ಕಾಡಿನ ಕಥೆಗಳು: ಅರ್ಜುನನಿಂದ ದರ್ಶನ್‌ವರೆಗಿನ 8 ಅವಘಡಗಳಿಂದ ಕರ್ನಾಟಕದ ಅರಣ್ಯ ಇಲಾಖೆ ಕಲಿಯಬೇಕಾದ 10 ಪಾಠಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಡಿನ ಕಥೆಗಳು: ಅರ್ಜುನನಿಂದ ದರ್ಶನ್‌ವರೆಗಿನ 8 ಅವಘಡಗಳಿಂದ ಕರ್ನಾಟಕದ ಅರಣ್ಯ ಇಲಾಖೆ ಕಲಿಯಬೇಕಾದ 10 ಪಾಠಗಳು

ಕಾಡಿನ ಕಥೆಗಳು: ಅರ್ಜುನನಿಂದ ದರ್ಶನ್‌ವರೆಗಿನ 8 ಅವಘಡಗಳಿಂದ ಕರ್ನಾಟಕದ ಅರಣ್ಯ ಇಲಾಖೆ ಕಲಿಯಬೇಕಾದ 10 ಪಾಠಗಳು

Karnataka Forest department ಭಾರತದಲ್ಲೇ ಕರ್ನಾಟಕ ಅರಣ್ಯ ಇಲಾಖೆ ಹಲವು ವಿಚಾರಗಳಲ್ಲಿ ಮಾದರಿ. ಆದರೆ 2023 ರ ಘಟನಾವಳಿಗಳು ಇಲಾಖೆ ಕಾರ್ಯಕ್ಷಮತೆಗೆ ಕಪ್ಪುಚುಕ್ಕೆ ಮೂಡಿಸಿದ್ದು ನಿಜ. ಕರ್ನಾಟಕ ಅರಣ್ಯ ಇಲಾಖೆ ಘನತೆ, ಗಟ್ಟಿತನ ಉಳಿಸಿಕೊಳ್ಳಲು ಏನು ಮಾಡಬೇಕು. ಕಾಡಿನ ಕಥೆಗಳು ಅಂಕಣ ಇದನ್ನು ಒತ್ತಿ ಹೇಳಿದೆ.

ಕರ್ನಾಟಕ ಅರಣ್ಯ ಇಲಾಖೆ 2023ರಲ್ಲಿ ಎಡವಿದ್ದು ಎಲ್ಲಿ, ಏನು ಆಗಬೇಕಾಗಿದೆ.
ಕರ್ನಾಟಕ ಅರಣ್ಯ ಇಲಾಖೆ 2023ರಲ್ಲಿ ಎಡವಿದ್ದು ಎಲ್ಲಿ, ಏನು ಆಗಬೇಕಾಗಿದೆ.

ಕರ್ನಾಟಕದ ಅರಣ್ಯ ಇಲಾಖೆಗೆ ದೇಶದಲ್ಲೇ ಒಳ್ಳೆಯ ಹೆಸರು. ಅದು ಅರಣ್ಯ, ವನ್ಯಜೀವಿಗಳ ಕಾರಣಕ್ಕೆ. ಅವುಗಳ ನಿರ್ವಹಣೆಯಲ್ಲಿ ಕಂಡುಕೊಂಡ ಮಾದರಿಗೆ. ಪರಿಸರ ಪ್ರವಾಸೋದ್ಯಮದ ಮೂಲಕ ಅರಣ್ಯ ಹಾಗೂ ವನ್ಯಲೋಕವನ್ನು ಕರ್ನಾಟಕ ಮಾತ್ರವಲ್ಲದೇ ಹೊರ ಜಗತ್ತಿಗೂ ತೋರಿಸಿದ ಪರಿ, ಇಲ್ಲಿನ ಸುಸ್ಥಿರ ನೀತಿಗಳೂ ಅದಕ್ಕೆ ಕಾರಣವಿರಬಹುದು. ಇದರ ಹಿಂದೆ ಹಿರಿಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಅವರಿಗೆ ಬೆನ್ನೆಲುಬಾಗಿ ನಿಂತ ಅರಣ್ಯ ಇಲಾಖೆ ಹಲವಾರು ಸಚಿವರು, ತಜ್ಞರು, ಸ್ವಯಂ ಸೇವಾ ಸಂಘಟನೆಗಳು, ಅರಣ್ಯ ಪ್ರೀತಿಯ ಜನ, ನಮ್ಮೂರ ಕಾಡು ಎಂದು ಜತನದಿಂದ ಕಾಪಾಡಿಕೊಂಡು ಬಂದ ಜನ.

ಈ ಮಾದರಿಗೆ ಧಕ್ಕೆ ಉಂಟಾದ ಬೆಳವಣಿಗೆಗಳಿಗೆ 2023 ಸಾಕ್ಷಿಯಾಯಿತು. ಇಲಾಖೆ ನಿಷ್ಕ್ರಿಯವಾಗಿಬಿಟ್ಟಿದೇ, ನಿಯಂತ್ರಣವನ್ನೇ ಕಳೆದುಕೊಂಡು ಬಿಟ್ಟಿತೇ ಎನ್ನುವಷ್ಟರ ಮಟ್ಟಿಗೆ ಅದು ಚರ್ಚೆಗೆ ದಾರಿ ಮಾಡಿಕೊಟ್ಟಿತು.

ಅರ್ಜುನನ (ಆನೆ) ಸಾವಿನಿಂದ ಹಿಡಿದು ವನ್ಯಜೀವಿ ಸಂಘರ್ಷ ನಿರ್ವಹಣೆಯಲ್ಲಿ ಎಡವಿದ ರೀತಿಯೂ ಇದಕ್ಕೆ ಕಾರಣ. ಕರ್ನಾಟಕದ ಅರಣ್ಯ ಇಲಾಖೆ ಈಗ ಎಚ್ಚೆತ್ತುಕೊಳ್ಳುವ ಕಾಲ. ಉತ್ತರ ಭಾರತದ ಸ್ಥಿತಿಯೇ ಕರ್ನಾಟಕಕ್ಕೂ ಬರಬಾರದು ಎನ್ನುವುದು ಇದರ ಹಿಂದಿರುವ ಕಾಳಜಿಯಷ್ಟೇ. ಹಿಂದೆ ಅರಣ್ಯ ಸಚಿವರಾಗಿ ಕೆಲಸ ಮಾಡಿದ್ದ ಕೆ.ಎಚ್‌.ಪಾಟೀಲ್‌, ಎಚ್‌.ವಿಶ್ವನಾಥ್‌, ಕೆ.ಎಚ್‌.ರಂಗನಾಥ್‌, ಸಿ.ಎಚ್‌.ವಿಜಯಶಂಕರ್‌, ರಮಾನಾಥ ರೈ, ಸತೀಶ್‌ ಜಾರಕಿಹೊಳಿ ಅವರಂತೆಯೇ ಈಶ್ವರ ಖಂಡ್ರೆ ಕೂಡ ಸ್ಪಂದನಾ ಶೀಲ, ಪ್ರಗತಿ ಪೂರಕ ಸಚಿವರು ಎನ್ನಿಸಿದ್ದಾರೆ. ಅವರೇ ಇಲಾಖೆಯನ್ನು ಸರಿದಾರಿಯಲ್ಲೇ ಕೊಂಡೊಯ್ಯವ ಜಾಣ್ಮೆ ತೋರುವಂತಾಗಲಿ ಎನ್ನುವ ಆಶಯವೂ ಇದರ ಹಿಂದಿದೆ.

2023 ರಲ್ಲಿ ಸುದ್ದಿಯಾದ 8 ಅವಘಡಗಳು

1) ಅಂಬಾರಿ ಆನೆ ಅರ್ಜುನನ ದುರ್ಮರಣ: ಕರ್ನಾಟಕದ ಮಟ್ಟಿಗೆ ಮಾತ್ರವಲ್ಲ. ಇಡೀ ಭಾರತದಲ್ಲೇ ಸದ್ದು ಮಾಡಿದ್ದು ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯ ಸಾವಿನ ಪ್ರಕರಣ. ಕಾಡಾನೆ ಸೆರೆ ಕಾರ್ಯಾಚರಣೆಗೆ ಕರೆದೊಯ್ದಾಗ ಆದ ಅಚಾತುರ್ಯದಿಂದ ಆರ್ಜುನ ಆನೆ ಜೀವ ಬಿಟ್ಟಿತು. ಕರ್ನಾಟಕ ಅರಣ್ಯ ಇಲಾಖೆ ಮಾತ್ರವಲ್ಲ, ರಾಜ್ಯದ ಮಾನವನ್ನು ಹಾಳು ಮಾಡಿತು. ಅರಣ್ಯ ಇಲಾಖೆ ಇಡೀ ಪ್ರಕರಣ ನಿಭಾಯಿಸುವಲ್ಲಿ ಎಡವಿತು ಎನ್ನುವುದು ಚರ್ಚೆಗೆ ಗ್ರಾಸವಾಯಿತು.

2) ಬಲರಾಮನ ಸಾವು: ವರ್ಷದ ಆರಂಭದಲ್ಲಿ ಮತ್ತೊಂದು ದಸರಾ ಆನೆ ಬಲರಾಮ ಕೂಡ ಇದೇ ರೀತಿ ಅನುಮಾನಾಸ್ಪದವಾಗಿಯೇ ಮೃತಪಟ್ಟಿತ್ತು. ಅರಣ್ಯ ಇಲಾಖೆ ಶಿಬಿರದಲ್ಲಿ ಬಲರಾಮ ಮೇಯಲು ಹೋದಾಗ ಅರಣ್ಯದಂಚಿನ ಗ್ರಾಮದ ರೈತರೊಬ್ಬರು ಗುಂಡೇಟು ಹೊಡೆದಾಗ ಅದು ಬಲರಾಮನ ಜೀವವನ್ನೇ ತೆಗೆದುಕೊಂಡಿತು. ದಸರಾ ಆನೆಗಳೆಂದರೆ ಹೇಗೆ ಬೇಕಾದರೂ ಕಾಡಲ್ಲಿ ನೋಡಿಕೊಳ್ಳಬಹುದು ಎನ್ನುವ ಮನಸ್ಥಿತಿ ಹಾಗೂ ಇಲಾಖೆ ನಿರ್ಲಕ್ಷ್ಯಕ್ಕೆ ಇದು ಉದಾಹರಣೆಯಾಯಿತು.

3) ಅರವಳಿಕೆ ಅವಘಡ: ಆನೆ, ಹುಲಿ ಸಹಿತ ವನ್ಯಜೀವಿಗಳನ್ನು ಸೆರೆ ಹಿಡಿಯವಾಗ ಅರವಳಿಕೆ ನೀಡುವಲ್ಲಿ ತಜ್ಞತೆ ಪಡೆದು, ನಿವೃತ್ತಿ ನಂತರವೂ ಇಲಾಖೆ ಹಾಗೂ ಸಮಾಜಕ್ಕೋಸ್ಕರ ಕೆಲಸ ಮಾಡುತ್ತಿದ್ದ ವೆಂಕಟೇಶ್‌ ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದು ಕೂಡ ಗಮನ ಸೆಳೆಯಿತು. ತಜ್ಞರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಡೀ ಇಲಾಖೆ ಕೆಲಸ ಮಾಡಿದ ರೀತಿಯೂ ಜನರ ಅವಕೃಪೆಗೆ ಪಾತ್ರವಾಯಿತು.

4) ಬಿಗ್‌ಬಾಸ್ ಹುಲಿ ಉಗುರು: ಹುಲಿ ಉಗುರುಗಳನ್ನು ಬಳಿಸಿದ ವಿಚಾರವಾಗಿ ಬಿಗ್‌ಬಾಸ್‌ನ ವರ್ತೂರ್‌ ಸಂತೋಷ್‌ ಬಂಧನದ ವಿಚಾರವೂ ಚರ್ಚೆಯಾಯಿತು. ಚಿಕ್ಕಮಗಳೂರಿನಲ್ಲಿ ಇಬ್ಬರು ಅರ್ಚಕರನ್ನು ಬಂಧಿಸಿದ ಅರಣ್ಯ ಇಲಾಖೆಯೂ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ನಗೆಪಾಟಲಿಗೆ ಈಡಾಯಿತು. ಅತಿ ಗಣ್ಯರು, ಗಣ್ಯರನ್ನು ಬಿಟ್ಟು ಬಡಪಾಯಿಗಳ ಮೇಲೆ ಇಲಾಖೆ ಬ್ರಹ್ಮಾಸ್ತ್ರ ಪ್ರಯೋಗಿಸಿತು. ಈ ನಂತರ ಮುಂದೇನು ಮಾಡಬೇಕು ಎನ್ನುವ ಚರ್ಚೆಯೇ ಇಲ್ಲದೆ ಈ ಪ್ರಕರಣ ನಿಂತು ಹೋಯಿತು.

5) ದರ್ಶನ್ ಗಲಾಟೆಯ ಅಸ್ಪಷ್ಟ ಅಂತ್ಯ: ಚಲನಚಿತ್ರ ನಟ ದರ್ಶನ್‌ ಅರಣ್ಯ ಇಲಾಖೆಯ ರಾಯಭಾರಿ. ಆದರೆ ಅವರದ್ದೇ ಎರಡು ಪ್ರಕರಣಗಳು ಈ ವರ್ಷ ಗಮನ ಸೆಳೆದವು. ಮೈಸೂರು ಹೊರ ವಲಯದ ಅವರ ತೋಟದಲ್ಲಿ ಅಳಿವಂಚಿನಲ್ಲಿರುವ ಪಕ್ಷಿಗಳನ್ನು ಸಂಗ್ರಹಿಸಿಟ್ಟ ದೂರು ಕೇಳಿ ಬಂದು ಅರಣ್ಯ ಇಲಾಖೆ ದಾಳಿ ನಡೆಸಿ ಮೊಕದ್ದಮೆ ದಾಖಲಿಸಿತ್ತು. ಪ್ರಾಣಿ ಉಗುರಿನ ವಸ್ತು ಇಟ್ಟುಕೊಂಡ ಪ್ರಕರಣದಲ್ಲೂ ಬೆಂಗಳೂರಿನ ಅವರ ಮನೆಯ ಮೇಲೆ ದಾಳಿ ಮಾಡಲಾಗಿತ್ತು

6) ಗಣೇಶ್ ಕಟ್ಟಡ ಗೊಂದಲ: ಚಲನಚಿತ್ರ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಮೀಪದಲ್ಲಿಯೇ ಖಾಸಗಿ ಕಟ್ಟಡ ನಿರ್ಮಾಣ ವಿವಾದ ತಾರಕಕ್ಕೇರಿತ್ತು. ಆನಂತರ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯವೂ ಅರಣ್ಯ ಇಲಾಖೆಯ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ನಿರ್ದೇಶನ ನೀಡಿತ್ತು. ಆನಂತರ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಲಾಗಿತ್ತು.

7) ಚಿರತೆ ಕೊಂದು ಮಾನ ಉಳಿಸಿಕೊಂಡಿದ್ದು: ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿಯೇ ಚಿರತೆ ಕಾಣಿಸಿಕೊಂಡಿದ್ದರೂ ಅದನ್ನು ಗುರುತಿಸಲು ವಿಫಲವಾಗಿ ನಿರ್ಲಕ್ಷ್ಯ ತೋರಿದ್ದ ಇಲಾಖೆ ಆನಂತರ ತನ್ನ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಚಿರತೆಯನ್ನು ಕೊಂದು ಹಾಕಿತು. ಇದೂ ಸಾಕಷ್ಟು ಚರ್ಚೆಗೆ, ಟೀಕೆಗಳಿಗೆ ಗುರಿಯಾಯಿತು.

8) ಮೂಡಿಗೆರೆಯಲ್ಲಿ ಆನೆ ಸಾವು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಕಾಡಾನೆಯೊಂದನ್ನು ರಾತ್ರಿ ನಂತರ ಸೆರೆ ಹಿಡಿಯಲು ಹೋಗಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಆನೆ ಸಾವಿಗೆ ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮವೇ ಆಗಲಿಲ್ಲ. ಬದಲಿಗೆ ಮುಚ್ಚಿ ಹಾಕುವ ಕೆಲಸವಾಯಿತು ಎಂಬ ಗಂಭೀರ ಆರೋಪ ಕೇಳಿ ಬಂದಿತು.

2024 ರಲ್ಲಿ ಅರಣ್ಯ ಇಲಾಖೆ ಸುಧಾರಣೆಗೆ 10 ಸಲಹೆಗಳು

1) ಮುಂದಿನ ಯೋಜನೆ ರೂಪಿಸಿ: ಕರ್ನಾಟಕ ಅರಣ್ಯ ಇಲಾಖೆ ವನ್ಯಸಂಪತ್ತು ಹಾಗೂ ಹಸಿರು ಸಂಪತ್ತಿನ ವಿಚಾರದಲ್ಲಿ ಗಟ್ಟಿ ನೆಲೆ ಹೊಂದಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ಇಪ್ಪತ್ತು-ಮುವತ್ತು ವರ್ಷಗಳ ಗುರಿಯೊಂದಿಗೆ ಯೋಜನೆಯನ್ನು ಈಗಲೇ ರೂಪಿಸಬೇಕು.

2) ಮಾನವ-ವನ್ಯಜೀವಿ ಸಂಘರ್ಷ: ಹುಲಿ, ಆನೆ, ಚಿರತೆ, ಕರಡಿ, ಕಾಡೆಮ್ಮೆ ಸಹಿತ ಹಲವು ವನ್ಯಜೀವಿಗಳ ಜೊತೆಗಿನ ಮಾನವ ಸಂಘರ್ಷ ಮಿತಿ ಮೀರಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಪಷ್ಟ ಕ್ರಿಯಾ ಯೋಜನೆ ರೂಪಿಸಬೇಕು.

3) ಸರಿಯಾಗಿ ತರಬೇತಿ ಸಿಗಲಿ: ಅಧಿಕಾರಿಗಳ ಜತೆಗೆ ವನ್ಯಜೀವಿ ನಿರ್ವಹಣೆ ಮಾಡುವ ಪಶುವೈದ್ಯಾಧಿಕಾರಿಗಳು, ಅರವಳಿಕೆ ತಂಡ, ಸೆರೆ ತಂಡದ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಬೇಕು. ಹೊರ ಭಾಗದಿಂದ ತಜ್ಞರನ್ನು ಕರೆಯಿಸಿ ಅವರ ಜ್ಞಾನ, ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ಇತರ ರಾಜ್ಯ, ದೇಶಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಳಿಸಬೇಕಾಗಿ ಬಂದರೂ ಸರ್ಕಾರ ಹಿಂಜರಿಯಬಾರದು.

4) ನೆಮ್ಮದಿಯಾಗಿ ಕೆಲಸ ಮಾಡಲು ಬಿಡಿ: ಅರಣ್ಯ ಇಲಾಖೆಗೆ ದಶಕದ ಅವಧಿಯಲ್ಲಿ ಹೊಸ ಪೀಳಿಗೆಯ ಸಿಬ್ಬಂದಿ ಸಾಕಷ್ಟು ಬಂದಿದ್ಧಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಕೆಳ ಹಂತದ ಸಿಬ್ಬಂದಿ ಕೊರತೆಯಿಲ್ಲ. ಅದರಲ್ಲೂ ವಲಯ ಅರಣ್ಯಾಧಿಕಾರಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಹಂತದಲ್ಲಿ ಯುವ ಶಕ್ತಿಯೇ ಇದೆ. ಅವರಿಗೆ ದಿಕ್ಸೂಚಿ, ಮಾರ್ಗದರ್ಶನ, ತರಬೇತಿ, ಪುನಶ್ಚೇತನವನ್ನು ಕಾಲಕಾಲಕ್ಕೆ ಮಾಡಿಕೊಂಡರೆ ಕಾರ್ಯಕ್ಷಮತೆ ಹೆಚ್ಚಿಸಿದಂತಾಗುತ್ತದೆ.

5) ಒತ್ತಡ ತಗ್ಗಿಸಿ: ಕೆಳ ಹಂತದ ಅಧಿಕಾರಿಗಳಿಗೆ ಅನಗತ್ಯ ಒತ್ತಡ ಸೃಷ್ಟಿಸುವ ಸನ್ನಿವೇಶಗಳು ಹಲವು ಕಡೆ ಆಗುತ್ತಲೇ ಇದೆ. ಇಂತಹ ಒತ್ತಡ ತಗ್ಗಿಸಿ ಸಹಜವಾಗಿ ಕೆಲಸ ಮಾಡುವ ವಾತಾವರಣವನ್ನೂ ಸೃಷ್ಟಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಸೂಕ್ತ.

6) ಅಧಿಕಾರಿಗಳೇ ಸಮಸ್ಯೆ ಆಗುವುದು ಬೇಡ: ಈಗಾಗಲೇ ಹುಲಿ, ಆನೆ, ಚಿರತೆಯ ಕಾರ್ಯಪಡೆಗಳನ್ನು ರಚಿಸಿ ಮಾನವ ವನ್ಯಜೀವಿ ಸಂಘರ್ಷ ತಡೆಗೆ ಒತ್ತು ನೀಡಲಾಗುತ್ತಿದೆ. ಸೌಲಭ್ಯವನ್ನೂ ಒದಗಿಸಲಾಗಿದೆ. ಇವುಗಳ ಕಾರ್ಯಕ್ಷಮತೆಯನ್ನು ಕಾಲಕಾಲಕ್ಕೆ ಪರಾಮರ್ಶಿಸಿ ಇನ್ನಷ್ಟು ಜನಸ್ನೇಹಿಯಾಗಿಸಬೇಕು. ಹುಲಿ ಹಾಗೂ ಆನೆ ಯೋಜನೆಗಳನ್ನು ಮೈಸೂರಿನಲ್ಲಿಯೇ ಹಿಂದಿನಂತೆ ಉಳಿಸಿ ಕ್ಷೇತ್ರ ಕಾರ್ಯದ ಅನುಭವ ಇರುವ, ಪರಿಸ್ಥಿತಿಗೆ ಪರಿಹಾರ ನೀಡಬಲ್ಲಂತಹ ಅಧಿಕಾರಿಗಳನ್ನು ನಿಯೋಜಿಸಬೇಕು. ಅಧಿಕಾರಿಗಳೇ ಸಮಸ್ಯೆ ಮೂಲ ಆಗದಿರಲಿ.

7) ಗ್ರಾಮ ಅರಣ್ಯ ಘಟಕಗಳು ಪುನರುಜ್ಜೀವನಗೊಳ್ಳಲಿ: ಈ ಹಿಂದೆ ಪ್ರತಿ ಗ್ರಾಮಗಳಲ್ಲಿ ಗ್ರಾಮ ಅರಣ್ಯ ಘಟಕಗಳು (VFC - Village Forest Committees) ಇದ್ದವು. ಇವುಗಳನ್ನು ಬಳಕೆ ಮಾಡಿಕೊಂಡು ಸಂಘರ್ಷ ತಗ್ಗಿಸುವ, ಅರಣ್ಯ ಹಾಗೂ ವನ್ಯಜೀವಿಗಳಿಗೆ ಧಕ್ಕೆ ಆಗದಂತೆ ನೋಡುವ ಕೆಲಸವೂ ಆಗುತ್ತಿತ್ತು. ಘಟಕಗಳು ಸ್ಥಗಿತವಾಗಿ ದಶಕಗಳೇ ಕಳೆದಿವೆ. ಅವುಗಳ ಮರುಸ್ಥಾಪನೆಯೂ ಸಂಘರ್ಷ ತಗ್ಗಿಸಲು ಸಹಕಾರಿಯೂ ಆಗಬಹುದು.

8) ಭೂಕಬಳಿಕೆಗೆ ತಡೆ ಬೇಕು: ವನ್ಯಜೀವಿ, ಹುಲಿಧಾಮಗಳ ಸುತ್ತಮುತ್ತ ಅನಗತ್ಯ ಭೂ ಒತ್ತಡಗಳನ್ನು ಸೃಷ್ಟಿಸುವ ಕೆಲಸವೂ ಆಗುತ್ತಿದೆ. ಇದಕ್ಕೂ ಅರಣ್ಯ ಇಲಾಖೆ ಕೋರ್ಟು ಕಟ್ಟಳೆಗಳನ್ನು ಆಧರಿಸಿದ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು. ಇಂತಹ ವಿಚಾರದಲ್ಲಿ ಪಾರದರ್ಶಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

9) ಸಫಾರಿಗೆ ಮೂಗುದಾರ: ಪರಿಸರ ಪ್ರವಾಸೋದ್ಯಮವೇ ಸ್ಥಳೀಯರ ಜತೆಗೆ ವನ್ಯಜೀವಿಗಳಿಗೆ ಅಡ್ಡಿಯಾಗುತ್ತಿದೆ. ಇದಕ್ಕೂ ದಶಕದ ಹಿಂದೆ ನಿಯಂತ್ರಣ ಹೇರಿ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿತ್ತು. ಇದೂ ಈಗ ಮಿತಿ ಮೀರಿದಂತೆಯೇ ಕಾಣುತ್ತಿದೆ. ಒಂದೇ ವಿಭಾಗದ ಮೂರ್ನಾಲ್ಕು ಕಡೆಗಳಲ್ಲಿ ಸಫಾರಿ ಆರಂಭಿಸಿ ಅನಗತ್ಯ ಒತ್ತಡ ಹೆಚ್ಚಿಸುವ ಕೆಲಸವೂ ಕರ್ನಾಟಕದಲ್ಲಿ ಆಗುತ್ತಿದೆ. ಇದಕ್ಕೆ ಮೂಗುದಾರವನ್ನು ಇಲಾಖೆಯೇ ಹಾಕಬೇಕು.

10) ನಿವೃತ್ತರ ನೆರವು ಪಡೆಯಿರಿ: ಕರ್ನಾಟಕದಲ್ಲಿ ಕೆಲಸ ಮಾಡಿ ಅಪಾರ ಅನುಭವ ಪಡೆದಿರುವ ಹಿರಿಯ ನಿವೃತ್ತ ಅಧಿಕಾರಿಗಳಾದ ಎ.ಸಿ.ಲಕ್ಷ್ಮಣ್‌, ಅ.ನ.ಯಲ್ಲಪ್ಪರೆಡ್ಡಿ, ಕುಶಾಲಪ್ಪ, ಬಿ.ಕೆ.ಸಿಂಗ್‌, ಬಿ.ಜೆ.ಹೊಸಮಠ, ಎ.ಎಂ. ಅಣ್ಣಯ್ಯ, ಗಾನಂ ಶ್ರೀಕಂಠಯ್ಯ, ಪುನಾಟಿ ಶ್ರೀಧರ್‌, ಕೆ.ಎಚ್‌. ವಿನಯಕುಮಾರ್‌, ಬಾಲಚಂದ್ರ, ಕೆ.ಎಂ. ಚಿಣ್ಣಪ್ಪ ಸಹಿತ ಹಲವು ಅಧಿಕಾರಿಗಳ ಅನುಭವವನ್ನು ಪಡೆಯಲು ಹಿಂದಡಿ ಇಡಬಾರದು. ಹಿರಿಯರ ಅನುಭವವೇ ಇಲಾಖೆ ಭವಿಷ್ಯದ ಮಾರ್ಗವೂ ಆಗಲಿದೆ.

ಇಡೀ ದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆಗೆ ತನ್ನದೇ ಆದ ಹೆಸರು ಇದೆ. ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕದ ಸಾಧನೆ ಎದ್ದು ಕಾಣುವಂತಿದೆ. ಇದಕ್ಕೆ ಕಪ್ಪುಚುಕ್ಕೆಯಾಗುವಂಥ ಹಲವು ಬೆಳವಣಿಗೆಗಳು 2023 ರಲ್ಲಿ ನಡೆದವು. ಇಂಥ ಸಂಗತಿಗಳು ಮುಂದೆಂದೂ ನಡೆಯದಂತೆ ಶಾಶ್ವತ ಪರಿಹಾರ ಉಪಕ್ರಮಗಳಿಗೆ 2024 ಮುನ್ನುಡಿ ಬರೆಯಲಿ ಎಂಬ ಆಶಯದೊಂದಿಗೆ ಈ ವಾರದ ಅಂಕಣ ಮುಗಿಸುತ್ತಿದ್ದೇನೆ.

-ಕುಂದೂರು ಉಮೇಶಭಟ್ಟ

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

Whats_app_banner