ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌, ಎಂಎಲ್‌ಸಿ ಸೂರಜ್ ರೇವಣ್ಣ ಬಂಧನ, ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌, ಎಂಎಲ್‌ಸಿ ಸೂರಜ್ ರೇವಣ್ಣ ಬಂಧನ, ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲು

ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌, ಎಂಎಲ್‌ಸಿ ಸೂರಜ್ ರೇವಣ್ಣ ಬಂಧನ, ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲು

ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ಗೆ ಸಂಬಂಧಿಸಿ ಆರೋಪಿಯಾಗಿರುವ ಎಂಎಲ್‌ಸಿ ಸೂರಜ್ ರೇವಣ್ಣ ಬಂಧನವಾಗಿದೆ. ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಾಗಿರುವ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಹಾಸನ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್ ರೇವಣ್ಣ ಬಂಧನ.
ಹಾಸನ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್ ರೇವಣ್ಣ ಬಂಧನ.

ಹಾಸನ: ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ (37) ಅವರನ್ನು ನಿನ್ನೆ(ಜೂನ್ 22) ರಾತ್ರಿ ಹಾಸನ ಜಿಲ್ಲೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಇಂದು (ಜೂನ್ 23) ಮುಂಜಾನೆ ಬಂಧಿಸಿದ್ದಾರೆ. ಸೂರಜ್ ರೇವಣ್ಣ ಅವರು ಜೆಡಿಎಸ್​ ಶಾಸಕ ಎಚ್‌.ಡಿ.ರೇವಣ್ಣನವರ ಹಿರಿಯ ಪುತ್ರ. ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಅವರ ತಮ್ಮ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದಾರೆ. ತಂದೆ ಎಚ್ ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ ವಿರುದ್ಧವೂ ಕೇಸ್ ದಾಖಲಾಗಿದೆ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ಅವರ ವಿರುದ್ಧ ಐಪಿಸಿ ಸೆಕ್ಷನ್ 377 (ಅಸಹಜ ಲೈಂಗಿಕ ದೌರ್ಜನ್ಯ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್‌ ಕಾರ್ಯಕರ್ತರೊಬ್ಬರು ಶನಿವಾರ (ಜೂನ್ 22) ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ ಅವರು, ಹೊಳೆನರಸೀಪುರದ ಗನ್ನಿಕಂಡದ ಫಾರ್ಮ್‌ಹೌಸ್‌ನಲ್ಲಿ ಜೂನ್ 16ರ ಸಂಜೆ ಸೂರಜ್ ರೇವಣ್ಣ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ಸೂರಜ್ ರೇವಣ್ಣ, ತನ್ನಿಂದ 5 ಕೋಟಿ ರೂಪಾಯಿ ಪಡೆಯಲು *** ಎಂಬಾತ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಹೇಳಿದ್ದರು. ಇದರಂತೆ, ಸೂರಜ್‌ ರೇವಣ್ಣ ಅವರು *** ವಿರುದ್ಧ ಸುಲಿಗೆ ದೂರು ದಾಖಲಿಸಿದ್ದರು. ಪೊಲೀಸರು ಈ ಕೇಸ್ ಅನ್ನು ಕೂಡ ದಾಖಲಿಸಿದ್ದಾರೆ.

ದೂರುದಾರ ಅರಕಲಗೂಡು ಜೆಡಿಎಸ್ ಕಾರ್ಯಕರ್ತ ಹೇಳಿರುವುದು ಇಷ್ಟು

ಪರಿಚಿತರಾಗಿದ್ದ ಸೂರಜ್ ರೇವಣ್ಣ ಬಳಿ ಕೆಲಸ ಕೊಡಿಸುವಂತೆ ಕೇಳಿಕೊಂಡು ಅವರ ಗನ್ನಿಕಡ ಫಾರಂಹೌಸ್‌ಗೆ ಜೂನ್ 16ಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಅಸಹಜನ ವರ್ತನೆಯನ್ನು ತೋರಿದರು. ಮೈ ಮುಟ್ಟಿ ಮಾತನಾಡುತ್ತ, ಮುಟ್ಟಬಾರದ ಜಾಗವನ್ನೆಲ್ಲ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದರು. ಬಳಿಕ ಹೊರಗೆಲ್ಲೂ ಈ ಬಗ್ಗೆ ಹೇಳಬಾರದು ಎಂದು ಬೆದರಿಸಿದರು. ಕೆಲಸ ಕೊಡಿಸಿ ಲೈಫ್ ಸೆಟಲ್ ಮಾಡುವುದಾಗಿ ಹೇಳಿದರು. ಲೈಂಗಿಕ ದೌರ್ಜನ್ಯವನ್ನು ಪ್ರಶ್ನಿಸಿದ್ದಕ್ಕೆ ಕೋಟಿ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದರು. ಅದಾಗಿ ಈ ವಿಚಾರವನ್ನು ಸ್ನೇಹಿತ ಶಿವಕುಮಾರ್‌ಗೆ ತಿಳಿಸಿದೆ. ಆತ ಸೂರಜ್‌ ರೇವಣ್ಣ ಅವರಿಗೂ ಗೆಳೆಯ. ಈ ವಿಚಾರ ಹೊರಗೆ ಹೇಳದಂತೆ ಆತನೂ ಹೇಳಿದ. ಅದಾದ ಬಳಿಕ ಆತನ ವರ್ತನೆಯೂ ಬದಲಾಯಿತು. ನೀನೇ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದೀಯ ಎಂದು ದೂರು ದಾಖಲಿಸುವುದಾಗಿ ಇಬ್ಬರೂ ಹೇಳಿದರು ಎಂದು ಸಂತ್ರಸ್ತ ಜೆಡಿಎಸ್ ಕಾರ್ಯಕರ್ತ ಹೇಳಿರುವ ವಿಡಿಯೋ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.

ಪ್ರತಿದೂರು ದಾಖಲಿಸಲು ಬಂದ ಸೂರಜ್‌ ರೇವಣ್ಣ ಬಂಧನ

ಇದಾದ ಬಳಿಕ, ಸೂರಜ್ ರೇವಣ್ಣ ಅವರೇ ಶನಿವಾರ (ಜೂನ್ 22) ಸಂಜೆ ಹಾಸನ ಸೆನ್ ಪೊಲೀಸ್ ಠಾಣೆಗೆ ಆಗಮಿಸಿದ್ದು, ಸಂತ್ರಸ್ತನ ವಿರುದ್ಧ ಪ್ರತಿದೂರು ದಾಖಲಿಸಿದರು. ಆಗ ಪೊಲೀಸರು ಸೂರಜ್ ರೇವಣ್ಣ ಅವರನ್ನು ವಶಕ್ಕೆ ತೆಗೆದುಕೊಂಡು ಮುಂಜಾನೆ 4 ಗಂಟೆ ತನಕ ವಿಚಾರಣೆ ನಡೆಸಿದರು. ಬಳಿಕ ಅವರ ಹೇಳಿಕೆಗಳನ್ನು ಆಧರಿಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೂರಜ್ ರೇವಣ್ಣ ಕೇಸ್‌ನ ವಿಚಾರಣೆಗಾಗಿ ಸಕಲೇಶಪುರ ಡಿವೈಎಸ್​ಪಿ ಅವರನ್ನು ಸರ್ಕಾರ ನೇಮಕ ಮಾಡಿದೆ.

ಈ ನಡುವೆ, ಸೂರಜ್ ರೇವಣ್ಣ ಅವರ ಆಪ್ತ ಹನುಮನಹಳ್ಳಿಯ ಶಿವಕುಮಾರ್ ಹೊಳೆನರಸೀಪುರ ಠಾಣೆಯಲ್ಲಿ ಸಂತ್ರಸ್ತನ (ಜೆಡಿಎಸ್ ಕಾರ್ಯಕರ್ತ) ವಿರುದ್ಧವೇ ಬ್ಲ್ಯಾಕ್‌ಮೇಲ್‌ ದೂರು ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತ ತಮ್ಮ ನಾಯಕ (ಸೂರಜ್‌) ಬಳಿ ಕೆಲಸ ಕೇಳಿಕೊಂಡು ಜೂನ್ 16 ರಂದು ಬಂದಿದ್ದ. ಅದಾಗಿ ಅಲ್ಲಿಂದ ವಾಪಸ್ ಹೋದ ಬಳಿಕ ನನ್ನನ್ನು ಸಂಪರ್ಕಿಸಿ, ನಿಮ್ಮ ನಾಯಕರಿಂದ ನನಗೆ ಕೆಲಸ ಕೊಡಿಸಲು ಸಾಧ್ಯವಿಲ್ಲ. ಅವರು ನನಗೆ 5 ಕೋಟಿ ರೂಪಾಯಿ ಕೊಡಬೇಕು. ಇಲ್ಲದೇ ಇದ್ದರೆ ಅವರ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದರು.

Whats_app_banner