Davangere News: ದಾವಣಗೆರೆ ಜಿಲ್ಲೆಯಲ್ಲಿ 13 ಕೋಟಿ ರೂ. ಮೌಲ್ಯದ ಎಸ್‌ಬಿಐ ಬ್ಯಾಂಕ್ ಚಿನ್ನಾಭರಣ ದರೋಡೆ, ಗ್ರಾಹಕರ ಪರದಾಟ
ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಭಾರೀ ಪ್ರಮಾಣ ದರೋಡೆ ನಡೆದು ನಗದು, ಚಿನ್ನಾಭರಣ ದೋಚಲಾಗಿದೆ. ಹಲವು ಗ್ರಾಹಕರು ತಮ್ಮ ಚಿನ್ನಾಭರಣ ವಾಪಾಸ್‌ಗೆ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ.
ದಾವಣಗೆರೆ: ನಿಮ್ಮ ವಸ್ತುಗಳು ನಮ್ಮ ಬಳಿ ಸುರಕ್ಷಿತ. ನಮ್ಮ ಬ್ಯಾಂಕ್‌ನ ಲಾಕರ್‌ನಲ್ಲಿ ಚಿನ್ನಾಭರಣ ಅಡವಿಡಿ ಎನ್ನುವ ಟ್ಯಾಗ್‌ಲೈನ್ ಪ್ರತಿ ಬ್ಯಾಂಕ್‌ನಲ್ಲಿ ಕಾಣುತ್ತೇವೆ. ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಎಂದರೆ ನಂಬಿಕೆ ಕೊಂಚ ಹೆಚ್ಚೆ. ಆದರೆ ಅಂತಹ ವಿಶ್ವಾಸಾರ್ಹ ಬ್ಯಾಂಕ್‌ನಲ್ಲಿಯೇ ಅಡವಿಟ್ಟ ಚಿನ್ನಾಭರಣ ಕಳುವುದಾದರೆ ಏನು ಮಾಡೋದು. ಅದು ಚಿನ್ನಾಭರಣ ದರೋಡೆಯಾಗಿ ಮೂರು ವಾರ ಕಳೆದರೂ ಈವರೆಗೂ ಅದರ ನಿಖರ ಮಾಹಿತಿ ಇಲ್ಲ. ಪೊಲೀಸರ ತನಿಖೆ ಪ್ರಗತಿಯಲ್ಲಿದ್ದರೂ ದರೋಡೆಕೋರರ ಪತ್ತೆಯಾಗಿಲ್ಲ. ಗ್ರಾಹಕರು ಮಾತ್ರ ಚಿನ್ನಾಭರಣ ದೋಚಿಕೊಂಡು ಹೋದ ನಂತರ ಇನ್ನಷ್ಟು ಆತಂಕಿತರಾಗಿದ್ದಾರೆ. ನಮ್ಮ ಚಿನ್ನಾಭರಣ ನಮಗೆ ಹಿಂದಿರುಗಿಸಿ ಎನ್ನುವ ಬೇಡಿಕೆಯೊಂದಿಗೆ ಬೀದಿಗೆ ಕೂಡ ಇಳಿದಿದ್ದಾರೆ. ಇದು ನಡೆದಿರುವುದು ವಾಣಿಜ್ಯ ನಗರಿ ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದಲ್ಲಿ.ʼ
ಏನಿದು ಪ್ರಕರಣ
ದಾವಣಗೆರೆ ಜಿಲ್ಲೆಯ ಹೊಸ ತಾಲ್ಲೂಕು ಕೇಂದ್ರ ನ್ಯಾಮತಿಯ ನೆಹರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಮೂರು ವಾರದ ಹಿಂದೆ ಭಾರೀ ದೊಡ್ಡ ದರೋಡೆ ನಡೆದಿತ್ತು.
ಬ್ಯಾಂಕ್ ಬಾಗಿಲು ಮುರಿದು ಒಳನುಗ್ಗಿ ಗ್ಯಾಸ್ ಕಟರ್ ಬಳಸಿ ಲಾಕರ್ ಪ್ರದೇಶ ಪ್ರವೇಶಿ ಅಲ್ಲಿದ್ದ ಚಿನ್ನಾಭರಣ, ನಗದು ದೋಚಲಾಗಿತ್ತು. ವಾರಾಂತ್ಯದ ರಜೆಯನ್ನೇ ಗಮನದಲ್ಲಿಟ್ಟುಕೊಂಡು ಈ ದರೋಡೆ ನಡೆದಿತ್ತು.
ಮಾಹಿತಿ ಸಿಗದಂತೆ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ದರೋಡೆಕೋರರು ಹೊತ್ತೊಯ್ದಿದ್ದರು. ರಜೆ ಮುಗಿಸಿ ಬಂದ ಬ್ಯಾಂಕ್ ಅಧಿಕಾರಿಗಳಿಗೆ ದರೋಡೆ ಮಾಹಿತಿ ಲಭಿಸಿತ್ತು. ಆನಂತರ ಲೆಕ್ಕ ಹಾಕಿದಾಗ ದರೋಡೆ ಪ್ರಮಾಣ 13 ಕೋಟಿ ರೂ. ಎನ್ನುವುದು ತಿಳಿದಿತ್ತು.
ಪೊಲೀಸ್ ತನಿಖೆ ಚುರುಕು
ಘಟನೆ ನಡೆದ ಸ್ಥಳಕ್ಕೆ ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಸಹಿತ ಹಿರಿಯ ಅಧಿಕಾರಿಗಳ ತಂಡ ದೌಡಾಯಿಸಿತ್ತು.
ಅದೂ ದಾವಣಗೆರೆ ಜಿಲ್ಲೆಯ ಬ್ಯಾಂಕ್ ಒಂದರಲ್ಲಿ ಇಷ್ಟು ಪ್ರಮಾಣದ ದರೋಡೆಯಾಗಿರುವುದು, ಗ್ರಾಹಕರ ಚಿನ್ನಾಭರಣ ಇಷ್ಟು ಪ್ರಮಾಣದಲ್ಲಿ ದೋಚಿರುವ ವಿಶೇಷ ಪ್ರಕರಣವಿದು.
ಹೊರ ರಾಜ್ಯಗಳ ತಂಡವೇ ಈ ಕೃತ್ಯ ನಡೆಸಿರಬಹುದು ಎಂದು ಶಂಕೆ ಆಧರಿಸಿ ತನಿಖೆಯನ್ನು ತೀವ್ರಗೊಳಿಸಿತ್ತು. ಇದಕ್ಕಾಗಿ ತಂಡಗಳನ್ನು ರಚಿಸಿ ದರೋಡೆಕೋರರ ಪತ್ತೆಗೆ ಸಾಕಷ್ಟು ಶ್ರಮ ಹಾಕಿದರೂ ಇನ್ನೂ ಪ್ರಕರಣ ಬೇಧಿಸಿಲ್ಲ.
ವ್ಯವಸ್ಥಿತವಾಗಿಯೇ ತಂಡ ದರೋಡೆ ನಡೆಸಿರುವುದು ಅಲ್ಲಿ ಒಂದು ಸಣ್ಣ ಸುಳಿವೂ ಬಿಡದ ಹಾಗೆ ನಡೆದುಕೊಂಡಿರುವುದನ್ನು ಗಮನಿಸಿದಾಗ ತಿಳಿದಿತ್ತು.
ಗ್ರಾಹಕರ ಆಕ್ರೋಶ
ನ್ಯಾಮತಿ ಬ್ಯಾಂಕ್‌ನಲ್ಲಿ 509 ಜನ ಗ್ರಾಹಕರು ತಮ್ಮ ಚಿನ್ನಾಭರವಣವನ್ನು ಕಳೆದುಕೊಂಡಿರುವ ಪಟ್ಟಿ ಮಾಡಲಾಗಿದೆ. ಅದರಲ್ಲಿ 10 ಗ್ರಾಂನಿಂದ 100 ಗ್ರಾಂವರೆಗೂ ಚಿನ್ನಾಭರಣ ಕಳೆದುಕೊಂಡವರು ಇದ್ದಾರೆ. ತಮ್ಮ ಮಕ್ಕಳ ವಿದ್ಯಾಭ್ಯಾಸ, ಮನೆ ಕಟ್ಟುವುದು, ಕೃಷಿ ಸಹಿತ ಹಲವು ಕಾರಣಗಳಿಗೆ ಅಡವಿಟ್ಟು ಸಾಲ ಪಡೆದವರು ಇದ್ದಾರೆ. ಅವರೆಲ್ಲರೂ ಆತಂಕಿತರಾಗಿದ್ದಾರೆ.
ದರೋಡೆ ನಡೆದು ಮೂರು ವಾರವೇ ಆಯಿತು. ಪ್ರಕರಣ ಇನ್ನೂ ಬೇಧಿಸಿಲ್ಲ. ನಮ್ಮ ಚಿನ್ನಾಭರಣ ಏನಾಗಿದೆಯೋ ಗೊತ್ತಿಲ್ಲ. ಬ್ಯಾಂಕ್‌ನವರು ನಮ್ಮ ಚಿನ್ನಾಭರಣ ಸುರಕ್ಷಿತವಾಗಿ ಕೊಡಿಸಬೇಕು ಎನ್ನುವುದು ಗ್ರಾಹಕರ ಅಳಲು
ಬ್ಯಾಂಕ್‌ಗೆ ಮನವಿ ಸಲ್ಲಿಸಿದ ನಂತರವೂ ಏನು ಆಗದ ಕಾರಣಕ್ಕೆ .ನಮ್ಮ ಚಿನ್ನ ನಮಗೆ ಕೊಡಿ ಎನ್ನುವ ಘೋಷಣೆಯೊಂದಿಗೆ ಪ್ರತಿಭಟನೆಯನ್ನೂ ಚಿನ್ನಾಭರಣ ಕಳೆದುಕೊಂಡವರು ಆರಂಭಿಸಿದ್ದಾರೆ. ಎಸ್‌ಬಿಐ ವಿಶ್ವಾಸಾರ್ಹತೆ ಮೇಲೆ ನಾವು ಇಲ್ಲಿ ಆಭರಣ ಅಡವಿಟ್ಟಿದ್ದೆವು. ಹೀಗಾದರೆ ಹೇಗೆ ಎನ್ನುವುದು ಅವರ ಆತಂಕದ ನುಡಿ.
ಚಿನ್ನಾಭರಣದ ವಿಷಯ ಮನೆಯಲ್ಲಿ ಜಗಳಕ್ಕೂ ಕಾರಣವಾಗಿದೆ. ಬ್ಯಾಂಕ್ ಅಧಿಕಾರಿಗಳು ಮೇಲಾಧಿಕಾರಿಗಳನ್ನು ಕೇಳಬೇಕು ಎನ್ನುತ್ತಾರೆ. ಹೀಗಾದರೆ ನಾವು ಯಾರನ್ನು ಕೇಳಬೇಕು ಎಂದು ಹಲವರು ಪ್ರಶ್ನಿಸುತ್ತಾರೆ.