School News: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ ಸಾಕ್ಸ್‌ಗೆ ಹಣ ಬಿಡುಗಡೆ, 265 ರೂಗೆ ಗುಣಮಟ್ಟದ ಶೂ ಖರೀದಿಸುವುದೇ ಸವಾಲು
Karnataka Education News: ಕರ್ನಾಟಕದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಸರಕಾರವು ಹಣ ಬಿಡುಗಡೆ ಮಾಡಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡಲಾಗಿದೆ. ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿಗೆ ಸರಕಾರದ ಹಣ ಸಾಲುವುದೇ ಎಂಬ ಪ್ರಶ್ನೆಯೂ ಮೂಡಿದೆ.
ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ 1-10 ತರಗತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಿಸಲು ಎಲ್ಲಾ ಜಿಲ್ಲೆಗಳಿಗೆ 127 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಹಿಂದಿನ ಬಿಜೆಪಿ ಸರಕಾರ ಬಿಡುಗಡೆ ಮಾಡಿದ ಹಣಕ್ಕೆ ಹೋಲಿಸಿದರೆ ಈ ಬಾರಿ ಐದು ಕೋಟಿ ರೂಪಾಯಿ ಕಡಿಮೆ ಮೊತ್ತ ಬಿಡುಗಡೆ ಮಾಡಲಾಗಿದೆ. ಅಂದಹಾಗೆ, ಪ್ರತಿ ವಿದ್ಯಾರ್ಥಿಗೂ ಒಂದೊಂದು ಜತೆ ಶೂ, ಸಾಕ್ಸ್‌ಗೆ ಎಷ್ಟು ಹಣ ಬರುತ್ತದೆ, ಆ ಶೂ ಗುಣಮಟ್ಟ ಹೇಗಿರಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ.
ಕಡಿಮೆ ಮೊತ್ತಕ್ಕೆ ಗುಣಮಟ್ಟದ ಶೂ ಖರೀದಿ ಹೇಗೆ?
1-5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 265 ರೂಪಾಯಿ ಮೌಲ್ಯದ ಶೂ ಮತ್ತು ಸಾಕ್ಸ್, 6-8ನೇ ತರಗತಿಯ ವಿದ್ಯಾರ್ಥಿಗೆ 295 ರೂಪಾಯಿ ಮೌಲ್ಯದ ಶೂ ದೊರಕಲಿದೆ. 9-10ನೇ ತರಗತಿಯ ವಿದ್ಯಾರ್ಥಿಗೆ 325 ರೂಪಾಯಿ ದರದಲ್ಲಿ ಶೂ ಖರೀದಿಸಲು ಸೂಚಿಸಲಾಗಿದೆ. ಈ ದರದಲ್ಲಿ ಖರೀದಿಸುವ ಶೂಗಳು ವಿದ್ಯಾರ್ಥಿಗಳಿಗೆ ವರ್ಷವಿಡೀ ಧರಿಸಲು ಸೂಕ್ತವಾಗಿರುವುದೇ ಎಂದು ಶಿಕ್ಷಣ ಇಲಾಖೆ ಆಲೋಚಿಸಬೇಕಿದೆ. "ಗುಣಮಟ್ಟದ ಶೂ ಖರೀದಿಸಲು ಸೂಚಿಸಲಾಗಿದೆ. ಆದರೆ, ಸರಕಾರ ನೀಡುವ ಮೊತ್ತವು ಉತ್ತಮ ಗುಣಮಟ್ಟದ ಶೂ ಖರೀದಿಸಲು ಸೂಕ್ತವಾಗಿಲ್ಲ. ಸರಕಾರ ನೀಡುವ ಉಚಿತ ಶೂಗಳು ಒಂದೆರಡು ತಿಂಗಳಲ್ಲಿಯೇ ಹಾಳಾಗಿರುವುದನ್ನು ಈ ಹಿಂದಿನ ವರ್ಷಗಳಲ್ಲಿ ನೋಡಿದ್ದೇವೆ" ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರು ಹೆಸರು ಬಹಿರಂಗಪಡಿಸಲು ಬಯಸಲಿಲ್ಲ.
ದಾನಿಗಳ ನೆರವು ಪಡೆಯಲು ಸೂಚನೆ
ಪ್ರತಿವರ್ಷ ಬಜೆಟ್ ಮೊತ್ತ ಹೆಚ್ಚಾಗುತ್ತದೆ. ಶಿಕ್ಷಣ ಶುಲ್ಕ ಹೆಚ್ಚಾಗುತ್ತದೆ. ದಿನಬಳಕೆಯ ವಸ್ತುಗಳು ದುಬಾರಿಯಾಗುತ್ತವೆ. ಪರಿಸ್ಥಿತಿ ಹೀಗಿರುವಾಗ ಸರಕಾರವು ಈ ಬಾರಿ ಮಕ್ಕಳ ಶೂ ಸಾಕ್ಸ್‌ಗೆ ಬಿಡುಗಡೆ ಮಾಡಿರುವ ಮೊತ್ತ ಕಡಿಮೆಯಾಗಿರುವುದು ಯಾಕೆ ಎಂಬ ಪ್ರಶ್ನೆಯೂ ಮೂಡಿದೆ. ಇದರೊಂದಿಗೆ ಈ ಬಾರಿ ಶೂ ಸಾಕ್ಸ್ ವಿತರಣೆಯೇ ವಿಳಂಬವಾಗುತ್ತಿದೆ. ಶಾಲೆಗಳಿಗೆ ಹಣ ತಲುಪದೆ ಇರುವುದರಿಂದ ಮಕ್ಕಳಿಗೆ ಇನ್ನೂ ಶೂ ಸಾಕ್ಸ್ ದೊರಕಿಲ್ಲ. "ಮಕ್ಕಳಿಗೆ ಗುಣಮಟ್ಟದ ಶೂ ಮತ್ತು ಸಾಕ್ಸ್ ಒದಗಿಸಲು ಸ್ಥಳೀಯ ದಾನಿಗಳು ಮತ್ತು ಖಾಸಗಿ ಸಂಸ್ಥೆಗಳ ನೆರವು ಪಡೆಯಿರಿ" ಎಂದು ಸುತ್ತೊಲೆಯಲ್ಲಿ ಸರಕಾರವು ಶಾಲಾ ಆಡಳಿತಕ್ಕೆ ಸೂಚನೆ ನೀಡಿದೆ.
ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಸಮಿತಿ ರಚಿಸುವಂತೆ ಸುತ್ತೊಲೆಯಲ್ಲಿ ತಿಳಿಸಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷರು ಸಮಿತಿಯ ಅಧ್ಯಕ್ಷರು, ಶಾಲಾ ಹೆಡ್‌ಮಾಸ್ಟರ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಎಸ್‌ಡಿಎಂಸಿ ಸದಸ್ಯರು ಸಮಿತಿಯ ಸದಸ್ಯರಾಗಿರುತ್ತಾರೆ.
ಈಗ ಸರಕಾರ ಬಿಡುಗಡೆ ಮಾಡಿರುವ ಹಣವು ಶೂ ಸಾಕ್ಸ್ ಖರೀದಿಗೆ ಸಾಲದು ಎನ್ನುವ ಅಭಿಪ್ರಾಯವಿದೆ. ಎಲ್ಲಾದರೂ ಹಣ ಕಡಿಮೆಯಾದರೆ ಶಿಕ್ಷಣ ಇಲಾಖೆಯು ಇನ್ನಷ್ಟು ಹಣ ಬಿಡುಗಡೆ ಮಾಡಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಇದೇ ಸಮಯದಲ್ಲಿ ಈ ಕುರಿತು ತಕ್ಷಣ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಜುಲೈ 30ರೊಳಗೆ ಶೂ ಮತ್ತು ಸಾಕ್ಸ್ ಖರೀದಿ ಪೂರ್ಣಗೊಳ್ಳಬೇಕೆಂದು ಸೂಚಿಸಲಾಗಿದೆ. ಗುಣಮಟ್ಟದ ಶೂ ಹುಡುಕಲು ಇಲ್ಲಿ ಶಾಲೆಗಳಿಗೆ ಸಮಯವೂ ಇಲ್ಲ. ಉತ್ತಮ ಗುಣಮಟ್ಟದ ಶೂ ಮಾರಾಟಗಾರರನ್ನು ಸಂಪರ್ಕಿಸುವುದು, ಗುಣಮಟ್ಟ ಖಾತ್ರಿಪಡಿಸುವುದು ನಿಜಕ್ಕೂ ಹೆಡ್‌ಮಾಸ್ಟರ್ ಮತ್ತು ಎಡಿಎಂಸಿಗೆ ಸವಾಲಾಗಲಿದೆ.
ವಿದ್ಯಾರ್ಥಿಗಳ ಪಾದರಕ್ಷೆ ಅಳತೆ ದಾಖಲಿಸಿ ಅದಕ್ಕೆ ತಕ್ಕಂತೆ ಶೂ ಮತ್ತು ಸಾಕ್ಸ್‌ಗಳನ್ನು ಸ್ಥಳೀಯವಾಗಿ ಖರೀದಿಸಸುವ ಹೊಣೆ ಈ ಸಮಿತಿಗೆ ನೀಡಲಾಗಿದೆ. ಒಂದು ಜತೆ ಕಪ್ಪು ಬಣ್ಣದ ಶೂ ಮತ್ತು ಎರಡು ಬಿಳಿ ಸಾಕ್ಸ್ ಖರೀದಿಸಿ ವಿತರಿಸಲು ಸೂಚಿಸಲಾಗಿದೆ.