ಯಡಿಯೂರಪ್ಪ,ವಿಜಯೇಂದ್ರ ವಿರುದ್ಧ ಭಿನ್ನಮತೀಯರನ್ನು ಒಗ್ಗೂಡಿಸುತ್ತಿರುವ ಯತ್ನಾಳ್; ಸಿಗಲಿದೆಯೇ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಹುದ್ದೆ
ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ಬಂಡಾಯ ಮನೋಭಾವ. ಎಲ್ಲದನ್ನೂ ಪ್ರಶ್ನಿಸುತ್ತಲೇ ರಾಜಕೀಯವಾಗಿ ಬೆಳೆದವರು. ಈಗ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದವೇ ಗುಡುಗಿದ್ದಾರೆ. ಇದರ ಹಿಂದಿನ ಲೆಕ್ಕಾಚಾರಗಳ ವಿಶ್ಲೇಷಣೆ ಇಲ್ಲಿದೆವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು:ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ್ ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿ ಅಲ್ಲವೇ ಅಲ್ಲ. ಇದು ಅವರ ಸಮೀಪವರ್ತಿಗಳ ಅನಿಸಿಕೆ ಮಾತ್ರವಲ್ಲ, ವಿರೋಧಿಗಳ ಅಭಿಪ್ರಾಯವೂ ಹೌದು! ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕಳೆದ ಹಲವು ದಿನಗಳಿಂದ ಸಮರ ಸಾರಿದ್ದಾರೆ. ಇದಕ್ಕಾಗಿ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಕೇಂದ್ರ ಶಿಸ್ತು ಸಮಿತಿಗೆ ವಿವರಣೆ ನೀಡಿದ ನಂತರವೂ ಸುಮ್ಮನಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ರಚಿಸಬೇಕು ಮತ್ತು ಒಬ್ಬ ಪ್ರಾಮಾಣಿಕ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು. ಆತ ಭ್ರಷ್ಟನಾಗಿರಬಾರದು ಮತ್ತು ವಂಶಪಾರಂಪರ್ಯದಿಂದ ಬಂದಿರಬಾರದು ಎಂದು ಪರೋಕ್ಷವಾಗಿ ವಿಜಯೇಂದ್ರ ಮುಖ್ಯಮಂತ್ರಿ ಆಗಬಾರದು ಎಂದು ಗುಡುಗಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡು ಯತ್ನಾಳ್ ಟೀಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಯಡಿಯೂರಪ್ಪ ವಿರುದ್ಧ ಸದಾ ವಾಗ್ದಾಳಿ ನಡೆಸಲು ಯತ್ನಾಳ್ ಹಿಂದೆ ಬಿಜೆಪಿ ಕೇಂದ್ರ ವರಿಷ್ಠರು ಇದ್ದಾರೆ ಎಂಬ ಸಂಶಯ ಬಾರದೆ ಇರದು.
ಸದಾ ಗುಡುಗುವ ಯತ್ನಾಳ್
ಸಂಘ ಪರಿವಾರದ ಹಿನ್ನೆಲೆ ಇರುವ, ಹಿಂದುತ್ವದ ಪ್ರಖರವಾದಿ, ಲಿಂಗಾಯತ ನಾಯಕ ಮತ್ತು ಮಾಜಿ ಕೇಂದ್ರ ಸಚಿವರೂ ಆದ ಯತ್ನಾಳ್ ಅವರನ್ನು ಉಚ್ಛಾಟಿಸುವುದು ಅಷ್ಟು ಸುಲಭದ ಕೆಲಸ ಅಲ್ಲ. 2019 ರಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಕೇಂದ್ರ ನೆರವು ನೀಡುವುದು ತಡವಾಗಿತ್ತು. ಆಗ ಯತ್ನಾಳ್, ಪ್ರಧಾನಿ ಮೋದಿ ವಿರುದ್ಧವೇ ಗುಡುಗಿದ್ದರು. ಆಗಲೂ ಯತ್ನಾಳ್ ಗೆ ನೋಟಿಸ್ ನೀಡಲಾಗಿತ್ತಾದರೂ ಅದು ಅಂತಹ ಗಂಭೀರ ಪರಿಣಾಮವನ್ನೇನೂ ಬೀರಿರಲಿಲ್ಲ.
ನಾನು ಯಾರೊಬ್ಬರಿಗೂ ಹೆದರುವುದಿಲ್ಲ. ನನ್ನ ಮೂರು ದಶಕಗಳ ಸಾರ್ವಜನಿಕ ಬದುಕಿನಲ್ಲಿ ಜನರಿಗಾಗಿ ಮತ್ತು ಅಭಿವೃದ್ಧಿಗಾಗಿ ಮಾತನಾಡುತ್ತೇನೆ ಎಂದು ತಮ್ಮ ವಿವಾದಾತ್ಮಕ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ.
ಉತ್ತರ ಪ್ರದೇಶಯೋಗಿ ಆದಿತ್ಯನಾಥ ರೀತಿಯಲ್ಲೇ ಯತ್ನಾಳ್ ಸಹ ಪ್ರಚೋದಕ ಹೇಳಿಕೆಗಳಿಂದಲೇ ಪ್ರಚಾರಕ್ಕೆ ಬಂದಿದ್ದಾರೆ. 1994ರಲ್ಲಿ ಬಿಜಾಪುರ ನಗರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸನ ಸಭೆಗೆ ಆಯ್ಕೆಯಾಗಿದ್ದರು.
ಫೈರ್ ಬ್ರಾಂಡ್
1999ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ನಿಲ್ಲಿಸಬೇಕು ಎಂದು ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರದ ಮೇಲೆ ಒತ್ತಡ ಹೇರಿ ಎನ್ ಡಿಎ ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದ್ದರು. ಆಗ ಯತ್ನಾಳ್ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು. ವಾಜಪೇಯಿ ಅವರು 2002ರಲ್ಲಿ ಯತ್ನಾಳ್ ಅವರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.
ಇಂತಹ ಫೈರ್ ಬ್ರ್ಯಾಂಡ್ ಯತ್ನಾಳ್ ಅವರನ್ನು ಮಂತ್ರಿ ಮಾಡುವುದರ ಹಿಂದೆ ದಿವಂಗತ ಅನಂತಕುಮಾರ್ ಅವರ ಬಲವೂ ಇತ್ತು. ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಮತ್ತೊಬ್ಬ ವೀರಶೈವ ಲಿಂಗಾಯತ ನಾಯಕನನ್ನು ಯತ್ನಾಳ್ ಅವರಲ್ಲಿ ಕಂಡಿದ್ದರು.
ಎರಡು ಬಾರಿ ಉಚ್ಛಾಟನೆ
ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಯತ್ನಾಳ್ ಅವರನ್ನು ಬಿಜೆಪಿ 2010 ಮತ್ತು 2015ರಲ್ಲಿ ಎರಡು ಬಾರಿ ಉಚ್ಛಾಟಿಸಲಾಗಿತ್ತು. 2010ರಲ್ಲಿ ಉಚ್ಛಾಟಿಸಿದಾಗ ಯತ್ನಾಳ್ ಜೆಡಿಎಸ್ ಸೇರ್ಪಡೆಯಾಗಿದ್ದರು. ಮೂರು ವರ್ಷಗಳ ನಂತರ 2013ರಲ್ಲಿ ಬಿಜೆಪಿಗೆ ಮರಳಿದ್ದರು. 2015ರಲ್ಲಿ ವಿಧಾನಪರಿಷತ್ ಚುನಾವಣೆಗೆ ಪಕ್ಷದ ರೆಬೆಲ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಅವರನ್ನು ಉಚ್ಛಾಟಿಸಲಾಗಿತ್ತು. ಆದರೂ ಯತ್ನಾಳ್ ಗೆಲುವು ಸಾಧಿಸಿದ್ದರು. ಒಂದು ಕಾಲದಲ್ಲಿ ಬಿಜೆಪಿ ನಾಯಕರು ಮಾತನಾಡಲು ಹೆದರುತ್ತಿದ್ದ ಕಾಲದಲ್ಲಿ ಯತ್ನಾಳ್ ಧೈರ್ಯವಾಗಿ ಮಾತನಾಡುತ್ತಿದ್ದರು. ಇಂದು ಆ ಪಟ್ಟಿಗೆ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಜಿಎಂ ಸಿದ್ದೇಶ್ವರ್ ಮೊದಲಾದವರು ಸೇರ್ಪಡೆಯಾಗಿದ್ದಾರೆ.
ವಿಪಕ್ಷಗಳ ನಾಯಕರು ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೋ ಇಲ್ಲವೋ, ಆದರೆ ಅವರ ಅಭಿಮಾನಿಗಳು ಹಿಂದೂ ಹುಲಿ ಎಂದು ಕರೆಯುವುದನ್ನು ಬಿಟ್ಟಿಲ್ಲ. ಯತ್ನಾಳ್ ಹಿಂದೂಗಳಿಗೆ ಮಾತ್ರ ಕೆಲಸ ಮಾಡಿ ಮುಸಲ್ಮಾನರಿಗೆ ಅಲ್ಲ ಎಂದು ಪಾಲಿಕೆ ಸದಸ್ಯರಿಗೆ ಕರೆ ನೀಡಿದ್ದರು. ಬುದ್ದಿಜೀವಿಗಳಿಗೆ ಗುಂಡು ಹೊಡೆಯಬೇಕು ಎಂದೂ ಹೇಳಿಕೆ ನೀಡಿದ್ದರು.
ಒಂದು ಬಾರಿ ಎಚ್. ಎಸ್. ದೊರೆಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ನಿಂದಿಸಿದ್ದಲ್ಲದೆ ಪಾಕಿಸ್ತಾನದ ಏಜೆಂಟ್ ಎಂದು ಕರೆದಿದ್ದು, ಬಾರಿ ಕೋಲಾಹಲಕ್ಕೆ ನಾಂದಿ ಹಾಡಿತ್ತು.
ಯತ್ನಾಳ್‌ಗೆ ಯಾವ ಹುದ್ದೆ?
ರಾಜಕೀಯ ಹೊರತುಪಡಿಸಿ ಯತ್ನಾಳ್ 122 ವರ್ಷಗಳಷ್ಟು ಹಳೆಯದಾದ ಶ್ರೀ ಸಿದ್ದೇಶ್ವರ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಸರ್ಕಾರದ ನೆರವಿಲ್ಲದೆ 1000 ಗೋವುಗಳಿರುವ ಗೋಶಾಲೆಯನ್ನು ನಡೆಸುತ್ತಿದ್ದಾರೆ.
ಇಂತಹ ಬಂಡಾಯದ ನಡುವೆ ಯತ್ನಾಳ್‌ಗೆ ಪಕ್ಷದಲ್ಲಿನ ಕೇಂದ್ರ ಮಟ್ಟದಲ್ಲಿಯೇ ಹುದ್ದೆ ನೀಡುವ ಪ್ರಸ್ತಾವವೂ ಬಂದಿದೆ. ಪ್ರಧಾನ ಕಾರ್ಯದರ್ಶಿ ಜತೆಗೆ ರಾಜ್ಯವೊಂದರ ಉಸ್ತುವಾರಿಯನ್ನು ವಹಿಸಬಹುದು. ಅವರೊಂದಿಗೆ ಗುರುತಿಸಿಕೊಂಡಿರುವವಲ್ಲಿ ಕೆಲವರನ್ನು ಕರ್ನಾಟಕ ಬಿಜೆಪಿ ಪದಾಧಿಕಾರಿಗಳನ್ನಾಗಿ ಮಾಡಬಹುದು ಎನ್ನುವ ಚರ್ಚೆಗಳು ನಡೆದಿವೆ. ಇದಕ್ಕೆ ಕೆಲವು ದಿನ ಬೇಕಾಗಬಹುದು. ಅಲ್ಲಿಯವರೆಗೂ ಯತ್ನಾಳ ಟೀಕಾ ಪ್ರಹಾರವೂ ಮುಂದುವರಿಯಬಹುದು.
(ವರದಿ: ಎಚ್.ಮಾರುತಿ. ಬೆಂಗಳೂರು)