ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ಬಿಎಂಟಿಸಿ ಚಾಲಕರ ಮೇಲೆ ಹಲ್ಲೆ; ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಮಹಾನಗರ ಸಾರಿಗೆ ಸಿಬ್ಬಂದಿ
ಬೆಂಗಳೂರಲ್ಲಿ ಬಿಎಂಟಿಸಿ ಚಾಲಕರ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿದೆ. ನವೆಂಬರ್ ತಿಂಗಳಲ್ಲೂ ಮೂರು ಹಲ್ಲೆ ಪ್ರಕರಣ ದಾಖಲಾಗಿದ್ದವು. ಅದುವರೆಗೂ ಮೂರು ತಿಂಗಳಲ್ಲಿ 9 ಕೇಸ್ ದಾಖಲಾಗಿದ್ದವು. ಹೀಗಾಗಿ, ನ್ಯಾಯಕ್ಕಾಗಿ ಆಗ್ರಹಿಸಿ ಮಹಾನಗರ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕರ/ ನಿರ್ವಾಹಕರ ಮೇಲೆ ಹಲ್ಲೆ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದೆ ಸ್ಕೂಟರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆಯಿತು ಎಂಬ ಕಾರಣಕ್ಕೆ ಬಸ್ ಒಳಕ್ಕೆ ನುಗ್ಗಿದ ಮಹಿಳೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬಸ್ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದೇ ವೇಳೆ, ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸುವ ತನಕ ಕೆಲಸ ಮಾಡುವುದಿಲ್ಲ ಎಂದು ಬಿಎಂಟಿಸಿ ಇಲೆಕ್ಟ್ರಿಕ್ ಬಸ್ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಇನ್ನೊಂದೆಡೆ, ಹಲ್ಲೆ ನಡೆಸಿದ ಮಹಿಳೆಯೂ ಆಸ್ಪತ್ರೆಗೆ ದಾಖಲಾಗಿದ್ದು, ಬಿಎಂಟಿಸಿ ಚಾಲಕನದ್ದೇ ತಪ್ಪು ಎಂದು ಆರೋಪಿಸಿದ್ದಾರೆ.
ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ; ಶನಿವಾರದ ಘಟನೆ
ಬೆಂಗಳೂರಿನ ಸುಮನಹಳ್ಳಿ ಸಮೀಪ ಶನಿವಾರ (ಡಿಸೆಂಬರ್ 14) ಜಾಲಹಳ್ಳಿ ಕ್ರಾಸ್‌ನಿಂದ ಕೆ.ಆರ್.ಮಾರುಕಟ್ಟೆ ಕಡೆ ಹೋಗುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಒಂದು ಸ್ಕೂಟರ್ ಡಿಕ್ಕಿ ಹೊಡೆದಿತ್ತು. ಕೂಡಲೇ ಬಿದ್ದಲ್ಲಿಂದ ಎದ್ದು ಬಸ್‌ನೊಳಗೆ ನುಗ್ಗಿದ ಮಹಿಳೆ ಬಸ್‌ನಲ್ಲಿದ್ದ ಪ್ರಯಾಣಿಕರ ಎದುರೇ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಪ್ರಯಾಣಿಕರು ಮಧ್ಯಪ್ರವೇಶಿಸಿ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸಿದರೂ ಮಹಿಳೆ ಆ ಚಾಲಕನಿಗೆ ಹೊಡೆದ ಏಟಿಗೆ ಆತ ಬಸ್‌ನೊಳಗೆ ಬಿದ್ದ ದೃಶ್ಯ ವಿಡಿಯೋದಲ್ಲಿದೆ.
ಈ ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಫ್‌ಐಆರ್ ಕೂಡ ಆಗಿತ್ತು. ಕೇಸ್ ದಾಖಲಾದ ಬಳಿಕ ರಾತ್ರಿ ಮಹಿಳೆಯನ್ನು ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಇದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಖಂಡಿಸಿ ಬಿಎಂಟಿಸಿ ಡಿಪೋ 22ರ ಚಾಲಕರು ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಚಾಲಕನ ಮೇಲೆ ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಬೇಕು ಎಂದು ಡಿಪೋ ಎದುರು ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ, ಹಲ್ಲೆ ಮಾಡಿದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಅಪಘಾತ ಕೃತ್ಯದಲ್ಲಿ ಬಿಎಂಟಿಸಿ ಚಾಲಕನದ್ದೇ ತಪ್ಪು ಎಂದು ಆರೋಪಿಸಿ, ವಿಡಿಯೋ ಹೇಳಿಕೆ ನೀಡಿದ್ದಾಗಿ ಪಬ್ಲಿಕ್ ಟಿವಿ ವರದಿ ಮಾಡಿದೆ.
ಘಟನೆ ಸಂಬಂಧ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕ ಅಮರೇಶ್, ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಮಹಿಳೆಯ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹಲ್ಲೆ ನಡೆಸಿದ ಮಹಿಳೆ ಸವಿತಾ ಕೂಡ ಚಾಲಕನ ವಿರುದ್ಧ ದೂರು ನೀಡಿದ್ದಾರೆ. 'ನನ್ನ ಸ್ಕೂಟಿಯಲ್ಲಿ ಮಕ್ಕಳನ್ನು ಕರೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಸ್‌ನ ಚಾಲಕ ಪದೇಪದೆ ಹಾರ್ನ್ ಮಾಡುತ್ತಿದ್ದ. ಉದ್ದೇಶಪೂರ್ವಕವಾಗಿ ನನ್ನ ವಾಹನಕ್ಕೆ ಡಿಕ್ಕಿ ಹೊಡೆದ. ನಾನು ಕೆಳಗೆ ಬಿದ್ದೆ. ಹಲವು ಬಾರಿ ಈ ಜಾಗದಲ್ಲಿ ಅಪಘಾತಗಳು ಸಂಭವಿಸಿವೆ. ಜತೆಯಲ್ಲಿ ಮಕ್ಕಳು ಇದ್ದರು. ಮಕ್ಕಳಿಗೇನಾದರೂ ಆಗಿದ್ದರೆ ಎಂಬ ಭಯದ ಉದ್ವೇಗಕ್ಕೆ ಒಳಗಾಗಿ ಹಲ್ಲೆ ನಡೆಸಿದೆ. ಪೊಲೀಸ್ ಠಾಣೆಗೆ ಕರೆದರೂ ಚಾಲಕ ಬರಲು ಒಪ್ಪಲಿಲ್ಲ' ಎಂದು ಮಹಿಳೆಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಇದೇ ಮೊದಲಲ್ಲ
ಬೆಂಗಳೂರಿನಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಇದೇ ಮೊದಲಲ್ಲ. ನವೆಂಬರ್‌ನಲ್ಲಿ ಮೂರು ಹಲ್ಲೆ ಪ್ರಕರಣ ದಾಖಲಾಗಿದ್ದವು. ಮೂರು ತಿಂಗಳಲ್ಲಿ ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಒಂಬತ್ತು ಪ್ರಕರಣಗಳು ವರದಿಯಾಗಿವೆ.
ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಪದೇಪದೆ ಹಲ್ಲೆ ನಡೆಯುತ್ತಿರುವುದನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರಿಗೆ ಪತ್ರ ಬರೆದಿದ್ದರು. ಭವಿಷ್ಯದಲ್ಲಿ ಈ ರೀತಿಯ ಹಲ್ಲೆ ಪ್ರಕರಣಗಳು ನಡೆಯದಂತೆ ನಗರ ಎಲ್ಲಾ ಠಾಣೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದರು.