ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾ ಸ್ವಾಮಿಯ ಶವ ವಿಲೇವಾರಿಗೆ 30 ಲಕ್ಷ ರೂಪಾಯಿ ಡೀಲ್; ನಟ ದರ್ಶನ್‌ ತೂಗುದೀಪ ತಪ್ಪೊಪ್ಪಿಗೆ

ರೇಣುಕಾ ಸ್ವಾಮಿಯ ಶವ ವಿಲೇವಾರಿಗೆ 30 ಲಕ್ಷ ರೂಪಾಯಿ ಡೀಲ್; ನಟ ದರ್ಶನ್‌ ತೂಗುದೀಪ ತಪ್ಪೊಪ್ಪಿಗೆ

ಚಿತ್ರದುರ್ಗದ ರೇಣುಕಾ ಸ್ವಾಮಿಯ ಶವ ವಿಲೇವಾರಿಗೆ 30 ಲಕ್ಷ ರೂಪಾಯಿ ಡೀಲ್ ಮಾಡಿದ್ದು ನಿಜ ಎಂದು ನಟ ದರ್ಶನ್‌ ತೂಗುದೀಪ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮೊದಲೇ ಈ ಹಣದ ಪಡೆದ ಇನ್ನೊಬ್ಬ ಆರೋಪಿ ಪ್ರದೋಷ್ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ವಿಚಾರವನ್ನು ತಿಳಿಸಿದ್ದ ಎಂದು ಮೂಲಗಳು ಹೇಳಿವೆ.

ರೇಣುಕಾ ಸ್ವಾಮಿ (ಬಲ ಚಿತ್ರ) ಯ ಶವ ವಿಲೇವಾರಿಗೆ 30 ಲಕ್ಷ ರೂಪಾಯಿ ಡೀಲ್; ನಟ ದರ್ಶನ್‌ ತೂಗುದೀಪ (ಎಡಚಿತ್ರ) ತಪ್ಪೊಪ್ಪಿಗೆ
ರೇಣುಕಾ ಸ್ವಾಮಿ (ಬಲ ಚಿತ್ರ) ಯ ಶವ ವಿಲೇವಾರಿಗೆ 30 ಲಕ್ಷ ರೂಪಾಯಿ ಡೀಲ್; ನಟ ದರ್ಶನ್‌ ತೂಗುದೀಪ (ಎಡಚಿತ್ರ) ತಪ್ಪೊಪ್ಪಿಗೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರೇಣುಕಾಸ್ವಾಮಿಯ ಶವ ವಿಲೇವಾರಿ ಮಾಡಲು ಮತ್ತು ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಪ್ರದೋಷ್‌ಗೆ 30 ಲಕ್ಷ ರೂಪಾಯಿ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಈ ಹಣ ಪ್ರದೋಷ್ ಅವರ ನಿವಾಸದಲ್ಲಿ ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಕೂಡ ಸಾಕ್ಷ್ಯವಾಗಿದ್ದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಿರ್ಣಾಯಕ ಘಟ್ಟ ತಲುಪಿದೆ. ಆರೋಪಿಗಳ ನ್ಯಾಯಾಂಗ ಬಂಧನ ನಾಳೆ (ಜೂನ್ 20) ಕೊನೆಗೊಳ್ಳುತ್ತಿದ್ದು, ಪೊಲೀಸರು ರಿಮಾಂಡ್ ನೋಟ್ ಸಿದ್ಧಪಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿಯ ಶವ ಪರೀಕ್ಷೆ ವರದಿ, ಎಫ್‌ಎಸ್‌ಎಲ್‌ ರಿಪೋರ್ಟ್ ಸೇರಿ ಅಗತ್ಯ ದಾಖಲೆಗಳನ್ನೂ ಜೋಡಿಸಿಕೊಂಡಿದ್ಧಾರೆ.

ನಟ ದರ್ಶನ್ ತೂಗುದೀಪ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಏನಿದೆ

ಚಿತ್ರದುರ್ಗದ ರೇಣುಕಾಸ್ವಾಮಿಯ ಶವ ವಿಲೇವಾರಿ ಮಾಡಲು ಮತ್ತು ಈ ಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಎಲ್ಲಿಯೂ ಹೊರಬರಬಾರದು. ಈ ಬಗ್ಗೆ ನಿಗಾವಹಿಸಬೇಕು” ಎಂದು ಪ್ರದೋಷ್‌ಗೆ 30 ಲಕ್ಷ ರೂಪಾಯಿ ಕೊಟ್ಟಿದ್ದೇನೆ" ಎಂದು ನಟ ದರ್ಶನ್ ತೂಗುದೀಪ ಅವರು ಸ್ವಯಂ ಪ್ರೇರಿತ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಇದಕ್ಕೂ ಮೊದಲೇ ಪ್ರದೋಷ್‌ ಅವರ ನಿವಾಸದಿಂದ ಪೊಲೀಸರು ಈ ಹಣವನ್ನು ವಶಪಡಿಸಿಕೊಂಡಿದ್ದರು. ಪ್ರದೋಷ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ದರ್ಶನ್‌ ಹಣ ನೀಡಿದ್ದು, ಈ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ ಎಂಬುದು ಈಗಾಗಲೇ ವರದಿಯಾಗಿತ್ತು. ಆದರೆ ದರ್ಶನ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂಬ ವಿಚಾರ ಇಂದೇ (ಜೂನ್ 19) ಮೊದಲ ಬಾರಿಗೆ ಬಹಿರಂಗವಾಗಿದೆ. ಈ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ತೂಗುದೀಪ ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿ ಒಟ್ಟು 17 ಜನ ಆರೋಪಿಗಳಾಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆ

ಪೊಲೀಸ್ ಮೂಲಗಳ ಪ್ರಕಾರ, ನಟನ ಅಭಿಮಾನಿ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಇದು ದರ್ಶನ್ ತೂಗುದೀಪ ಅವರನ್ನು ಕೆರಳಿಸಿತು. ಈ ಘಟನೆಯೇ ಜೂನ್ 8 ರಂದು ರೇಣುಕಾಸ್ವಾಮಿ ಅವರ ಕೊಲೆಗೆ ಕಾರಣವಾಯಿತು ಎಂದು ಆರೋಪಿಸಲಾಗಿದೆ. ಸುಮನಹಳ್ಳಿಯ ಅಪಾರ್ಟ್‌ಮೆಂಟ್‌ ಪಕ್ಕದ ಮಳೆನೀರು ಚರಂಡಿಯ ಬಳಿ ಜೂನ್ 9 ರಂದು ಅವರ ಶವ ಪತ್ತೆಯಾಗಿತ್ತು.

"ಅಪರಾಧದ ಸ್ಥಳದಿಂದ, ಹಲ್ಲೆಗೆ ಬಳಸಿದ ಲಾಠಿ ಮತ್ತು ಮರದ ದಿಮ್ಮಿಗಳಂತಹ ವಸ್ತುಗಳನ್ನು ನೀರಿನ ಬಾಟಲಿ, ರಕ್ತದ ಕಲೆಗಳು ಮತ್ತು ವಸ್ತು ಪುರಾವೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಹೊಂದಿರುವ ಡಿವಿಆರ್ ಅನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿ ವಿವರಿಸಿದ್ದಾಗಿ ಪಿಟಿಐ ವರದಿ ಹೇಳಿದೆ.

ಶವಪರೀಕ್ಷೆ ವರದಿಯ ಪ್ರಕಾರ, ರೇಣುಕಸ್ವಾಮಿ ಅವರ ಸಾವು ಶಾಕ್ ಮತ್ತು ರಕ್ತಸ್ರಾವದಿಂದ ಸಂಭವಿಸಿದೆ. ಹೆಚ್ಚಿನ ವಿಶ್ಲೇಷಣೆಗಾಗಿ ಸ್ಥಳದಲ್ಲಿ ಸಿಕ್ಕ ವಿವಿಧ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಮೂಲಗಳ ಪ್ರಕಾರ, ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ರಾಘವೇಂದ್ರ, ದರ್ಶನ್ ಅವರನ್ನು ಭೇಟಿ ಮಾಡಿಸುವ ನೆಪದಲ್ಲಿ ರೇಣುಕಾಸ್ವಾಮಿಯನ್ನು ಆರ್.ಆರ್.ನಗರದ ಶೆಡ್‌ಗೆ ಕರೆತಂದಿದ್ದ. ಈ ಶೆಡ್‌ನಲ್ಲಿಯೇ ಅವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು ಎಂದು ಆರೋಪಿಸಲಾಗಿದೆ. ರೇಣುಕಾಸ್ವಾಮಿ ಅವರ ಮೇಲೆ ಹಲ್ಲೆ ನಡೆದಾಗ ದರ್ಶನ್ ಹಾಜರಿದ್ದರು ಎಂದು ಸಾಬೀತುಪಡಿಸಲು ಸಿಸಿಟಿವಿ ದೃಶ್ಯಾವಳಿಗಳು ಸೇರಿ ಸಾಕಷ್ಟು ಪುರಾವೆಗಳನ್ನು ತನಿಖಾ ತಂಡ ಸಂಗ್ರಹಿಸಿದೆ ಎಂದು ನಂಬಲಾಗಿದೆ ಎಂದು ಮೂಲಗಳು ತಿಳಿಸಿವೆ.