Karnataka bypolls: ವಿಧಾನ ಪರಿಷತ್ ಮೂರೂ ಸ್ಥಾನಗಳು ಕಾಂಗ್ರೆಸ್ ಪಾಲು ಬಹುತೇಕ ಖಚಿತ; ಬೋಸರಾಜು, ಶೆಟ್ಟರ್ ಎಂಎಲ್ಸಿ ಆಗೋದು ಫಿಕ್ಸ್?
Karnataka Legislative Council bypolls: 3 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಸಚಿವ ಎಸ್. ಬೋಸರಾಜು ಅವರನ್ನು ಆಯ್ಕೆ ಮಾಡಲೇ ಬೇಕಾಗಿದೆ. ಎರಡೂ ಮನೆ ಸದಸ್ಯರಲ್ಲದ ಅವರು 6 ತಿಂಗಳೊಳಗಾಗಿ ಸದಸ್ಯರಾಗಿ ಆಯ್ಕೆಯಾಗಬೇಕು. ಉಳಿದ ಎರಡರಲ್ಲಿ ಒಂದು ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಜೂನ್ 30ರಂದು ಉಪಚುನಾವಣೆ ನಡೆಯಲಿದೆ (Karnataka Legislative Council bypolls). ಈ ಸಂಬಂಧ ಚುನಾವಣಾ ಆಯೋಗ ಜೂ.6 ರಂದು ಘೋಷಿಸಿದೆ. ಮೂರೂ ಸ್ಥಾನಗಳಿಗೆ ಒಂದೇ ದಿನ ಒಂದೇ ಅವಧಿಯಲ್ಲಿ ಪ್ರತ್ಯೇಕವಾಗಿ ಚುನಾವಣೆ ನಡೆಯಲಿದೆ. ಈ ಸ್ಥಾನಗಳಿಗೆ ಮರು ಚುನಾವಣೆ ಆಗಿರುವುದರಿಂದ ಬಾಕಿ ಉಳಿದಿರುವ ಅವಧಿಗೆ ಮಾತ್ರ ಸದಸ್ಯತ್ವದ ಅವಧಿ ಇರುತ್ತದೆ. ಉದಾಹರಣೆಗೆ ಆರ್. ಶಂಕರ್ ಅವರ ಸ್ಥಾನದ ಅವಧಿ 12, ಏಪ್ರಿಲ್ 2026 ರವರೆಗೆ ಮಾತ್ರ ಇದ್ದು ಈ ಸ್ಥಾನಕ್ಕೆ ಆಯ್ಕೆಯಾಗುವ ಸದಸ್ಯರ ಅವಧಿ ಈ ದಿನಾಂಕದ ವರೆಗೆ ಮಾತ್ರ ಆಗಿರುತ್ತದೆ.
ಚುನಾವಣಾ ಅಧಿಸೂಚನೆ ಜೂನ್ 13ರಂದು ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜೂನ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಜೂನ್ 21ರಂದು ನಾಮಪತ್ರ ಪರಿಶೀಲನೆ, ಜೂನ್ 23ಕ್ಕೆ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿರುತ್ತದೆ. ಜೂನ್ 30ರಂದು ಮತದಾನ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಆಗಲಿದೆ.
ಅವಿರೋಧ ಆಯ್ಕೆ ನಿರೀಕ್ಷೆ
ಮೂರೂ ಸ್ಥಾನಗಳಿಗೆ ಎಲ್ಲ ವಿಧಾನಸಭಾ ಸದಸ್ಯರು ಪ್ರತೀಕವಾಗಿ ಮತ ಚಲಾಯಿಸ ಬೇಕಾಗಿರುತ್ತದೆ. ಹಾಗಾಗಿ ಎಲ್ಲ ಸ್ಥಾನಗಳಿಗೆ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತ. ಕಾಂಗ್ರೆಸ್ 135 ಶಾಸಕರ ಬಲ ಹೊಂದಿದೆ. ಪ್ರತಿ ಅಭ್ಯರ್ಥಿಗೆ 135 ಮತಗಳು ಚಲಾವಣೆ ಆಗಬಹುದು. ಬಿಜೆಪಿ ಮತ್ತು ಜೆಡಿಎಸ್ ಗೆ ಸಂಖ್ಯಾಬಲದ ಕೊರತೆ ಇದ್ದು ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆಗಳಿಲ್ಲ. ಹಾಗಾಗಿ ಅವಿರೋಧ ಆಯ್ಕೆ ನಡೆಯಲಿದೆ.
ರಾಜೀನಾಮೆ ನೀಡಿದ ಸದಸ್ಯರು
1.ಬಾಬುರಾವ್ ಚಿಂಚನ್‌ಸೂರ್
2.ಆರ್.ಶಂಕರ್
3.ಲಕ್ಷ್ಮಣ ಸವದಿ
ಬಾಬುರಾವ್ ಚಿಂಚನಸೂರ್ ಅವರು 2023, ಮಾರ್ಚ್ 20ರಂದು ರಾಜೀನಾಮೆ ನೀಡಿದ್ದರು. ಅವರ ಸದಸ್ಯತ್ವದ ಅವಧಿ 2024ರ ಜೂನ್ 17ರ ವರೆಗೆ ಇತ್ತು. ಆರ್.ಶಂಕರ್ ಅವರು 2023, ಏಪ್ರಿಲ್ 12ರಂದು ರಾಜೀನಾಮೆ ಸಲ್ಲಿಸಿದ್ದರು. ಅವರ ಸದಸ್ಯತ್ವ ಅವಧಿ 2026ರ ಜೂನ್ 30ರ ವರೆಗೆ ಇತ್ತು. ಲಕ್ಷ್ಮಣ ಸವದಿ ಅವರು 2023 ಏಪ್ರಿಲ್ 14ರಂದು ರಾಜೀನಾಮೆ ನೀಡಿದ್ದು, ಅವರ ಸದಸ್ಯತ್ವದ ಅವಧಿ 2028ರ ಜೂನ್ 14ರ ವರೆಗೆ ಇತ್ತು.
ವಿಧಾನಸಭಾ ಸದಸ್ಯರು ಮಾತ್ರ ಮತದಾರರು
ಈ ಮೂರು ಸ್ಥಾನಗಳು ವಿಧಾಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಸ್ಥಾನಗಳಾಗಿದ್ದು, ವಿಧಾನಸಭೆಯ ಸದಸ್ಯರು ಅಂದರೆ ಶಾಸಕರು ಮಾತ್ರ ಮತ ಚಲಾಯಿಸಲಿದ್ದಾರೆ. ಆಎಲ್ಲ ಶಾಸಕರು ಮೂರೂ ಸ್ಥಾನಗಳಿಗೆ ಪ್ರತ್ಯೇಕವಾಗಿ ಮತ ಚಲಾಯಿಸಬೇಕಾಗಿರುತ್ತದೆ. ಎಲ್ಲರಿಗೂ ಮೂರು ಪ್ರತ್ಯೇಕ ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ. ವಿಧಾನಸೌಧದಲ್ಲಿ ಮತದಾನ ನಡೆಯಲಿದೆ.
ಚುನಾವಣೆ ಏಕೆ?
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಧಾನ ಪರಿಷತ್‌ನ ಮೂವರು ಸದಸ್ಯರು ರಾಜೀನಾಮೆ ಸಲ್ಲಿಸಿದ್ದರಿಂದ ಚುನಾವಣೆ ನಡೆಯುತ್ತಿದೆ. ಇವರೆಲ್ಲರೂ ಬಿಜೆಪಿ ಸದಸ್ಯರು ಎನ್ನುವುದು ವಿಶೇಷ. ಮೂವರಲ್ಲಿ ಲಕ್ಷ್ಮಣ ಸವದಿ ಮತ್ತು ಆರ್. ಶಂಕರ್ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದ ಕಾರಣ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಲಕ್ಷ್ಮಣ ಸವದಿ ಅವರು ತಮ್ಮ ಸಚಿವ ಸ್ಥಾನ ಮತ್ತು ಬಿಜೆಪಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಆರ್. ಶಂಕರ್ 2018 ರಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿ ಅಧಿಕೃತವಾಗಿ ಬಿಜೆಪಿ ಸೇರಿ ಎಡವಟ್ಟು ಮಾಡಿಕೊಂಡಿದ್ದು ಇತಿಹಾಸ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿ ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. 2023 ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಲ್ಲಿ ಟಿಕೆಟ್ ಪಡೆಯಲು ವಿಫಲರಾಗಿದ್ದರು. ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎನ್ ಸಿ ಪಿ ಸೇರಿ ರಾಣೆಬೆನ್ನೂರು ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡರು.
ಇನ್ನು ಬಾಬುರಾವ್ ಚಿಂಚನಸೂರ್ ಬಿಜೆಪಿಯಲ್ಲಿ ಸಕ್ರಿಯರಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ತಮ್ಮ ರಾಜಕೀಯ ಗುರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಯಕ್ಕೆ ಕಟ್ಟು ಬಿದ್ದು ಕಾಂಗ್ರೆಸ್ ಸೇರ್ಪಡೆಯಾದರು. ಗುರುಮಠಕಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರಾದರೂ ಯಶಸ್ವಿಯಾಗಲಿಲ್ಲ. ಮತದಾನಕ್ಕೂ ಮುನ್ನ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದರು.
ಮೂರು ಸ್ಥಾನಕ್ಕೆ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ; ಬೋಸರಾಜು, ಶೆಟ್ಟರ್ ಆಯ್ಕೆ ಖಚಿತ?
ಮೂರು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಸಚಿವ ಎಸ್. ಬೋಸರಾಜು ಅವರನ್ನು ಆಯ್ಕೆ ಮಾಡಲೇ ಬೇಕಾಗಿದೆ. ಎರಡೂ ಮನೆ ಸದಸ್ಯರಲ್ಲದ ಅವರು 6 ತಿಂಗಳೊಳಗಾಗಿ ಸದಸ್ಯರಾಗಿ ಆಯ್ಕೆಯಾಗಬೇಕು. ಹಾಗಾಗಿ ಒಂದು ಸ್ಥಾನಕ್ಕೆ ಅವರು ಫಿಕ್ಸ್. ಉಳಿದ ಎರಡರಲ್ಲಿ ಒಂದು ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರ ಆಯ್ಕೆ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಕಾಂಗ್ರೆಸ್ ಚಿಂತನೆಯಾಗಿದೆ. ಇವರ ಆಯ್ಕೆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೂ ಎರಡು ಸ್ಥಾನಗಳಿಗೆ 20 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಕಾಂಗ್ರೆಸ್ಗೆ ತಲೆ ನೋವಾಗಿ ಪರಿಣಮಿಸಿದೆ. ಸೋತ ಗಣ್ಯರು, ಪ್ರಭಾವಿ ಉದ್ಯಮಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರು ತಮ್ಮ ತಮ್ಮ ಬೆಂಬಲಿಗರ ಆಯ್ಕೆಗೆ ಪಟ್ಟು ಹಿಡಿದಿದ್ದಾರೆ.
ವರದಿ: ಎಚ್ ಮಾರುತಿ