ಹಳೇ ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಚುಡಾಯಿಸಿದ ಐವರ ತಂಡ ಪೊಲೀಸರ ಬಲೆಗೆ; ಭಯ ಹುಟ್ಟಿಸುವ ಆ ಸಿಸಿಟಿವಿ ವಿಡಿಯೋ ನೋಡಿದ್ರಾ
ಹಳೇ ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಚುಡಾಯಿಸಿದ ಐವರ ತಂಡ ಪೊಲೀಸರ ಬಲೆಗೆ ಬಿದ್ದಿದೆ. ಬಾಲಕಿಯ ಪಾಲಕರು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಗಮನಸೆಳೆದಿದ್ದಾರೆ. ಭಯ ಹುಟ್ಟಿಸುವ ಆ ಸಿಸಿಟಿವಿ ವಿಡಿಯೋ ನೋಡಿದ್ರಾ? ಇಲ್ಲಿದೆ ಆ ವಿಡಿಯೋ ಮತ್ತು ಕೇಸ್‌ನ ವಿವರ.
ಹುಬ್ಬಳ್ಳಿ: ಬಾಲಕಿಯೊಬ್ಬಳನ್ನು ಚುಡಾಯಿಸಿದ ಘಟನೆಗೆ ಸಂಬಂಧಿಸಿ ಐವರು ಪುಂಡರ ತಂಡವನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಚುಡಾಯಿಸಿದ ಸಿಸಿಟಿವಿ ದೃಶ್ಯವಿರುವ ವಿಡಿಯೋ ವೈರಲ್ ಆಗಿತ್ತು. ಅದಾದ ಬಳಿಕ ಪೊಲೀಸರು ಕೇಸ್ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿ ಗಮನಸೆಳೆದಿದ್ಧಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪಾಲಕರು ನೀಡಿದ ದೂರಿನ ಪ್ರಕಾರ, ಬಿಎನ್ ಎಸ್ ಮತ್ತು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹಳೇಹುಬ್ಬಳ್ಳಿ ಠಾಣೆಯ ಇನ್ಸಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ಸಿಬ್ಬಂದಿ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಾಲಕಿಯನ್ನು ಚುಡಾಯಿಸಿದ ಪ್ರಕರಣ; 5 ಆರೋಪಿಗಳ ಬಂಧನ
ಪ್ರಕರಣ ದಾಖಲಾದ ಕೇವಲ ಎರಡು ಗಂಟೆಗಳ ಒಳಗೆ ಹಳೇ ಹುಬ್ಬಳ್ಳಿಯ ಅಯೋಧ್ಯ ನಗರ ನಿವಾಸಿಗಳಾದ ಶುಭಂ ತಡಸ ಮತ್ತು ಮೆಹಬೂಬ್ ಹಿತ್ತಲಮನಿ ಎಂಬ ಇಬ್ಬರು ಆರೋಪಿಗಳನ್ನು ಯಳ್ಳೂರ ನೇತೃತ್ವದ ತಂಡ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದೆ. ಅಲ್ಲದೇ ಚುಡಾಯಿಸಲು ಆರೋಪಿಗಳೊಂದಿಗೆ ಸಹಕರಿಸಿದ ಸಾಗರ್ ಸಾತಪುತೆ, ಶ್ರೀವತ್ಸ ಬೆಂಡಿಗೇರಿ, ಸಚಿನ್ ನರೇಂದ್ರ (ಮೂವರು ನವ ಅಯೋಧ್ಯ ನಗರ ನಿವಾಸಿಗಳು) ಅವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಧಿತರಿಂದ ೦೬ ಮೊಬೈಲ್ ಫೋನ್‌ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಪಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಮಾಧ್ಯಮದವರಿಗೆ ತಿಳಿಸಿದರು.
ಆರೋಪಿಗಳ ಪೈಕಿ ಇಬ್ಬರು ಪುಂಡರ ವಿರುದ್ಧ ಹಳೆ ಪ್ರಕರಣಗಳಿವೆ
ಶುಭಂ ತಡಸ ವಿರುದ್ಧ ಕಸಬಾಪೇಟೆ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿದ್ದು, ಸಾಗರ್ ಸಾತಪುತೆ ವಿರುದ್ಧ ಹಳೇಹುಬ್ಬಳ್ಳಿ ಠಾಣೆಯಲ್ಲಿ ಈ ಹಿಂದೆ ೨ ಪ್ರಕರಣಗಳು ದಾಖಲಾಗಿದ್ದು,ಸಚಿನ್ ನರೇಂದ್ರ ಮೇಲೂ ಹಳೇಹುಬ್ಬಳ್ಳಿ ಠಾಣೆಯಲ್ಲಿ ೧ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪತ್ತೆ ಮಾಡುವ ತಂಡದಲ್ಲಿ ಪಿಎಸ್‌ಐ ರುದ್ರಪ್ಪ ಗುಡುದರಿ, ಎಎಸ್‌ಐ ಪಿ.ಬಿ ಕಾಳೆ, ಸಿಬ್ಬಂದಿ ಜನರಾದ ಫಕ್ಕೀರೇಶ ಗೊಬ್ಬರಗುಂಪಿ, ಅಭಯ್ ಕನ್ನಳ್ಳಿ, ನಾಗರಾಜ್ ಕೆಂಚಣ್ಣವರ್, ಕೃಷ್ಣ ಮೋಟೆಬೆನ್ನೂರ್, ಸಂತೋಷ್ ವಲ್ಯಾಪುರ್, ರಮೇಶ್ ಹಲ್ಲೆ, ಕಲ್ಲನಗೌಡ ಗುರನಗೌಡ, ವಿಟ್ಟಲ್ ಹೊಸಳ್ಳಿ, ಜಗದೀಶ್ ಗೌಂಡಿ ಇದ್ದು ಕಾರ್ಯವನ್ನು ಆಯುಕ್ತರುಶ್ಲಾಘಿಸಿದ್ದಾರೆ.
ಬೆಳಗಾವಿಯಲ್ಲಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪ
ಬೆಳಗಾವಿ ನಗರದ ವಡ್ಡರವಾಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಸಾರ್ವಜನಿಕವಾಗಿ ಅರೆಬೆತ್ತಲೆಗೊಳಿಸಿ, ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪಕ್ಕದ ಮನೆಯ ಇಂದಿರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಠ ಅಷ್ಟೇಕರ್ ಎಂಬುವವರು ನನ್ನ ತಾಯಿ ಮತ್ತು ನನ್ನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೆ, ಶಾಸಕ ಆಸೀಫ್ ಸೇಠ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, “ಘಟನೆ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಬೇರೆ ವಿಷಯಕ್ಕೆ ದೂರುದಾರರು ಮತ್ತು ನೆರೆ ಮನೆಯವರ ಮಧ್ಯ ಜಗಳವಾಗಿದೆ. ಪ್ರಕರಣದ ಸಂಬಂಧ ವರದಿ ನೀಡುವಂತೆ ಡಿಸಿಪಿ ಅವರಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದ್ದಾರೆ.