Dharwad News: ಶವವಾಗಿ ಹೊರಟವರು ಮಾರ್ಗ ಮಧ್ಯೆ ಬದುಕಿದರು:ನವಲಗುಂದದಲ್ಲಿ ಮತ್ತೊಂದು ಮೃತ್ಯುಂಜಯ ಪ್ರಕರಣ
ಕನ್ನಡ ಸುದ್ದಿ  /  ಕರ್ನಾಟಕ  /  Dharwad News: ಶವವಾಗಿ ಹೊರಟವರು ಮಾರ್ಗ ಮಧ್ಯೆ ಬದುಕಿದರು:ನವಲಗುಂದದಲ್ಲಿ ಮತ್ತೊಂದು ಮೃತ್ಯುಂಜಯ ಪ್ರಕರಣ

Dharwad News: ಶವವಾಗಿ ಹೊರಟವರು ಮಾರ್ಗ ಮಧ್ಯೆ ಬದುಕಿದರು:ನವಲಗುಂದದಲ್ಲಿ ಮತ್ತೊಂದು ಮೃತ್ಯುಂಜಯ ಪ್ರಕರಣ

Hubli Dharwad News ಅವರು ಮೃತಪಟ್ಟಿದ್ಧಾರೆ ಎಂದು ವೈದ್ಯರೇ ಘೋಷಿಸಿದ್ದರು. ಮನೆಗೆ ಹೊರಟ ಮಾರ್ಗಮಧ್ಯೆದಲ್ಲಿಯೇ ಅವರು ಬದುಕಿರುವುದು ತಿಳಿಯಿತು. ಮತ್ತೆ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ನವಲಗುಂದದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮೃತ ವ್ಯಕ್ತಿ ಬದುಕಿದಾಗ
ಧಾರವಾಡ ಜಿಲ್ಲೆ ನವಲಗುಂದದಲ್ಲಿ ಮೃತ ವ್ಯಕ್ತಿ ಬದುಕಿದಾಗ

ಹುಬ್ಬಳ್ಳಿ: ಕೆಲ ದಿನಗಳ ಹಿಂದೆಯಷ್ಟೇ ಅಂತ್ಯಕ್ರಿಯೆಗೆ ತೆಗೆದುಕೊಂಡ ಹೋದ ಮಗು ಬದುಕುಳಿದು ಅಚ್ಚರಿ ಮೂಡಿಸಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ಅಂತಹುದೇ ಘಟನೆ ನಡೆದಿದೆ. ಈ ಬಾರಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರೇ ದೃಢಪಡಿಸಿದ್ದ ಹಿರಿಯರೊಬ್ಬರು ಬದುಕಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಯಿತು.

ನವಲಗುಂದ ಪಟ್ಟಣದ ಶಿವಪ್ಪ ಮಲ್ಲಪ್ಪ ತೋಟದ (56) ಎಂಬುವವರೇ ಸಾವನ್ನೇ ಗೆದ್ದು ಬದುಕುಳಿದ ವ್ಯಕ್ತಿ. ‘ಇನ್ನೇನು ಶಿವಪ್ಪ ನಮ್ಮನ್ನು ಅಗಲಿದ’ ಎಂದು ಭಾವಿಸಿದ್ದ ಮನೆಯ ಕುಟುಂಬದವರಿಗೆ ಆಶ್ಚರ್ಯ ಜೊತೆಗೆ ಸಂತಸವೂ ಇಮ್ಮಡಿ ಆಗಿದೆ. ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರೂ ವ್ಯಕ್ತಿಯೊಬ್ಬರು ಮತ್ತೆ ಉಸಿರಾಡಿಸಿ ಅಚ್ಚರಿಗೊಳಿಸಿದ್ದಾರೆ.

ಭೂಮಿಯ ಋಣ, ದೇವರ ಕೃಪೆಯಿದ್ದರೆ ಮನುಷ್ಯ ಸಾವನ್ನೂ ಗೆಲ್ಲುತ್ತಾನೆ ಎನ್ನುವ ಮಾತಿದೆ. ಎಂಬುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಕೆಲವೊಂದು ಬಾರಿ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುವುದು ಕೇಳಿ ಬರುತ್ತಲೇ ಇರುತ್ತವೆ. ಇಂತಹ ಪ್ರತ್ಯಕ್ಷ ಘಟನೆಗೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣ ಎರಡನೇ ಬಾರಿಗೆ ಸಾಕ್ಷಿ ಆಗಿದೆ.

ಏನಿದು ಘಟನೆ

ನವಲಗುಂದ ಸಿದ್ದಾಪುರ ಓಣಿ ನಿವಾಸಿ ಶಿವಪ್ಪ ತೋಟದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶಿವಪ್ಪ ಅವರನ್ನು ಶನಿವಾರ ಚಿಕಿತ್ಸೆಗಾಗಿ ಅವರ ಕುಟುಂಬದವರು ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಎರಡು ದಿನಗಳಿಂದ ಶಿವಪ್ಪಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ರಾತ್ರಿ ವೇಳೆಗೆ ವೈದ್ಯರು ಕುಟುಂಬದವರನ್ನು ಕರೆದು ‘ಶಿವಪ್ಪ ಅವರು ನಿಧನರಾಗಿದ್ದಾರೆ. ದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ’ ಎಂದು ತಿಳಿಸಿದ್ದಾರೆ.

ಆಶ್ಚರ್ಯ ಕಾದಿತ್ತು

ವೈದ್ಯರ ಸಲಹೆ ಮೆರೆಗೆ ತೋಟದ ಕುಟುಂಬದವರು ದೇಹವನ್ನು ತಮ್ಮೂರಿಗೆ ತರಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ನಂತರ ವಾಹನವೊಂದರಲ್ಲಿ ದೇಹವನ್ನು ತೆಗೆದುಕೊಂಡು ನವಲಗುಂದ ಪಟ್ಟಣ ಪ್ರವೇಶ ಮಾಡುತ್ತಿದಂತೆ ‘ದೇವರ ಕೃಪೆಯೋ ತಮ್ಮೂರಿನ ಮಣ್ಣಿನ ಗಾಟಿಯೋ’ ಶಿವಪ್ಪ ಮತ್ತೆ ಉಸಿರಾಡಲು ಆರಂಭಿಸಿದ್ದಾರೆ. ಶಿವಪ್ಪ ಅಗಲಿದ ದುಃಖದಲ್ಲಿದ್ದ ತೋಟದ ಕುಟುಂಬದವರು, ಮನೆಯ ಹಿರಿಯ ಮತ್ತೆ ಉಸಿರಾಡಿಸುತ್ತಿರುವುದ್ದನ್ನು ಕಂಡು ಆಶ್ಚರ್ಯಕ್ಕೆ ಒಳಗಾದರು.

ಮತ್ತೆ ಆಸ್ಪತ್ರೆಗೆ ದಾಖಲು

ಶಿವಪ್ಪ ಬದುಕಿರುವುದನ್ನು ಗಮನಿಸಿದ ತೋಟದ ಕುಟುಂಬದವರು ತಕ್ಷಣವೇ ಚಿಕಿತ್ಸೆ ನೀಡಲು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಶಿವಪ್ಪ ಆರೋಗ್ಯ ಪರೀಕ್ಷಿಸಿದ ವೈದ್ಯರು ‘ಶಿವಪ್ಪ ಬದುಕಿದ್ದಾರೆ. ಆದರೆ ಪಲ್ಸ್ ರೇಟ್ ಕಡಿಮೆ ಇದೆ. ಮನೆಗೆ ಕರೆದುಕೊಂಡು ಹೋಗಿ’ ಎಂದು ತಿಳಿಸಿದ್ದಾರೆ. ಸಹೋದರ ಶಂಕ್ರಪ್ಪ ತೋಟದ ಅವರು ಶಿವಪ್ಪನನ್ನು ಮನೆಗೆ ಕರೆದುಕೊಂಡು ಹೋಗದೇ ಮತ್ತೊಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದರು.

ಚಿಕಿತ್ಸೆಗೆ ಸ್ಪಂದಿಸಿದ ಶಿವಪ್ಪ

ಶಿವಪ್ಪಗೆ ತಕ್ಷಣ ಚಿಕಿತ್ಸೆ ನೀಡಲು ಆರಂಭಿಸಿದ ವೈದ್ಯರು, ಆಕ್ಸಿಜನ್ ಡಿಪ್ ಮೂಲಕ ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಕ್ರಮೇಣ ಚಿಕಿತ್ಸೆಗೆ ಸ್ಪಂದಿಸಿರುವ ಶಿವಪ್ಪ, ಮಂಗಳವಾರ ಬೆಳಗ್ಗೆ ಮತ್ತೆ ಕಣ್ತೆರೆದು ನೋಡಿದ್ದಾರೆ. ‘ಶಿವಪ್ಪ ಇನ್ನಿಲ್ಲ’ ಎಂಬ ಸುದ್ದಿ ತಿಳಿದು ಮನೆಗೆ ಆಗಮಿಸಿದ್ದ ಸಂಬಂಧಿಗಳು, ಆಪ್ತರು ಆಶ್ಚರ್ಯಕ್ಕೆ ಒಳಗಾದರು. ಸಾವನ್ನು ಗೆದ್ದು, ಚಿಕಿತ್ಸೆಗೆ ಸ್ಪಂದಿಸಿರುವ ಶಿವಪ್ಪನ ಆರೋಗ್ಯದ ವಿಚಾರ ಚರ್ಚೆಗೆ ಕಾರಣವಾಗಿದೆ.

ಎರಡನೇ ಘಟನೆಗೆ ನವಲಗುಂದ ಸಾಕ್ಷಿ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪೂರ ಗ್ರಾಮದ ಬಸವರಾಜ ಪೂಜಾರ ಎಂಬುವವರ ಒಂದೂವರೆ ವರ್ಷದ ಮಗು ಆಕಾಶ ಆ.18ರಂದು ಸಾವನ್ನೇ ಗೆದ್ದು ಬದುಕುಳಿದ ಘಟನೆ ನಡೆದಿತ್ತು. ಹುಬ್ಬಳ್ಳಿ ಕಿಮ್ಸ್ ವೈದ್ಯರು ಮಗು ನಿಧನವಾಗಿದೆ ಎಂದು ದೃಢಿಕರಿಸಿದ ಬಳಿಕ ಇನ್ನೇನು ಮಣ್ಣು ಪಾಲು ಆಗುತ್ತಿದ್ದ ಮಗು ಮತ್ತೆ ಉಸಿರಾಟ ಆರಂಭಿಸಿತ್ತು. ಈ ಕುರಿತು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’, “ಸ್ಥಬ್ಧಗೊಂಡ ಹೃದಯ ಮಸಣದಲ್ಲಿ ಮಿಡಿಯಿತು’, ವೈದ್ಯರೇ ಘೋಷಿಸಿದ್ದರೂ ಬದುಕುಳಿದ ಮಗು” ಶೀರ್ಷಿಕೆಯಡಿ ವರದಿ ಮಾಡಿತ್ತು.

(ವರದಿ: ಪ್ರಹ್ಲಾದ ಗೌಡ ಬಿ.ಜಿ. ಹುಬ್ಬಳ್ಳಿ)

Whats_app_banner