ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್; ಕುಂಟುತ್ತಲೇ ಹೊರ ಬಂದ ದಾಸ, 131 ದಿನಗಳ ಸೆರೆವಾಸಕ್ಕೆ ಮುಕ್ತಿ
Actor Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ತೂಗುದೀಪ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ದರ್ಶನ್ ಕುಂಟುತ್ತಲೇ ಜೈಲಿನಿಂದ ಹೊರ ಬಂದರು. (ವರದಿ-ಎಚ್.ಮಾರುತಿ)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 131 ದಿನಗಳಿಂದ ಜೈಲಿನಲ್ಲಿದ್ದು, ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದುಕೊಂಡ ದರ್ಶನ್ ತೂಗುದೀಪ ಬಳ್ಳಾರಿ ಜೈಲಿನಿಂದ ಹೊರ ಬಂದಿದ್ದಾರೆ. ಬುಧವಾರ ಬೆಳಗ್ಗೆ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಮಧ್ಯಂತರ ಜಾಮೀನು ದೇಶ ಪ್ರಕಟಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ದರ್ಶನ್ ಕುಂಟುತ್ತಲೇ ಜೈಲಿನಿಂದ ಹೊರ ಬಂದರು. ಬರುವಾಗ ಜೈಲಿನ ಅಧಿಕಾರಿಗಳಿಗೆ ಕೈ ಮುಗಿದು ಹೊರ ನಡದರು. ದರ್ಶನ್ ಪತ್ನಿ ವಿಜಯಲಕ್ಷ್ಮೀ, ಕುಟುಂಬದ ಸದಸ್ಯರು ನಟ ಧನ್ವೀರ್ ಮತ್ತಿತರರು ಉಪಸ್ಥಿತರಿದ್ದರು.
ಬಿಗಿಭದ್ರತೆಯಲ್ಲಿ ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ಆಗಮಿಲಿದ್ದಾರೆ ಎಂದು ತಿಳಿದುಬಂದಿದೆ. ಕತ್ತಲಾಗಿರುವುದರಿಂದ ಹೆಲಿಕಾಫ್ಟರ್ನಲ್ಲಿ ಆಗಮಿಸಲು ಸಾಧ್ಯವಾಗುವುದಿಲ್ಲ. ದರ್ಶನ್ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಹೈಕೋರ್ಟ್ ಆರು ವಾರ ಅಂದರೆ 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ಎಂದರೆ ಅತಿಶಯೋಕ್ತಿಯಾಗಲಾರದು. ಮಧ್ಯಂತರ ಜಾಮೀನು ಮಂಜೂರಾಗಿದ್ದರೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಐದು ತಿಂಗಳಿಂದ ದರ್ಶನ್ ಜೈಲಿನಲ್ಲಿ ದಿನ ದೂಡುತ್ತಿದ್ದರು.
ಜಾಮೀನು ಮುಗಿದ ಬಳಿಕ ಮತ್ತೆ ಜೈಲಿಗೆ
ಹಲವು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು, ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು ಎಂದು ಉಲ್ಲೇಖಿಸಿ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಕೇವಲ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಪಡೆಯಲು ಮಾತ್ರ ಜಾಮೀನು ನೀಡಲಾಗಿದೆ. ಜಾಮೀನು ಪಡೆದ ಬಳಿಕ ಪ್ರತಿ ವಾರವೂ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ಗೆ ನೀಡಬೇಕು ಎಂದು ತಿಳಿಸಿದೆ. ಆರು ವಾರಗಳ ನಂತರ ಮತ್ತೆ ಜೈಲಿಗೆ ಮರಳಬೇಕಾಗುತ್ತದೆ.
ಹಲವು ಷರತ್ತುಗಳ ಜೊತೆಗೆ ಚಿತ್ರೀಕರಣದಲ್ಲೂ ದರ್ಶನ್ ಪಾಲ್ಗೊಳ್ಳುವಂತಿಲ್ಲ. ಹಾಗಾಗಿ ಅವರು ನಟಿಸುತ್ತಿರುವ ಹಲವು ಚಿತ್ರಗಳ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಈ ಮಧ್ಯೆ ದರ್ಶನ್ ನಟನೆಯ ‘ನವಗ್ರಹ’ ಚಿತ್ರ ನವೆಂಬರ್ 8ಕ್ಕೆ ರೀ ರಿಲೀಸ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ನಂತರ ದರ್ಶನ್ ಪರ ವಕೀಲ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ದರ್ಶನ್ ಆರೋಗ್ಯ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಲೇ ಇದ್ದರು.
ಇದಕ್ಕಾಗಿ ಹಲವು ತೀರ್ಪುಗಳನ್ನು ಅವರು ಉಲ್ಲೇಖಿಸಿದ್ದರು. ದರ್ಶನ್ಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಇದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಒಂದೊಮ್ಮೆ ಚಿಕಿತ್ಸೆ ತಡವಾದರೆ ಅವರು ಪಾರ್ಶ್ವವಾಯುವಿಗೆ ಈಡಾಗುವ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರೂ ಸಹ ಸಮರ್ಥವಾಗಿ ಪ್ರತಿವಾದ ಮಂಡಿಸಿ ಗಮನ ಸೆಳೆದಿದ್ದರು. ದರ್ಶನ್ರ ಆರೋಗ್ಯ ಸಮಸ್ಯೆಯ ಕುರಿತು ವರದಿ ನೀಡಲು ಮೆಡಿಕಲ್ ಬೋರ್ಡ್ ಸ್ಥಾಪನೆ ಮಾಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು. ಅಲ್ಲದೆ ಈಗ ಸಲ್ಲಿಸಲಾಗಿರುವ ವೈದ್ಯಕೀಯ ವರದಿಯಲ್ಲಿ ದರ್ಶನ್ಗೆ ಆಗಬೇಕಿರುವ ಶಸ್ತ್ರಚಿಕಿತ್ಸೆ, ಗುಣವಾಗಲು ತೆಗೆದುಕೊಳ್ಳುವ ಸಮಯ ನಿಖರವಾಗಿಲ್ಲವೆಂದು ವಾದಿಸಿದ್ದರು.
ಜೂನ್ 11ರಂದು ದರ್ಶನ್ ಬಂಧನ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A-2 ಆಗಿರುವ ನಟ ದರ್ಶನ್ ಮೈಸೂರಿನಲ್ಲಿ ಶೂಟಿಂಗ್ಗೆಂದು ತೆರಳಿದ್ದಾಗಲೇ ಅವರನ್ನು ಪೊಲೀಸರು ಜೂನ್ 11ರಂದು ಬೆಂಗಳೂರಿಗೆ ಕರೆ ತಂದು ಬಂಧಿಸಿದ್ದರು. 11 ದಿನಗಳ ಕಾಲ ಪೊಲೀಸರ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಿದ್ದ ದರ್ಶನ್ ಬಳಿಕ ವಿಚಾರಣಾ ಕೈದಿಯಾಗಿ ಜೈಲು ಸೇರಿದ್ದರು. ಜೂನ್ 22ಕ್ಕೆ ನ್ಯಾಯಾಂಗ ಬಂಧನ ಜಾರಿಯಾಗಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಹತ್ಯೆ ಜೂನ್ 8 ರಂದು ನಡೆದಿತ್ತು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದ ಫೋಟೋ ವೈರಲ್ ಆದ ನಂತರ ನ್ಯಾಯಾಲಯ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಆದೇಶ ನೀಡಿತ್ತು. ದರ್ಶನ್ 69 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದರು. ನಂತರ ಆಗಸ್ಟ್ 29ಕ್ಕೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. 5 ತಿಂಗಳಿನಿಂದ ಕಂಬಿ ಹಿಂದೆ ಕಾಲ ಕಳೆದಿದ್ದ ದರ್ಶನ್ಗೆ ಈಗ ಬಿಡುಗಡೆಯ ಭಾಗ್ಯ ಸಿಕ್ಕಿದೆ.