Garlic Prices: ಕರ್ನಾಟಕದಲ್ಲಿ ಗ್ರಾಹಕರಿಗೆ ಬೆಳ್ಳುಳ್ಳಿ ದರ ಏರಿಕೆಯ ಬರೆ, ಬೆಳೆಗಾರರಿಗೆ ಬೆಳೆಹಾನಿ ಸಂಕಷ್ಟ
ದೇಶಾದ್ಯಂತ ಬೆಳ್ಳುಳ್ಳಿ ದರ ಗಗನಮುಖಿಯಾಗಿದೆ. ಕರ್ನಾಟಕದಲ್ಲಿ ಬೆಳ್ಳುಳ್ಳಿ ದರ ಮಾರ್ಚ್ ತನಕ ಏರುಗತಿಯಲ್ಲಿ ಸಾಗುವ ಸಾಧ್ಯತೆ ಇದೆ. ಬೆಳ್ಳುಳ್ಳಿ ಬೆಳೆಗಾರರಿಗೆ ಬೆಳಹಾನಿಯ ಕಾರಣ ನಷ್ಟ ಉಂಟಾಗಿದ್ದು, ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಟೊಮೆಟೋ, ಆಲೂಗಡ್ಡೆ, ಈರುಳ್ಳಿ ಮುಂತಾದ ನಿತ್ಯೋಪಯೋಗಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿ ಇಳಿದ ಬೆನ್ನಿಗೆ ಈಗ ಬೆಳ್ಳುಳ್ಳಿ ದರ ಗಗನಮುಖಿಯಾಗಿದೆ. ಕರ್ನಾಟಕದ ವಿವಿಧ ಚಿಲ್ಲರೆ ಮಾರುಕಟ್ಟೆಗಳಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕಿಲೋಗೆ 400 ರೂಪಾಯಿ ತಲುಪಿದೆ, ಹೈಬ್ರಿಡ್ ಬೆಳ್ಳುಳ್ಳಿಯ ದರ ಒಂದು ಕಿಲೋಗೆ 300 ರೂಪಾಯಿ ಆಗಿದೆ.
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ದಿನ ಹಿಂದೆ ಹೈಬ್ರಿಡ್ ಬೆಳ್ಳುಳ್ಳಿ ದರ 260 ರೂಪಾಯಿ ಇತ್ತು. ಇದೇ ರೀತಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲೂ ವಾರದಿಂದ ವಾರದಕ್ಕೆ ಬೆಳ್ಳುಳ್ಳಿ ಮಾರಾಟ ದರ ಹೆಚ್ಚಳವಾಗುತ್ತಲೇ ಇದೆ.
ಕರ್ನಾಟಕದಲ್ಲಿ ಮಾರ್ಚ್ ಅಂತ್ಯದ ತನಕ ಬೆಳ್ಳುಳ್ಳಿ ದರ ಗಗನಮುಖಿ ಸಾಧ್ಯತೆ
ಕರ್ನಾಟಕದಲ್ಲ ಬಾಗಲಕೋಟೆ, ಚಿಕ್ಕಮಗಳೂರು ಮತ್ತು ಹಾವೇರಿ, ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಹೈಬ್ರಿಡ್ ಬೆಳ್ಳುಳ್ಳಿ ಮಧ್ಯಪ್ರದೇಶದಿಂದ ಪೂರೈಕೆಯಾಗುತ್ತದೆ. ಹೊಸ ಬೆಳ್ಳುಳ್ಳಿ ಇಳುವರಿ ಜನವರಿಯಲ್ಲಿ ಕಟಾವಿಗೆ ಬರಲಿದ್ದು, ಮಾರ್ಚ್ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿವೆ. ಅಲ್ಲಿವರೆಗೆ ಬೆಳ್ಳುಳ್ಳಿ ದರ ಏರುಮುಖಿಯಾಗಿರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪರಿಣತರು ತಿಳಿಸಿದ್ದಾಗಿ ಪ್ರಜಾವಾಣಿ ವರದಿ ತಿಳಿಸಿದೆ.
ಚಾಮರಾಜನಗರದ ಹನೂರು ಮತ್ತು ಗುಂಡ್ಲುಪೇಟೆ ತಾಲೂಕುಗಳಲ್ಲಿ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲೇ ಬೆಳ್ಳುಳ್ಳಿ ಕಟಾವು ಆಗಿದೆ. ಆಗ ಕಿಲೋಗೆ 250 ರೂಪಾಯಿ ಇತ್ತು. ಆವಕ ಹೆಚ್ಚಿದ ಕೂಡಲೇ ಕಿಲೋಗೆ 130 ರೂಪಾಯಿಗೆ ಬೆಲೆ ಇಳಿಯಿತು. ಇದರಿಂದ ಬೆಳ್ಳುಳ್ಳಿ ಬೆಳೆಗಾರರಿಗೆ ನಷ್ಟವಾಗಿದೆ ಎಂದು ಸ್ಥಳೀಯ ರೈತರು ಹೇಳಿದ್ದಾಗಿ ಪ್ರಜಾವಾಣಿ ವರದಿ ವಿವರಿಸಿದೆ.
ದೇಶದ ವಿವಿಧೆ ಬೆಳ್ಳುಳ್ಳಿ ದರ ಕಿಲೋಗೆ 400 ರೂಪಾಯಿ
ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ಪೂರೈಕೆ ಕಡಿಮೆ ಆಗಿರುವ ಕಾರಣ ದರ ಕಿಲೋಗೆ 400 ರೂಪಾಯಿ ತಲುಪಿದೆ. ದೇಶಾದ್ಯಂತ ಹೆಚ್ಚು ಬಳಕೆಯಾಗುವ ಮಸಾಲೆ ಪದಾರ್ಥ ಬೆಳ್ಳುಳ್ಳಿ. ಕೆಲವು ದಿನಗಳ ಹಿಂದೆ ಚಿಲ್ಲರೆ ಮಾರುಕಟ್ಟೆ ದರ 300 ರೂಪಾಯಿ ಇತ್ತು. ಈಗ ಅದು 400 ರೂಪಾಯಿಗೆ ಏರಿದೆ. ಈ ಬೆಲೆ ಏರಿಕೆ ಈ ತಿಂಗಳ ಕೊನೆವರೆಗೂ ಮುಂದುವರಿಯಬಹುದು.
ಬೆಳ್ಳುಳ್ಳಿಯ ಸಗಟು ಬೆಲೆಗಳು ಕೂಡ ಏರಿಕೆ ಕಂಡಿದ್ದು, ಸಗಟು ಮಾರುಕಟ್ಟೆಗಳಲ್ಲಿ 130-140 ರೂಪಾಯಿಗೆ ಮಾರಾಟವಾಗುತ್ತಿದೆ. ಇದೇ ವೇಳೆ ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ಸಗಟು ದರದಲ್ಲಿ ಕೆಜಿಗೆ 220-250 ರೂ.ಗೆ ಮಾರಾಟವಾಗುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಬೆಳ್ಳುಳ್ಳಿ ದರ ದುಪ್ಪಟ್ಟಾಗಲು ಕಾರಣವೇನು?
ಈರುಳ್ಳಿಯ ನಂತರ ಹೆಚ್ಚು ಬಳಕೆಯಲ್ಲಿರುವ ಮಸಾಲೆ ಪದಾರ್ಥ ಬೆಳ್ಳುಳ್ಳಿ. ಕೇವಲ ಒಂದು ವಾರದ ಅವಧಿಯಲ್ಲಿ ಬೆಳ್ಳುಳ್ಳಿ ದರ ದುಪ್ಪಟ್ಟಾಗಿದೆ. ಮೈಚಾಂಗ್ ಚಂಡಮಾರುತವು ಅಕಾಲಿಕ ಮಳೆ ಸುರಿಯುವಂತೆ ಮಾಡಿತು. ಇದರಿಂದಾಗಿ ಬೆಳ್ಳುಳ್ಳಿ ಬೆಳೆಯುವ ಭಾಗದಲ್ಲಿ ಬೆಳೆಹಾನಿ ಉಂಟಾಗಿದೆ.ಹೀಗೆ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾನಿಯಾಗಿ, ಪೂರೈಕೆ ಕಡಿಮೆಯಾಗಿರುವುದು ಬೆಲೆ ಏರಿಕೆ ಕಾರಣ.