ಕನ್ನಡ ಸುದ್ದಿ  /  ಕರ್ನಾಟಕ  /  Interesting News: ಮಳೆಗಾಲದಲ್ಲಿ ಜೇನಿನ ಕುಟುಂಬ ಹೇಗಿರುತ್ತದೆ, ನೀವೇನು ಮಾಡಬೇಕು , ಆಸಕ್ತಿದಾಯಕ 10 ವಿಷಯ

Interesting News: ಮಳೆಗಾಲದಲ್ಲಿ ಜೇನಿನ ಕುಟುಂಬ ಹೇಗಿರುತ್ತದೆ, ನೀವೇನು ಮಾಡಬೇಕು , ಆಸಕ್ತಿದಾಯಕ 10 ವಿಷಯ

ಜೇನು ಸಾಕಣೆ( Honey bee) ಸವಾಲಿನ ಕೆಲಸವೇ. ಒಂದು ಚೂರು ವ್ಯತ್ಯಾಸ ಆದರೆ ಹುಳುಗಳು ಹಾರಿಹೋಗಬಹುದು. ಅದರಲ್ಲೂ ಮಳೆಗಾಲದಲ್ಲಂತೂ( Monsoon) ಇನ್ನೂ ಸವಾಲಿನ ಕೆಲಸವೇ.

ಮಳೆಗಾಲದಲ್ಲಿ ಜೇನು ಸಾಕಣೆ ಸವಾಲು ಹಲವು.
ಮಳೆಗಾಲದಲ್ಲಿ ಜೇನು ಸಾಕಣೆ ಸವಾಲು ಹಲವು.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಜೇನ್ನೊಣಗಳಿಗೆ ಕಷ್ಟಕಾಲ ಆರಂಭವಾದಂತೆ.ಮರಗಿಡಗಳಲ್ಲಿ ಹೂವುಗಳಿರುವುದಿಲ್ಲ.ಇರುವ ಕೆಲವು ಹೂವುಗಳು ಮಳೆಯಿಂದ ಒದ್ದೆಯಾಗಿ ಪರಾಗ ಪುಷ್ಪರಸಗಳು ಸಿಗುವುದಿಲ್ಲ.ಕೆಲವು ದಿನಗಳಲ್ಲಿ ಆಹಾರ ತರಲು ಹೊರಗೆ ಹೋಗದಷ್ಟು ಮಳೆ.ಕೆಲವೊಮ್ಮೆ ಹೊರಗೆ ಹೋದರೆ ಮಳೆಗೆ ಒದ್ದೆಯಾಗಿ ಗೂಡು ಸೇರುವುದೂ ನಿಶ್ಚಿತವಲ್ಲ. ಮುಂದಿನ ಮೂರ್ನಾಲ್ಕು ತಿಂಗಳುಗಳು ಇವುಗಳಿಗೆ ಅಭಾವಕಾಲ.ಅದರೊಂದಿಗೆ ಮಯಣದ ಹುಳ,ಕಣಜದ ಹುಳ ಮೊದಲಾದ ಶತ್ರುಗಳು ಈ ಸಮಯದಲ್ಲೇ ತುಂಬಾ ತೊಂದರೆ ಕೊಡುತ್ತವೆ.ಇಂತಹ ಸಮಯದಲ್ಲಿ ಕುಟುಂಬವನ್ನು ಕಾಪಾಡಿಕೊಳ್ಳಲು,ಪೆಟ್ಟಿಗೆಯೊಳಗಿನ ಶಾಖವನ್ನು ಕಾಯ್ದುಕೊಳ್ಳಲು ಕೆಲಸಗಾರ ನೊಣಗಳು ಇನ್ನಿಲ್ಲದ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದು ತಜ್ಞರ ಮಾತು.

  • ಮಳೆಗಾಲ ಆರಂಭವಾಗುವ ಮೊದಲೇ ಪೆಟ್ಟಿಗೆಗೆ ಮಳೆನೀರು ತಾಗದಂತೆ ಪ್ಲಾಸ್ಟಿಕ್ ಹಾಳೆಯನ್ನು ಮುಚ್ಚಿ ಬಿಗಿಯಾಗಿ ಹಗ್ಗದಿಂದ ಕಟ್ಟಿಡುವುದು ಒಳ್ಳೆಯದು.
  • ಮಳೆ ಬಿದ್ದು ಭೂಮಿ ತಂಪಾಗುತ್ತಿದ್ದಂತೆ ಜೇನುಕೋಣೆಗಳನ್ನು ತೆಗೆದು ಪೆಟ್ಟೆಗೆಯೊಳಗಡೆ ಶಾಖವನ್ನು ಕಾಪಾಡಲು ಅನುಕೂಲವಾಗುವಂತೆ ಸ್ಥಳಾವಕಾಶವನ್ನು ಕಡಿಮೆ ಮಾಡಿಕೊಡುವುದರಿಂದ ಅವುಗಳ ರಕ್ಷಣೆ ಸಾಧ್ಯ
  • ಮುಚ್ಚಳದ ಒಳಗಡೆ ಆಹಾರ ಇಡಲು ಸ್ಥಳದ ಅಭಾವ ಇದ್ದರೆ ಕೋಣೆಯ ಮೇಲ್ಭಾಗದಲ್ಲಿ ಮುಚ್ಚಳದ ಒಳಗೆ ಮುಚ್ಚುವ ಹಲಗೆಯನ್ನು ಮುಚ್ಚಿ ಅದರ ಮೇಲೆ ಆಹಾರವನ್ನು ಇಟ್ಟು, ಮುಚ್ಚಳವನ್ನು ಮುಚ್ಚಬೇಕು.
  • ಇದ್ದ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವ ಅನಿವಾರ್ಯತೆ ಇವುಗಳಿಗೆ ಬಂದೊದಗುತ್ತದೆ.ಕಡಿಮೆ ಆಹಾರ ಸೇವಿಸುವುದರಿಂದ ಶತ್ರುಗಳನ್ನು ಎದುರಿಸುವ ಸಾಮರ್ಥ್ಯವು ಕಡಿಮೆಯಾಗಿ ಬೇಗನೆ ಶತ್ರುಗಳ ಧಾಳಿಗೆ ಒಳಗಾಗಿ ಪೆಟ್ಟಿಗೆಯನ್ನು ಬಿಟ್ಟು ಪರಾರಿ ಆಗಲು ತಯಾರಿ ನಡೆಸುತ್ತವೆ. ಪರಾರಿ ಆದ ಕುಟುಂಬ ಹೊರಗಿನ ವಾತಾವರಣದಲ್ಲಿ ಆಹಾರ ಇಲ್ಲದೇ,ಕಣಜದ ಹುಳದ ದಾಳಿಗೊಳಗಾಗಿ ನಾಶವಾಗುತ್ತವೆ.
  • 1:1ಸಕ್ಕರೆ ಮತ್ತು ನೀರಿನ ಮಿಶ್ರಣವನ್ನು ಚಿಟಿಕೆ ಅರಸಿನ ಹುಡಿ ಹಾಕಿ, ಜೂನ್ ಎರಡನೇ ಅಥವಾ ಮೂರನೇ ವಾರದಿಂದ ಪ್ರತಿ ಹತ್ತು ದಿನಗಳಿಗೊಮ್ಮೆಎಂಟು ಫ್ರೇಂ ಗಳಲ್ಲಿಯೂ ನೊಣಗಳಿರುವ ಕುಟುಂಬಕ್ಕೆ 300-400ಎಂ.ಎಲ್.ನಷ್ಟು ಕೊಡಬೇಕು. 500ಎಂ.ಎಲ್.ಗಿಂತ ಹೆಚ್ಚು ಕೊಡುವ ಅಗತ್ಯವಿಲ್ಲ. ಹೆಚ್ಚು ಕೊಟ್ಟಾಗ ಎರಿಗಳಲ್ಲೆಲ್ಲಾ ಸಕ್ಕರೆ ದ್ರಾವಣವನ್ನು ತುಂಬಿಸಿ ರಾಣಿಗೆ ಮೊಟ್ಟೆ ಇಡಲು ಸ್ಥಳವಿಲ್ಲದೆ ಕುಟುಂಬ ಕ್ಷೀಣವಾಗುವ ಆತಂಕವೂ ಎದುರಾಗಬಹುದು.
  • ಮಳೆ ಬಂದು ವಾತಾವರಣ ತಂಪಾಗುವ ಮೊದಲೇ ಸಕ್ಕರೆ ದ್ರಾವಣವನ್ನು ಕೊಟ್ಟರೆ ಅದನ್ನು ಕುಡಿದು,ಮೊಟ್ಟೆ ಮರಿ ಇಲ್ಲದ ಕೆಲವು ಕುಟುಂಬ ಮರುದಿನವೇ ಪರಾರಿ ಆಗುವ ಸಾಧ್ಯತೆ ಇದೆ.
  • ಅಭಾವ ಕಾಲದಲ್ಲಿ ಸಕ್ಕರೆ ದ್ರಾವಣವನ್ನು ಕೊಟ್ಟಾಗ ಸ್ವೀಕರಿಸದೆ ಇದ್ದರೆ ಆ ಕುಟುಂಬ ಏನೋ ತೊಂದರೆಗೆ ಒಳಗಾಗಿರುವ ಸಾಧ್ಯತೆ ಇದೆ.
  • ಆಹಾರವನ್ನು ಪೆಟ್ಟಿಗೆಯ ಒಳಗಡೆಯೇ ಕೊಡಬೇಕು. ಸುತ್ತಮುತ್ತಲಿನ ಎಲ್ಲಾ ಕುಟುಂಬಗಳಿಗೂ ಒಮ್ಮೆಲೇ ಕೊಡಬೇಕು.ಇದರಿಂದ ಪರಸ್ಪರ ಕಚ್ಚಾಡಿಕೊಂಡು ಸಾಯುವುದನ್ನು ತಡೆಯಬಹುದು.
  • ಮಳೆಗಾಲ ಕಳೆಯುವುದು ತುಂಬಾ ಕಷ್ಟ.ಜೇನುಕುಟುಂಬಗಳನ್ನು ಮಳೆಗಾಲದಲ್ಲಿ ಹೇಗಾದರೂ ಮಾಡಿ ಉಳಿಸಿಕೊಂಡು ಮಳೆಗಾಲ ಮುಗಿಯುವ ಸಮಯದಲ್ಲಿ ಬಲಿಷ್ಠವಾಗಿರುವಂತೆ ನೋಡಿಕೊಳ್ಳುವುದು ಜೇನು ಕೃಷಿಕರಿಗೆ ಒಂದು ರೀತಿಯ ಸವಾಲೇ ಸರಿ.ಕೆಲವು ಜೇನು ಕುಟುಂಬಗಳು ಮಳೆಗಾಲದಲ್ಲಿ ಕ್ಷೀಣವಾಗ್ತಾ ಆಗ್ತಾ ಮಳೆಗಾಲ ಕಳೆದೊಡನೆ ಪರಾರಿ ಆಗುವುದಿದೆ.
  • ಮಳೆಗಾಲ ಪ್ರಾರಂಭವಾಗುವಾಗಲೇ ಪರಾರಿ ಆಗಲು ಪ್ರಯತ್ನಿಸುವ ಕುಟುಂಬವನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನ ವ್ಯರ್ಥ.ಅದಾಗಲೇ ರಾಣಿಯು ಮೊಟ್ಟೆ ಇಡುವುದನ್ನು ನಿಲ್ಲಿಸಿ ಕೆಲಸಗಾರ ನೊಣಗಳು ಪರಾರಿಗೆ ಸಿದ್ಧತೆ ಮಾಡಿಕೊಂಡಿರುತ್ತವೆ.ಒಂದುವೇಳೆ ಕಷ್ಟಪಟ್ಟು ಉಳಿಸಿದರೂ ಕೆಲವು ದಿನಗಳಲ್ಲಿ ಪರಾರಿ ಆಗುವುದು ನಿಶ್ಚಿತ.

( ಪೂರಕ ಮಾಹಿತಿ: ಶಿರಂಕಲ್ಲು ಕೃಷ್ಣ ಭಟ್)

ಟ್ರೆಂಡಿಂಗ್​ ಸುದ್ದಿ