ಹರಿಯಾಣದಲ್ಲಿ ನಾವೇ ಗೆಲ್ಲಬೇಕಾಗಿತ್ತು, ಆದರೆ..; ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
DCM DK Shivakumar: ಹರಿಯಾಣ ಚುನಾವಣೆ ನಮಗೆಲ್ಲ ಪಾಠ. ಅಲ್ಲಿಯ ಮತದಾರರು ಕೈ ಹಿಡಿಯುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಕೈ ಹಿಡಿದಿಲ್ಲ. ನಮ್ಮ ವಿರುದ್ಧವಾಗಿ ಮತಗಳು ಬಂದಿವೆ ಎಂದು ಹರಿಯಾಣದಲ್ಲಿ ಬಿಜೆಪಿ ಗೆಲುವಿನ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರ ಚುನಾವಣೆ ಮೇಲೆ ನಮಗೆ ವಿಶ್ವಾಸವಿತ್ತು ಹಾಗೂ ಹರಿಯಾಣದಲ್ಲಿ ನಾವೇ ಗೆಲ್ಲಬೇಕಾಗಿತ್ತು. ಆದರೆ, ಹರ್ಯಾಣ ಚುನಾವಣೆ ನಮಗೆಲ್ಲ ಪಾಠವಾಗಿದೆ. ಮತದಾರರ ತೀರ್ಪು ಅಂತಿಮ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ (ಅಕ್ಟೋಬರ್ 8) ನಗರದ ವಿಮಾನ ನಿಲ್ದಾಣದಲ್ಲಿ ಜಮ್ಮು- ಕಾಶ್ಮೀರ ಹಾಗೂ ಹರಿಯಾಣ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹರಿಯಾಣ ಚುನಾವಣೆ ನಮಗೆಲ್ಲ ಪಾಠ. ಅಲ್ಲಿಯ ಮತದಾರರು ಕೈ ಹಿಡಿಯುತ್ತಾರೆ ಎಂದು ಭಾವಿಸಿದ್ದೆವು. ಆದರೆ ಕೈ ಹಿಡಿದಿಲ್ಲ. ನಮ್ಮ ವಿರುದ್ಧವಾಗಿ ಮತಗಳು ಬಂದಿವೆ ಎಂದರು.
ಬಹು ವರ್ಷಗಳ ನಂತರ ಚುನಾವಣೆ ನಡೆದಿದೆ, ಅಲ್ಲಿಯ ಪ್ರಜೆಗಳು ಪ್ರಜಾಪ್ರಭುತ್ವ ಉಳಿಸಿದ್ದಾರೆ. ಹರಿಯಾಣ ಫಲಿತಾಂಶ ಕುರಿತಂತೆ ನಾಳೆ ನಾಯಕರು ಸಭೆ ಮಾಡುತ್ತಾರೆ ಎಂದ ಅವರು, ನಾನು ಯಾವತ್ತು ಎಕ್ಸಿಟ್ ಫೋಲ್ ನಂಬಲ್ಲ, ನಮ್ಮ ರಾಜ್ಯದಲ್ಲಿ ಎಕ್ಸೀಟ್ ಫೋಲ್ ಹೇಳಿದ್ದೇ ಒಂದು, ಫಲಿತಾಂಶ ಬಂದಿದ್ದೇ ಬೇರೆ ಎಂದರು.
3 ಕ್ಷೇತ್ರಗಳಿಗೆ ಶೀಘ್ರವೇ ಟಿಕೆಟ್ ಫೈನಲ್
ರಾಜ್ಯದಲ್ಲಿ ಉಪಚುನಾವಣೆ ಕುರಿತು ಉತ್ತರಿಸಿದ ಅವರು, ರಾಜ್ಯದಲ್ಲಿ 3 ಉಪಚುನಾವಣೆ ಕ್ಷೇತ್ರಗಳಿಗೆ ಶೀಘ್ರದಲ್ಲೇ ಟಿಕೆಟ್ ಫೈನಲ್ ಮಾಡುತ್ತೇವೆ ಎಂದ ಅವರು ಇದೇ ವೇಳೆ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಸಿಎಂ ಸ್ಥಾನಕ್ಕೆ ಯಾರೂ ಪೈಪೋಟಿ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯಕ್ಕೆ ನಮ್ಮ ಮುಖ್ಯಮಂತ್ರಿಗಳು ಸಿದ್ದರಾಮಯ್ಯ. ಇಲ್ಲಿ ಸಿಎಂ ಸ್ಥಾನಕ್ಕೆ ನಾ ಎಲ್ಲೂ ಲಾಬಿ ಮಾಡಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ ಅವರ ಕೈ ಕೆಳಗೆ ಕೆಲಸಾ ಮಾಡುತ್ತೇವೆ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ, ಇನ್ನೂ ನನಗೆ ಅವಕಾಶ ಪ್ರಶ್ನೆಯೇ ಇಲ್ಲ ಎಂದು ಡಿಕೆ ಶಿವಕುಮಾರ್ ನುಡಿದರು.
ಬಿಜೆಪಿಗೆ ಹ್ಯಾಟ್ರಿಕ್ ಗೆಲುವು
ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ಗಳು ಸೂಚಿಸಿದ್ದವು. ಆದರೀಗ ಕಾಂಗ್ರೆಸ್ ಲೆಕ್ಕಾಚಾರಗಳು ತಲೆಕೆಳಗಾಗಿವೆ. 89 ಸೀಟ್ಗಳಲ್ಲಿ ಬಿಜೆಪಿ 48 ಗೆಲುವು ಸಾಧಿಸಿದೆ. ಕಾಂಗ್ರೆಸ್ 36 ಕ್ಷೇತ್ರಗಳಲ್ಲಿ ಜಯಿಸಿದೆ. ಅಲ್ಲದೆ, ಇನ್ನೂ ಒಂದು ಕ್ಷೇತ್ರದಲ್ಲಿ ಲೀಡ್ ಪಡೆದಿದೆ. ಇಂಡಿಯನ್ ನ್ಯಾಷನಲ್ ಲೋಕದಳ 2, ಇತರೆ 3 ಕ್ಷೇತ್ರ ಗೆದ್ದಿವೆ.