KSRTC News: ಮಂಗಳೂರಿನಿಂದ ಕಾರ್ಕಳಕ್ಕೆ ಕೊನೆಗೂ ಶುರುವಾಯ್ತು ಕೆಎಸ್‌ಆರ್‌ಟಿಸಿ ಬಸ್ ಸಂಚಾರ, ಪ್ರಾಯೋಗಿಕ ಸೇವೆಗೆ ಸ್ಪಂದನೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಿಂದ ಉಡುಪಿ ಜಿಲ್ಲೆಯ ಕಾರ್ಕಳ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಗುರುವಾರ ಮೊದಲ ಸಂಚಾರ ಶುರುವಾಯಿತು.
ಉಡುಪಿ: ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಿ ಈಗಲೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಖಾಸಗಿ ಬಸ್ ಗಳೇ ಜನಪ್ರಿಯ. ದಶಕಗಳಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳನ್ನೇ ಜನ ನಿತ್ಯದ ಸಂಚಾರಕ್ಕೆ ಅವಲಂಬಿಸುತ್ತಾರೆ. ಕೆಲವೆಡೆ ಕೆಎಸ್‌ಆರ್‌ಟಿಸಿ ಬಸ್‌ಗಳಿದ್ದರೂ ಇನ್ನೂ ಕೆಲವು ಕಡೆಗೆ ಈಗಲೂ ಕೆಎಸ್‌ಆರ್‌ಟಿಸಿ ಬಸ್ ಕಡಿಮೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜತೆಗೆ ಮಲೆನಾಡು ಜಿಲ್ಲೆಗಳೊಂದಿಗೆ ನಂಟು ಇರುವ ಕಾರ್ಕಳಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಹೆಚ್ಚಿಲ್ಲ. ಅದರಲ್ಲೂ ಮಂಗಳೂರಿಂದ ಕಾರ್ಕಳ ನಡುವೆಯೂ ಸಾರಿಗೆ ಬಸ್‌ಗಳ ಸೇವೆ ಇರಲಿಲ್ಲ. ಸ್ಥಳೀಯರ ಒತ್ತಾಯದ ಮೇರೆಗೆ ಕಾರ್ಕಳ ಹಾಗೂ ಮಂಗಳೂರು ನಡುವೆ ಪ್ರಾಯೋಗಿಕವಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಗುರುವಾರದಿಂದ ಆರಂಭವಾಗಿದೆ.
ಹಲವು ದಿನಗಳ ಬೇಡಿಕೆ
ಕೆಲವು ದಿನಗಳಿಂದ ಕಾರ್ಕಳ ಹಾಗೂ ಮಂಗಳೂರು ನಡುವೆ ಕೆಎಸ್‌ಆರ್‌ಟಿಸಿ ಬಸ್ ಅನ್ನು ಆರಂಭಿಸುವ ಬೇಡಿಕೆ ಕೇಳಿ ಬಂದಿತ್ತು. ಆದರೆ ಈ ಮಾರ್ಗದಲ್ಲಿ ಬಸ್ ಓಡಿಸಲು ಕೆಎಸ್‌ಆರ್‌ಟಿಸಿಗೆ ಪರವಾನಿಗೆ ಇರಲಿಲ್ಲ. ಅಲ್ಲದೇ ಆದಾಯದ ಲೆಕ್ಕಾಚಾರದಿಂದಲೂ ಕೆಎಸ್‌ಆರ್‌ಟಿಸಿ ತೀರ್ಮಾನ ಕೈಗೊಂಡಿರಲಿಲ್ಲ.
ಅದರಲ್ಲೂ ಒಂದೂವರೆ ವರ್ಷದ ಹಿಂದೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ನಂತರ ಈ ಭಾಗದಲ್ಲಿ ಸಂಚಾರಕ್ಕೆ ಬೇಡಿಕೆ ಹೆಚ್ಚಾಗಿತ್ತು.
ಇದೇ ವಿಚಾರವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಎರಡೂ ಜಿಲ್ಲೆಗಳ ಆರ್‌ಟಿಗಳ, ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಚರ್ಚೆ ನಡೆಸಿ ಬೇಗನೇ ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಆರಂಭಿಸುವಂತೆ ಸೂಚನೆ ನೀಡಿದ್ದರು.
ಕಾರ್ಕಳ ಪ್ರಮುಖ ಊರು
ಕಾರ್ಕಳ ಪ್ರಮುಖ ಪ್ರವಾಸಿ ತಾಣವೂ ಹೌದು. ಅಲ್ಲದೇ ಉಡುಪಿ ಜಿಲ್ಲೆಯಲ್ಲಿ ಕಾರ್ಕಳವಿದ್ದರೂ ಈ ಭಾಗದ ಜನರಿಗೆ ಮಂಗಳೂರಿನೊಂದಿಗೆ ವಹಿವಾಟು ಹೆಚ್ಚಿದೆ. ಸರ್ಕಾರಿ ನೌಕರಿ ಮಾಡುವವರೂ ಸಾಕಷ್ಟು ಜನ ಮಂಗಳೂರಿನಿಂದ ಸಂಚರಿಸುವುದು ಇದೆ.
ಈ ಕಾರಣದಿಂದಲೇ ಬೇಡಿಕೆಗೆ ಅನುಗುಣವಾಗಿ ಬಸ್ ಆರಂಭಿಸಲು ಕೆಎಸ್‌ಆರ್‌ಟಿಸಿ ಸಮೀಕ್ಷೆ ನಡೆಸಿತ್ತು. ಪರವಾನಿಗೆ ಪಡೆಯಲು ಸಾರಿಗೆ ಸಂಸ್ಥೆಯು ಸಾರಿಗೆ ಇಲಾಖೆಗೆ ಮನವಿಯನ್ನೂ ಸಲ್ಲಿಸಿತ್ತು.
ಖಾಸಗಿ ಬಸ್ ಮಾಲೀಕರ ಆಕ್ಷೇಪ
ಆದರೆ ಮಂಗಳೂರು- ಕಾರ್ಕಳ ಮಾರ್ಗದಲ್ಲಿ ಪರವಾನಿಗೆ ನೀಡುವಂತೆ ಕಳೆದ ತಿಂಗಳು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರಸ್ತಾವ ಇರಿಸಿದ್ದಕ್ಕೆ ಖಾಸಗಿ ಬಸ್ ಮಾಲೀಕರ ಸಂಘದಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್ ಮಾಲೀಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಬಳಿ 15 ದಿನಗಳ ಗಡುವು ಕೇಳಿದ್ದ ಆಕ್ಷೇಪಣೆಯನ್ನೂ ಸಲ್ಲಿಸಿದ್ದರು. ಇದಕ್ಕೆ ಸಮರ್ಥ ವಾದ ಮಂಡಿಸಿದ್ದ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಪರವಾನಿಗೆ ನೀಡುವಂತೆ ಕೋರಿದ್ದರು.
ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ ಎನ್ನುವ ವಾದ ಮಂಡಿಸಿದ್ದರು. ಮಾರ್ಗ ಹಾಗೂ ನಿಯಮಾವಳಿಗಳನ್ನು ಪರಿಶೀಲಿಸಿ ನಾಲ್ಕು ತಿಂಗಳ ಅವಧಿಗೆ ತಾತ್ಕಾಲಿಕ ಪರವಾನಿಗೆಯನ್ನು ಸಾರಿಗೆ ಇಲಾಖೆ ನೀಡಿತ್ತು.
ಮೂರು ಟ್ರಿಪ್ ಶುರು
ಅನುಮತಿ ಆಧರಿಸಿ ಮೊದಲ ಹಂತದಲ್ಲಿ ನಿತ್ಯ ಮೂರು ಟ್ರಿಪ್‌ಗೆ ಅನುಮತಿ ನೀಡಲಾಗಿದೆ. ಈ ಬಸ್‌ಗಳು ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ತೆರಳಲಿದೆ. ಮಂಗಳೂರು ಮತ್ತು ಕಾರ್ಕಳದಿಂದ ತಲಾ ಎರಡು ಬಸ್‌ಗಳು ಸಂಚರಿಸಲಿದ್ದು, ಗುರುವಾರ ಸಂಚಾರ ಆರಂಭಿಸಿದವು. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಯೂ ದೊರೆತಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.