ಬಿಜೆಪಿ ಶಾಸಕ ಮುನಿರತ್ನಗೆ ಬಿಗ್‌ ರಿಲೀಫ್‌, ಜಾಮೀನು ಮಂಜೂರು ಮಾಡಿದ ಬೆಂಗಳೂರು ನ್ಯಾಯಾಲಯ
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಶಾಸಕ ಮುನಿರತ್ನಗೆ ಬಿಗ್‌ ರಿಲೀಫ್‌, ಜಾಮೀನು ಮಂಜೂರು ಮಾಡಿದ ಬೆಂಗಳೂರು ನ್ಯಾಯಾಲಯ

ಬಿಜೆಪಿ ಶಾಸಕ ಮುನಿರತ್ನಗೆ ಬಿಗ್‌ ರಿಲೀಫ್‌, ಜಾಮೀನು ಮಂಜೂರು ಮಾಡಿದ ಬೆಂಗಳೂರು ನ್ಯಾಯಾಲಯ

ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರಿಗೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ.ವರದಿ: ಎಚ್ . ಮಾರುತಿ, ಬೆಂಗಳೂರು

ಬೆಂಗಳೂರು ರಾಜ ರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಜಾಮೀನು ದೊರೆತಿದೆ.
ಬೆಂಗಳೂರು ರಾಜ ರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಜಾಮೀನು ದೊರೆತಿದೆ.

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಬೆಂಗಳೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಒಂದು ತಿಂಗಳ ಹಿಂದೆಯೇ ಬಂಧನಕ್ಕೆ ಒಳಗಾಗಿದ್ದ ಮುನಿರತ್ನ ವಿರುದ್ದ ಗುತ್ತಿಗೆದಾರರಿಗೆ ಬೆದರಿಕೆ ಹಾಕಿದ ದೂರು ದಾಖಲಾಗಿತ್ತು. ಆನಂತರ ಅತ್ಯಾಚಾರ ದೂರು ದಾಖಲಾದ ನಂತರ ಮತ್ತೆ ಬಂಧಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ದ ಜಾಮೀನನನ್ನು ಮಂಜೂರು ಮಾಡಿದೆ.

ಜಾತಿ ನಿಂದನೆ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಬಿಜೆಪಿ ಮುಖಂಡ ಮುನಿರತ್ನ ಅವರ ಜಾಮೀನು ಅರ್ಜಿಯನ್ನು ಸೋಮವಾರ ವಜಾಗೊಳಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತರೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿತ್ತು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ವೇಲು ನಾಯ್ಕರ್‌ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಮುನಿರತ್ನ ವಿರುದ್ಧ ಜಾತಿನಿಂದನೆ, ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಲೋಹಿತ್, ಕಿರಣ್ ಮತ್ತು ಮಂಜುನಾಥ್ ಅವರಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿತ್ತು

ಈ ಪ್ರಕರಣದ ವಿಚಾರಣೆ ನಡೆಸಿದ್ದ ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಸೋಮವಾರ ಈ ಆದೇಶ ಪ್ರಕಟಿಸಿದ್ದರು.

ಈ ಪ್ರಕರಣದಲ್ಲಿ ಮುನಿರತ್ನ ಎ-1 ಆರೋಪಿಯಾಗಿದ್ದರೆ ವಿಜಯ್ ಕುಮಾರ್ ಎ-2, ಸುಧಾಕರ್ ಎ-3, ಕಿರಣ್ ಕುಮಾರ್ ಎ-4, ಲೋಹಿತ್ ಎ-5, ಮಂಜುನಾಥ್ ಎ-6 ಮತ್ತು ಲೋಕಿ ಎ-7 ಆರೋಪಿಗಳಾಗಿದ್ದಾರೆ. ಜಾತಿನಿಂದನೆ ಪ್ರಕರಣದ ಜೊತೆಗೆ ಮುನಿರತ್ನ ವಿರುದ್ಧ ಲಂಚಕ್ಕೆ ಬೇಡಿಕೆ ಮತ್ತು ಅತ್ಯಾಚಾರ ಪ್ರಕರಣವೂ ದಾಖಲಾಗಿದೆ.

ಗುತ್ತಿಗೆದಾರರಾದ ಚೆಲುವರಾಜು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ವೇಲು ನಾಯ್ಕರ್‌ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ದೂರುಗಳನ್ವಯ ಎರಡು ಪ್ರತ್ಯೇಕ ಎಫ್‌ ಐಆರ್‌ ಗಳನ್ನು ದಾಖಲಿಸಲಾಗಿತ್ತು.

ಆಂಧ್ರಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದ ಮುನಿರತ್ನ ಅವರನ್ನು ವೈಯಾಲಿಕಾವಲ್‌ ಠಾಣೆ ಪೊಲೀಸರು ಮತ್ತು ಕೋಲಾರ ಪೊಲೀಸರು ನಡೆಸಿದ ಜಂಟಿ

ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.

ಬಿಜೆಪಿ ಕಾರ್ಯಕರ್ತೆಯೊಬ್ಬರು ಇವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ದೂರು ದಾಖಲಾಗುತ್ತಿದ್ದಂತೆ ಮತ್ತೊಬ್ಬ ಸಂತ್ರಸ್ತೆ ಹನಿ ಟ್ರ್ಯಾಪ್ ಮತ್ತು ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ. ವ್ಯವಹಾರದಲ್ಲಿ ಸಹಕರಿಸದ ಪೊಲೀಸರು ಮತ್ತು ಅಧಿಕಾರಿಗಳನ್ನು ಇಂತಹ ಸಂತ್ರಸ್ತರ ಮೂಲಕ ಮುನಿರತ್ನ ಹನಿ ಟ್ರ್ಯಾಪ್ ಮಾಡಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಈ ಸಂತ್ರಸ್ತೆ ಆರೋಪ ಮಾಡಿದ್ದಾರೆ.

ನ್ಯಾಯಾಂಗದ ಬಂಧನದಲ್ಲಿದ್ದ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ರಾಮನಗರ ಜಿಲ್ಲೆ ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದ್ದರು.

ಈ ಮಧ್ಯೆ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಜಿ ಸಚಿವ ಮುನಿರತ್ನ ಅವರ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು ತನಿಖೆ ನಡೆಯುತ್ತಿದೆ.

(ವರದಿ: ಎಚ್‌.ಮಾರುತಿ, ಬೆಂಗಳೂರು)

Whats_app_banner