ತುಳುನಾಡಿನ ಗ್ರಾಮಗಳಿಗೆ ಆಟಿ ಕಳೆಂಜ ಭೇಟಿ, ಸಾಂಪ್ರದಾಯಿಕ ಆಚರಣೆಗೆ ವಿಶೇಷ ಮನ್ನಣೆ: ಆರೋಗ್ಯ ಕರುಣಿಸುವ ಮಂಗಳಕರ ಸಂಪ್ರದಾಯ
ತುಳುವಿನ ಆಟಿ ಅಂದರೆ, ಆಷಾಢದ ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು ಆಗಿರುತ್ತದೆ. ಈ ತಿಂಗಳಲ್ಲಿ ಆಟಿ ಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಇದರಿಂದ ಮನೆಗೆ, ಊರಿಗೆ ಅಂಟುವ ರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. (ಬರಹ: ಹರೀಶ್ ಮಾಂಬಾಡಿ)
ಮಂಗಳೂರು: ಆಟಿ (ಆಷಾಢ) ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆ ಮನೆಗೆ ಆಟಿ ಕಳೆಂಜ ಬರುವ ಸಂಪ್ರದಾಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದಿನಿಂದಲೂ ಇದೆ. ತುಳುವಿನ ಆಟಿ ತಿಂಗಳು ಜಾರಿಯಲ್ಲಿರುವ ಈ ದಿನಗಳಲ್ಲಿ ಆಟಿ ಕಳೆಂಜ ವೇಷವನ್ನು ಹಾಕಿಕೊಂಡು ದಕ್ಷಿಣ ಕನ್ನಡದ ಹಳ್ಳಿಗಳ ಮನೆಗಳಿಗೆ ಆಗಮಿಸುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳ ಯುಗವಾದ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ, 'ಈ ದಿನ ನಮ್ಮ ಗ್ರಾಮಕ್ಕೆ ಆಟಿ ಕಳಂಜ ಮನೆಮನೆಗೆ ಭೇಟಿ ನೀಡುತ್ತಾರೆ. ಅವರಿಗೆ ಸಹಕರಿಸಿ' ಎಂಬ ಸಂದೇಶವನ್ನೂ ಪಸರಿಸುವುದೂ ಉಂಟು.
ವಿಪರೀತ ಮಳೆಯ ಸಮಯವಾದ ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿಯನ್ನು ಇಲ್ಲಿ ಪಾಲಿಸಲಾಗುತ್ತದೆ. ತುಳುವಿನ ಆಟಿ ಅಂದರೆ, ಆಷಾಢದ ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು ಆಗಿರುತ್ತದೆ. ಈ ತಿಂಗಳಲ್ಲಿ ಆಟಿ ಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ.
ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ ಅಥವಾ ಛತ್ರಿ ಒದಗಿಸಲಾಗುತ್ತದೆ. ಬಳಿಕ ಕುಣಿಯಲು ಹಿಮ್ಮೇಳದಲ್ಲಿ ‘ತೆಂಬರೆ’ ಎಂಬ ಚರ್ಮ ವಾದ್ಯವನ್ನು ವ್ಯಕ್ತಿಯೊಬ್ಬ ನುಡಿಸುತ್ತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇರುತ್ತವೆ.
ಆಟಿ ಕಳೆಂಜ ಕುಣಿತದ ಉದ್ದೇಶ ಹೀಗೆ ಎನ್ನುತ್ತಾರೆ ಹಿರಿಯರು
ರೋಗವನ್ನು ಓಡಿಸುವುದು ಆಟಿ ಕಳೆಂಜನ ಕಾರ್ಯ ಎನ್ನುತ್ತಾರೆ ಹಿರಿಯರು. ತುಳುವಿನಲ್ಲಿ ಆಷಾಡ ಆರಂಭವಾಗುವುದು ಎಂದರೆ ಮಳೆಗಾಲದ ಆರಂಭ. ಕೆಲವೊಮ್ಮೆ ಮಳೆ ಬೀಳದಿದ್ದರೆ ಬಿಸಿ ಹೆಚ್ಚಾಗುತ್ತದೆ. ಇಂದಿನ ದಿನಗಳಲ್ಲೂ ಮಳೆ ಮತ್ತು ಬಿಸಿಲಿನ ಮಧ್ಯೆ ಡೆಂಗ್ಯೂನಂಥ ಪಿಡುಗು ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಿಸಿರುವುದನ್ನು ಕಾಣಬಹುದು. ಈಗಲಾದರೆ ವೈದ್ಯರ ದವಾಖಾನೆಗಳು ಅಲ್ಲಲ್ಲಿ ಇವೆ. ಆದರೆ ಹಿಂದಿನ ಕಾಲದಲ್ಲಿ ನಂಬಿಕೆಗೆ ಪ್ರಾಧಾನ್ಯ. ಆ ಸಂದರ್ಭ ಆಟಿ ಕಳೆಂಜ ಮನೆ ಮನೆಗೆ ಆಗಮಿಸಿ, ರೋಗರುಜಿನಗಳನ್ನು ಓಡಿಸುವ ಕಾರ್ಯ ಮಾಡುತ್ತಿದ್ದ ಎಂದು ಹಿರಿಯರು ಹೇಳುತ್ತಾರೆ. 'ಆಟಿದ ದೊಂಬು ಆನೆತ ಬೆರಿ ಪುಡಪು' ಹೀಗಾಗಿ ಆಟಿಕಳೆಂಜ ಬಂದರೆ ರೋಗ ರುಜಿನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ಜನರಲ್ಲಿ ಇದೆ. ಹೀಗಾಗಿ ಆಟಿ ಕಳೆಂಜನಿಗೆ ತುಳುನಾಡಿನಲ್ಲಿ ಮಹತ್ವದ ಸ್ಥಾನವಿದೆ.
ಪದ್ದತಿಯನ್ನು ಉಳಿಸುವುದೇ ಮೂಲ ಉದ್ದೇಶ
ವಿಟ್ಲ ಸಮೀಪದ ಮಂಗಲಪದವು ಸುರುಳಿಮೂಲೆ ನಿವಾಸಿ ಸೋಮಪ್ಪ ಸುರುಳಿಮೂಲೆ ಅವರು ಈ ಆಟಿ ಕಳೆಂಜದ ಪದ್ದತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆಲಿಂಜ , ಒಕ್ಕೆತ್ತೂರು ಹಾಗೂ ವೀರಕಂಭ ಈ ಮೂರು ಗ್ರಾಮಗಳ ಪ್ರತಿ ಹಿಂದು ಧರ್ಮದ ಮನೆಗಳಿಗೆ ಬೇಟಿ ನೀಡುತ್ತೇವೆ ಎಂದು ಅವರು ತಿಳಿಸಿದರು. ಆಟಿ ಕಳೆಂಜ ಮನೆಗೆ ಬಂದಾಗ ಪ್ರತಿಯೊಬ್ಬರು ಸಂತೋಷದಿಂದ ಹಳೆಯ ಪದ್ದತಿಯಂತೆ ಆಚರಣೆ ಮಾಡುತ್ತಾರೆ ಎನ್ನುವ ಮಾತನ್ನು ಅವರು ಹೇಳುತ್ತಾರೆ.
ತಮ್ಮ ಮಗ ತಿಲಕ್‌ರಾಜ್ ಸಹ ಆಟಿ ಕಳೆಂಜ ವೇಷವನ್ನು ಹಾಕುತ್ತಾನೆ ಎಂದು ಹೇಳುವ ಅವರು, ಮಗ ಡಿಪ್ಲೊಮಾವನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿದ್ದಾನೆ. ಮುಂದೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸುತ್ತಾನೆ. ಜೊತೆಗೆ ನಮ್ಮ ಹಳೆಯ ಪದ್ದತಿ, ಸಂಪ್ರದಾಯ, ಆಚರಣೆಯನ್ನು ಉಳಿಸಿಕೊಂಡು ಬರುತ್ತೇವೆ ಎಂದು ಅತ್ಯಂತ ಖುಷಿಯಿಂದ ಹೇಳಿದರು.
ನನಗೆ ನನ್ನ ತಂದೆ ಕಲಿಸಿದ್ದಾರೆ, ಹಾಗೆ ಮುಂದಿನ ದಿನಗಳಲ್ಲಿ ಮಕ್ಕಳು ಉಳಿಸಿಕೊಂಡು ಹೋಗಬೇಕು ಎಂಬುದೇ ನನ್ನ ಆಸೆ ಎನ್ನುತ್ತಾರೆ ಅವರು. ಆಟಿ ಕಳೆಂಜ ಸಂಪ್ರದಾಯ ಮತ್ತು ಅಚರಣೆ ಮುಂದಿನ ಪೀಳಿಗೆಗೆ ತಿಳಿಸುವ ಮತ್ತು ಉಳಿಸುವ ಕಾರ್ಯವನ್ನು ಇವರು ಮಾಡುತ್ತಿರುವುದು ಗಮನಾರ್ಹ ವಿಚಾರ.