ಕಸ್ತೂರಿ ರಂಗನ್ ವರದಿ ತಿರಸ್ಕಾರದ ಬೆನ್ನಲ್ಲೇ ಪಶ್ಚಿಮಘಟ್ಟದಲ್ಲಿ ಕಾವೇರುತ್ತಿದೆ ಒತ್ತುವರಿ ತೆರವು ಚರ್ಚೆ: ಅರವಿಂದ ಸಿಗದಾಳ್ ಬರಹ-karnataka govt rejects kasturi rangan report discussion on clearing encroachment heats up in western ghats districts kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಸ್ತೂರಿ ರಂಗನ್ ವರದಿ ತಿರಸ್ಕಾರದ ಬೆನ್ನಲ್ಲೇ ಪಶ್ಚಿಮಘಟ್ಟದಲ್ಲಿ ಕಾವೇರುತ್ತಿದೆ ಒತ್ತುವರಿ ತೆರವು ಚರ್ಚೆ: ಅರವಿಂದ ಸಿಗದಾಳ್ ಬರಹ

ಕಸ್ತೂರಿ ರಂಗನ್ ವರದಿ ತಿರಸ್ಕಾರದ ಬೆನ್ನಲ್ಲೇ ಪಶ್ಚಿಮಘಟ್ಟದಲ್ಲಿ ಕಾವೇರುತ್ತಿದೆ ಒತ್ತುವರಿ ತೆರವು ಚರ್ಚೆ: ಅರವಿಂದ ಸಿಗದಾಳ್ ಬರಹ

ಬಹು ಚರ್ಚೆಯಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನ ಆಶಾಕಿರಣ ಡಾ.ಕಸ್ತೂರಿ ರಂಗನ್‌ ವರದಿ ಕುರಿತು ಪರ ವಿರೋಧದ ಚರ್ಚೆಗಳು ನಡೆದಿವೆ. ಚಿಕ್ಕಮಗಳೂರಿನವರಾದ ಅರವಿಂದ ಸಿಗದಾಳ್‌ ಅವರು ಇಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಪಶ್ಚಿಮ ಘಟ್ಟದ ಕುರಿತಾದ ಬೆಳವಣಿಗೆಗಳ ಮೇಲೆ ಅರವಿಂದ ಸಿಗದಾಳ್‌ ಅಭಿಪ್ರಾಯ ದಾಖಲಿಸಿದ್ದಾರೆ.
ಪಶ್ಚಿಮ ಘಟ್ಟದ ಕುರಿತಾದ ಬೆಳವಣಿಗೆಗಳ ಮೇಲೆ ಅರವಿಂದ ಸಿಗದಾಳ್‌ ಅಭಿಪ್ರಾಯ ದಾಖಲಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಜಾರಿ ಮತ್ತು ಒತ್ತುವರಿ ತೆರವು ಎರಡಕ್ಕೂ ನೇರ ಸಂಬಂಧ ಇಲ್ಲ. ಆದರೆ, ಎರಡೂ ಒಂದು ನಾಣ್ಯದ ಎರಡು ಮುಖಗಳು.

ವರದಿ ಜಾರಿ ಮತ್ತು ಒತ್ತುವರಿ ತೆರವುಗಳಿಗೆ ನೇರ ಸಂಬಂಧ ಇಲ್ಲ, ಆದರೆ ಪರೋಕ್ಷ ಸಂಬಂಧ ಇದೆ.

ಒತ್ತುವರಿ ಆಗಿರುವ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಯನ್ನು ತೆರವು ಮಾಡಬೇಕು ಅನ್ನುವುದು ಅರಣ್ಯ ಕಾಯ್ದೆ ಮತ್ತು ಅದಕ್ಕೆ ಪೂರಕವಾಗಿರುವ ಕೋರ್ಟ್ ನಿರ್ಣಯಗಳು.

ಕಂದಾಯ ಭೂಮಿಯ ಒತ್ತುವರಿ ತೆರವು ರಾಜ್ಯ ಸರಕಾರದ ನಿರ್ಣಯ.

ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ತಿರಸ್ಕರಿಸಿದ್ದರೂ, ಅದನ್ನು ಜಾರಿಗೊಳಿಸುವ ಅಧಿಕಾರ ಕೇಂದ್ರ ಸರಕಾರದ ಕೈಯಲ್ಲಿದೆ.

ರಾಜ್ಯ ಸರಕಾರದ ವ್ಯಾಪ್ತಿಯ ಅರಣ್ಯ ಇಲಾಖೆಗೆ ಕೇಂದ್ರದ ಅರಣ್ಯ ನೀತಿಯನ್ನು ಬದಲಿಸುವ, ತಿರಸ್ಕರಿಸುವ ಅಧಿಕಾರ ಬಹುತೇಕ ಇರುವುದಿಲ್ಲ. ಅರಣ್ಯಕ್ಕೆ ಸಂಬಂಧಿಸಿದ ಒತ್ತುವರಿ ಸೇರಿದಂತೆ ಎಲ್ಲಾ ನಿರ್ಣಯಗಳನ್ನು ಅನುಸರಿಸುವುದು ರಾಜ್ಯಕ್ಕೆ ಅನಿವಾರ್ಯ.

ಕಸ್ತೂರಿ ರಂಗನ್ ವರದಿ ಜಾರಿ ಆದಲ್ಲಿ, ಪಶ್ಚಿಮಘಟ್ಟದ ಇಡೀ ಅರಣ್ಯ ಭೂ ಭಾಗ ರಾಜ್ಯದ ನಿಯಂತ್ರಣದಿಂದ ಕೇಂದ್ರದ ಸುಪರ್ದಿಗೆ ಹೋಗಲಿದೆ

ಈಗಲೂ ಅರಣ್ಯದ ವ್ಯವಹಾರಗಳ ಅಂತಿಮ ನಿರ್ಣಯಗಳು ಕೇಂದ್ರ ಸರಕಾರದ ಹಿಡತದಲ್ಲಿದೆ. ವರದಿ ಜಾರಿ ಆದ ಮೇಲೆ ಅದು ಇನ್ನಷ್ಟು ಬಿಗಿಗೊಳ್ಳಲಿದೆ.

ಹಾಗಾಗಿ, ಮೂರು ಎಕರೆ ಮೇಲಿನ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಅಬಾಧಿತವಾಗಿ ಮುಂದುವರೆಯುವುದು. ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೂ ಈ ಅರಣ್ಯ ಒತ್ತುವರಿ ತೆರವು ಸ್ಥಗಿತಗೊಳ್ಳುವ ಸಾಧ್ಯತೆ ಇಲ್ಲ.

ಮೂರು ಎಕರೆ ಒಳಗಿನ ಒತ್ತುವರಿ ಸಧ್ಯಕ್ಕಿಲ್ಲ ಅನ್ನುವ ರಾಜ್ಯ ಅರಣ್ಯಾಧಿಕಾರಿಗಳ ಟಿಪ್ಪಣಿ ಆದೇಶ ವೂ ಶಾಶ್ವತ ನಿರ್ಧರಿತ ಆದೇಶ ಅಲ್ಲ ಅಂತ ಅನಿಸುತ್ತೆ. ಒಂದು ವೇಳೆ ಮೂರು ಎಕರೆ ಒಳಗಿನ ಒತ್ತುವರಿ (ಸ್ವಂತ ಹಿಡುವಳಿ + ಒತ್ತುವರಿ ಸೇರಿ ಮೂರು ಎಕರೆ ಮೀರದ) ತೆರವು ನಿಶ್ಚಿತ ಆದೇಶವಾಗಿದ್ದಲ್ಲಿ, ಅದಕ್ಕೆ ಕಂದಾಯ ಇಲಾಖೆಯ ಸಹಯೋಗದಲ್ಲೋ, ಕಂದಾಯ ಇಲಾಖೆಗೆ ವರ್ಗಾಯಿಸಿಯೋ ಹಕ್ಕುಪತ್ರ, RTC ಕೊಡುವ ವ್ಯವಸ್ಥೆ ಮಾಡಬಹುದು. ಆದರೆ, ಇರುವ ಮಾಹಿತಿ ಪ್ರಕಾರ, ಕೇಂದ್ರ ಅರಣ್ಯ ಸಚಿವಾಲಯ ಮಾತ್ರ ಇದಕ್ಕೆ ಅಂತಿಮ ಮುದ್ರೆ ಒತ್ತಬೇಕು.

ರಾಜ್ಯ ಸರಕಾರವು ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದರಿಂದ, ಮೂರು ಎಕರೆ ಒಳಗಿನ ಒತ್ತುವರಿಗೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ ದೊರೆಯುವ ಸಾಧ್ಯತೆ ಕಡಿಮೆ.(ಒಂದಕ್ಕೊಂದು ಸಂಬಂಧ ಇಲ್ಲದೇ ಇದ್ದರೂ, ರಾಜಕೀಯ ಕಾರಣಗಳಿಂದ!!) ಹಾಗಾಗಿ ಮೂರು ಎಕರೆ ಒಳಗಿನ ಒತ್ತುವರಿ ತೆರವು ಸಧ್ಯಕ್ಕಿಲ್ಲ ಅನ್ನುವುದು ಮಾತ್ರ ಜಾರಿಯಲ್ಲಿರುತ್ತದೆ. ಸಧ್ಯಕ್ಕಿಲ್ಲ ಅನ್ನುವುದರ ಕಾಲ ವ್ಯಾಪ್ತಿಯೂ ಸಣ್ಣ ರೈತರ (ಒತ್ತುವರಿದಾರರ) ಹಣೆ ಬರಹದ ಮೇಲೆ ಅವಲಂಬಿತವಾಗಿದೆ!!!

**

ಇನ್ನು ಕಸ್ತೂರಿ ರಂಗನ್ ವರದಿ ರಾಜ್ಯದ ತಿರಸ್ಕಾರದ ನಡುವೆಯೂ ಯತಾವತ್ ಜಾರಿ ಆದರೆ, ವರದಿಯಲ್ಲಿ ಇರುವ ಸೂಚನೆ ಸರಕಾರಿ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಹಸ್ತಾಂತರಿಸುವಂತಿಲ್ಲ ಎಂಬ ನಿರ್ಣಯದ ಮೇಲೆ ಯಾವ ಅರಣ್ಯ ಭೂಮಿಯೂ (ಒತ್ತುವರಿ) ಖಾಸಗಿಯವರಿಗೆ ಹಕ್ಕು ಭೂಮಿಯಾಗಿ ಸಿಕ್ಕುವುದಿಲ್ಲ.

ಇನ್ನು ಕಂದಾಯ ಭೂಮಿಯ ಒತ್ತುವರಿ ವಿಚಾರಕ್ಕೆ ಬಂದರೆ, ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಕಂದಾಯ ಭೂಮಿ ಸೆಕ್ಷನ್ 4/1 ರಲ್ಲಿದೆ. ಅದಕ್ಕೆ ಹಕ್ಕುಪತ್ರ, RTC ಕೊಡಲು ಒಂದಾ ಅರಣ್ಯ ಇಲಾಖೆಯ ಅನುಮತಿ ಬೇಕು, ಅಥವಾ ಜಾಯಿಂಟ್ ಸರ್ವೆ ಆಗಿ, ಸೆಕ್ಷನ್ 4/1 ಭೂಮಿ ಅರಣ್ಯ ಇಲಾಖೆಯಿಂದ ಸಂಪೂರ್ಣ ಕಂದಾಯ ಇಲಾಖೆಗೆ ವರ್ಗಾವಣೆ ಆಗಬೇಕು. ಯಾವುದೂ ಸಧ್ಯಕ್ಕೆ ಆಗುವ ಲಕ್ಷಣಗಳಿಲ್ಲ.

ಕಸ್ತೂರಿ ರಂಗನ್ ವರದಿ ಯತಾವತ್ ಜಾರಿ ಆದರೆ, ಈ ಸೆಕ್ಷನ್ 4/1 ಭೂಮಿಯ ಒಂದಿಷ್ಟು ಜಾಗ ಶಾಶ್ವತವಾಗಿ ಅರಣ್ಯ ಭೂಮಿ ಅಂತಾದರೆ (ಸೆಕ್ಷನ್ 17), ಅಂತಹ ಭೂಮಿಯಲ್ಲಿ ಇರುವ ಒತ್ತುವರಿಯನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ. ಆಗ ಆ ಅರಣ್ಯ ಭೂಮಿ ಅಂತಾದ ಜಾಗದಲ್ಲಿನ, ಕಂದಾಯ ಇಲಾಖೆ ಪಡೆದ 50, 53, 57 ಅರ್ಜಿಗಳು ಶಾಶ್ವತವಾಗಿ ಅಮಾನ್ಯಗೊಳ್ಳುತ್ತದೆ.

ಕಸ್ತೂರಿ ರಂಗನ್ ವರದಿ ಜಾರಿ, ಸೆಕ್ಷನ್ 4/1 ಭೂಮಿ ಕಂದಾಯ ಇಲಾಖೆಗೆ ಹಸ್ತಾಂತರ ಆಗದೆ, ಕಂದಾಯ ಭೂಮಿ ಎಂದು 25 ಎಕರೆವರೆಗಿನ ಲೀಸ್ (ಸ್ವಂತ ಹಿಡುವಳಿ + ಲೀಸ್ ಭೂಮಿ ಒಟ್ಟು 25 ಎಕರೆ ಮೀರುವಂತಿಲ್ಲ!?)ಗೆ ದೊಡ್ಡ ಮೊತ್ತದ 30 ವರ್ಷದ ಲೀಸ್ ಮೊತ್ತದೊಂದಿಗೆ ಸರಕಾರಕ್ಕೆ ಹೋದ ಹಣ ಮತ್ತು ಲೀಸ್ ಭೂಮಿಯ ಕತೆ ಏನಾಗಲಿದೆ? ಅನ್ನುವುದು ಇನ್ನೊಂದು ಯಕ್ಷ ಪ್ರಶ್ನೆ!!?

**

ಕಸ್ತೂರಿ ರಂಗನ್ ವರದಿ ಮತ್ತು ಒತ್ತುವರಿ ಸಕ್ರಮ/ತೆರವು ವಿಚಾರದಲ್ಲಿ ಇದಕ್ಕಿಂತ ಭಿನ್ನವಾದ ತಾರ್ಕಿಕ ಒಳ ಸುಳಿಗಳು ಕಾಣುತ್ತಿಲ್ಲ. ಅಧಿಕಾರಿಗಳು, ಜನ ಪ್ರತಿನಿಧಿಗಳು ಸ್ಪಷ್ಟವಾಗಿ ಏನನ್ನೂ ಸ್ಪಷ್ಟಪಡಿಸುತ್ತಿಲ್ಲ. ಸಂಬಂಧಿಸಿದ ಉನ್ನತ ಸಭೆಗಳು ರಹಸ್ಯವಾಗಿಯೇ ನೆಡೆಯುತ್ತಿವೆ. 50, 53, 57, 94, 94c ಅರ್ಜಿಗಳಿಗೆ ಹಕ್ಕು ಪತ್ರ, RTC ಕೊಡದೆ ಸ್ಥಗಿತಗೊಳಿಸಲಾಗಿದೆ.

ಮುಂದೆ?

ಗೊತ್ತಿಲ್ಲ.

(ಕಸ್ತೂರಿ ರಂಗನ್ ವರದಿ ಜಾರಿ ಮತ್ತು ಒತ್ತುವರಿ ತೆರವು ವಿಚಾರದಲ್ಲಿ ಮೇಲಿನ ವಿಚಾರಗಳಲ್ಲಿನ ಭಿನ್ನ ಸಾಧ್ಯತೆಯ ಅಭಿಪ್ರಾಯಗಳು, ಚಿಂತನೆಗಳು, ಸಮಾಧಾನಕರ ವಿಚಾರಗಳು ಇದ್ದಲ್ಲಿ ಚರ್ಚೆಗೆ ವಿಶ್ಲೇಷಣೆಗೆ ತರಬಹುದು)

-ಅರವಿಂದ ಸಿಗದಾಳ್, ಮೇಲುಕೊಪ್ಪ(9449631248)

mysore-dasara_Entry_Point