Council Leader: ವಲಸಿಗ ಛಲವಾದಿ ನಾರಾಯಣಸ್ವಾಮಿಗೆ ಬಿಜೆಪಿ ಮಣೆ, ಪರಿಷತ್‌ ಪ್ರತಿಪಕ್ಷ ನಾಯಕ ಹುದ್ದೆಗೆ ನೇಮಕ
ಕನ್ನಡ ಸುದ್ದಿ  /  ಕರ್ನಾಟಕ  /  Council Leader: ವಲಸಿಗ ಛಲವಾದಿ ನಾರಾಯಣಸ್ವಾಮಿಗೆ ಬಿಜೆಪಿ ಮಣೆ, ಪರಿಷತ್‌ ಪ್ರತಿಪಕ್ಷ ನಾಯಕ ಹುದ್ದೆಗೆ ನೇಮಕ

Council Leader: ವಲಸಿಗ ಛಲವಾದಿ ನಾರಾಯಣಸ್ವಾಮಿಗೆ ಬಿಜೆಪಿ ಮಣೆ, ಪರಿಷತ್‌ ಪ್ರತಿಪಕ್ಷ ನಾಯಕ ಹುದ್ದೆಗೆ ನೇಮಕ

Karnataka Political News ಕರ್ನಾಟಕ ವಿಧಾನಪರಿಷತ್‌ನ ಪ್ರತಿ ಪಕ್ಷ ನಾಯಕರಾಗಿ ಬಿಜೆಪಿಯು ಛಲವಾದಿ ನಾರಾಯಣಸ್ವಾಮಿ ಅವರಿಗೆ ಮಣೆ ಹಾಕಿದೆ.

ಕರ್ನಾಟಕ ವಿಧಾನಪರಿಷತ್‌ ಪ್ರತಿಪಕ್ಷ ನಾಯಕರಾಗಿ ನೇಮಕಗೊಂಡ ಛಲವಾದಿ ನಾರಾಯಣಸ್ವಾಮಿ.
ಕರ್ನಾಟಕ ವಿಧಾನಪರಿಷತ್‌ ಪ್ರತಿಪಕ್ಷ ನಾಯಕರಾಗಿ ನೇಮಕಗೊಂಡ ಛಲವಾದಿ ನಾರಾಯಣಸ್ವಾಮಿ.

ಬೆಂಗಳೂರು: ಕರ್ನಾಟಕ ವಿಧಾನಪರಿಷತ್‌ ನ ಪ್ರತಿ ಪಕ್ಷ ನಾಯಕರಾಗಿ ಮೊದಲ ಬಾರಿಗೆ ಸದಸ್ಯರಾಗಿರುವ ಹಾಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೋಟಾ ಶ್ರೀನಿವಾಸಪೂಜಾರಿ ಅವರು ಆಯ್ಕೆಯಾದ ನಂತರ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಹುದ್ದೆ ಖಾಲಿ ಇತ್ತು. ಸದನ ಆರಂಭಗೊಂಡರೂ ಬಿಜೆಪಿ ನೇಮಕ ಮಾಡಿರಲಿಲ್ಲ. ಸೋಮವಾರ ರಾತ್ರಿ ಈ ಕುರಿತು ಬಿಜೆಪಿಯಿಂದ ನೇಮಕ ಆದೇಶ ಹೊರ ಬಿದ್ದಿದೆ. ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡುವ ಬಿಜೆಪಿ ಪರಿಶಿಷ್ಟ ಜಾತಿಯವರೊಬ್ಬರಿಗೆ ಮಣೆ ಹಾಕಿದೆ.

ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನಲ್ಲಿದ್ದವರು. ಅವರು ಐದು ವರ್ಷದ ಹಿಂದೆಯೇ ಎಂಎಲ್ಸಿ ಸ್ಥಾನ ಸಿಗದಕ್ಕೆ ಬೇಸರಗೊಂಡು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಆನಂತರ ಅವರನ್ನು ವಿಧಾನಪರಿಷತ್‌ಗೆ ಬಿಜೆಪಿ ನೇಮಕ ಮಾಡಿತ್ತು. ಅಲ್ಲದೇ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರನ್ನಾಗಿಯೂ ನೇಮಕ ಮಾಡಲಾಗಿತ್ತು. ಈಗ ಪ್ರತಿಪಕ್ಷ ನಾಯಕನ ಹುದ್ದೆಯನ್ನೂ ನೀಡಲಾಗಿದೆ.

ಕಾಂಗ್ರೆಸ್‌ ವಿರುದ್ದ ಟೀಕಾ ಪ್ರಹಾರ ನಡೆಸುವಲ್ಲಿ ಛಲವಾದಿ ನಾರಾಯಣಸ್ವಾಮಿ ಅವರೇ ಸೂಕ್ತ. ಈಗಾಗಲೇ ವಿಧಾನಸಭೆಯಲ್ಲಿ ಒಕ್ಕಲಿಗ ಸಮುದಾಯದವರಿಗೆ ಪ್ರತಿಪಕ್ಷ ನಾಯಕ, ಲಿಂಗಾಯಿತ ವರ್ಗದ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಕೇಂದ್ರ ಸಂಪುಟದಲ್ಲೂ ಪರಿಶಿಷ್ಟ ಜಾತಿ, ಪಂಗಡಕ್ಕೆ ದಕ್ಷಿಣ ಭಾರತದವರಿಗೆ ಬಿಜೆಪಿ ಅವಕಾಶ ಮಾಡಿಕೊಟ್ಟಿಲ್ಲ ಎನ್ನುವ ಕೂಗು ಇತ್ತು. ಎಲ್ಲವನ್ನೂ ಸರಿದೂಗಿಸುವ ಜತೆಗೆ ಹೊರಗಿನಿಂದ ಬಂದವರಿಗೂ ಪಕ್ಷ ಮನ್ನಣೆ ನೀಡಲಿದೆ ಎನ್ನುವ ಸಂದೇಶ ಸಾರಲು ಛಲವಾದಿ ಅವರಿಗೆ ಪ್ರತಿ ಪಕ್ಷ ನಾಯಕ ಜವಾಬ್ದಾರಿ ವಹಿಸಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಈಗ ವಿಧಾನಪರಿಷತ್‌ ಪ್ರವೇಶಿಸಿರುವ ಮಾಜಿ ಸಿ.ಟಿ.ರವಿ ಹಾಗೂ ವಿಧಾನಪರಿಷತ್‌ ಸದಸ್ಯರಾಗಿ ಎರಡನೇ ಬಾರಿಗೆ ನೇಮಕವಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದವು. ಇಬ್ಬರನ್ನೂ ಬಿಟ್ಟು ಮೂರನೇಯವರಿಗೆ ಹೊಣೆ ನೀಡಲಾಗಿದೆ.

ಬೊಮ್ಮಾಯಿ ಪೋಸ್ಟ್‌

ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿ ನೇಮಕವಾಗಿದ್ದು ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಪರಿಶಿಷ್ಟ ಸಮುದಾಯಗಳ ಪರ ನಿರಂತರವಾಗಿ ಧ್ವನಿ ಎತ್ತುತ್ತಿರುವ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದೆ ಎನ್ನುವುದನ್ನು ಮತ್ತೆ ಸಾಬೀತು ಮಾಡಿದಂತಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿಯವರು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡಿರುವುದು, ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿರುವುದರ ವಿರುದ್ಧ ಹೋರಾಟ ನಡೆಸಿ, ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ಕೊಡಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡದೇ ಆಚರಣೆಗೆ ತರುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರಮೋದಿ, ಗೃಹ ಸಚಿವರಾದ ಅಮಿತ್‌ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Whats_app_banner