ಬೆಂಗಳೂರಲ್ಲಿ 12 ವರ್ಷದಿಂದ ಇದ್ದೇನೆ, ನಾನ್ಯಾಕೆ ಕನ್ನಡ ಕಲಿಯಬೇಕು? ಕನ್ನಡ ರಾಜ್ಯೋತ್ಸವ ವೇಳೆ ವೈರಲಾಯ್ತು ಹೊರ ರಾಜ್ಯದ ವ್ಯಕ್ತಿಯ ಮಾತು
ಬೆಂಗಳೂರು ಕರ್ನಾಟಕದ ರಾಜಧಾನಿಯಾದರೂ ನಾನಾ ಭಾಷಿಕರು ಇರುವ ಊರು. ಇಲ್ಲಿ ಕನ್ನಡ ಕಲಿಯೋ ಅನಿವಾರ್ಯತೆ ಇಲ್ಲ ಎಂಬ ಕಟು ವಾಸ್ತವವನ್ನು ಕನ್ನಡ ರಾಜ್ಯೋತ್ಸವ (Karnataka Rajyotsava) ದ ವೇಳೆ ತೆರೆದಿಟ್ಟ ಹೊರ ರಾಜ್ಯದ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಕಾಮೆಂಟ್ ನೋಡಿದರೆ ಇಡೀ ಕರ್ನಾಟಕವನ್ನು, ಕನ್ನಡಿಗರನ್ನು ಅಪಮಾನಿಸುವ ಅಂಶಗಳೇ ಗಮನಸೆಳೆಯುತ್ತವೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಎಲ್ಲರಿಗೂ ಅಚ್ಚುಮೆಚ್ಚು. ಕಾರಣ ಇಷ್ಟೆ. ಕನ್ನಡ ರಾಜ್ಯೋತ್ಸವ (Karnataka Rajyotsava) ಬಂದ ಕೂಡಲೆ ಕನ್ನಡ ಭಾಷಾಭಿಮಾನ ಹೆಚ್ಚಾಗುತ್ತದೆ. ನವೆಂಬರ್ ತಿಂಗಳು ಮುಗಿದ ಕೂಡಲೇ ಎಲ್ಲವೂ ತಣ್ಣಗಾಗುತ್ತದೆ. ಬಹುತೇಕ ಯಾರೂ ಕನ್ನಡದಲ್ಲಿ ಮಾತನಾಡಬೇಕು ಎಂದು ಬಯಸುವುದಿಲ್ಲ. ಅಂತಹ ವಾತಾವರಣ ಸೃಷ್ಟಿಸಬೇಕು, ಅದು ನಿರಂತರವಾಗಿರಬೇಕು ಎಂದು ಬಯಸುವುದಿಲ್ಲ. ಇದು ಹೊರ ರಾಜ್ಯದವರಿಗೆ ವರದಾನವಾಗಿ ಪರಿಣಮಿಸಿದೆ. ಬೆಂಗಳೂರಿಗೆ ಬಂದರೆ ಕನ್ನಡ ಕಲಿಯಲೇ ಬೇಕು ಎಂಬ ವಾತಾವರಣ ಇಲ್ಲ. ಅಂತಹ ಅನಿವಾರ್ಯತೆ, ಅಗತ್ಯವೂ ಇಲ್ಲ. ಇದು ಕಟು ವಾಸ್ತವ. ಇದನ್ನೇ ಹೊರ ರಾಜ್ಯದ ವ್ಯಕ್ತಿಯೊಬ್ಬರು ಕನ್ನಡಿಗರೊಬ್ಬರು ಕೇಳಿದ ಪ್ರಶ್ನೆಗೆ ಸಹಜವಾಗಿಯೆ ಉತ್ತರಿಸಿದ್ದಾರೆ. ಸದ್ಯ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಗಮನಸೆಳೆಯುತ್ತಿರುವ ವೈರಲ್ ವಿಡಿಯೋ ಇದು.
‘ಬೆಂಗಳೂರಲ್ಲಿ 12 ವರ್ಷದಿಂದ ಇದ್ದೇನೆ, ಕನ್ನಡ ಕಲಿಯೋ ಅಗತ್ಯ ಇಲ್ಲ’
ಕನ್ನಡಿಗ ದೇವರಾಜ್ (@sgowda79) ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವೈರಲ್ ವಿಡಿಯೋ ಇದು. ಅವರು “ಈ ವ್ಯಕ್ತಿ ಹನ್ನೆರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದಾನೆ. ಕನ್ನಡ ಕಲಿತಿಲ್ಲ ಇವನಿಗೆ ಕನ್ನಡ ಅವಶ್ಯಕತೆ ಇಲ್ಲವಂತೆ, ಕನ್ನಡಿಗರು ಮಾತ್ರ ಹಿಂದಿ ಕಲಿಯಬೇಕಂತೆ" ಎಂಬ ಸ್ಟೇಟಸ್‌ನೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಗಮನಿಸಿದರೆ, ಪೆಟ್ರೋಲ್ ಬಂಕ್ ಸಮೀಪ ಇಂಗ್ಲಿಷ್ ಭಾಷೆಯಲ್ಲಿ ಮಾತುಕತೆ ನಡೆದಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಅದನ್ನು ಇಲ್ಲಿ ಉಲ್ಲೇಖಿಸುವುದಾದರೆ,
ಸರ್ ನಿಮಗೆ ಕನ್ನಡ ಗೊತ್ತಿಲ್ವ ಎಂಬ ಪ್ರಶ್ನೆಗೆ, ಇಲ್ಲ ಎಂಬ ಉತ್ತರ ಕೊಡುತ್ತಾರೆ. ಯಾಕೆ ಎಂದಾಗ, ಯಾಕೆ ಕಲಿಯಬೇಕು ಎಂದು ಮರು ಪ್ರಶ್ನೆ ಹಾಕಿದ್ದಾರೆ. ನಂತರ, ಯಾಕೆ ಕಲಿಯಬಾರದು ಎಂಬ ಪ್ರಶ್ನೆಗೆ ಅಂತಹ ಅನಿವಾರ್ಯತೆ ಇಲ್ಲ ಇಲ್ಲಿ ಎಂದಿದ್ದಾರೆ.
ನೀವು ಪ್ರತಿ ಭಾಷೆ, ಸಂಸ್ಕೃತಿಯನ್ನು ಗೌರವಿಸಬೇಕು ಅಲ್ವ ಎಂದಾಗ, ನಾನದನ್ನು ಅಲ್ಲಗಳೆಯುವುದಿಲ್ಲ. ಅವರಿಗೆ ಎಲ್ಲವೂ ಗೊತ್ತಿದೆ ಎಂದು ಸಮೀಪದಲ್ಲಿದ್ದ ಇನ್ನೊಬ್ಬರನ್ನು ತೋರಿಸುತ್ತ ಹೇಳಿದ್ದಾರೆ. ಆದರೆ ಅಲ್ಲಿ ಅವರು ಯಾರು ಎಂಬುದು ಇಲ್ಲ.
ಅವರಿಗೆ ಗೊತ್ತು ಸರಿ, ನೀವು ಕಳೆದ 12 ವರ್ಷಗಳಿಂದ ಇಲ್ಲಿದ್ದೀರಿ, ನಿಮಗೆ ಕನ್ನಡ ಗೊತ್ತಿಲ್ಲ ಎಂದಾಗ, ಅಧಿಕಾರಯುತವಾಗಿ ನಿಮಗೆ ಹಿಂದಿ ಗೊತ್ತಾ ಎಂದು ಕೇಳಿದ್ದಾರೆ. ಹೌದು ನನಗೆ ಗೊತ್ತು ಎಂದಾಗ, ಹಾಗಾದರೆ ನೋಡೋಣ ಎಂದಿದ್ದಾರೆ.
ಪ್ರಶ್ನೆ ಕೇಳಿದವರು ಮಾತು ಮುಂದುವರಿಸಿದ್ದು, ನಾನು ಎಲ್ಲ ಭಾಷೆಗಳನ್ನು, ಸಂಸ್ಕೃತಿಯನ್ನು ಗೌರವಿಸುತ್ತೇನೆ. ನಾನು ಕೂಡ ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ ಎಂದರು ಅವರು. ಹಾಗಾದ್ರೆ ನೀವು ಕನ್ನಡ ಭಾಷೆ ಕಲಿಯಬೇಕಾಗಿತ್ತಲ್ವ ಎಂದಾಗ, ಇಲ್ಲಿ ಕನ್ನಡ ಕಲಿಯಬೇಕಾದ ಅಗತ್ಯವೇ ಇಲ್ಲ, ಯಾಕೆ ಕಲಿಯಬೇಕು ಎಂದು ಮರುಪ್ರಶ್ನಿಸಿದ್ದಾರೆ.
ಅದಕ್ಕೆ ಪ್ರಶ್ನೆ ಕೇಳಿದವರು, ನಿಮಗೆ ಇಲ್ಲಿ ಉದ್ಯೋಗ ಬೇಕು, ಇಲ್ಲಿ ವಸತಿ ಬೇಕು, ವೇತನ ಬೇಕು, ಎಲ್ಲ ಬೇಕು. ಆದರೆ ಕನ್ನಡ ಭಾಷೆ ಕಲಿಯೋದಿಲ್ಲ ಅನ್ನೋದಾದರೆ ನೀವು ಕರ್ನಾಟಕದಲ್ಲಿ ಯಾಕಿರಬೇಕು? ಎಂದು ಕೇಳಿದ್ದಾರೆ,
ಆಗ ತಲೆ ಅಲ್ಲಾಡಿಸಿದ ಆ ವ್ಯಕ್ತಿ, ನೀವು ಯಾಕೆ ನನ್ನ ಜತೆಗೆ ಜಗಳಕ್ಕಿಳಿಯುತ್ತೀರಿ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆಗ ಪ್ರಶ್ನೆ ಕೇಳಿದವರು ನಾನು ಜಗಳ ಮಾಡುತ್ತಿಲ್ಲ. ನಾನು ಮನವಿ ಮಾಡುತ್ತಿದ್ದೇನೆ. ಕಳೆದ 12 ವರ್ಷಗಳಿಂದ ಇಲ್ಲಿದ್ದರೂ ಕನ್ನಡ ಕಲಿಯಲಿಲ್ಲ ಎಂದರೆ ಹೇಗೆ? ಕನ್ನಡ ಕಲಿಯಿರಿ ಎಂದು ಹೇಳಿದಾಗ, ಅವರು ನನಗೆ 5 ಭಾಷೆ ಬರುತ್ತೆ ಎಂದು ಹೇಳಿದರು. ಯಾವೆಲ್ಲ ಭಾಷೆ ಬರುತ್ತದೆ ಎಂದು ಕೇಳಿದಾಗ ಅದಕ್ಕೆ ಅವರು ಉತ್ತರ ಕೊಡಲಿಲ್ಲ. ನನಗೆ ನಿಮ್ಮ ಜತೆ ಮಾತನಾಡುವ ಆಸಕ್ತಿ ಇಲ್ಲ ಎಂದು ಮುಖ ತಿರುಗಿಸುವ ದೃಶ್ಯ ವಿಡಿಯೋದಲ್ಲಿದೆ. ಇದು ಬೆಂಗಳೂರು, ಮುಂಬಯಿ ಅಲ್ಲ, ಗುಜರಾತ್ ಕೂಡ ಅಲ್ಲ. 12 ವರ್ಷ ಇದ್ರೂ ಕನ್ನಡ ಕಲಿಯಲಿಲ್ಲ. ಈಗಲಾದ್ರೂ ಕನ್ನಡ ಕಲಿಯುವ ಮನಸ್ಸು ಮಾಡಿ ಅಂದ್ರು..
ಇಲ್ಲಿದೆ ಆ ವೈರಲ್ ವಿಡಿಯೋ
ಕನ್ನಡ ಕಲಿಯಿರಿ ಅಂದ್ರೆ ಕಂಪನಿಗಳನ್ನು ಬೆಂಗಳೂರಿಂದ ಬೇರೆ ಕಡೆಗೆ ಶಿಫ್ಟ್ ಮಾಡಿ ಎನ್ನುತ್ತಾರೆ ಕೆಲವರು. ಇದೇ ರೀತಿ, ಇಡೀ ಕನ್ನಡಿಗರನ್ನು, ಕರ್ನಾಟಕದ ಜನರನ್ನು ಗೂಂಡಾಗಳು ಎಂದು ಕರೆದು ಲೇವಡಿ ಮಾಡುವ ಜನರೂ ಇದ್ದಾರೆ. ಅಂತಹ ಕೆಲವು ಕಾಮೆಂಟ್‌ಗಳೂ ಮೇಲಿನ ವಿಡಿಯೋದ ಕೆಳಗಿವೆ.. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.