Siddaramaiah: ಕರ್ನಾಟಕ ವಿಧಾನಸಭೆ ಚುನಾವಣೆ; ನಾನು ಹಿಂದೂ ವಿರೋಧಿ ಅಂತ 2018ರಲ್ಲಿ ಸುಳ್ಳು ಪ್ರಚಾರ ಮಾಡಿದ್ರು: ಮಾಜಿ ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಜನರು ಆಡಳಿತಾರೂಢ ಬಿಜೆಪಿಯನ್ನು ಮನೆಗೆ ಕಳುಹಿಸಲು ಬಯಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಮತದಾರರನ್ನು ದಾರಿತಪ್ಪಿಸಿದಂತೆ ಈ ಬಾರಿ ಕೇಸರಿ ಸಂಘಟನೆಗೆ ಸಾಧ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯ (Assembly Election) ಸಂದರ್ಭದಲ್ಲಿ ನಾನು ಹಿಂದೂ ವಿರೋಧಿ ಎಂದು ಸುಳ್ಳು ಪ್ರಚಾರ ಮಾಡಲಾಗಿತ್ತು. ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ಜಾರೆ.
ಇಂದು (ಏ.24, ಸೋಮವಾರ) ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆರೋಗ್ಯಕರ ಸ್ಪರ್ಧೆ ಚೆನ್ನಾಗಿರುತ್ತದೆ ಎಂದಿದ್ದಾರೆ.
ನೋಡಿ, ಆರೋಗ್ಯಕರ ಸ್ಪರ್ಧೆ ಇದ್ದರೆ ತಪ್ಪೇನಿಲ್ಲ, ಡಿಕೆ ಶಿವಕುಮಾರ್ ಸಿಎಂ ಆಗಬೇಕು. ಆಕಾಂಕ್ಷಿಯಾಗಿದ್ದರೆ ತಪ್ಪೇನಿದೆ ಎಂದು ಸಿದ್ದರಾಮಯ್ಯ ಪ್ರಶ್ನೆಸಿದ್ದಾರೆ.
ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರೆ ತಪ್ಪೇನಿಲ್ಲ. ಅಂತಿಮವಾಗಿ ಹೊಸದಾಗಿ ಆಯ್ಕೆಯಾಗಿ ಬರುವ ಶಾಸಕರು ಮುಂದಿನ ಸಿಎಂ ಯಾರು ಆಗಬೇಕೆಂಬುದನ್ನ ನಿರ್ಧರಿಸುತ್ತಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಜನರು ಆಡಳಿತಾರೂಢ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಮನೆಗೆ ಕಳುಹಿಸಲು ಬಯಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಮತದಾರರನ್ನು ದಾರಿತಪ್ಪಿಸಿದಂತೆ ಈ ಸಲ ಕೇಸರಿ ಸಂಘಟನೆಗೆ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ಸ್ಪಷ್ಟ ಜನಾದೇಶ ಸಿಕ್ಕಿತ್ತು, 2013ರಿಂದ 2018ರ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ನಾನು ಬಹುಸಂಖ್ಯಾತ ಸಮುದಾಯಗಳ ವಿರುದ್ಧ, ಮೇಲ್ವರ್ಗದ ವಿರುದ್ಧ ಹಾಗೂ ನಾನು ಹಿಂದುತ್ವ/ಹಿಂದೂ ಧರ್ಮದ ವಿರುದ್ಧ ಎಂದು ನನ್ನ ವಿರುದ್ಧ ಆರೋಪ ಮಾಡಿದ್ದರು. ಸುಳ್ಳು ಪ್ರಚಾರವು ಮೇಲುಗೈ ಸಾಧಿಸಿತ್ತು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಬಿಜೆಪಿಯ ಸುಳ್ಳು ಪ್ರಚಾರವನ್ನು ಜನರು ನಂಬುವುದಿಲ್ಲ. ಯಾಕೆಂದರೆ ಅವರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ, ಈ ಬಾರಿ ಬಿಜೆಪಿಯವರು ಹಿಂದುತ್ವ/ಹಿಂದೂ ರಾಷ್ಟ್ರ ಅಥವಾ ಹಿಂದೂ ಧರ್ಮದ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ. ಏಕೆಂದರೆ ಹಣದ ಬಲದಿಂದ ಅವರು ಈ ಬಾರಿ ಗೆಲ್ಲಲು ಬಯಸಿದ್ದಾರೆ. ಆದರೆ ಇದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸುಳ್ಳು ಪ್ರಚಾರದ ಮೂಲಕ ಬಿಜೆಪಿ 2018 ರ ಚುನಾವಣೆಯಲ್ಲಿ ಜನಾದೇಶವನ್ನು ತನ್ನ ಪರವಾಗಿ ತಿರುಗಿಸಲು ಪ್ರಯತ್ನಿಸಿತ್ತು. ಆದರೆ ಇದರಲ್ಲಿ ಹೆಚ್ಚು ಸಫಲವಾಗಿರಲಿಲ್ಲ. ಚುನಾವಣೆಯಲ್ಲಿ ಜಾತಿ ಮುಖ್ಯವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಈಗ ಸಮಸ್ಯೆಗಳೆಂದರೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಾಗಿದೆ. ಹಾಗೆ ಇನ್ನೂ ಹಲವಾರು ಸಮಸ್ಯೆಗಳಿವೆ. ಕರ್ನಾಟಕದ ಜನರು ಜಾತಿಯನ್ನು ಪರಿಗಣಿಸುವುದಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಮೇ 10ರಂದು ನಡೆಯಲಿರುವ ಚುನಾವಣೆ ನಿಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಹೋರಾಟವೇ ಎಂಬ ಪ್ರಶ್ನೆಗೆ ಅವರು, ಇದು ನನ್ನ ಮತ್ತು ಮೋದಿ ನಡುವಿನ ಹೋರಾಟವಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆ ವಿಷಯವನ್ನು ಚರ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಜನರಿಗೆ ಸಂಬಂಧಿಸಿದ ಹಲವಾರು ಸ್ಥಳೀಯ ಸಮಸ್ಯೆಗಳಿವೆ. ಇದು ಸಂಸತ್ ಚುನಾವಣೆಯಲ್ಲ, ರಾಜ್ಯ ವಿಧಾನಸಭೆಗೆ ಚುನಾವಣೆ. ಹೀಗಾಗಿ ರಾಜ್ಯದ ಜನರು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ 150 ಸ್ಥಾನಗಳನ್ನು ಗೆಲ್ಲುವುದಾಗಿ ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.