ಚೀನಾ ಪದ್ಧತಿ ವರ್ಷ ಭವಿಷ್ಯ 2025: ಹುಲಿ ರಾಶಿಯವರ ಮಾತಾದರೂ ಸರಿ, ಊಟವಾದರೂ ಸರಿ ನಾಲಿಗೆ ಮೇಲೆ ಹಿಡಿತವಿರಲಿ, ಸಾಲ ಶೂಲವಾಗಬಹುದು ಎಚ್ಚರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚೀನಾ ಪದ್ಧತಿ ವರ್ಷ ಭವಿಷ್ಯ 2025: ಹುಲಿ ರಾಶಿಯವರ ಮಾತಾದರೂ ಸರಿ, ಊಟವಾದರೂ ಸರಿ ನಾಲಿಗೆ ಮೇಲೆ ಹಿಡಿತವಿರಲಿ, ಸಾಲ ಶೂಲವಾಗಬಹುದು ಎಚ್ಚರ

ಚೀನಾ ಪದ್ಧತಿ ವರ್ಷ ಭವಿಷ್ಯ 2025: ಹುಲಿ ರಾಶಿಯವರ ಮಾತಾದರೂ ಸರಿ, ಊಟವಾದರೂ ಸರಿ ನಾಲಿಗೆ ಮೇಲೆ ಹಿಡಿತವಿರಲಿ, ಸಾಲ ಶೂಲವಾಗಬಹುದು ಎಚ್ಚರ

ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯದಲ್ಲಿ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ವಿಧಾನದ ಬಗ್ಗೆ ಹೇಳಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ರಾಶಿಚಕ್ರ. ಅಂದರೆ ಹರ್ಷ ವರ್ಷಕ್ಕೆ 12 ರಾಶಿ. ಇದು ಶುರುವಾಗುವುದು ಇಲಿಯಿಂದ. ಮೂರನೇ ರಾಶಿ ಹುಲಿ. ಇಂದು 2025ರಲ್ಲಿ ಹುಲಿ ರಾಶಿಯವರ ಭವಿಷ್ಯ ಹೇಗಿರುತ್ತೆ ಎಂಬುದನ್ನು ತಿಳಿಯೋಣ.

ಹುಲಿ ರಾಶಿಯವರ 2025ರ ವರ್ಷ ಭವಿಷ್ಯ
ಹುಲಿ ರಾಶಿಯವರ 2025ರ ವರ್ಷ ಭವಿಷ್ಯ

ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ; ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ‘ರಾಶಿಟ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರ್ಯಾರು ‘ಹುಲಿ‘ಯನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.

ಮನಸ್ಸಿಗೆ ನೆಮ್ಮದಿ ನೀಡುವಂಥ ಯಾವುದೇ ಕೆಲಸದಲ್ಲಿ ತೊಡಗಿಕೊಂಡು ಚಿಂತೆಯನ್ನು ತಲೆಯಿಂದ ತೆಗೆದುಹಾಕುವುದಕ್ಕೆ ಇದು ಉತ್ತಮವಾದ ವರ್ಷ. ಒಂದಿಷ್ಟು ಸಮಯವನ್ನು ಹೀಗೆ ಮಾನಸಿಕ ನೆಮ್ಮದಿ ಕಾಣುವುದಕ್ಕೆ ಅಂತಲೇ ಮೀಸಲಿಡಿ. ಆಗ ನಿಮ್ಮ ಭಾವನೆಗಳು ಹಾಗೂ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಹಾಯ ಆಗುತ್ತದೆ. ಕೆಲಸ-ಕಾರ್ಯಗಳು, ಪ್ರಾಜೆಕ್ಟ್, ಶಿಕ್ಷಣ ಹೀಗೆ ಯಾವುದೇ ವಿಚಾರದಲ್ಲಿಯೇ ಆಗಲಿ, ಕಾರ್ಯತಂತ್ರ ಯೋಜನೆಗಳು ತುಂಬ ಚೆನ್ನಾಗಿರುತ್ತವೆ. ಆ ಕಾರಣದಿಂದಾಗಿ ಗುರಿಯಿಟ್ಟು ಹೊಡೆದಂತೆ ಅಂದುಕೊಂಡಂತೆಯೇ ಅವಕಾಶಗಳು ನಿಮ್ಮ ಕಡೆಗೆ ಹರಿದುಬರುತ್ತವೆ.

1938, 1950, 1962, 1974, 1986, 1998, 2010, 2022ನೇ ಇಸವಿಯಲ್ಲಿ ಹುಟ್ಟಿದವರು ‘ಹುಲಿ‘.

ಉದ್ಯೋಗ-ವೃತ್ತಿ ಭವಿಷ್ಯ

ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ಎರಡೆರಡು ಬಾರಿ ಆಲೋಚನೆ ಮಾಡಿ. ಅದರಲ್ಲೂ ವಿಶೇಷವಾಗಿ ಉದ್ಯೋಗದಲ್ಲಿ ಹೊಸ ಅವಕಾಶ ಸಿಕ್ಕಿತು ಅಂದಾಕ್ಷಣವೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಾಗುವುದಿಲ್ಲ. ಈ ಹಿಂದೆ ನೀವು ಮಾಡಿರದ ಕೆಲಸಗಳು ಉದ್ಯೋಗಾವಕಾಶವಾಗಿ ಹುಡುಕಿಕೊಂಡು ಬಂದಲ್ಲಿ ಅಂಥದ್ದನ್ನು ಪರಿಗಣಿಸಿ. ಒಂದು ವೇಳೆ ನೀವು ಉದ್ಯೋಗ ಬದಲಾವಣೆ ಮಾಡಲೇಬೇಕು ಎಂದು ಗಟ್ಟಿಯಾಗಿ ತೀರ್ಮಾನಿಸಿದಲ್ಲಿ ಕಲಿಯುವುದಕ್ಕೆ ಅವಕಾಶಗಳು ಇರುವಂಥದ್ದನ್ನು ಆರಿಸಿಕೊಳ್ಳಬೇಕು ಎಂಬುದು ಈ ವರ್ಷದ ಆಶಯ ಆಗಿರಲಿದೆ.

ನಿಮ್ಮಲ್ಲಿನ ದೃಢವಾದ ತೀರ್ಮಾನವನ್ನು ಬಹಳ ನಾಜೂಕಾಗಿ ಹೇಳಬಲ್ಲವರಾಗಿ ಇರುತ್ತೀರಿ, ಅಂಥವರು ಮೇಲಿನ ಹುದ್ದೆಯಲ್ಲಿ ಕೂರಲಿದ್ದೀರಿ. ಅದೇ ರೀತಿ ಬಡ್ತಿಗಾಗಿಯೂ ಬಲವಾಗಿ ಯತ್ನಿಸುತ್ತಿದ್ದೀರಿ ಅಂತಾದಲ್ಲಿ ನೀವು ಮಾಡಿದ ಕೆಲಸಗಳು, ನಿಮ್ಮ ಕೆಲಸದ ಸ್ಥಳ ಹಾಗೂ ಸುತ್ತಲ ಜನರ ಮೇಲೆ ಹೇಗೆ ಪ್ರಭಾವ ಬೀರಿ ಫಲಿತಾಂಶವನ್ನು ಬರುವಂತೆ ಮಾಡಿದಿರಿ ಎಂಬುದನ್ನು ಮೇಲಾಧಿಕಾರಿಗಳಿಗೆ ಇಂಚಿಂಚೂ ಬಿಡದೆ ವಿವರಿಸಿ.

ಆದರೂ ಈ ವರ್ಷ ಅಪಾಯಗಳು ಇದ್ದೇ ಇರುತ್ತವೆ. ಏನೇ ಗಟ್ಟಿ ಧ್ವನಿಯಲ್ಲಿ ಇರುವ ವಿಷಯವನ್ನು ಹೇಳ್ತೀನಿ ಅಂತ ಅಂದುಕೊಂಡರೂ ಹಾಗೊಂದು ಕಾರ್ಯತಂತ್ರ ಇಟ್ಟುಕೊಂಡಿರುತ್ತೀನಿ ಅಂದರೂ ಕೆಲವು ಸಂಗತಿಗಳನ್ನು ಹೊಟ್ಟೆಯಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ. ಸಮಸ್ಯೆ ಏನೆಂದರೆ, ನೀವು ಏನೇ ಮುಂಜಾಗ್ರತೆ ಹಾಗೂ ಅಪಾಯಗಳು ಮತ್ತು ಅದು ಬರಬಹುದಾದ ರೀತಿಗಳನ್ನು ವಿವರಿಸಿದರೂ ನೀವು ಉದ್ಯೋಗ ಮಾಡುವ ಸಂಸ್ಥೆಯೇ ಸರಿಯಾಗಿ ಸ್ಪಂದಿಸುವುದಿಲ್ಲ ಅಥವಾ ಸೂಕ್ತ ಸಮಯಕ್ಕೆ ಸರಿಯಾದ ತೀರ್ಮಾನ ಮಾಡುವುದಿಲ್ಲ. ಆದ್ದರಿಂದ ನೀವು ಎಲ್ಲ ಬೆಳವಣಿಗೆಗಳ ಬಗ್ಗೆಯೂ ಜಾಗ್ರತೆಯಿಂದಲೂ ಹಾಗೂ ಎಂಥದೇ ಸವಾಲನ್ನು ಮುಂಚಿತವಾಗಿಯೇ ಅಂದಾಜಿಸುವ ಮೂಲಕ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಇನ್ನು ಕೆಲಸ- ಕಾರ್ಯಗಳಲ್ಲಿ ನಿಮ್ಮನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಅಂತಲೂ ಯಾರದೋ ತಪ್ಪಿಗೆ ಜತೆಗೆ ಕೆಲಸ ಮಾಡುವವರು ನಿಮ್ಮನ್ನೇ ಗುಮಾನಿಯಿಂದ ನೋಡುತ್ತಿದ್ದಾರೆ ಅಂತಲೂ ನಿಮಗೇ ತಿಳಿಯುತ್ತದೆ. ಇಂಥ ಸನ್ನಿವೇಶ ಹೇಗೆ ನಿರ್ವಹಿಸುವುದು ಎಂಬ ಬಗ್ಗೆ ಸಲಹೆ- ಮಾರ್ಗದರ್ಶನ ಬೇಕು ಅಂತಾದಲ್ಲಿ ಹಿರಿಯ ಸಹೋದ್ಯೋಗಿಗಳ ನೆರವು ಪಡೆದುಕೊಳ್ಳಿ.

ಹಣಕಾಸು ವಿಚಾರ

ನಿಧಾನವಾಗಿಯಾದರೂ ಪರವಾಗಿಲ್ಲ, ಹೂಡಿಕೆ ವಿಚಾರದಲ್ಲಿ ದೃಢವಾದ ಹೆಜ್ಜೆಯನ್ನೇ ಇಡಬೇಕು ಎಂಬ ತೀರ್ಮಾನವನ್ನು ಮಾಡಲಿದ್ದೀರಿ. ಎಲ್ಲೆಲ್ಲಿ ಹೂಡಿಕೆ ಮಾಡಿದ್ದೀರಿ ಹಾಗೂ ಅದರ ಸವಾಲು ಮತ್ತು ರಿಟರ್ನ್ ಪ್ರಮಾಣ ಹೇಗಿದೆ ಎಂಬುದನ್ನು ಪದೇಪದೇ ಪರಾಮರ್ಶಿಸಬೇಕಾಗುತ್ತದೆ. ನಿಮಗೆ ಈ ವರ್ಷ ರಿಯಲ್ ಎಸ್ಟೇಟ್ ಹೂಡಿಕೆ ಉತ್ತಮ ರಿಟರ್ನ್ಸ್ ನೀಡುತ್ತದೆ. ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿಯೇ ನಿಮಗೆ ಹೆಚ್ಚು ಆಸಕ್ತಿ ಇದೆ ಅಂತಾದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ ಉತ್ತಮವಾದ ಡಿವಿಡೆಂಡ್ ದೊರೆಯುವ ಷೇರುಗಳ ಮೇಲಿನ ಹೂಡಿಕೆಗೆ ಆದ್ಯತೆ ನೀಡಿ. ಕಡಿಮೆ ರಿಸ್ಕ್ ಇರುವ ನಿಶ್ಚಿತವಾದ ಆದಾಯ ತರುವಂಥದ್ದು, ಬಾಂಡ್‌ಗಳ ಮೇಲಿನ ಹೂಡಿಕೆ ಕೂಡ ನಿಮ್ಮ ಪಾಲಿನ ಉತ್ತಮ ಆಯ್ಕೆ ಆಗಲಿದೆ.

ಈ ವರ್ಷ ನೀವು ಮಾಡಬಹುದಾದ ಅತ್ಯುತ್ತಮ ಕೆಲಸ ಏನೆಂದರೆ ಬಜೆಟ್ ಮಾಡಿಕೊಳ್ಳುವುದು. ಈಗಾಗಲೇ ಆ ಅಭ್ಯಾಸ ನಿಮಗಿದೆ ಅಂತಾದಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಿ. ಒಂದು ವೇಳೆ ಅಂಥದ್ದೇನೂ ಬಜೆಟ್ ಮಾಡಿಕೊಳ್ಳಲ್ಲ ಅಂತಾದರೆ ರೂಢಿ ಮಾಡಿಕೊಳ್ಳಿ. ಹಲವು ತಿಂಗಳಿಗೆ ವೆಚ್ಚ ಸರಿತೂಗಿಸುವಂಥ ಎಮರ್ಜೆನ್ಸಿ ಫಂಡ್ (ತುರ್ತು ನಿಧಿ) ಕಾಪಾಡಿಕೊಳ್ಳುವ ಕಡೆಗೆ ಲಕ್ಷ್ಯವನ್ನು ಕೊಡಿ. ಅನಿವಾರ್ಯ ಅಲ್ಲ ಅಂತಾದಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ತರುವುದು ಕಡ್ಡಾಯವಾಗಿ ಬೇಡ. ಇಎಂಐನಲ್ಲಿ ಖರೀದಿಸುವುದೋ ಅಥವಾ ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಸಿಗುವ ಆಫರ್ ಲೋನ್ ಇಂಥದ್ದರ ಕಡೆ ಕಣ್ಣೆತ್ತಿಯೂ ನೋಡಬೇಡಿ. ಹಣ ಕೂಡಿಟ್ಟುಕೊಂಡೇ ಖರೀದಿಸುವ ಸಂಕಲ್ಪ ಮಾಡಿ, ಅದರಂತೆಯೇ ನಡೆದುಕೊಳ್ಳಿ.

ಪ್ರೀತಿ-ಪ್ರೇಮ, ಮದುವೆ ಇತ್ಯಾದಿ

ಸಂಬಂಧಗಳು, ನಂಟನ್ನು ಸಂಭಾಳಿಸುವುದೇ ಈ ವರ್ಷದ ಸವಾಲು ಆಗಿರಲಿದೆ. ನಿಮ್ಮಲ್ಲಿ ಕೆಲವರು ಪ್ರೀತಿ-ಪ್ರೇಮದಲ್ಲಿ ಬೀಳಲಿದ್ದೀರಿ. ಹೃದಯದಲ್ಲಿ ಗಿಟಾರ್ ಶಬ್ದ ಕೇಳಿಸುವ ಸಮಯ ಇದಾಗಿರಲಿದೆ. ನಿಮ್ಮ ಹೃದಯಕ್ಕೆ ಹತ್ತಿರವಾಗುವ ವ್ಯಕ್ತಿಗಳು ಇವರೇ ಎಂಬ ಸಂದೇಶ ನಿಮಗೆ ದೊರೆಯಲಿದೆ. ಹುಲಿಯ ಅಬ್ಬರ, ಆಕ್ರಮಣ ಐಸ್‌ಕ್ರೀಂ ಥರ ಕರಗಿ, ಸ್ನೇಹ-ಪ್ರೀತಿ ಹೂವಿನಂತೆ ಅರಳಲಿದೆ. ಈಗಾಗಲೇ ಪ್ರೀತಿ-ಪ್ರೇಮದಲ್ಲಿ ಇರುವವರಿಗೆ ಸಂಬಂಧ ಇನ್ನಷ್ಟು ಗಾಢ ಹಾಗೂ ಗಟ್ಟಿಯಾಗಲಿದೆ. ಒಟ್ಟಿಗೆ ಸಮಯವನ್ನು ಕಳೆಯುವುದಕ್ಕೆ ಆದ್ಯತೆ ಕೊಡಿ. ನಿಮ್ಮ ನಿರೀಕ್ಷೆ ಏನು, ಕನಸುಗಳೇನು, ಯಾವುದು ನಿಮಗೆ ಆತಂಕ ಉಂಟು ಮಾಡುತ್ತದೆ ಇಂಥದ್ದೆಲ್ಲ ಪರಸ್ಪರ ಕೂತು ಮಾತನಾಡುವುದಕ್ಕಾಗಿಯೇ ಹೆಚ್ಚೆಚ್ಚು ಒಟ್ಟಾಗಿ ಇರುವುದಕ್ಕೆ ಪ್ರಯತ್ನಿಸಿ. ನಿಮ್ಮ ಬೆಳವಣಿಗೆಯ ಜತೆಗೆ ಸಂಗಾತಿಯ ಬೆಳವಣಿಗೆಗೂ ನಿಮ್ಮಿಂದ ಆಗುವ ಸಹಾಯವನ್ನು ಮಾಡಿ. ಈಗಾಗಲೇ ಮದುವೆ ಆಗಿರುವವರು ಸ್ಥಿರತೆಗೆ ಪ್ರಾಮುಖ್ಯ ನೀಡಿ. ಎಲ್ಲಿ ಹಾಗೂ ಯಾವ ವಿಚಾರಕ್ಕೆ ಅಭಿಪ್ರಾಯ ಭೇದ, ಮನಸ್ತಾಪ ಉದ್ಭವಿಸುತ್ತಿದೆಯೋ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಮಾತುಕತೆ ನಡೆಯುತ್ತಾ ಇದೆ, ಆದರೆ ಅಂತಿಮ ತೀರ್ಮಾನಕ್ಕೆ ಬರುವುದಕ್ಕೆ ಆಗಿಲ್ಲ ಅಂತಾದರೆ ಈ ವರ್ಷ ಅದು ಸಾಧ್ಯವಾಗಲಿದೆ.

ಆರೋಗ್ಯ

ನಿಮಗೆ ಸಾಮಾನ್ಯವಾಗಿಯೇ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಸಮಸ್ಯೆ ಏನೆಂದರೆ, ನೀವು ಯಾವುದನ್ನೂ ಅತಿಯಾಗಿಯೇ ಮಾಡುತ್ತೀರಿ. ವಿಪರೀತ ತಿನ್ನುವುದು, ಆಮೇಲೆ ಗಾಬರಿಯಿಂದ ಸಿಕ್ಕಾಪಟ್ಟೆ ವ್ಯಾಯಾಮ ಮಾಡುವುದು ಅಥವಾ ವಿಪರೀತ ಚಿಂತೆ ಮಾಡುವುದು. ಇದನ್ನು ಸರಿ ಮಾಡಿಕೊಂಡರೆ ಈ ಹಿಂದಿನ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಸಹ ನಿವಾರಿಸಿಕೊಳ್ಳಬಹುದು ಅಥವಾ ಕಡಿಮೆ ಮಾಡಿಕೊಳ್ಳಬಹುದು. ಜೀವನದ ಎಲ್ಲವನ್ನೂ ಸಮತೋಲನ ಮಾಡಿಕೊಂಡು ಹೋಗುವುದು ಕಷ್ಟವಾಗಲಿದೆ. ಮಧುಮೇಹಿಗಳು ಅಥವಾ ಶುಗರ್ ಇರುವಂಥವರು ಹೆಚ್ಚಿನ ಎಚ್ಚರಿಕೆ ವಹಿಸಿ. ಒತ್ತಡ ಅಥವಾ ಶಿಸ್ತೇ ಇಲ್ಲದ ತಿನ್ನುವ ಅಭ್ಯಾಸದಿಂದ ವಿಪರೀತ ಏರಿಳಿತ ಕಾಣುವಂತಾಗುತ್ತದೆ. ಮಧುಮೇಹ ತುಂಬ ಜಾಸ್ತಿಯಾಗಿ, ಅದರ ಪರಿಣಾಮವೇ ಒಟ್ಟಾರೆ ಆರೋಗ್ಯದ ಮೇಲೆ ಬೀರಬಹುದು. ಅಷ್ಟೇ ಅಲ್ಲದೆ, ಮಾರ್ಚ್ ಅಥವಾ ಆಗಸ್ಟ್ ತಿಂಗಳಲ್ಲಿ ಸಣ್ಣ- ಪುಟ್ಟದಾದರೂ ಅಪಘಾತ ಸಂಭವಿಸಬಹುದು.

ಆರೋಗ್ಯ ವಿಚಾರಕ್ಕೆ ಮುಂಜಾಗ್ರತೆ ತುಂಬ ಮುಖ್ಯ. ನಿಯಮಿತವಾಗಿ ವೈದ್ಯರ ಭೇಟಿ ಮಾಡಿ, ಮುನ್ನೆಚ್ಚರಿಕೆ ವಹಿಸಿ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಿಂದ ಕೆಲವು ಸಮಸ್ಯೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬಹುದು. ಬೇಸಿಗೆ ಹಾಗೂ ಚಳಿಗಾಲದಲ್ಲಿ ಸುತ್ತಲ ಪರಿಸರದಲ್ಲಿನ ಕೆಲವು ಪದಾರ್ಥಗಳು ಅಥವಾ ಅವ್ಯವಸ್ಥೆಯಿಂದಾಗಿ ಅಲರ್ಜಿ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಅಂಥ ಕಡೆಗಳಲ್ಲಿ ವಾಸ ಇರುವಂಥವರು ಅಥವಾ ನೀವಿರುವ ಪರಿಸರದಲ್ಲಿಯೇ ಇಂಥದ್ದೊಂದು ಮಾಲಿನ್ಯ ಆಗುತ್ತಿದೆ ಎಂಬುದು ಗಮನಕ್ಕೆ ಬಂದರೆ ತಕ್ಷಣವೇ ಎಚ್ಚೆತ್ತುಕೊಂಡು, ಸೂಕ್ತ ರಕ್ಷಣೆ ಪಡೆದುಕೊಳ್ಳಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.