Dharwad Crime News: ನಿಗದಿತ ಮಿತಿಗಿಂತ ಹೆಚ್ಚು ಪಟಾಕಿ ದಾಸ್ತಾನು ಪತ್ತೆ; ದೂರು ದಾಖಲು
ಧಾರವಾಡದಲ್ಲಿ ಪಟಾಕಿ ಸಂಗ್ರಹ-ಮಾರಾಟ ಉಗ್ರಾಣಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ, ಅಗತ್ಯ ಸುರಕ್ಷಿತ ಕ್ರಮ-ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ.
ಧಾರವಾಡ: ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತ ಹಾಗೂ ಹಾವೇರಿ ಸಮೀಪ ಸಂಭವಿಸಿದ ಅಗ್ನಿ ದುರುಂತದಿಂದ ಜೀವಹಾನಿ ಆಗಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲೂ ಪಟಾಕಿ ಗುದಾಮುಗಳಿಗೆ ಭೇಟಿ ದಾಸ್ತುನು ಹಾಗೂ ಸುರಕ್ಷತೆಗೆ ತೆಗೆದುಕೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಅಕ್ಕಿಓಣಿಯ ವೆಂಕಟೇಶ್ವರ ಟ್ರೇಡರ್ಸ್ ಮಳಿಗೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪಟಾಕಿ ದಾಸ್ತಾನು ಪತ್ತೆಯಾಗಿದ್ದು, ಟ್ರೇಡರ್ಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಾಲೂಕು ಅಧಿಕಾರಿಗಳು, ನವಲಗುಂದ ಠಾಣೆ ಪೊಲೀಸರು ಮಳಿಗೆ ಪರಿಶೀಲಿಸಿ, ಹೆಚ್ಚುವರಿಯಿದ್ದ ಮೂರು ಕ್ವಿಂಟಲ್ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ. ಮಳಿಗೆಯಲ್ಲಿ ಐದು ಕ್ವಿಂಟಲ್ಪಟಾಕಿ ದಾಸ್ತಾನಿಗೆ ಲೈಸೆನ್ಸ್ಪಡೆಯಲಾಗಿದೆ. ಎಂಟು ಕ್ವಿಂಟಲ್ ಸಂಗ್ರಹಿಸಿದ್ದು ಕಂಡುಬಂದಿದೆ. ಟ್ರೇಡರ್ಸ್ ಮಾಲೀಕರಾದ ಗುರುನಾಥ ವೆಂಕಟೇಶ ಹರಿಹರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉಗ್ರಾಣಗಳಿಗೆ ದಿಢೀರ್ ಭೇಟಿ
ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರ ನಿರ್ದೇಶನದ ಮೇರೆಗೆ ಧಾರವಾಡ ತಹಶೀಲ್ದಾರ್ ದೊಡ್ಡಪ್ಪ ಹೂಗಾರ ಹಾಗೂ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ತಂಡವು ಧಾರವಾಡ ನಗರದ ಲೈಸನ್ಸ್ ದಾರರ ಪಟಾಕಿ ಸಂಗ್ರಹ ಮತ್ತು ಮಾರಾಟದಾರರ ಉಗ್ರಾಣಗಳಿಗೆ ದಿಢೀರ್ ಭೇಟಿ ನೀಡಿ, ನಿಯಮಾನುಸಾರ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಪರೀಶಿಲನೆ
ಬೆಂಗಳೂರಿನ ಪಟಾಕಿ ಉಗ್ರಾಣದ ಅವಘಡದ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಎಲ್ಲ ಪಟಾಕಿ ಸಂಗ್ರಹ ಹಾಗೂ ಮಾರಾಟಗಾರರ ಉಗ್ರಾಣ, ಅಂಗಡಿಗಳನ್ನು ಪರಿಶೀಲಿಸಿ, ಪರವಾಣಿಗೆಯಲ್ಲಿ ತಿಳಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸಿರುವ ಹಾಗೂ ನಿಯಮಾನುಸಾರ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿರುವ ಕುರಿತು ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳಲು ಆದೇಶಿದೆ.
ತಪಾಸಣೆ
ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳ ತಂಡವು ಧಾರವಾಡ ನಗರದ ಸವದತ್ತಿ ರಸ್ತೆಯ ಮೇದಾರ ಓಣಿಯಲ್ಲಿನ ಬಿ.ಜಿ.ಅತ್ತಾರ ಆ್ಯಂಡ್ ಬ್ರದರ್ಸ್ ಪಟಾಕಿ ಸಂಗ್ರಹ, ಮಾರಾಟ ಉಗ್ರಾಣ, ಸಪ್ತಾಪುರ ರಸ್ತೆ ಶ್ರೀನಗರ ಕ್ರಾಸ್ ದಲ್ಲಿನ ವಿ.ಎಚ್. ಕಂದಕೂರ ಉಗ್ರಾಣ, ರಾಮಾಶ್ರಯ ಬುಕ್ ಡಿಪೋ ರಸ್ತೆಯ ಎಸ್.ಕೆ. ಆಕಳವಾಡಿ ಉಗ್ರಾಣ, ಮದಿಹಾಳ ರಸ್ತೆಯ ಎಸ್.ಕೆ.ಜೋಶಿ ಉಗ್ರಾಣ, ಕೆಲಗೇರಿ ರಸ್ತೆಯ ಎಸ್.ಜಿ.ಬೆಣ್ಣಿ ಉಗ್ರಾಣಗಳಿಗೆ ದಿಢೀರ್ ಭೇಟಿ ನೀಡಿ, ಜಂಟಿ ತಪಾಸಣೆ ಕೈಗೊಂಡಿತು.
ಧಾರವಾಡ ನಗರದ ಈ ಲೈಸೆನ್ಸ್ ದಾರರು ವಿವಿಧ ರೀತಿಯ ಪಟಾಕಿ ಮಾರಾಟ ಮತ್ತು ಸಂಗ್ರಹದ ಪರವಾನಗಿ ಪಡೆದಿದ್ದಾರೆ. ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳ ಷರತ್ತುಗಳ ಅನ್ವಯ ಪಟಾಕಿ ದಾಸ್ತಾನು ಉಗ್ರಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ವಿಜಯ ದೊಡವಾಡ ಹಾಗೂ ಡಿ.ಎಸ್.ಆಕಳವಾಡಿ ಎಂಬುವವರು ಲೈಸೆನ್ಸ್ ಹೊಂದಿದ್ದು, ಆದರೆ ನವೀಕರಣ ಮಾಡಿಕೊಂಡಿಲ್ಲ ಮತ್ತು ಪಟಾಕಿ ದಾಸ್ತಾನು ಸಹ ಹೊಂದಿರುವುದಿಲ್ಲ ಎಂದು ತಪಾಸಣೆಯಲ್ಲಿ ತಿಳಿದುಬಂದಿದೆ ಎಂದು ತಹಶೀಲ್ದಾರ್ ದೊಡ್ಡಪ್ಪ ಹೂಗಾರ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಲು ಸೂಚನೆ
ಅಧಿಕಾರಿಗಳ ತಂಡವು ಪ್ರತಿ ಉಗ್ರಾಣವನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ, ಪರವಾನಗಿದಾರರಿಗೆ ಯಾವುದೇ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಿ, ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಎಸಿಪಿ ಪ್ರಶಾಂತ ಸಿದ್ದನಗೌಡರ ತಿಳಿಸಿದ್ದಾರೆ.
ಜಂಟಿ ತಪಾಸಣಾ ತಂಡದಲ್ಲಿ ಇನ್ಸ್ಪೆಕ್ಟರ್ ಗಳಾದ. ದಯಾನಂದ ಶೇಗುಣಸಿ, ನಾಗಯ್ಯ ಕಾಡದೇವರಮಠ, ಸಂಗಮೇಶ ದಿಡಗಿನಾಳ, ಅಗ್ನಿಶಾಮಕ ಅಧಿಕಾರಿ ಅವಿನಾಶ ಹಾಗೂ ಕಂದಾಯ ನಿರೀಕ್ಷಕ ಗುರು ಸುಣಗಾರ, ಗ್ರಾಮ ಆಡಳಿತ ಅಧಿಕಾರಿಗಳಾದ ಕರಿಯಪ್ಪ ಗುಡ್ಡದ , ವಿಠ್ಠಲ ಕೀಲಿ ಹಾಗೂ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿಗಳು ಇದ್ದರು.
(ವರದಿ: ಪ್ರಹ್ಲಾದ್‌ಗೌಡ)