವಿಧಾನ ಪರಿಷತ್ ಅಧಿಕಾರವಿದ್ದರೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅವರು ಈ ಹಿಂದೆ ಸಹಕಾರ, ಸಾರಿಗೆ ಸಚಿವರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಅವರು ಚುನಾವಣೆಯಲ್ಲಿ ಸೋತಾಗಲೂ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು. ಆಪರೇಷನ್ ಕಮಲ ಮಾಡಿದಾಗ ಮುಂದೆ ತಮಗೆ ಟಿಕೆಟ್ ನೀಡುವುದಾಗಿ ಬಿಜೆಪಿ ನಾಯಕರು ಇವರಿಗೆ ಮಾತು ಕೊಟ್ಟಿದ್ದರು. ಆದರೆ ನುಡಿದಂತೆ ನಡೆಯಲಿಲ್ಲ. ಹೀಗಾಗಿ ಬೇಸತ್ತು ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಮ್ಮ ಜತೆ ಚರ್ಚೆ ಮಾಡಿ, ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರುತ್ತಿದ್ದಾರೆ. ರಾಜ್ಯದ ಎಲ್ಲ ನಾಯಕರು ಕಾರ್ಯಕರ್ತರ ಪರವಾಗಿ ಸವದಿ ಅವರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿ, ಶಾಸಕಾಂಗ ಪಕ್ಷದ ನಾಯಕರ ಜತೆ ಸಭೆ ಮಾಡಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಬೆಳಗಾವಿಯಲ್ಲಿ ಕಾರ್ಯಕ್ರಮ ಇರುವುದರಿಂದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಜನಿಸಿದ ದಿನ ಈ ಶುಭ ದಿನ, ಶುಭ ಗಳಿಗೆಯಲ್ಲಿ ನಾವು ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಇವರ ಜತೆಗೆ ಮಾಜಿ ಸಚಿವ ಶಶಿಕಾಂತ ನಾಯ್ಕ್, ಸಂಘಟನೆಕಾರರಾದ ಶಂಕರ್ ಗೌಡರು ಪಕ್ಷ ಸೇರುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಹೊಸ ಅಧ್ಯಾಯ ಬರೆಯುವ ದಿನವೆಂದ ರಣದೀಪ್ ಸಿಂಗ್ ಸುರ್ಜೆವಾಲ
ಭಾರತದ ರಾಜಕೀಯದಲ್ಲಿ ಅನೇಕ ವಿಚಾರವಾಗಿ ಇಂದಿನ ದಿನ ಐತಿಹಾಸಿಕ ದಿನವಾಗಿದೆ. ಉತ್ತಮ ಕರ್ನಾಟಕ ನಿರ್ಮಾಣ, ಕರ್ನಾಟಕದ ಬ್ರ್ಯಾಂಡ್ ಮರುಸ್ಥಾಪನೆ ಹಾಗೂ ರಾಜ್ಯದಲ್ಲಿ ಹೊಸ ಅಧ್ಯಾಯ ಬರೆಯುವ ದಿನ ಇದಾಗಿದೆ. ಇಂದು ಹೊಸ ಆರಂಭದ ದಿನ. ಲಕ್ಷ್ಮಣ ಸವದಿ ಅವರು ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಅವರು ತಮ್ಮದೇ ಆದ ರೀತಿಯಲ್ಲಿ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಇನ್ನು ಹಿರಿಯ ಮಾಜಿ ಮಂತ್ರಿಗಳಾದ ಶಶಿಕಾಂತ್ ಅವರು ಕೂಡ ರೈತರು, ಬಡವರು, ಅಭಿವೃದ್ಧಿ ವಿಚಾರವಾಗಿ ಸಮಾಜದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.
ನಾವು ರಾಜಕೀಯವಾಗಿ ಇಷ್ಟು ದಿನ ಎದುರಾಳಿಗಳಿದ್ದವು. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದೆವು. ಆದರೆ ಇಂದು ಸವದಿ ಅವರು ಹೊಸ ನಂಬಿಕೆಯೊಂದಿಗೆ ತಮ್ಮ ಲಕ್ಷಾಂತರ ಕಾರ್ಯಕರ್ತರ ಜತೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದಾರಾಮಯ್ಯ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದ್ದಾರೆ. ಸವದಿ ಅವರು ರಾಜ್ಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಈ ಧೈರ್ಯದ ತೀರ್ಮಾನ ತೆಗೆದುಕೊಂಡಿದ್ದು, ಪಕ್ಷದ ಎಲ್ಲಾ ನಾಯಕರ ಪರವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು.