ಕೇಂದ್ರೀಯ ವಿದ್ಯಾಲಯ 2024ರ ಅಡ್ಮಿಷನ್ ಇಂದಿನಿಂದ ಶುರು; ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ, ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ
ಕೇಂದ್ರೀಯ ವಿದ್ಯಾಲಯದಲ್ಲಿ 1ನೇ ತರಗತಿಗೆ 2024ರ ಅಡ್ಮಿಷನ್ ಇಂದಿನಿಂದ ಶುರುವಾಗಿದೆ, ನೇರ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇದ್ದು, ಪ್ರವೇಶಕ್ಕೆ ಅರ್ಹತೆ ಮತ್ತು ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.
ನವದೆಹಲಿ/ ಬೆಂಗಳೂರು: ಕೇಂದ್ರೀಯ ವಿದ್ಯಾಲಯದಲ್ಲಿ 2024- 25ರ ಪ್ರವೇಶ ಪ್ರಕ್ರಿಯೆ ಇಂದು ಶುರುವಾಗಿದ್ದು, ಒಂದರಿಂದ ಹತ್ತನೇ ತರಗತಿ ತನಕದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದೆ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನ್ (ಕೆವಿಎಸ್) ತಿಳಿಸಿದೆ. ಹೊಸ ಶೈಕ್ಷಣಿಕ ವರ್ಷಕ್ಕೆ ಅಂದರೆ 2024-25ನೇ ಸಾಲಿಗೆ ಒಂದನೇ ತರಗತಿಯಿಂದ 10ನೇ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ವೇಳಾಪಟ್ಟಿಯನ್ನೂ ಕೆವಿಎಸ್ ಬಿಡುಗಡೆ ಮಾಡಿದೆ.
ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿ ತನಕದ ಪ್ರವೇಶಕ್ಕೆ ಆಫ್‌ಲೈನ್ ಮೂಲಕ ಅಂದರೆ ನೇರವಾಗಿ ಅರ್ಜಿ ಸಲ್ಲಿಸುವಿಕೆ ಕೂಡ ಇಂದು (ಏಪ್ರಿಲ್ 1) ಬೆಳಗ್ಗೆ 10 ಗಂಟೆಯಿಂದ ಶುರುವಾಗುತ್ತಿದೆ. ಆಯಾ ಶಾಲೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಏಪ್ರಿಲ್ 10ರಂದು ಸಂಜೆ 5 ಗಂಟೆ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅದೇ ರೀತಿ, ಏಪ್ರಿಲ್ 1 ರಿಂದ ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಏಪ್ರಿಲ್ 15ರಂದು ಸಂಜೆ 5 ಗಂಟೆ ತನಕ ಕಾಲಾವಕಾಶವಿದೆ. ಹನ್ನೊಂದನೆ ತರಗತಿಯ ಅಡ್ಮಿಷನ್ ಇನ್ನು 10 ದಿನಗಳ ಒಳಗೆ ಘೋಷಣೆಯಾಗಲಿದೆ. ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗುತ್ತಲೇ ಹನ್ನೊಂದನೇ ತರಗತಿಯ ಪ್ರವೇಶಾತಿ ಶುರುವಾಗಲಿದೆ.
ಕೆವಿಎಸ್‌ನ 1254 ಕೇಂದ್ರೀಯ ವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆ ನಡೆಸುವುದಕ್ಕಾಗಿ ಹೊಸ ಅಡ್ಮಿಷನ್ ಪೋರ್ಟಲ್ ಅನ್ನು ಪರಿಚಯಿಸಲಾಗಿದೆ. ಈಗ 1ನೇ ತರಗತಿಯಿಂದ 10ನೇ ತರಗತಿ ತನಕದ ಪ್ರವೇಶಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.
ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ; ಗಮನಿಸಬೇಕಾದ ಅಂಶಗಳು
ಕೇಂದ್ರೀಯ ವಿದ್ಯಾಲಯಕ್ಕೆ ಮಕ್ಕಳನ್ನು ಸೇರಿಸಬೇಕು ಎಂದು ಬಯಸುವವರು ಅನೇಕರು. ಕೇಂದ್ರೀಯ ವಿದ್ಯಾಲಯಗಳನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯ ಸಂಘಟನ್ ನಿರ್ವಹಿಸುತ್ತಿದೆ. ಈ ಶಾಲೆಗಳು ವಿಶೇಷವಾಗಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿಸಿರುವಂಥವು. ಇಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸುತ್ತಾರೆ. ಇಲ್ಲಿ ಸಾರ್ವಜನಿಕರ ಮಕ್ಕಳಿಗೂ ಪ್ರವೇಶಾವಕಾಶ ಇದೆ. ಆದರೆ ಈ ಸೀಟುಗಳು ಬಹಳ ಕಡಿಮೆ.
1ನೇ ತರಗತಿಗೆ ಪ್ರವೇಶ ಪಡೆಯಲು, 2024ರ ಮಾರ್ಚ್ 31ಕ್ಕೆ ಮಗುವಿಗೆ ಕನಿಷ್ಠ ಆರು ವರ್ಷ ವಯಸ್ಸು ಆಗಿರಬೇಕು. 2018ರ ಏಪ್ರಿಲ್ 1ರ ನಂತರ ಹುಟ್ಟಿರಬೇಕು ಎಂಬ ಮಾನದಂಡವನ್ನು ಕೆವಿಎಸ್ ಪಾಲಿಸುತ್ತಿದೆ.
ಏಪ್ರಿಲ್ 15ಕ್ಕೆ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸುವ ಗಡುವು ಮುಗಿದ ಬಳಿಕ ಏಪ್ರಿಲ್ 19, 29 ಮತ್ತು ಮೇ 8ರಂದು 3 ಸಲ ಪ್ರಾವಿಷನ್ ವೇಟಿಂಗ್ ಲಿಸ್ಟ್ ಅನ್ನು ಪ್ರಕಟಿಸುತ್ತದೆ. ಮೊದಲ ವೇಟಿಂಗ್ ಲಿಸ್ಟ್‌ನಲ್ಲಿ ಪ್ರಕಟವಾದ ಮಕ್ಕಳಿಗೆ ಅಡ್ಮಿಷನ್ ಆಗಿ ಸೀಟುಗಳು ಬಾಕಿ ಉಳಿದರಷ್ಟೆ ಉಳಿದೆರಡು ಲಿಸ್ಟ್‌ಗಳು ಪ್ರಕಟವಾಗುತ್ತವೆ. ಆರ್‌ಟಿಇ ಕೋಟಾದ ಮಕ್ಕಳಿಗೂ ಇಲ್ಲಿ ಪ್ರವೇಶ ಸಿಗುತ್ತದೆ.
ಬಾಲವಾಟಿಕಾ ತರಗತಿಗಳಿಗೆ ಪ್ರವೇಶ ನೋಂದಣಿ
ಕೇಂದ್ರೀಯ ವಿದ್ಯಾಲಯದ ಬಾಲವಾಟಿಕಾ ಸ್ತರದ ತರಗತಿಗಳಿಗೆ ಅಂದರೆ 1, 2 ಮತ್ತಿ 3ನೇ ಸ್ತರದ ಬಾಲವಾಟಿಕಾ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ನೋಂದಣಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದು (ಏಪ್ರಿಲ್ 1) ಶುರುವಾಗುತ್ತಿದೆ. ನೇರವಾಗಿ ಅರ್ಜಿ ಸಲ್ಲಿಸಲು ಕೊನೇ ದಿನ ಏಪ್ರಿಲ್ 10. ಆನ್‌ಲೈನ್‌ನಲ್ಲಿ ಏಪ್ರಿಲ್ 15.
ಇಲ್ಲಿ ವಿದ್ಯಾರ್ಥಿಗಳ ವಯಸ್ಸು 2024ರ ಮಾರ್ಚ್ 31ರ ಪ್ರಕಾರ 3 ವರ್ಷದಿಂದ 6 ವರ್ಷದೊಳಗೆ ಇರಬೇಕು. ಕೇಂದ್ರೀಯ ವಿದ್ಯಾಲಯದ ಪ್ರವೇಶ ಪ್ರಕ್ರಿಯೆಯಲ್ಲಿ ಸೀಟುಗಳಲ್ಲಿ ಮೀಸಲಾತಿ ಇದೆ. ಇದರಂತೆ, ಶೇಕಡ 15 ಎಸ್‌ಸಿ, ಶೇಕಡ 7.5 ಎಸ್‌ಟಿ, ಒಬಿಸಿ ಕೆಟಗರಿಗೆ ಶೇಕಡ 27 ಮೀಸಲಿಡಲಾಗಿದೆ.
ಪ್ರಮುಖ ದಿನಾಂಕಗಳು
1) 1ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಶುರು ಏಪ್ರಿಲ್ 1
2) 1ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಕೊನೇ ದಿನ ಏಪ್ರಿಲ್ 10 (ನೇರವಾಗಿ ಶಾಲೆಯಲ್ಲಿ) ಮತ್ತು ಏಪ್ರಿಲ್ 15 (ಆನ್‌ಲೈನ್ ಮೂಲಕ)
3) ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಪಡೆದವರ ಮೊದಲ ಪಟ್ಟಿ ಬಿಡುಗಡೆ - ಏಪ್ರಿಲ್ 19
4) ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಪಡೆದವ ಪೂರಕ ಪಟ್ಟಿಗಳ ಬಿಡುಗಡೆ ದಿನಾಂಕ ಏಪ್ರಿಲ್ 29 ಮತ್ತು ಮೇ 8
5) ಇಷ್ಟಾದ ಬಳಿಕವೂ ಕೇಂದ್ರೀಯ ವಿದ್ಯಾಲಯಗಳ ಸೀಟುಗಳು ಭರ್ತಿಯಾಗದೇ ಇದ್ದರೆ ಮೇ 8ರಂದು ಮತ್ತೊಂದು ಸುತ್ತಿನ ಅರ್ಜಿ ಆಹ್ವಾನಿಸಲಾಗುತ್ತದೆ. ಮೇ 15ರ ತನಕ ಕಾಲಾವಕಾಶ ನೀಡಿ ಅಡ್ಮಿಷನ್ ಪೂರ್ಣಗೊಳಿಸಲಾಗುತ್ತದೆ. ಜೂನ್ 29ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣವಾಗಲಿದೆ.
ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಹೀಗೆ
ಕೇಂದ್ರೀಯ ವಿದ್ಯಾಲಯದ 1ನೇ ತರಗತಿಗೆ ಮಗುವನ್ನು ಸೇರಿಸಲು ಕೇಂದ್ರೀಯ ವಿದ್ಯಾಲಯ ಹೊಸದಾಗಿ ಪರಿಚಯಿಸಿದ ವೆಬ್‌ಸೈಟ್‌ಗೆ ಹೋಗಬೇಕು.
ಕೆವಿಎಸ್‌ನ ಅಧಿಕೃತ ವೆಬ್‌ಸೈಟ್‌ಗಳಿವು kvsangathan.nic.in ಮತ್ತು kvsonlineadmission.kvs.gov.in
ಕೆವಿಎಸ್‌ನ kvsonlineadmission.kvs.gov.in ವೆಬ್‌ಸೈಟ್‌ಗೆ ಹೋಗಿ, ಮಗುವಿನ ವಿವರ ಭರ್ತಿ ಮಾಡಿ ಶಾಲೆಯನ್ನು ಆಯ್ಕೆ ಮಾಡಿಕೊಂಡು, ನಿಖರ ಮಾಹಿತಿ ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮೊದಲೇ ಸಿದ್ಧಪಡಿಸಿಕೊಂಡು ಅಪ್ಲೋಡ್ ಮಾಡಿ ಸಬ್‌ಮಿಟ್ ಐಕಾನ್ ಕ್ಲಿಕ್ ಮಾಡಬೇಕು.
ಅಗತ್ಯ ದಾಖಲೆಗಳಿವು- ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಬೇಕಾದ ಅಗತ್ಯ ದಾಖಲೆಗಳಿವು - ಮಗುವಿನ ಜನನ ಪ್ರಮಾಣ ಪತ್ರ, ಎಸ್‌ಸಿ/ ಎಸ್‌ಟಿ/ ಒಬಿಸಿ ಪ್ರಮಾಣ ಪತ್ರ (ಅಗತ್ಯ ಇದ್ದರೆ), ರೆಸಿಡೆನ್ಶಿಯಲ್ ಸರ್ಟಿಫಿಕೇಟ್, ಮಗುವಿನ ತಂದೆ/ ತಾಯಿಯ ಸೇವಾ ಪ್ರಮಾಣ ಪತ್ರ , ಮಗುವಿನ ಎರಡು ಪಾರ್ಸ್‌ಪೋರ್ಟ್ ಅಳತೆಯ ಫೋಟೋಗಳು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.