Bengaluru From Space: ಬಾಹ್ಯಾಕಾಶದಿಂದ ಹೀಗೆ ಕಾಣುತ್ತೆ 'ನಮ್ಮ ಬೆಂಗಳೂರು': ಹೊಟ್ಟೆ ತುಂಬಿಸುವ ನಗರ, ಮನಸ್ಸನ್ನೂ ತುಂಬಿದಾಗ..
ಕನ್ನಡ ಸುದ್ದಿ  /  ಕರ್ನಾಟಕ  /  Bengaluru From Space: ಬಾಹ್ಯಾಕಾಶದಿಂದ ಹೀಗೆ ಕಾಣುತ್ತೆ 'ನಮ್ಮ ಬೆಂಗಳೂರು': ಹೊಟ್ಟೆ ತುಂಬಿಸುವ ನಗರ, ಮನಸ್ಸನ್ನೂ ತುಂಬಿದಾಗ..

Bengaluru From Space: ಬಾಹ್ಯಾಕಾಶದಿಂದ ಹೀಗೆ ಕಾಣುತ್ತೆ 'ನಮ್ಮ ಬೆಂಗಳೂರು': ಹೊಟ್ಟೆ ತುಂಬಿಸುವ ನಗರ, ಮನಸ್ಸನ್ನೂ ತುಂಬಿದಾಗ..

ಭಾರತದ ಐಟಿ ರಾಜಧಾನಿ, ಉದ್ಯಾನ ನಗರಿ, ನಾಡಪ್ರಭು ಕೆಂಪೇಗೌಡ ನಿರ್ಮಿತ ಈ ಬೆಂಗಳೂರು, ಬಾಹ್ಯಾಕಾಶದಿಂದ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌) ಉತ್ತರ ನೀಡಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಇತ್ತೀಚೆಗೆ ಬೆಂಗಳೂರಿನ ವಿಡಿಯೋ ಸೆರೆಹಿಡಿದಿದೆ.

ಬಾಹ್ಯಾಕಾಶದಿಂದ ಕಂಡ ಬೆಂಗಳೂರು
ಬಾಹ್ಯಾಕಾಶದಿಂದ ಕಂಡ ಬೆಂಗಳೂರು (Verified Twitter)

ಬೆಂಗಳೂರು: 'ನಮ್ಮ ಬೆಂಗಳೂರು' ಕನ್ನಡಿಗರ ಹೃದಯ ಸಾಮ್ರಾಟ. ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಮನಸೋಲದ ವ್ಯಕ್ತಿ ಯಾರು ತಾನೆ ಇದ್ದಾರೆ ಹೇಳಿ? ಉದ್ಯೋಗ ಅರಸಿ ಬರುವ ಲಕ್ಷಾಂತರ ಜನರ ಹೊಟ್ಟೆ ತುಂಬಿಸುವ ಈ ಮಾಯಾನಗರಿ, ಯುವ ಕನಸುಗಳಿಗೆ ನೀರೆರೆದು ಪೋಷಿಸುವ ಸುಂದರ ನಗರ.

ಭಾರತದ ಐಟಿ ರಾಜಧಾನಿ, ಉದ್ಯಾನ ನಗರಿ, ನಾಡಪ್ರಭು ಕೆಂಪೇಗೌಡ ನಿರ್ಮಿತ ಈ ಬೆಂಗಳೂರು, ಬಾಹ್ಯಾಕಾಶದಿಂದ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌) ಉತ್ತರ ನೀಡಿದೆ. ಹೌದು, ಐಎಸ್‌ಎಸ್‌ನಿಂದ ಸೆರೆಹಿಡಿದ ಬೆಂಗಳೂರು ನಗರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಭೂಮಿಯ ಮೇಲ್ಮೈಯಿಂದ ಸುಮಾರು 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಇತ್ತೀಚೆಗೆ ಬೆಂಗಳೂರಿನ ವಿಡಿಯೋ ಸೆರೆಹಿಡಿದಿದೆ. ಅಲ್ಲದೇ ಬೆಂಗಳುರು ನಗರದ ವಿಡಿಯೋವನ್ನು ಐಎಸ್‌ಎಸ್‌ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಕೂಡ ಹಂಚಿಕೊಂಡಿದೆ.

ಬಾಹ್ಯಾಕಾಶ ನಿಲ್ದಾಣವು ಫೆಬ್ರವರಿ 25(ಶನಿವಾರ) ಬೆಳಗ್ಗೆ ಮೊದಲು ಕರ್ನಾಟಕ ರಾಜ್ಯದ ನೋಟವನ್ನು ಸೆರೆಹಿಡಿಯಿತು. ಬಳಿಕ ಶ್ರೀಲಂಕಾ ಮೇಲೆ ಹಾದುಹೋಯಿತು. ಐಎಸ್‌ಎಸ್‌ ಕರ್ನಾಟಕದ ಮೇಲೆ ಇದ್ದಾಗ, ರಾಜಧಾನಿ ಬೆಂಗಳೂರಿನ ವಿಡಿಯೋವನ್ನು ಸೆರೆಹಿಡಿದಿದೆ.

"ಈನೋಟವು ಭಾರತದ ದಕ್ಷಿಣ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ನಗರದ್ದಾಗಿದೆ.ಈ ನೋಟವು ತಲೆಕೆಳಗಾಗಿದೆ ಎಂಬುದನ್ನು ನೀವು ಗಮನಿಸಬಹುದು. ಏಕೆಂದರೆ ಸೋಯುಜ್ MS-23 ಅನ್ನು ಡಾಕಿಂಗ್ ಮಾಡುವ ತಯಾರಿಯಲ್ಲಿ, ಐಎಸ್‌ಎಸ್‌ ಅನ್ನು180 ಡಿಗ್ರಿಗಳಷ್ಟು ತಿರುಗಿಸಲಾಗಿತ್ತು.." ಎಂದು ಟ್ವಿಟ್ಟರ್‌ನಲ್ಲಿ ಹೇಳಲಾಗಿದೆ.

‌ಮತ್ತೊಂದು ಪ್ರತ್ಯೇಕ ಟ್ವಿಟ್ಟರ್ ಪೋಸ್ಟ್‌ನಲ್ಲಿ, ಬಾಹ್ಯಾಕಾಶ ನಿಲ್ದಾಣವು ಹಾದುಹೋಗುವ ನಗರಗಳು ಮತ್ತು ಪಟ್ಟಣಗಳ ನಕ್ಷೆಯನ್ನು ಸಹ ಐಎಸ್‌ಎಸ್‌ ಬಿಡುಗಡೆ ಮಾಡಿದೆ. ಟ್ವಿಟರ್ ಬಳಕೆದಾರರ ಪ್ರಶ್ನೆಗಳ ಸರಣಿಗೆ ಉತ್ತರಿಸುತ್ತಾ, ಬಾಹ್ಯಾಕಾಶ ನಿಲ್ದಾಣವು ದೃಶ್ಯದ ವಿವರಗಳನ್ನು ಸಹ ಹಂಚಿಕೊಂಡಿದೆ. "ಇದು ಸರಿಸುಮಾರು 260 ಮೈಲುಗಳು (418 ಕಿಲೋಮೀಟರ್) ಎತ್ತರದಿಂದ ಸೆರೆಹಿಡಿಯಲಾದ ವಿಡಿಯೋ ಆಗಿದ್ದು, ಆ ಬಿಳಿ ಕಲೆಗಳು ಮೋಡಗಳಾಗಿವೆ.." ಎಂದು ಐಎಸ್‌ಎಸ್‌ ಸ್ಪಷ್ಟಪಡಿಸಿದೆ.

"ಈ ಕ್ಯಾಮರಾ ಜೂಮ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ (80-300mm). ಆದರೆ ಇದು "ರಸ್ತೆ ಮಟ್ಟ"ಕ್ಕೆ ಝೂಮ್ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ನಗರವನ್ನು ಅವಲಂಬಿಸಿ ನೀವು ರಸ್ತೆಗಳ ವಿನ್ಯಾಸವನ್ನು ನೋಡಬಹುದು. ಇದು ಫ್ರೇಮ್ ಗಾತ್ರದಲ್ಲಿ ಸುಮಾರು 120x90 ಮೈಲುಗಳಾಗಿದೆ.." ಎಂದು ಐಸ್‌ಎಸ್‌ಎಸ್‌ ತಿಳಿಸಿದೆ.

"ಈ ಕ್ಯಾಮರಾವನ್ನು ಭೂಮಿಯ ಕೆಳಗಿನ ವಿಶಾಲವಾದ ನೋಟಕ್ಕೆ ಮೀಸಲಿಡಲಾಗಿದೆ. ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿಯನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ವಿವರಿಸುತ್ತದೆ.." ಎಂದು ಐಎಸ್‌ಎಸ್‌ ಹೇಳಿದೆ.

ಐಎಸ್‌ಎಸ್‌ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡ ನಂತರ, ಇದುವರೆಗೂ ಸುಮಾರು 13,000 ವೀಕ್ಷಣೆಗಳನ್ನು ಕಂಡಿದೆ. ಹಲವಾರು ನೆಟ್ಟಿಗರು ಬೆಂಗಳೂರು ನಗರದ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶದಿಂದ ಬೆಂಗಳೂರನ್ನು ನೋಡುವ ಸೌಭಾಗ್ಯ ಕರುಣಿಸಿದ ಐಎಸ್‌ಎಸ್‌ಗೆ ಧನ್ಯವಾದಗಳು ಎಂದು ನೆಟ್ಟಿಗರು ಹೇಳಿದ್ದಾರೆ.

ಏತನ್ಮಧ್ಯೆ, ಈಗ ಮೂರು ದಶಕಗಳಿಗೂ ಹೆಚ್ಚು ಕಾಲ ಐಎಸ್‌ಎಸ್‌ ಬಾಹ್ಯಾಕಾಶ ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿಗಳ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈನಿಲ್ದಾಣವು ಬಾಹ್ಯಾಕಾಶದಲ್ಲಿ ಮಾನವರ ಏಕೈಕ ಶಾಶ್ವತ ನಿವಾಸವಾಗಿ ಕಾರ್ಯನಿರ್ವಹಿಸುತ್ತದೆ. ಬಾಹ್ಯಾಕಾಶ ನಿಲ್ದಾಣವು ಸುಮಾರು 90 ನಿಮಿಷಗಳಲ್ಲಿ ಒಂದು ಕಕ್ಷೆಯನ್ನು ಪೂರ್ಣಗೊಳಿಸುತ್ತದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ವಾಸಯೋಗ್ಯ ಉಪಗ್ರಹವಾಗಿದ್ದು, ಇದು ಪ್ರಸ್ತುತವಾಗಿ ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸುತ್ತುತ್ತಿದೆ. ಬಾಹ್ಯಾಕಾಶ ಸಂಶೋಧನಾ ಪ್ರಯೋಗಾಲಯವಾಗಿ ಇದು ಕಾರ್ಯನಿರ್ವಹಿಸುತ್ತಿದೆ.

Whats_app_banner