ಪ್ರಜ್ವಲ್‌ ರೇವಣ್ಣ ಪ್ರಕರಣ; ಗೌಪ್ಯ ವಿಚಾರಣೆಗೆ ರಾಜ್ಯ ಸರ್ಕಾರ ಮನವಿ, ಸಿಜೆ ನಿರ್ಧರಿಸಬೇಕು ಎಂದ ಏಕ ಸದಸ್ಯ ಪೀಠ-karnataka government seeks in camera hearing of prajwal revanna bail pleas high court says cj should order prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಜ್ವಲ್‌ ರೇವಣ್ಣ ಪ್ರಕರಣ; ಗೌಪ್ಯ ವಿಚಾರಣೆಗೆ ರಾಜ್ಯ ಸರ್ಕಾರ ಮನವಿ, ಸಿಜೆ ನಿರ್ಧರಿಸಬೇಕು ಎಂದ ಏಕ ಸದಸ್ಯ ಪೀಠ

ಪ್ರಜ್ವಲ್‌ ರೇವಣ್ಣ ಪ್ರಕರಣ; ಗೌಪ್ಯ ವಿಚಾರಣೆಗೆ ರಾಜ್ಯ ಸರ್ಕಾರ ಮನವಿ, ಸಿಜೆ ನಿರ್ಧರಿಸಬೇಕು ಎಂದ ಏಕ ಸದಸ್ಯ ಪೀಠ

Prajwal Revanna: ಪ್ರಜ್ವಲ್ ರೇವಣ್ಣ ಅತ್ಯಾಚಾರ, ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಗೋಪ್ಯ ವಿಚಾರಣೆ ನಡೆಸಲು ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ಮನವಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. (ವರದಿ: ಎಚ್. ಮಾರುತಿ)

ಪ್ರಜ್ವಲ್‌ ರೇವಣ್ಣ ಪ್ರಕರಣ; ಗೌಪ್ಯ ವಿಚಾರಣೆಗೆ ರಾಜ್ಯ ಸರ್ಕಾರ ಮನವಿ
ಪ್ರಜ್ವಲ್‌ ರೇವಣ್ಣ ಪ್ರಕರಣ; ಗೌಪ್ಯ ವಿಚಾರಣೆಗೆ ರಾಜ್ಯ ಸರ್ಕಾರ ಮನವಿ

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಗೋಪ್ಯವಾಗಿ ವಿಚಾರಣೆ ನಡೆಸಬೇಕು ಎಂದು ವಿಶೇಷ ತನಿಖಾ ದಳ (ಎಸ್​ಐಟಿ), ಹೈಕೋರ್ಟ್‌ಗೆ ಮನವಿ ಮಾಡಿದೆ.

ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಮತ್ತು ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ಸಂದರ್ಭದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ರವಿವರ್ಮ ಕುಮಾರ್, ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಜಾಮೀನು ಅರ್ಜಿಗಳನ್ನು ಗೋಪ್ಯವಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳು ಮಾತ್ರ ಆದೇಶ ಹೊರಡಿಬೇಕು ಎಂದರು.

ಸೆಪ್ಟೆಂಬರ್ 5ಕ್ಕೆ ವಿಚಾರಣೆ

ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಜ್ವಲ್ ಪರ ಹಾಜರಿದ್ದ ವಕೀಲ ಜಿ.ಅರುಣ್ ತಮಗೂ ಕಾಲಾವಕಾಶಬೇಕು ಎಂದರು. ಆಗ ನ್ಯಾಯಮೂರ್ತಿಗಳು ಮುಂದಿನ ವಿಚಾರಣೆಯಲ್ಲಿ ಈ ಅಂಶವನ್ನು ಪರಿಶೀಲಿಸುವುದಾಗಿ ತಿಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದರು. ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್​ಐಟಿ ಮೂರು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಜ್ವಲ್ ಜರ್ಮನಿಗೆ ಹೋಗಿದ್ದರು. ಅವರು ಮೇ 30 ರಂದು ಮಧ್ಯರಾತ್ರಿ ಆಗಮಿಸಿದಾಗ ಅವರನ್ನು ಎಸ್​ಐಟಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಪ್ರಜ್ವಲ್ ಅವರ ಲೈಂಗಿಕ ಶೋಷಣೆಯ ವಿಡಿಯೋ ಬಹಿರಂಗಗೊಂಡಿತ್ತು. ಮತದಾನ ಮಾಡಿದ ಬಳಿ ಅವರು ದೇಶ ಬಿಟ್ಟು ಹೋಗಿದ್ದರು.

ರಾಜ್ಯ ಮಹಿಳಾ ಆಯೋಗ ಮನವಿ ಮಾಡಿಕೊಂಡ ನಂತರ ಪ್ರಕರಣದ ವಿಸ್ತೃತ ತನಿಖೆಗೆ 2024ರ ಏಪ್ರಿಲ್ 28ರಂದು ಸಿಐಡಿಯ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಆದೇಶ ಮಾಡಲಾಗಿತ್ತು. ಪ್ರಜ್ವಲ್​ರಿಂದ ಶೋಷಣೆಗೊಳಗಾದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್​ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ನಂತರ ಅವರಿಗೆ ಜಾಮೀನು ನೀಡಲಾಗಿದೆ. ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ದೋಷಾರೋಪ ಪಟ್ಟಿ ಸಲ್ಲಿಕೆ

ಮೂರು ದಿನಗಳ ಹಿಂದೆ ವಿಶೇಷ ತನಿಖಾ ದಳ (ಎಸ್ಐಟಿ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ನ್ಯಾಯಾಲಯಕ್ಕೆ ಎಸ್ಐಟಿ, 2144 ಪುಟಗಳ ಚಾರ್ಜ್ ಶೀಟನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ತನಿಖೆಯ ವೇಳೆ ಸುಮಾರು 150 ಕ್ಕೂ ಹೆಚ್ಚು ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಹೊಳೆನರಸೀಪುರದ ಮನೆಯಲ್ಲಿ ನಿರಂತರವಾಗಿ ಮತ್ತು ಬೆಂಗಳೂರಿನ ಬಸವನಗುಡಿ ಮನೆಯಲ್ಲೂ ಅತ್ಯಾಚಾರ ನಡೆಸಿದ್ದಾರೆ. ಸಂತ್ರಸ್ತೆಯನ್ನು ಬೆದರಿಸಿ ನಿರಂತರವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾರೆ ಎಂದೂ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಹೊಳೆನರಸೀಪುರದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಅತ್ಯಾಚಾರ ಎಸಗಿದ್ದಾರೆ ಎಂದು ಚಾರ್ಜ್‌ ಶೀಟ್‌ನಲ್ಲಿ ಹೇಳಲಾಗಿದೆ.

ಸಾಕ್ಷ್ಯ ನಾಶ

ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸಂತ್ರಸ್ತೆಯ ಮಗಳಿಗೆ ವಿಡಿಯೋ ಕರೆ ಮಾಡಿ ವಿವಸ್ತ್ರಳಾಗುವಂತೆ ಒತ್ತಾಯಿಸಿ, ಅದರ ಸ್ಕ್ರೀನ್ ಶಾಟ್‌ಗಳನ್ನು ಇಟ್ಟು ಕೊಂಡಿದ್ದಾರೆ. ಪ್ರಕರಣ ದಾಖಲಾದ ನಂತರ ಪ್ರಜ್ವಲ್ ವಿಡಿಯೋಗಳನ್ನು ನಾಶಪಡಿಸಿದ್ದಾರೆ ಎಂದೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ.

ಸಂತ್ರಸ್ಥೆಯರು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿ, ಹಲವು ಸ್ಥಳಗಳಲ್ಲಿ ಮಹಜರು ಜರುಗಿಸಿ ಜೈವಿಕ, ಭೌತಿಕ, ವೈಜ್ಞಾನಿಕ, ಮೊಬೈಲ್, ಡಿಜಿಟಲ್ ಹಾಗೂ ಇತರೆ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ಈ ಸಾಕ್ಷ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಪರೀಕ್ಷೆಗೆ ಒಳಪಡಿಸಿ, ಪ್ರಯೋಗಾಲಯ ತಜ್ಞರ ಪರೀಕ್ಷಾ ವರದಿಗಳನ್ನು ಸ್ವೀಕರಿಸಿ, ತಜ್ಞರ ಅಭಿಪ್ರಾಯಗಳನ್ನು ಪಡೆದು ಆರೋಪಿಗಳಾದ ಎಚ್​ಡಿ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.