Karnataka CM: ಇಂದು ಸಂಜೆಯೊಳಗೆ ಮಲ್ಲಿಕಾರ್ಜುನ ಖರ್ಗೆಗೆ ವರದಿ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬ ಪ್ರಶ್ನೆಗೆ ಶೀಘ್ರ ಉತ್ತರ
ವೀಕ್ಷಕರು ಇಂದು ರಾತ್ರಿಯ ಒಳಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಶೀಘ್ರವೇ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ನವದೆಹಲಿ: ಶೀಘ್ರವೇ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀಕ್ಷಕರು ಇಂದು ರಾತ್ರಿಯ ಒಳಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಶೀಘ್ರವೇ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲಿದ್ದೇವೆ‘ ಎಂದು ಹೇಳಿದರು.
ಭಾನುವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಹೈಕಮಾಂಡ್‌ನಿಂದ ಬಂದಿದ್ದ ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಸೋಮವಾರ ರಾತ್ರಿ ಅದನ್ನು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಲಿದ್ದಾರೆ. ಸಿಎಂ ಆಯ್ಕೆಯ ಕುರಿತು ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವೀಕ್ಷಕರಲ್ಲಿ ಓರ್ವರಾದ, ಭನ್ವರ್ ಜಿತೇಂದ್ರ ಸಿಂಗ್, ಕಳೆದ ರಾತ್ರಿ ನಾವು ಶಾಸಕರೊಂದಿಗೆ 4–5 ಗಂಟೆಗಳ ಕಾಲ ಚರ್ಚೆ ಮಾಡಿ ಅವರ, ಅಭಿಪ್ರಾಯ ಪಡೆದಿದ್ದೇವೆ. ಇಂದು ಸಂಜೆಯೊಳಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸುತ್ತೇವೆ‘ ಎಂದು ಹೇಳಿದರು. (ವರದಿ: ಎಚ್ ಮಾರುತಿ, ಬೆಂಗಳೂರು).
ಡಿಕೆ ಶಿವಕುಮಾರ್ ದೆಹಲಿಗೆ ಏಕೆ ಹೋಗಿಲ್ಲ?
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ನಾಯಕರಿಗೆ ಬಿಡುವ ಒಂದು ಸಾಲಿನ ನಿರ್ಣಯಕ್ಕೆ ಎಲ್ಲಾ ಶಾಸಕರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ಸಂಪ್ರದಾಯದಂತೆ ಎಲ್ಲಾ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ನಾನು ದೆಹಲಿಗೆ ಹೋಗಬೇಕು ಎಂಬ ವಿಚಾರ ಇದೆ. ನಮ್ಮ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಂಡಿದ್ದು, ಹೀಗಾಗಿ ದೆಹಲಿಗೆ ಹೋಗುವ ಬಗ್ಗೆ ನಾನು ಇನ್ನೂ ತೀರ್ಮಾನ ಮಾಡಿಲ್ಲ.
ನಿಮ್ಮ ಹುಟ್ಟುಹಬ್ಬದ ದಿನ ಹೈಕಮಾಂಡ್ ನಿಮಗೆ ಉಡುಗೊರೆ ನೀಡುವುದೇ ಎಂದು ಕೇಳಿದ ಪ್ರಶ್ನೆಗೆ, ‘ಹೈಕಮಾಂಡ್ ಉಡುಗೊರೆ ನೀಡುತ್ತದೆಯೋ ಇಲ್ಲವೋ, ಆದರೆ ರಾಜ್ಯದ ಜನ ನನ್ನ ಮೇಲೆ ವಿಶ್ವಾಸ ಇಟ್ಟು ನನ್ನ ಅಧ್ಯಕ್ಷತೆಯಲ್ಲಿ ಪಕ್ಷವನ್ನು 135 ಸ್ಥಾನಗಳ ಬಹುದೊಡ್ಡ ಬಹುಮತದಿಂದ ಗೆಲ್ಲಿಸಿದ್ದಾರೆ. ಇದಕ್ಕಿಂತ ದೊಡ್ಡ ಉಡುಗೋರೆ ನಿರೀಕ್ಷಿಸಲು ಸಾಧ್ಯವೇ? ಅಧಿಕಾರ ಇಲ್ಲದಿದ್ದರೂ, ಎಲ್ಲಾ ಕಿರುಕುಳ, ಸವಾಲುಗಳನ್ನು ಎದುರಿಸಿ, ಈ ಡಬಲ್ ಇಂಜಿನ್ ಸರ್ಕಾರಗಳನ್ನು ಎದುರಿಸಿ ಪಕ್ಷವನ್ನು ಸಂಘಟನೆ ಮಾಡಿದ್ದೇನೆ’ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆಗೆ ಪಂಜಾಬ್ ಕೋರ್ಟ್ ಸಮನ್ಸ್
ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭರವಸೆಯ ಸಂಬಂಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರಿಗೆ ಪಂಜಾಬ್ ಕೋರ್ಟ್ (Punjab Court) ಸಮನ್ಸ್ ನೀಡಿದೆ. ಬಜರಂಗದಳ ಹಿಂದೂಸ್ತಾನ್ ಎಂಬ ಸಂಘಟನೆಯ ಅಧ್ಯಕ್ಷ ಹಿತೇಶ್ ಭಾರದ್ವಾಜ್ ಎಂಬುವರ ದೂರಿನ ಮೇರೆಗೆ ಪಂಜಾಬ್‌ನ ಸಂಗ್ರೂರ್ ಜಿಲ್ಲಾ ಕೋರ್ಟ್ ಖರ್ಗೆ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ಓದಿ.
ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡಿದ ಹಂಗಾಮಿ ಸಿಎಂ ಬೊಮ್ಮಾಯಿ ಸಭೆ
ಬೆಂಗಳೂರು: ಚುನಾವಣೆಯ ಫಲಿತಾಂಶದ ಬಳಿಕ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರ್ ಎಸ್ ಎಸ್ ನಾಯಕರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು. ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಕ್ಕೆ ಭೇಟಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಇಂದು ಆರ್ ಎಸ್ ಎಸ್ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಬರುವಂತಹ ದಿನಗಳಲ್ಲಿ ಪಕ್ಷವನ್ನು ಮುಂದೆ ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಚರ್ಚೆ ಆಗಿದೆ. ರಾಜ್ಯಾಧಕ್ಷರು, ವರಿಷ್ಠರ ಜೊತೆಗೆ ಹಲವಾರು ಬಾರಿ ಚರ್ಚಿಸಿ ಭಾರತೀಯ ಜನತಾ ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎನ್ನುವ ತೀರ್ಮಾನ ಮಾಡುತ್ತೇವೆ ಎಂದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಸಭೆಯನ್ನು ಕರೆದಿಲ್ಲ. ಶಾಸಕರ ಸಭೆಯನ್ನು ರಾಜ್ಯಾಧಕ್ಷರು ಕರೆಯಲಿದ್ದಾರೆ ಎಂದರು.