Constitution day celebration: ಸಂವಿಧಾನ ಸಮರ್ಪಣಾ ದಿನ, , ಸಂವಿಧಾನದ ಪೀಠಿಕೆ ಓದಲು Read Preamble ವೆಬ್‌ಸೈಟ್‌ಗೆ ಭೇಟಿ ನೀಡಿ
readpreamble.nic.in ಜಾಲತಾಣಕ್ಕೆ ಭೇಟಿ ನೀಡಿ, ಸಂವಿಧಾನದ ಪೀಠಿಕೆಯನ್ನು ಓದಿದ ನಾನು, ಈ ಜಾಲತಾಣದಿಂದಲೇ ನನ್ನ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಧಾರವಾಡ: ಇಂದು ದೇಶದ ವಿವಿಧೆಡೆ ಸಂವಿಧಾನ ಸಮರ್ಪಣಾ ದಿನ ನಡೆಯುತ್ತಿದ್ದು, ಧಾರವಾಡದಲ್ಲಿಯೂ ಸಂವಿಧಾನ ದಿನ ಆಚರಿಸಲಾಯಿತು. ಧಾರವಾಡದ ಅಣ್ಣಿಗೇರಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನೇತೃತ್ವದಲ್ಲಿ ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂವಿಧಾನ ದಿನದ ಅಂಗವಾಗಿ ಸಾರ್ವಜನಿಕರು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂವಿಧಾನದ ಪೀಠಿಕೆಯನ್ನು ಓದಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಭಾರತ ಸಂವಿಧಾನದ ಪೀಠಿಕೆಯನ್ನು ಓದುವುದು ಹಾಗೂ ಅದರಂತೆ ನಡೆಯುವುದು ಪ್ರತಿ ಭಾರತೀಯನ ಕರ್ತವ್ಯವಾಗಿದೆ ಎಂದು ಕರೆ ನೀಡಿದರು. ದೇಶವಾಸಿಗಳಿಗೆ ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗವಹಿಸುವಂತೆ ಕೋರಿದ ಸಚಿವ ಪ್ರಲ್ಹಾದ್ ಜೋಶಿಯವರು, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಜೀವಾಳವೇ ಸಂವಿಧಾನ ಎಂದರು. ಅದರ ಕುರಿತು ತಿಳುವಳಿಕೆ ಪಡೆಯುವುದು ಹಾಗೂ ಅದರ ಸರಿಯಾದ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಂವಿಧಾನದ ಪ್ರಸ್ತಾವನೆ ಓದುವುದು ನಮ್ಮ ಮೊದಲ ಕರ್ತವ್ಯವಾಗಿದೆ. ಹೀಗಾಗಿ readpreamble.nic.in ಜಾಲತಾಣಕ್ಕೆ ಭೇಟಿ ನೀಡಿ, ಸಂವಿಧಾನದ ಪೀಠಿಕೆಯನ್ನು ಓದಿದ ನಾನು, ಈ ಜಾಲತಾಣದಿಂದಲೇ ನನ್ನ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದೇನೆ. ನೀವು ಕೂಡ ಈ ಜಾಲತಾಣಕ್ಕೆ ಭೇಟಿ ನೀಡಿ ಹಾಗೂ ಸಂವಿಧಾನದ ಪೀಠಿಕೆಯನ್ನು ಓದಿ, ಪ್ರಮಾಣ ಪತ್ರ ಪಡೆಯಿರಿ ಎಂದು ಸಚಿವ ಪ್ರಲ್ಜಾದ್ ಜೋಶಿ ಕರೆ ನೀಡಿದರು.
ಕರ್ನಾಟಕ ದಲಿತ ವಿಮೋಚನಾ ಸಮಿತಿ ಹಾಗೂ ಅಣ್ಣಿಗೇರಿ ತಾಲೂಕು ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾವಿತ್ರಿ ಶಿವಪ್ಪ ಪೂಜಾರ್ ಹಾಗೂ ರಾಷ್ಟ್ರಪತಿ ಪದಕ ಪುರಸ್ಕೃತರಾದ ಪೊಲೀಸ್ ಇನ್ಸ್‌ಪೆಕ್ಟರ್ ಧ್ರುವರಾಜ್ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಲೆಮರೆಯ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ಗೌರವಿಸಿದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಇದೇ ವೇಳೆ ಅಭಿನಂದನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಸಮಿತಿಯ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಗಳಿಗೆ ಸಂವಿಧಾನದ ಪ್ರತಿ ಹಂಚಿಕೆ
ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಸಂವಿಧಾನ ಹಾಗೂ ಗ್ರಾಮ ಪಂಚಾಯಿತಿಯ 73 ಮತ್ತು 74 ನೇ ತಿದ್ದುಪಡಿ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗಳ ಪ್ರತಿಗಳನ್ನು ದೊಡ್ಡ ಪ್ರಮಾಣದಲ್ಲಿ ಕಳಿಸಿ ಅಲ್ಲಿಯೂ ಸಂವಿಧಾನಬದ್ಧ ಆಡಳಿತ ನಡೆಸುವುದು ನಮ್ಮ ಆಶಯವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸಂವಿಧಾನ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಡಾ:ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಂವಿಧಾನದ ಸ್ಪೂರ್ತಿ ಗ್ರಾಮೀಣ ಮಟ್ಟದಲ್ಲಿ ಆಗಬೇಕೆನ್ನುವುದು ನಮ್ಮ ಉದ್ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂವಿಧಾನ ನನಗೆ ಧರ್ಮಗ್ರಂಥ ಎಂದು ಹೇಳಿದ್ದರು. ಅದನ್ನು ಅಕ್ಷರಶಃ ನಾವೆಲ್ಲರೂ ಪಾಲನೆ ಮಾಡುತ್ತಿದ್ದೇವೆ ಎಂದರು. ಸಂವಿಧಾನದ ಪ್ರಕಾರ ನಡೆದುಕೊಳ್ಳುವ ವಚನ ಬೋಧನಾ ವಿಧಿಯನ್ನು ಇಂದು ಹಮ್ಮಿಕೊಂಡಿದ್ದು, ಸಂವಿಧಾನವನ್ನು ಅದರ ಒಟ್ಟು ರೂಪದಲ್ಲಿ ಆಚರಣೆಗೆ ತರುವ ಉದ್ದೇಶ ನಮ್ಮದು. ಅಧಿಕಾರ ವಿಕೇಂದ್ರೀಕರಣ ಆಗಿದೆ, ಇನ್ನಷ್ಟು ಆಗಬೇಕಿದೆ ಎಂದರು.
ಸಂವಿಧಾನವೇ ನಮ್ಮ ದೇಶದ ಮಹಾಗ್ರಂಥ: ಡಿ ಕೆ ಶಿವಕುಮಾರ್
ಬೆಂಗಳೂರು: 'ನಮ್ಮಲ್ಲಿ ಒಂದೊಂದು ಧರ್ಮಕ್ಕೂ ಒಂದೊಂದು ಗ್ರಂಥವಿದೆ. ಆದರೆ ನಮ್ಮ ದೇಶದ ಮಹಾಗ್ರಂಥ ಸಂವಿಧಾನ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಇಂದು ನಮ್ಮ ದೇಶಕ್ಕೆ ಸಂವಿಧಾನ ಸಿಕ್ಕ ದಿನ. ಹಬ್ಬದ ರೀತಿಯಲ್ಲಿ ಆಚರಿಸುವ ದಿನ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಸಂವಿಧಾನ ಪೀಠಿಕೆ ಓದಿ ಜವಾಬ್ದಾರಿ ಸ್ವೀಕರಿಸಿದೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಕೊಟ್ಟ ಸಂವಿಧಾನದಲ್ಲಿ ನಮಗೆ ಹಕ್ಕು, ಧ್ವನಿ, ಅವಕಾಶ, ರಕ್ಷಣೆ ಅಡಗಿದೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂದು ನಾನು ಹಲವು ಬಾರಿ ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.