ಪಶ್ಚಿಮ ಘಟ್ಟಗಳ ಕುರಿತ ಡಾ.ಕಸ್ತೂರಿ ರಂಗನ್ ವರದಿ ನಮ್ಮಲ್ಲಿ ಜಾರಿಯಿಲ್ಲ; ಕರ್ನಾಟಕ ಸಚಿವ ಸಂಪುಟ ತೀರ್ಮಾನ, ಕಾರಣವಾದರೂ ಏನು-environment news karnataka government rejects dr kasturi rangan report on western ghat conservation kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಪಶ್ಚಿಮ ಘಟ್ಟಗಳ ಕುರಿತ ಡಾ.ಕಸ್ತೂರಿ ರಂಗನ್ ವರದಿ ನಮ್ಮಲ್ಲಿ ಜಾರಿಯಿಲ್ಲ; ಕರ್ನಾಟಕ ಸಚಿವ ಸಂಪುಟ ತೀರ್ಮಾನ, ಕಾರಣವಾದರೂ ಏನು

ಪಶ್ಚಿಮ ಘಟ್ಟಗಳ ಕುರಿತ ಡಾ.ಕಸ್ತೂರಿ ರಂಗನ್ ವರದಿ ನಮ್ಮಲ್ಲಿ ಜಾರಿಯಿಲ್ಲ; ಕರ್ನಾಟಕ ಸಚಿವ ಸಂಪುಟ ತೀರ್ಮಾನ, ಕಾರಣವಾದರೂ ಏನು

ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಡಾ.ಕಸ್ತೂರಿ ರಂಗನ್‌ ವರದಿ ಜಾರಿಯಾಗುವುದಿಲ್ಲ. ಈ ಕುರಿತು ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆ ನಿರ್ಣಯವನ್ನೂ ಕೈಗೊಂಡಿದೆ. ಹಿಂದಿನ ಬಿಜೆಪಿ ಸರ್ಕಾರವೂ ಇದನ್ನು ವಿರೋಧಿಸಿತ್ತು.

ಪಶ್ಚಿಮ ಘಟ್ಟಗಳ ಕುರಿತಾದ ಡಾ.ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸದಿರಲು ಕರ್ನಾಟಕ ತೀರ್ಮಾನಿಸಿದೆ.
ಪಶ್ಚಿಮ ಘಟ್ಟಗಳ ಕುರಿತಾದ ಡಾ.ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸದಿರಲು ಕರ್ನಾಟಕ ತೀರ್ಮಾನಿಸಿದೆ.

ಬೆಂಗಳೂರು: ಮೊದಲಿನಿಂದಲೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ.ಕೆ.ಕಸ್ತೂರಿ ರಂಗನ್‌ ವರದಿಯನ್ನು ವಿರೋಧಿಸುತ್ತಲೇ ಬಂದಿರುವ ಕರ್ನಾಟಕವು ಇದನ್ನು ಜಾರಿಗೊಳಿಸದಿರಲು ನಿರ್ಧಿರಿಸಿದೆ. ಕರ್ನಾಟಕದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಸುಮಾರು ಹನ್ನೊಂದು ಜಿಲ್ಲೆಗಳ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಸ್ತೂರಿ ರಂಗನ್‌ ವರದಿಯನ್ನು ಅನುಷ್ಠಾನಗೊಳಿಸದೇ ಸಂಪೂರ್ಣವಾಗಿ ವಿರೋಧಿಸುವ ನಿರ್ಧಾರಕ್ಕೆ ಬರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಕಸ್ತೂರಿ ರಂಗನ್‌ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಲು ನಿರ್ಣಯಿಸಿತು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರವು 2024ರ ಜುಲೈ 31ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿತ್ತು.

ಕಸ್ತೂರಿ ರಂಗನ್‌ ವರದಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಅಭಿಪ್ರಾಯ ತಿಳಿಸುವಂತೆ ಕರ್ನಾಟಕ ಸರ್ಕಾರವನ್ನು ಕೋರಿತ್ತು. 60 ದಿನಗಳಲ್ಲಿ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಕೇಂದ್ರ ಸರ್ಕಾರಕ್ಕ ಕರ್ನಾಟಕದ ನಿರ್ಧಾರವನ್ನು ತಿಳಿಸಲಾಗುತ್ತದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಪಶ್ಚಿಮ ಘಟ್ಟಗಳ ಕುರಿತಾಗಿ ವಿಜ್ಞಾನಿ ಡಾ.ಕೆ ಕಸ್ತೂರಿರಂಗನ್ ಅವರು ನೀಡಿರುವ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಧಾರಕ್ಕೆ ಬದ್ಧವಾಗಿರಲು ರಾಜ್ಯ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿದೆ. ಹಿಂದಿನ ಬಿಜೆಪಿ ಸರ್ಕಾರವೂ ಈ ವರದಿಯನ್ನು ತಿರಸ್ಕರಿಸಿ ನಿರ್ಣಯ ಕೈಗೊಂಡಿತ್ತು.ಅದೇ ನಿರ್ಣಯವನ್ನೇ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಂದು ಹೇಳಿದರು.

ಇದರಿಂದ ಕರ್ನಾಟಕದ ಚಾಮರಾಜನಗರ,ಮೈಸೂರು,ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಹನ್ನೊಂದು ಜಿಲ್ಲೆಗಳಲ್ಲಿ ಆಗಬಹುದಾದ ತೊಂದರೆ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಆಗಿದೆ.ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ 56,825.7 ಚದರ ಕಿಲೋಮೀಟರ್‌ಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಕೇಂದ್ರ ಪರಿಸರ ಸಚಿವಾಲಯವು 2014ರ ಮಾರ್ಚ್ ನಿಂದ ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ.

ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಲು ಅಣಿಯಾಗಿದೆ. ಇದಕ್ಕೆ ಸಾರ್ವಜನಿಕ ಅಭಿಪ್ರಾಯಗಳನ್ನು ಆಲಿಸಲಿದ್ದು, ಆಯಾ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳಿದೆ. ಈ ವರದಿ ಅಂಗೀಕರಿಸಿದರೆ ಶತಮಾನಗಳಿಂದ ವಾಸಿಸಿಕೊಂಡು ಬರುತ್ತಿರುವ ಜನರಿಗೆ ತೊಂದರೆಯಾಗಲಿದೆ. ವರದಿ ಜಾರಿಯಾದರೆ ಕರ್ನಾಟಕದಲ್ಲಿ ಮಾನವ ಹಸ್ತಕ್ಷೇಪ ಮಾಡುವ ಹಾಗೇ ಇಲ್ಲ. ಇಡೀ ಭೂ ಭಾಗ ರಾಜ್ಯದ ನಿಯಂತ್ರಣದಿಂದ ಕೇಂದ್ರದ ಸುಪರ್ದಿಗೆ ಹೋಗಲಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಸಚಿವ ಸಂಪುಟವು ವಿಸ್ತೃತ ಚರ್ಚೆ ನಡೆಸಿದ್ದು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಒಮ್ಮತದ ತೀರ್ಮಾನಕ್ಕೆ ಬಂದಿದೆ ಎನ್ನುವುದು ಎಚ್‌ಕೆ ಪಾಟೀಲ್‌ ಅವರ ವಿವರಣೆ.

ಕಸ್ತೂರಿರಂಗನ್ ವರದಿಯು 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು. ಇದರಲ್ಲಿ ಆಗಿದ್ದ ಕೆಲವು ಲೋಪಗಳನ್ನು ತಿದ್ದುಪಡಿ ಮಾಡಿದಾಗ, 19,252.70 ಚ.ಕಿ.ಮೀ ಪರಿಸರ ಸೂಕ್ಷ್ಮ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ರಾಜ್ಯದ ವಿವಿಧ ಅರಣ್ಯ ಕಾನೂನುಗಳ ಅಡಿಯಲ್ಲಿ ಈಗಾಗಲೇ 16,164 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಇದನ್ನು ಇತ್ತೀಚಿಗೆ ನಡೆದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆಯಲ್ಲೂ ಪ್ರಸ್ತಾಪಿಸಲಾಗಿತ್ತು. ಸಚಿವ ಸಂಪುಟ ಉಪಸಮಿತಿಯೂ ಇದೇ ವರದಿಯನ್ನು ನೀಡಿದೆ. ಈ ಎಲ್ಲಾ ಅಭಿಪ್ರಾಯ ಆಧರಿಸಿಯೇ ಕಸ್ತೂರಿ ರಂಗನ್‌ ವರದಿ ಜಾರಿಗೊಳಿಸದಿರಲು ಒಪ್ಪಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

mysore-dasara_Entry_Point