Kodagu Bundh: ವೀರ ಸೇನಾನಿಗಳಾದ ಕಾರಿಯಪ್ಪ, ತಿಮ್ಮಯ್ಯರಿಗೆ ಅವಮಾನ: ಕೊಡಗು ಅರ್ಧದಿನ ಬಂದ್‌ಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬೆಂಬಲ
ಕನ್ನಡ ಸುದ್ದಿ  /  ಕರ್ನಾಟಕ  /  Kodagu Bundh: ವೀರ ಸೇನಾನಿಗಳಾದ ಕಾರಿಯಪ್ಪ, ತಿಮ್ಮಯ್ಯರಿಗೆ ಅವಮಾನ: ಕೊಡಗು ಅರ್ಧದಿನ ಬಂದ್‌ಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬೆಂಬಲ

Kodagu Bundh: ವೀರ ಸೇನಾನಿಗಳಾದ ಕಾರಿಯಪ್ಪ, ತಿಮ್ಮಯ್ಯರಿಗೆ ಅವಮಾನ: ಕೊಡಗು ಅರ್ಧದಿನ ಬಂದ್‌ಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬೆಂಬಲ

ಕೊಡಗಿನ ವೀರ ಸೇನಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರ ಗಡಿಪಾರಿಗೆ ಆಗ್ರಹಿಸಿ ಅರ್ಧದಿನದ ಬಂದ್‌ಗೆ ಕೊಡಗು ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ.

ಕೊಡಗು ಬಂದ್‌ ಹಿನ್ನೆಲೆಯಲ್ಲಿ ಭಾರೀ ಪೊಲೀಸ್‌ ಭದ್ರತೆಯನ್ನು ಹಾಕಲಾಗಿದೆ.
ಕೊಡಗು ಬಂದ್‌ ಹಿನ್ನೆಲೆಯಲ್ಲಿ ಭಾರೀ ಪೊಲೀಸ್‌ ಭದ್ರತೆಯನ್ನು ಹಾಕಲಾಗಿದೆ.

ಮಡಿಕೇರಿ: ಕೊಡಗಿನ ವೀರಸೇನಾನಿಗಳಾದ ಫೀ.ಮಾ ಕೆ.ಎಂ.ಕಾರ್ಯಪ್ಪ ಹಾಗು ಜನರಲ್ ಕೆ.ಎಸ್.ತಿಮ್ಮಯ್ಯ ಸಹಿತ ಹಲವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ವಕೀಲ ವಿದ್ಯಾಧರ್‌ ಎಂಬುವವರ ಗಡಿಪಾರಿಗೆ ಆಗ್ರಹಿಸಿ ಕೊಡಗು ಜಿಲ್ಲಾದ್ಯಂತ ಗುರುವಾರ ಅರ್ಧ ದಿನದ ಬಂದ್‌ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಬಂದ್‌ ಆರಂಭವಾಗಿದ್ದರಿಂದ ಮಡಿಕೇರಿ ಸಹಿತ ಕೊಡಗಿನ ಬಹುತೇಕ ಪಟ್ಟಣಗಳಲ್ಲಿ ಬಿಕೋ ಎನ್ನುವ ವಾತಾವರಣವಿತ್ತು ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ ಸೇರಿದಂತೆ ಜಿಲ್ಲೆಯಲ್ಲಿ ಬಂದ್ ಗೆ ಉತ್ತಮ ಸ್ಪಂದನೆ ದೊರೆಯಿತು. ಪ್ರವಾಸಿ ಜಿಲ್ಲೆಯಲ್ಲಿ ಖಾಸಗಿ ವಾಹನ ಸಂಚಾರ ವಿರಳವಾಗಿತ್ತು. ಬಂದ್‌ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಬಹುತೇಕ ಎಲ್ಲಾ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದರಿಂದ ಬಂದ್‌ ಯಶಸ್ವಿಯೂ ಆಯಿತು.

ಹೇಳಿಕೆಗೆ ವ್ಯಾಪಕ ಖಂಡನೆ

ಭಾರತ ದೇಶ ಕಂಡ ಶ್ರೇಷ್ಠ ಸೇನಾನಿಗಳಾಗಿರುವ ಫೀ.ಮಾ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಗ್ಗೆ ಕೆಲ ದಿನಗಳ ಹಿಂದೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ವಿದ್ಯಾಧರ್‌ ವಿರುದ್ದ ಪ್ರತಿಭಟನೆಗಳು ನಡೆದಿದ್ದವು.

ಅವರ ವಿರುದ್ದ ಪ್ರಕರಣಗಳು ದಾಖಲಾಗಿದ್ದವು. ಇಂತಹವರ ಹೇಳಿಕೆಗಳನ್ನು ನಿಗ್ರಹಿಸಬೇಕು. ಗಡಿಪಾರು ಮಾಡಬೇಕು ಎನ್ನುವ ಬೇಡಿಕೆಯೊಂದಿಗೆ ಕೊಡಗು ಸರ್ವ ಜನಾಂಗಗಳ ಒಕ್ಕೂಟ ವತಿಯಿಂದ ಗುರುವಾರ ಅರ್ಧ ದಿನದ ಹಿಂದೆ ಬಂದ್‌ ತೀರ್ಮಾನ ಮಾಡಲಾಗಿತ್ತು.‌

ಶಾಲೆಗಳಿಗೂ ರಜೆ

ಮಾಜಿ ಸೇನಾನಿಗಳ ವಿರುದ್ದದ ಹೇಳಿಕೆಯನ್ನು ಯಾರೂ ಸಹಿಸಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರದ್ದೂ ಒಕ್ಕೊರಲ ಖಂಡನೆ ಇದೆ. ಆದರೆ ಹೋರಾಟದ ರೂಪು ರೇಷೆಗಳು ತಯಾರಾಗುವಾಗ ಪೂರ್ವಭಾವಿ ಚರ್ಚೆಗಳು ಅಷ್ಟೇ ಮುಖ್ಯ ಎಂದು ಶಾಲಾ ಆಡಳಿತ ಮಂಡಳಿಗಳು ಹೇಳಿದ್ದವು. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದರೆ ಹಲವಾರು ಸಂಘಟನೆಗಳು ಬಂದ್‌ ಬೆಂಬಲಿಸಿದವು.

ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗೌರವ ತೋರಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕರೆ ನೀಡಿರುವ ಬಂದ್ ಗೆ ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳು ಇನ್ನಿತರ ಪ್ರಮುಖ ಸಂಘ ಸಂಸ್ಥೆಗಳು ಕೂಡ ಸಾಥ್‌ ನೀಡಿದವು.

ಸಾಧಕರ ವಿರುದ್ದ ಹೇಳಿಕೆ ಸಲ್ಲ

ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ರವರು ಭಾರತೀಯ ಸೇನೆಗೆ ಮತ್ತು ಭಾರತದ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇವರುಗಳನ್ನು ಅವಹೇಳನ ಮಾಡಿರುವುದು ನೀಚತನದ ಪರಮಾವಧಿಯಾಗಿದೆ. ಈ ರೀತಿ ಜಿಲ್ಲೆಯ ಜನತೆಯ ಸಾಮರಸ್ಯಕ್ಕೆ ದಕ್ಕೆ ಉಂಟುಮಾಡುವ ಪ್ರಯತ್ನ ಸರಿಯಲ್ಲ ಎಂದು ಗುರುವಾರ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಪ್ರಮುಖರು ಹೇಳಿದರು.

ಸೇನಾನಿಗಳ ಬಗ್ಗೆ ಅವಹೇಳನಕಾರಿ ಸಂದೇಶಗಳು ಮತ್ತು ನಿರಂತರ ಜಾತಿ ಜನಾಂಗೀಯ ದ್ವೇಶ ಹರಡುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಅಲ್ಲದೆ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಜನಾಂಗೀಯ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕರೆದಿರುವ ಬಂದ್ ಗೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.

ಅಂಗಡಿ ವಹಿವಾಟು ಬಂದ್

ಬಂದ್‌ ಕಾರಣದಿಂದ ಮಡಿಕೇರಿ ನಗರದಲ್ಲಿ ಅಗತ್ಯ ವಸ್ತುಗಳ ವಹಿವಾಟು ಬಿಟ್ಟರೆ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್‌ ಸಂಚಾರವೂ ವಿರಳವಾಗಿತ್ತು. ಆಟೋಗಳೂ ರಸ್ತೆಗೆ ಇಳಿಯಲಿಲ್ಲ. ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ, ಗೋಣಿಕೊಪ್ಪಲು, ಪೊನ್ನಂಪೇಟೆ ಸಹಿತ ಹಲವು ಕಡೆಗಳಲ್ಲಿ ಬಂದ್‌ಗೆ ಬೆಂಬಲ ಸೂಚಿಸಲಾಯಿತು. ವಿವಿಧ ಸಂಘಟನೆಗಳವರು ಮೆರವಣಿಗೆಗಳನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.

Whats_app_banner