UT Khader Profile: ವಿದ್ಯಾರ್ಥಿ ನಾಯಕನಿಂದ ಆರೋಗ್ಯ ಸಚಿವರಾಗುವವರೆಗೆ ಖಾದರ್ ಖದರ್: ಮಂಗಳೂರು ಶಾಸಕ ಯುಟಿ ಖಾದರ್ ಪ್ರೊಫೈಲ್
ಕನ್ನಡ ಸುದ್ದಿ  /  ಕರ್ನಾಟಕ  /  Ut Khader Profile: ವಿದ್ಯಾರ್ಥಿ ನಾಯಕನಿಂದ ಆರೋಗ್ಯ ಸಚಿವರಾಗುವವರೆಗೆ ಖಾದರ್ ಖದರ್: ಮಂಗಳೂರು ಶಾಸಕ ಯುಟಿ ಖಾದರ್ ಪ್ರೊಫೈಲ್

UT Khader Profile: ವಿದ್ಯಾರ್ಥಿ ನಾಯಕನಿಂದ ಆರೋಗ್ಯ ಸಚಿವರಾಗುವವರೆಗೆ ಖಾದರ್ ಖದರ್: ಮಂಗಳೂರು ಶಾಸಕ ಯುಟಿ ಖಾದರ್ ಪ್ರೊಫೈಲ್

UT Khader Profile: ತನ್ನ ಕ್ಷೇತ್ರದಲ್ಲಿ ಹಿಂದು ಬಾಂಧವರ ಕಾರ್ಯಕ್ರಮಗಳಿರಲಿ, ಮುಸ್ಲಿಮರ ಕಾರ್ಯಕ್ರಮಗಳಿರಲಿ, ಎಲ್ಲ ಕಡೆಯಲ್ಲೂ ಖಾದರ್ ಹಾಜರ್. ಉರಿನಾಲಗೆಯ ಹೇಳಿಕೆಗಳನ್ನು ನೀಡದೆ, ಸಮಾಧಾನಿಯಾಗಿಯೇ ಟೀಕೆಗಳನ್ನು ಎದುರಿಸುವ ಖಾದರ್ ವರ್ತನೆಗೆ ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಮಂಗಳೂರು ಜನರು ಐದು ಬಾರಿ ಅವರನ್ನು ಆಯ್ಕೆ ಮಾಡಿದ್ದೇ ಸಾಕ್ಷಿ.

ಮಂಗಳೂರು ಶಾಸಕ ಯುಟಿ ಖಾದರ್
ಮಂಗಳೂರು ಶಾಸಕ ಯುಟಿ ಖಾದರ್

ಮಂಗಳೂರು: ಮಂಗಳೂರು ಕ್ಷೇತ್ರವನ್ನು (Mangaluru Constituency) 2007 ರಿಂದ ಪ್ರತಿನಿಧಿಸುತ್ತಾ ಬಂದಿರುವ ಯು.ಟಿ.ಖಾದರ್ (UT Khader), ಸದನವೀರ ಪ್ರಶಸ್ತಿ ಪಡೆದವರು. ವಿದ್ಯಾರ್ಥಿ ಜೀವನದಲ್ಲೇ ಸೆನೆಟ್ ಸದಸ್ಯರಾಗಿ ಆಯ್ಕೆಗೊಂಡು, ಸರ್ವಕಾಲೇಜು ವಿದ್ಯಾರ್ಥಿ ಸಂಘದ ಸಲಹೆಗಾರರಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಖಾದರ್, ಈಗ ಅನುಭವಿ ರಾಜಕಾರಣಿ.

2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಯು.ಟಿ.ಖಾದರ್ 83,219 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ. ಬಿಜೆಪಿಯ ಸತೀಶ್ ಕುಂಪಲ 60,429 ಹಾಗೂ ಎಸ್.ಡಿ.ಪಿ.ಐ.ನ ರಿಯಾಝ್ ಫರಂಗಿಪೇಟೆ 15,054 ಮತ ಗಳಿಸಿದ್ದಾರೆ. ಖಾದರ್ 22790 ಮತಗಳ ಅಂತರದ ಬೃಹತ್ ಗೆಲುವು ಸಾಧಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಹಿಂದು ಬಾಂಧವರ ಕಾರ್ಯಕ್ರಮಗಳಿರಲಿ, ಮುಸ್ಲಿಮರ ಕಾರ್ಯಕ್ರಮಗಳಿರಲಿ, ಎಲ್ಲ ಕಡೆಯಲ್ಲೂ ಖಾದರ್ ಹಾಜರ್. ಉರಿನಾಲಗೆಯ ಹೇಳಿಕೆಗಳನ್ನು ನೀಡದೆ, ಸಮಾಧಾನಿಯಾಗಿಯೇ ಟೀಕೆಗಳನ್ನು ಎದುರಿಸುವ ಖಾದರ್ ವರ್ತನೆಗೆ ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಮಂಗಳೂರು ಜನರು ಐದು ಬಾರಿ ಅವರನ್ನು ಆಯ್ಕೆ ಮಾಡಿದ್ದೇ ಸಾಕ್ಷಿ.

ರಾಜಕೀಯ ಮನೆತನ

1969ನೇ ಇಸವಿಯಲ್ಲಿ ಅಕ್ಟೋಬರ್ 12ರಂದು ಜನಿಸಿದ ಯು.ಟಿ.ಖಾದರ್ ಅವರ ತಂದೆ ಯು.ಟಿ.ಫರೀದ್ ಅವರೂ ಸುದೀರ್ಘ ಕಾಲ ಉಳ್ಳಾಲ ಕ್ಷೇತ್ರದಲ್ಲಿ ಶಾಸಕರಾಗಿ ಅನುಭವಿ. ಯು.ಟಿ.ಫರೀದ್ ಅವರು 1972ರಲ್ಲಿ ಶಾಸಕರಾದರು. ಬಳಿಕ 1978ರಲ್ಲೂ ಜಯಗಳಿಸಿದರು. ಅದಾದ ಬಳಿಕ 1999 ಮತ್ತು 2004ರಲ್ಲಿ ಫರೀದ್ ಸತತ 2 ಜಯ ದಾಖಲಿಸಿದರು. ಒಟ್ಟು 4 ಬಾರಿ ಫರೀದ್ ಶಾಸಕರಾದರು. ಶಾಸಕರಾಗಿದ್ದಾಗಲೇ ಫರೀದ್ ಅವರು ನಿಧನರಾದರು. ಆಗ 2007ರ ಉಪಚುನಾವಣೆಯಲ್ಲಿ ಯುಟಿ ಖಾದರ್ ಅವರಿಗೆ ಟಿಕೆಟ್ ನೀಡಲಾಯಿತು. ಅಲ್ಲಿಂದ ಖಾದರ್ ಹಿಂದುರಿಗಿ ನೋಡಲಿಲ್ಲ. ಸೋಲರಿಯದ ಸರದಾರನಾದರು.

ಮಂಗಳೂರು ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ಬಿಎ ಎಲ್.ಎಲ್.ಬಿ. ಪದವೀಧರರಾಗಿ ಕಾನೂನು ವ್ಯಾಸಂಗ ಮಾಡಿದ ಖಾದರ್, 1992ರಿಂದ 1994ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ.ನ ಪ್ರಧಾನ ಕಾರ್ಯದರ್ಶಿಯಾಗಿ ತನ್ನ ರಾಜಕೀಯ ಚಟುವಟಿಕೆ ಆರಂಭಿಸಿದರು. ಬಳಿಕ 1994ರಿಂದ 2000ನೇ ಇಸವಿವರೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷರಾದರು. 2000ನೇ ಇಸವಿಯಲ್ಲಿ ರಾಜ್ಯಾಧ್ಯಕ್ಷರಾಗಿ ವಿದ್ಯಾರ್ಥಿ ಕಾಂಗ್ರೆಸ್ ಅನ್ನು ಮುನ್ನಡೆಸಿದರು. 2001ರಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅವರಿಗೆ ಅವಕಾಶ ನೀಡಲಾಯಿತು. ಬಳಿಕ ಕಾಂಗ್ರೆಸ್ ಸೇವಾದಳದ ತರಬೇತುದಾರನಾಗಿ ನಿಯುಕ್ತಿಗೊಂಡರು.

2003ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಖಾದರ್, ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಯೋಜಕರಲ್ಲೊಬ್ಬರಾದರು. ಇದೇ ವೇಳೆ ತನ್ನ ತಂದೆ ಯು.ಟಿ.ಫರೀದ್ ನಿಧನದಿಂದ ತೆರವಾದ ಉಳ್ಳಾಲ ಅಸೆಂಬ್ಲಿ ಸ್ಥಾನಕ್ಕೆ 2007ರ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. 2007ರಲ್ಲಿ ಅವರು ಮೊದಲ ಸಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಬಳಿಕ ಹಿಂದಿರುಗಿ ನೋಡಲಿಲ್ಲ. 2008-2013, 2013-2018, 2018-2023, ಹೀಗೆ ನಾಲ್ಕು ಬಾರಿ ಖಾದರ್ ಮಂಗಳೂರು (ಉಳ್ಳಾಲ) ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡರು. 2020ರಲ್ಲಿ ಅವರು ಕೆಪಿಸಿಸಿ ವಕ್ತಾರರಾಗಿ ಕಾರ್ಯನಿರ್ವಹಿಸಿದರು.

ಸಚಿವರಾಗಿ, ಪ್ರತಿಪಕ್ಷ ಉಪನಾಯಕರಾಗಿ

2007ರಿಂದ 2012ರವರೆಗೆ ಖಾದರ್ ವಿಪಕ್ಷ ಶಾಸಕರಾಗಿದ್ದರೆ, 2013ರಲ್ಲಿ ಸಿದ್ಧರಾಮಯ್ಯ ಸರಕಾರ ಬಂತು. ಈ ಸಂದರ್ಭ ಖಾದರ್ ಅವರು 2013ರಿಂದ 2016ರವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ನಿಭಾಯಿಸಿದರು. ಈ ಸಂದರ್ಭ ಖಾದರ್ ಕೈಗೊಂಡ ಕೆಲ ಕ್ರಮಗಳು ಗಮನ ಸೆಳೆದವು. ಬಳಿಕ 2016-18ರವರೆಗೆ ಅವರು ಆಹಾರ, ನಾಗರಿಕ ಪೂರೈಕೆ ಖಾತೆ ನಿಭಾಯಿಸಿದರು. 2018ರಲ್ಲಿ ವಸತಿ ಖಾತೆ ಮತ್ತು 2018-19ರವರೆಗೆ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸಿದರು. ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗ ಪ್ರತಿಪಕ್ಷ ಸ್ಥಾನದಲ್ಲಿ ಮತ್ತೆ ಕುಳಿತ ಖಾದರ್ ಅವರನ್ನು 2022ರಲ್ಲಿ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕರನ್ನಾಗಿ ನೇಮಿಸಲಾಯಿತು.

ಕ್ರೀಡಾಪ್ರೇಮಿ, ಸಮಾಜಸೇವಕ

2023ರ ಚುನಾವಣಾ ಫಲಿತಾಂಶ ಲೆಕ್ಕಾಚಾರಗಳು ಮಂಗಳೂರು ಎನ್.ಐ.ಟಿ.ಕೆ.ಯಲ್ಲಿ ನಡೆಯುತ್ತಿದ್ದರೆ, ಗೆಲ್ಲುವ ವಿಶ್ವಾಸವಿದ್ದ ಖಾದರ್, ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಅಂದ ಹಾಗೆ, ಖಾದರ್ ಅವರಿಗೆ ಕ್ರಿಕೆಟ್ ಮಾತ್ರವಲ್ಲ, ಮೋಟೊಕ್ರಾಸ್ ನಲ್ಲಿ ಆಸಕ್ತಿ. ಮಂಗಳೂರು ರೈಡರ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷರಾಗಿರುವ ಖಾದರ್, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಮೋಟೊಕ್ರಾಸ್ ನಲ್ಲಿ ಕೆಲ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಹರೀಶ ಮಾಂಬಾಡಿ, ಮಂಗಳೂರು

Whats_app_banner