HSRP Deadline: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಡಿಸೆಂಬರ್ 4 ರವರೆಗೆ ಬಲವಂತದ ಕ್ರಮ ಬೇಡ, ಹೈ ಕೋರ್ಟ್ ಆದೇಶ ಏನಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Hsrp Deadline: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಡಿಸೆಂಬರ್ 4 ರವರೆಗೆ ಬಲವಂತದ ಕ್ರಮ ಬೇಡ, ಹೈ ಕೋರ್ಟ್ ಆದೇಶ ಏನಿದೆ

HSRP Deadline: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; ಡಿಸೆಂಬರ್ 4 ರವರೆಗೆ ಬಲವಂತದ ಕ್ರಮ ಬೇಡ, ಹೈ ಕೋರ್ಟ್ ಆದೇಶ ಏನಿದೆ

HSRP Deadline: ಕರ್ನಾಟಕದಲ್ಲಿ ಕಡ್ಡಾಯವಾಗಿ ಎಚ್‌ಎಸ್‌ ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಸಂಬಂಧ ಕರ್ನಾಟಕ ಹೈಕೋರ್ಟ್‌ ಸಾರಿಗೆ ಇಲಾಖೆಗೆ ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಎಚ್‌ಎಸ್‌ ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ವಿಚಾರವಾಗಿ ಹೈಕೋರ್ಟ್‌ ಸೂಚನೆ ನೀಡಿದೆ,
ಕರ್ನಾಟಕದಲ್ಲಿ ಎಚ್‌ಎಸ್‌ ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ವಿಚಾರವಾಗಿ ಹೈಕೋರ್ಟ್‌ ಸೂಚನೆ ನೀಡಿದೆ,

ಬೆಂಗಳೂರು: ಎಚ್‌ಎಸ್‌ಆರ್‌ಪಿ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ) ಅಳವಡಿಸದೇ ಇರುವ ವಾಹನ ಮಾಲೀಕರು ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ಡಿಸೆಂಬರ್ 4 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಎಚ್‌ಎಸ್‌ಆರ್‌ಪಿ ಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ಸಂದರ್ಭದಲ್ಲಿ ಮೇಲ್ಮನವಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ರಾಜ್ಯ ಸರ್ಕಾರ ಮಧ್ಯಂತರ ಆದೇಶವನ್ನು ಚಾಲ್ತಿಯಲ್ಲಿ ಇರಿಸಿ, ಏಕಸದಸ್ಯ ನ್ಯಾಯಪೀಠವೇ ಪ್ರಕರಣ ನಿರ್ಧರಿಸಬಹುದು ಎಂಬ ಅಡ್ವಕೇಟ್ ಜನರಲ್ ಸಲಹೆಯ ಬಗ್ಗೆ ಪರಿಶೀಲಿಸಬೇಕಿದೆ ಎಂದರು.

ಇದಕ್ಕೆ ಪ್ರತಿಯಾಗಿ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮಧ್ಯಂತರ ಆದೇಶ ಮುಂದುವರಿಯಲಿ. ಜೊತೆಗೆ, ಏಕಸದಸ್ಯ ಪೀಠವೇ ಪ್ರಕರಣದ ಕುರಿತಂತೆ ನಿರ್ಧರಿಸಲು ಆದೇಶಿಸಬಹುದು ಎಂದು ಸಲಹೆ ನೀಡಿದರು.

ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಪೀಠ ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿತು.

ಎಚ್‌ಎಸ್‌ಆರ್‌ಪಿ ಫಲಕಗಳನ್ನು ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರವೇ ಅಳವಡಿಸಬೇಕು ಎಂದು ಸಾರಿಗೆ ಇಲಾಖೆ 2023 ರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಮತ್ತು 2023ರ ಆಗಸ್ಟ್ 18ರ ಸುತ್ತೋಲೆಗೆ ತಡೆ ನೀಡಲು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರಾಕರಿಸಿತ್ತು.2023ರ ಸೆಪ್ಟೆಂಬರ್ 20 ರಂದು ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ಸೂರತ್‌ನ ಬಿಎನ್‌ಡಿ ಎನರ್ಜಿ ಪ್ರೈವೆಟ್ ಲಿಮಿಟೆಡ್ ಸೇರಿದಂತೆ ಇತರ ಮೂರು ಕಂಪನಿಗಳು ಈ ಮೇಲ್ಮನವಿ ಸಲ್ಲಿಸಿವೆ.

ಗಲಾಟೆಯಲ್ಲಿ ವ್ಯಕ್ತಿಯ ಕೊಲೆ

ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿವೇಣಿ ಚಿತ್ರಮಂದಿರದ ಬಳಿ ರಾತ್ರಿ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ನಾಗೇಶ್ ಎಂದು ಗುರುತಿಸಲಾಗಿದೆಯಾದರೂ ನಿಖರವಾದ ವಿಳಾಸ ಪತ್ತೆಯಾಗಿಲ್ಲ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರ ಬಳಿ ಯಾವುದೇ ಗುರುತಿನ ಚೀಟಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತ್ರಿವೇಣಿ ಚಿತ್ರಮಂದಿರದ ಬಳಿ ಏಳು ಮಂದಿ ಮಧ್ಯೆ ಗಲಾಟೆ ನಡೆದಿದೆ. ಆಗ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ವರದಿ: ಎಚ್. ಮಾರುತಿ, ಬೆಂಗಳೂರು

Whats_app_banner