ದುಡ್ಡು ಕೊಡದೆ ಸತಾಯಿಸ್ತಿದ್ದ ಬೆಂಗಳೂರಿನ ದಿಶಾ ಎಂಟರ್ಪ್ರೈಸರ್ಸ್ಗೆ ಬಡ್ಡಿ ಸಮೇತ ದಂಡ; ಧಾರವಾಡ ಗ್ರಾಹಕ ನ್ಯಾಯಾಲಯ ಆದೇಶ
Dharwar District Consumer Court: ಸರುಕು ಪಡೆದರೂ ಮೂರು ವರ್ಷಗಳಿಂದ ಹಣವನ್ನು ನೀಡದೆ ಹುಬ್ಬಳಿಯ ಶಿವಸಾಗರ ಟ್ರೇಡರ್ಸ್ಗೆ ಹಣ ನೀಡದೆ ಸತಾಯಿಸುತ್ತಿದ್ದ ಬೆಂಗಳೂರಿನ ಎಂಟರ್ ಪ್ರೈಸರ್ಸ್ ಮಾಲೀಕರಿಗೆ ಧಾರವಾಡ ಜಿಲ್ಲಾ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಧಾರವಾಡ: ಹುಬ್ಬಳ್ಳಿಯ ಶ್ರೇಯಾ ನಗರ ವಾಸಿ ಹಾಗೂ ಶಿವಸಾಗರ ಟ್ರೇಡರ್ಸ್ನ ಮಾಲೀಕೆ ನಿವೇದಿತಾ ಆಡೂರ ಅವರು 5,33,754 ರೂಪಾಯಿ ಮೌಲ್ಯದ ಅಗರ ಬತ್ತಿ ಪೂರೈಸಿದರೂ ಹಣವನ್ನು ನೀಡದೆ ಸತಾಯಿಸುತ್ತಿದ್ದ ಬೆಂಗಳೂರಿನ ಬೆಂಗಳೂರಿನ ದಿಶಾ ಎಂಟರ್ ಪ್ರೈಸರ್ಸ್ ಮಾಲೀಕರಿಗೆ ಜಿಲ್ಲಾ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಮೂರು ವರ್ಷದ ಬಡ್ಡಿ ಸಮೇತ ನೀಡುವಂತೆ ಆದೇಶ ಹೊರಡಿಸಿದೆ. 2021ರಲ್ಲಿ ದಿಶಾ ಎಂಟರ್ ಪ್ರೈಜಸ್ ಮಾಲೀಕ ಅಗರಬತ್ತಿ ಖರೀದಿಸಿದ್ದರು.
ಹುಬ್ಬಳ್ಳಿಯಲ್ಲಿ ಅಗರಬತ್ತಿ ತಯಾರಿಸುವ ಶಿವಸಾಗರ ಟ್ರೇಡರ್ಸ್ ಮಾಲೀಕೆ ನಿವೇದಿತಾ ಅವರನ್ನು ದಿಶಾ ಎಂಟರ್ ಪ್ರೈಸರ್ಸ್ ಮಾಲೀಕರು 2021ರಲ್ಲಿ ಸಂಪರ್ಕಿಸಿದ್ದರು. ತಮಗೆ 5,33,754 ರೂಪಾಯಿ ಮೌಲ್ಯದ ಅಗರಬತ್ತಿ ಪೂರೈಸುವಂತೆ ಕೋರಿದ್ದರು. ಅದರಂತೆ, ನಿವೇದಿತಾ ಅವರು ಕೊರಿಯರ್ ಮೂಲಕ ಬೆಂಗಳೂರಿಗೆ ರವಾನಿಸಿದ್ದರು. ಅಲ್ಲದೆ, 2021ರ ಜುಲೈ 22ರಂದು ಸರುಕು ತಲುಪಿತ್ತು. ಆದರೆ ದಿಶಾ ಎಂಟರ್ ಪ್ರೈಸರ್ಸ್ ಮಾಲೀಕ ಹಣ ಪಾವತಿಸದೆ ಸತಾಯಿಸಿದ್ದರು. ಎಷ್ಟೇ ಮನವಿ ಮಾಡಿದರೂ ಉತ್ತರಿಸಿರಲಿಲ್ಲ.
ಹೀಗಾಗಿ ನಿವೇದಿತಾ ಅವರು ಗ್ರಾಹಕರ ಸಂರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆಯ ಕೊರತೆ ಆಗಿದೆ. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಮ್ಮ ಹಣದ ಜೊತೆಗೆ ಸೂಕ್ತ ಪರಿಹಾರ ಕೊಡಿಸಿ ಎಂದು ದಿಶಾ ಎಂಟರ್ ಪ್ರೈಸರ್ಸ್ ವಿರುದ್ಧ 2024ರ ಫೆಬ್ರವರಿ 22ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ಆಯೋಗದ ಅಧ್ಯಕ್ಷ ಈಶಪ್ಪ ಅವರು ಈ ದೂರಿನ ವಿಚಾರಣೆ ನಡೆಸಿದರು. ಅಧ್ಯಕ್ಷರ ಜೊತೆಗೆ ಸದಸ್ಯರಾದ ಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು.ಸಿ ಹಿರೇಮಠ ಅವರು ಇದ್ದರು.
ತೀರ್ಪಿನಲ್ಲಿ ಏನೇನಿದೆ?
ಅಗರುಬತ್ತಿಗಳನ್ನು ಕೋರಿಕೆಯಂತೆ ನಿಗದಿತ ಸಮಯದಲ್ಲಿ ಕೊರಿಯರ್ ಮೂಲಕ ರವಾನಿಸಿದ್ದರೂ ದಿಶಾ ಎಂಟರ್ ಪ್ರೈಸರ್ಸ್ ಮಾಲೀಕರು ಹಣ ಪಾವತಿಸದೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ತಿಳಿಸಿದ ಆಯೋಗ, ದಿಶಾ ಎಂಟರ್ ಪ್ರೈಜಸ್ ಸೇವಾ ನ್ಯೂನ್ಯತೆ ಎಸಗಿದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಅಲ್ಲದೆ, ಪರಿಹಾರ ಮತ್ತು ಇಷ್ಟು ದಿನಗಳ ಬಡ್ಡಿಯನ್ನೂ ಪಾವತಿಸುವಂತೆ ಆದೇಶ ನೀಡಿದೆ.
2021ರ ಜುಲೈ 22 ರಿಂದ ಪೂರ್ತಿ ಹಣ ಸಂದಾಯ ಆಗುವವರೆಗೂ ಶೇ 8 ರಷ್ಟು ಬಡ್ಡಿ ಲೆಕ್ಕಾ ಹಾಕಿ ದಿಶಾ ಎಂಟರ್ ಪ್ರೈಸರ್ಸ್ ಮಾಲೀಕರು, ನಿವೇದಿತಾ ಅವರಿಗೆ ಪಾವತಿಸಬೇಕು ಎಂದು ಆಯೋಗ ಆದೇಶಿಸಿದೆ. ಇದರ ಜೊತೆಗೆ ನಿವೇದಿತಾಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ 50,000 ರೂ, ಪರಿಹಾರ ಮತ್ತು 10,000 ರೂಪಾಯಿ ಪ್ರಕರಣದ ಖರ್ಚು ವೆಚ್ಚವನ್ನು ಒಂದು ತಿಂಗಳೊಗೆ ಪಾವತಿಸುವಂತೆ ಎಂಟರ್ ಪ್ರೈಸರ್ಸ್ಗೆ ಆಯೋಗ ಸೂಚಿಸಿದೆ.