ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಕರಾವಳಿಯಲ್ಲಿ ಸುಗಮ ಚುನಾವಣೆಗೆ ನಕ್ಸಲ್ ಸವಾಲು, ಪಶ್ಚಿಮ ಘಟ್ಟದ ತಪ್ಪಲಲ್ಲಿ ತಲೆನೋವಾದ ಅಪರಿಚಿತರ ಸಂಚಾರ

Mangalore News: ಕರಾವಳಿಯಲ್ಲಿ ಸುಗಮ ಚುನಾವಣೆಗೆ ನಕ್ಸಲ್ ಸವಾಲು, ಪಶ್ಚಿಮ ಘಟ್ಟದ ತಪ್ಪಲಲ್ಲಿ ತಲೆನೋವಾದ ಅಪರಿಚಿತರ ಸಂಚಾರ

ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರ ಚಟುವಟಿಕೆಯಿಂದ ಲೋಕಸಭೆ ಚುನಾವಣೆ ಸಿಬ್ಬಂದಿಯೂ ಮುನ್ನೆಚ್ಚರಿಕೆ ವಹಿಸಿದ್ದಾರೆ.ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

ದಕ್ಷಿಣ ಕನ್ನಡ ಭಾಗದಲ್ಲಿ ನಕ್ಸಲ್‌ ಚಟುವಟಿಕೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕಟ್ಟೆಚ್ಚರ
ದಕ್ಷಿಣ ಕನ್ನಡ ಭಾಗದಲ್ಲಿ ನಕ್ಸಲ್‌ ಚಟುವಟಿಕೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕಟ್ಟೆಚ್ಚರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿನ ಅರಣ್ಯದಂಚಿನ ಮನೆಗೆ ಗುರುವಾರ ರಾತ್ರಿ ಮುಸುಕುಧಾರಿ, ಶಸ್ತ್ರಧಾರಿ ನಕ್ಸಲರ ತಂಡ ಭೇಟಿ ನೀಡಿದ ವಿದ್ಯಮಾನ ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ನಕ್ಸಲ್ ಸಂಚಾರದ ಕುರಿತ ಮೂರನೇ ಮಾಹಿತಿ ಇದು. ಶಸ್ತ್ರಧಾರಿ ನಕ್ಸಲರ ತಂಡದಲ್ಲಿ ಆರು ಮಂದಿ ಇದ್ದರು ಎಂಬುದು ದೃಢಪಟ್ಟಿದ್ದು, ಇದರೊಂದಿಗೆ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಹೆಣಗುತ್ತಿರುವ ಆಡಳಿತಕ್ಕೆ ಕರಾವಳಿಯಲ್ಲಿ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಇದಕ್ಕಾಗಿ ಪೊಲೀಸರ ಜತೆಗ ಚುನಾವಣೆ ಸಿಬ್ಬಂದಿಯೂ ಮುನ್ನೆಚ್ಚರಿಕೆ ವಹಿಸಿ ಮತದಾನಕ್ಕೆ ಅಣಿಯಾಗುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಟಿ.ವಿ. ಧಾರಾವಾಹಿ ನೋಡಿ, ಅಕ್ಕಿ ಕೇಳಿದರು

ಒಂದೇ ರೀತಿಯ ಬಟ್ಟೆ ಧರಿಸಿ ಮುಖ ಮರೆಸಿಕೊಂಡಿದ್ದ ಬಂದವರು, ಶೂ ಧರಿಸಿ, ದೊಡ್ಡ ಬ್ಯಾಗ್ ಹಾಕಿಕೊಂಡಿದ್ದರು. ಬ್ಯಾಗಿನಲ್ಲಿ ಗನ್ ಮಾದರಿಯ ಉಪಕರಣವಿತ್ತು. ಇಬ್ಬರು ಮನೆಯ ಒಳಗೆ ಪ್ರವೇಶಿಸಿ, ವಿದ್ಯುದ್ದೀಪಗಳನ್ನು, ಮನೆ ಯಜಮಾನರ ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಟಿವಿ ಶಬ್ದ ಹೆಚ್ಚಿಸಿದರು. ಬಳಿಕ ಒಟ್ಟಿಗೆ ಬಂದಿದ್ದ ನಾಲ್ವರು ಮನೆ ಸುತ್ತಲೂ ನಿಂತುಕೊಂಡರು.

ಅದಾದ ಮೇಲೆ ಊಟ ಕೇಳಿ ತಯಾರಿಸಿ, ಮನೆಯಲ್ಲಿದ್ದ ಕೋಳಿ ಪದಾರ್ಥ ಸೇವಿಸಿದ್ದಾರೆ. ಸ್ವಲ್ಪ ಹೊತ್ತು ಟಿವಿ ಧಾರಾವಾಹಿ ನೀಡಿ, ಬಳಿಕ ಅಕ್ಕಿ ಸಹಿತ ಕೆಲ ಸಾಮಗ್ರಿ ಕೇಳಿ ಪಡೆದು ಅರಣ್ಯದತ್ತ ತೆರಳಿದ್ದಾರೆ. ಆರು ಮೊಬೈಲ್ ಫೋನ್, ಒಂದು ಲ್ಯಾಪ್ ಟಾಪ್ ಚಾರ್ಜ್ ಮಾಡಿಸಿಕೊಂಡಿದ್ದು, ಕನ್ನಡ, ಇತರ ಭಾಷೆಗಳಲ್ಲಿ ಮಾತನಾಡಿಸಿಕೊಂಡಿದ್ದಾರೆ.

ಪುಷ್ಪಗಿರಿ ತಪ್ಪಲು ಕಾರ್ಯಕ್ಷೇತ್ರವಾಗುತ್ತಿದೆಯೇ?

ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯಿಂದ ಸ್ವಲ್ಪವೇ ದೂರದ ಅರಣ್ಯದಂಚಿನಲ್ಲಿರುವ ಈ ಮನೆಗೆ ಸುದ್ದಿ ತಿಳಿದು ನಕ್ಸಲ್ ನಿಗ್ರಹ ಪಡೆ, ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದರು. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಈ ಹೊತ್ತಿನಲ್ಲಿ ನಕ್ಸಲ್ ಶಂಕಿತ ಜನರು ಭೇಟಿ ನೀಡುತ್ತಿರುವುದು ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರಷ್ಟೇ ಅಲ್ಲ, ಚುನಾವಣಾ ಸಿಬಂದಿಯೂ ತಿಳಿಸಿದ್ದಾರೆ.

ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆ ಎಸ್ಟೇಟ್ ಭಾಗದಲ್ಲಿ ಕಾಣಿಸಿಕೊಂಡ ನಕ್ಸಲರು ವಾರದ ಅಂತರದಲ್ಲಿ ಸುಬ್ರಹ್ಮಣ್ಯ ಸಮೀಪದ ಐನೆಕಿದು ಕಾಡಂಚಿನ ಮನೆಯಲ್ಲಿ ಪ್ರತ್ಯಕ್ಷರಾಗಿದ್ದರು. ಇದೀಗ ಬಿಳಿನೆಲೆಯಲ್ಲೂ ಕಂಡುಬಂದಿದ್ದು ಅಲ್ಲೇ ಸಂಚರಿಸುತ್ತಿದ್ದಾರೆ ಎನ್ನಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆಗಳ ಗಡಿಭಾಗದಲ್ಲಿ ಹರಡಿಕೊಂಡಿರುವ ಪುಷ್ಪಗಿರಿ ಅರಣ್ಯ ತಮ್ಮ ಕಾರ್ಯಕ್ಷೇತ್ರವಾಗಿದೆ ಎಂದು ನಕ್ಸಲರು ಸಾಬೀತುಮಾಡುತ್ತಿದ್ದಾರೆ.

ಚುನಾವಣೆ ಸಂದರ್ಭ ಸಮಸ್ಯೆ

ಹಾಗೆ ನೋಡಿದರೆ ಸುಬ್ರಹ್ಮಣ್ಯ ಪ್ರದೇಶದಲ್ಲಿ ನಕ್ಸಲ್ ಸಂಚಾರಕ್ಕೆ ದಶಕದ ಇತಿಹಾಸವಿದೆ. 2012ರ ಆಗಸ್ಟ್ ತಿಂಗಳಲ್ಲಿ ಕುಲ್ಕುದದ ಪಳ್ಳಿಗದ್ದೆಯಲ್ಲಿ ನಕ್ಸಲರು ಇದೇ ರೀತಿ ಭೇಟಿ ನೀಡಿದ್ದು, ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಎಎನ್ ಎಫ್ ಮತ್ತು ನಕ್ಸಲರ ನಡುವಿನ ಚಕಮಕಿಯಲ್ಲಿ ಎನ್ ಕೌಂಟರ್ ನಲ್ಲಿ ನಕ್ಸಲ್ ಒಬ್ಬ ಸಾವನ್ನಪ್ಪಿದ್ದ. ಇದಾದ ಬಳಿಕ ಪುಷ್ಪಗಿರಿ ತಪ್ಪಲಿನ ಪ್ರದೇಶಗಳ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಲಾಗಿತ್ತು.

ಇದೀಗ ಲೋಕಸಭೆ ಚುನಾವಣೆ ಸಂದರ್ಭ ಮತ್ತೆ ನಕ್ಸಲರು ಪ್ರತ್ಯಕ್ಷವಾಗಿರುವುದು ಆತಂಕ ಸೃಷ್ಟಿಸಿದೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐನೆಕಿದು ಮತ್ತು ಕುಲ್ಕುಂದ ಗ್ರಾಮಗಳಲ್ಲಿ ಸುಮಾರು 1300 ಮತಗಳಿವೆ. ಐನೆಕಿದು ಶಾಲೆಯಲ್ಲಿ ಮತಗಟ್ಟೆ ಇದ್ದು, ಇದುವರೆಗೆ ಇದು ಸಾಮಾನ್ಯ ಮತಗಟ್ಟೆಯಾಗಿದೆ. ಕುಲ್ಕುಂದ ಶಾಲೆ ಮತಗಟ್ಟೆ ಕಳೆದ 12 ವರ್ಷಗಳಿಂದ ಸೂಕ್ಷ್ಮ ಮತಗಟ್ಟೆ. ಹರಿಹರ ಪಳ್ಳತ್ತಡ್ಕ ಗ್ರಾಪಂ ವ್ಯಾಪ್ತಿಯಲ್ಲಿ 3500 ಮತಗಳಿದ್ದು, ಬಾಳುಗೋಡು ಶಾಲೆ, ಹರಿಹರ ಶಾಲೆಯಲ್ಲಿ ಮತಗಟ್ಟೆಗಳಿವೆ. ಇದು ಸೂಕ್ಷ್ಮ ಮತಗಟ್ಟೆ. ಕೊಲ್ಲಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಮತಗಳಿದ್ದು, ಕಲ್ಮಕಾರು ಶಾಲೆ, ಕೊಲ್ಲಮೊಗರು ಶಾಲೆ ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಲ್ಪಟ್ಟಿವೆ.

ಈ ಎಲ್ಲ ಮತಗಟ್ಟೆಗಳ ಮೇಲೆಯೂ ನಿಗಾ ವಹಿಸಲಾಗುತ್ತಿದ್ದು, ಪೊಲೀಸ್ ಸರ್ಪಗಾವಲು ಹಾಕುವ ಮೂಲಕ ಭಯಮುಕ್ತ ಮತದಾನಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎನ್ನುವುದು ಅಧಿಕಾರಿಗಳ ವಿವರಣೆ

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point